stat Counter



Sunday, November 21, 2010

Kargallu Subbanna Bhat

ಮಾಸದ ನೆನಪು: ಕರ್ಗಲ್ಲು ಸುಬ್ಬಣ್ಣ ಭಟ್

ನಾ. ಕಾರಂತ ಪೆರಾಜೆ

ತೆಂಕುತಿಟ್ಟು ಯಕ್ಷಗಾನವು ಕೆಲವು ಖ್ಯಾತರನ್ನು ಸೃಷ್ಟಿಸಿದೆ. ಪ್ರತಿಭಾವಂತರನ್ನು ತೆಕ್ಕೆಯೊಳಗೆ ಸೇರಿಸಿದೆ.

ಯಕ್ಷಗಾನದ ಸ್ತ್ರೀಭೂಮಿಕೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಮಿಂಚಿ ಚಿರಸ್ಥಾನವನ್ನು ಪಡೆದ ಸುಬ್ಬಣ್ಣ ಭಟ್ಟರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಜೀವನ, ರಂಗಜೀವನ ಒಂದು ಆದರ್ಶ.

ಅವರ ಪಾತ್ರಗಳು ಯಕ್ಷಗಾನ ರಂಗದ ಜೀವಂತ ಶಿಲ್ಪಗಳು. ಕೆತ್ತಿ-ಮೆತ್ತಿ ಹದಗೊಂಡವುಗಳು, ಮೋದೆಲ್‍ಗಳು.

ಸುಬ್ಬಣ್ಣ ಭಟ್ಟರು ಯಕ್ಷಗಾನ ಕಲಾವಿದನಾಗಿ, ಶಿಕ್ಷಕನಾಗಿ ಸದ್ದಿಲ್ಲದೆ ದುಡಿದವರು.

ಪುತ್ತೂರು ತಾಲೂಕಿನ ಕುಳ ಗ್ರಾಮದ ಕರ್ಗಲ್ಲು ವಾಸಸ್ಥಳ. ಮೂಲತ: ಇವರ ಹಿರಿಯರು ವಿಟ್ಲದ ಅರಮನೆಗೆ ಆಮಂತ್ರಿಸಲ್ಪಟ್ಟವರು.

ಸುಬ್ಬಣ್ಣ ಭಟ್ಟರ ತಂದೆ ಈಶ್ವರ ಭಟ್, ಕಲಾಪ್ರೇಮಿ. ತಾಯಿ ಪರಮೇಶ್ವರಿ ಅಮ್ಮ.

ಪ್ರಾಥಮಿಕ ತನಕ ವಿದ್ಯಾಭ್ಯಾಸ. ಆರ್ಥಿಕ ಅನನುಕೂಲ. ನೋಡಿ, ಕೇಳಿ, ತಿಳಿದು ಕಲಿತದ್ದೇ ಹೆಚ್ಚು.

ಯಕ್ಷಗಾನ ವೇಷಧಾರಿಯಾಗಿ, ಅದರಲ್ಲೇ ವ್ಯವಸಾಯ ಮಾಡಬೇಕೆಂಬ ಹಂಬಲ ಸುಬ್ಬಣ್ಣ ಭಟ್ಟರನ್ನು ಕಲಾವಿದರನ್ನಾಗಿ ರೂಪಿಸಿತು. ಅದಕ್ಕಾಗಿಯೇ ತನ್ನ ಕೇಶರಾಶಿಯನ್ನು ಬೆಳೆಸಿದ್ದರು.

ಯಕ್ಷಗಾನ ಕೂಟಗಳಿಗಾಗ ಬಹಳ ಬೇಡಿಕೆ. ಇವರು ಹಿರಿಯ ಅರ್ಥಧಾರಿಗಳು. ಪರಿಸರವೂ ಅನುಕೂಲವಿತ್ತು. ಪಾಲಿಗೆ ಬಂದ ಚಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು.

ಅರ್ಥ ಹೇಳುವ ಚಪಲ ಹೆಚ್ಚಾಯಿತು. ಅದಕ್ಕಾಗಿ ರಾಮಾಯಣ, ಮಹಾಭಾರತ, ಭಾಗವತಗಳ ಅಧ್ಯಯನ. ಯಕ್ಷಗಾನ ಪ್ರಸಂಗಗಳ ಅಭ್ಯಾಸ. ಪ್ರಸಂಗಗಳ ಪ್ರತಿ ತೆಗೆಯುವ ಹವ್ಯಾಸವಿದ್ದ ತನ್ನಣ್ಣನ ಕಾರ್ಯದಲ್ಲಿ ಭಾಗಿ.

ಅರ್ಥಧಾರಿಯಾಗಿರುವುದಕ್ಕೆ ಹಿರಿಯರ ವಿರೋಧವಿರಲಿಲ್ಲ. ಆದರೆ ವೇಷಧಾರಿಯಾಗುವ ಆಶೆಗೆ ಕಡಿವಾಣ ಬಿತ್ತು.

ಕಾರಣ, ಕಲಾವಿದರ ಸಂಕಷ್ಟಮಯ ಜೀವನದ ಬಗ್ಗೆ ಭಟ್ಟರ ತಂದೆಯವರಿಗಾಗ ಸ್ಪಷ್ಟ ಅರಿವಿತ್ತು.

ಅದೊಂದು ದಿವಸ. ಯಕ್ಷಗಾನ ನಾಟಕದ ಪ್ರದರ್ಶನವೊಂದರ ಸುದ್ದಿ. ಕಿವಿಯರಳಿತು, ಭಾಗವಹಿಸಿದರು. ಅಂದಿನ ಪ್ರಸಂಗ 'ಕಂಸವಧೆ'. ಮನದಾಸೆ ಬಿಚ್ಚಿದರು. 'ಚಾಣೂರ' ಪಾತ್ರ ಪಾಲಿಗೆ ಬಂತು. ಇದು ಭಟ್ಟರ ಪ್ರಥಮ ರಂಗಪ್ರವೇಶ.

1935ನೇ ಇಸವಿ. ಕೋಳ್ಯೂರು ಶ್ರೀ ಶಂಕರನಾರಾಯಣ ಯಕ್ಷಗಾನ ಮಂಡಳಿಯ ಆಟವೊಂದು ಪುತ್ತೂರಿನಲ್ಲಿತ್ತು. ಸುಬ್ಬಣ್ಣ ಭಟ್ಟರು ಪ್ರೇಕ್ಷಕರಾಗಿ ಬಂದಿದ್ದರು. ಆಟ ನೋಡಿದರು. ತಡೆಯಲಾಗಲಿಲ್ಲ. ವೇಷಧಾರಿಯಾಗಲೇಬೇಕೆನ್ನುವ ಛಲ ಗಟ್ಟಿಯಾಯಿತು.

ಪರಿಚಿತ ಕೋಳ್ಯೂರು ನಾರಾಯಣ ಭಟ್ಟರು ಮೇಳದಲ್ಲಿದ್ದರು. ಮೊರೆಹೊಕ್ಕರು. ಯಜಮಾನರಲ್ಲಿ ಅರುಹಿದರು. ಮೇಳಕ್ಕೆ ಸೇರಿದರು. ಸ್ತ್ರೀವೇಷ ಪ್ರಾಪ್ತಿ.

ಮೇಳದಲ್ಲಿ ಕೋಳ್ಯೂರು ನಾರಾಯಣ ಭಟ್ಟರು, ಸೋಕೆ ಕೃಷ್ಣ ಭಟ್, ಕುಂಜಾರು ರಾಮಕೃಷ್ಣಯ್ಯ, ರಾಮಚಂದ್ರ ಬಲ್ಯಾಯ......... ಮೊದಲಾದ ಒಡನಾಟ ಭಟ್ಟರನ್ನು ಮತ್ತಷ್ಟು ಬೆಳೆಸಿತು. ಒಂದೆರಡು ವರುಷ ತಿರುಗಾಟ.

1940ರಿಂದ ಕೊಕ್ಕಡ ಮೇಳದಲ್ಲಿ ವ್ಯವಸಾಯ. ಪ್ರಧಾನ ಸ್ತ್ರೀ ವೇಷಧಾರಿಯ ಪಟ್ಟ. ಮುಂದೆ ಕಟೀಲು, ಇರಾ, ಮುಲ್ಕಿ ಮೇಳಗಳಲ್ಲಿ ದುಡಿತ.

ಕಟೀಲು ಮೇಳದ ತಿರುಗಾಟ ಭಟ್ಟರ ಪ್ರತಿಭೆಗೊಂದು ಸವಾಲಾಯಿತು. ಯಶ ಪಡೆದರು.

ಕುದ್ರೆಕೂಡ್ಲು ರಾಮ ಭಟ್ ಮತ್ತು ಬಲಿಪರ ಸಾಹಚರ್ಯ, ವಿರಾಮ ವೇಳೆಯಲ್ಲಿನ ಶಿಕ್ಷಣ, ಪಾತ್ರಗಳ ಬಗ್ಗೆ ವಿಮರ್ಶೆ, ಲೋಪದೋಷಗಳನ್ನು ಸರಿಪಡಿಸುವಿಕೆಯಿಂದಾಗಿ, ಭೌದ್ಧಿಕ ಸಾಮರ್ಥ್ಯ, ರಂಗ
ಸಾಮರ್ಥ್ಯಗಳು ಇಮ್ಮಡಿಯಾದುವು.

ಸುಬ್ಬಣ್ಣ ಭಟ್ಟರು ಇಷ್ಟಕ್ಕೇ ತೃಪ್ತರಾಗಲಿಲ್ಲ. ಕುರಿಯ ವಿಠಲ ಶಾಸ್ತ್ರಿಗಳ ನೇತೃತ್ವದ ಧರ್ಮಸ್ಥಳ ಮೇಳದಿಂದ ಮತ್ತಷ್ಟು ತಿರುಗಾಟ. ಶಾಸ್ತ್ರಿಗಳ ನಾಯಕನ ಪಾತ್ರಕ್ಕೆ ಭಟ್ಟರದು ನಾಯಕಿಯ ಪಾತ್ರ. ಖ್ಯಾತಿ ಪಡೆಯಿತು.

ಅವರಿಬ್ಬರ ಬ್ರಹ್ಮ-ಶಾರದೆ, ಕೃಷ್ಣ-ಸತ್ಯಭಾಮಾ, ಈಶ್ವರ-ದಾಕ್ಷಾಯಿಣಿ, ದಶರಥ-ಕೈಕೇಯಿ ಪಾತ್ರಗಳು ಎಟಕದ ಎತ್ತರಕ್ಕೇರಿವೆ. ಶ್ರೀ ದೇವಿ, ಶಕುಂತಲೆ, ದ್ರೌಪದಿ ಪಾತ್ರಗಳು ಜನಮನದಲ್ಲಿ ಮಾಸಿಲ್ಲ.

ಧಾನ್ಯಮಾಲಿನಿ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮಾಯಾ ಪೂತನಿ ಪಾತ್ರಗಳು, ಪ್ರಸಂಗದ ಆಶಯದಂತೆ ನಿರ್ವಹಿಸಸ್ಪಡುತ್ತಿದ್ದವು.

ಭಟ್ಟರ ಸ್ವರಗಾಂಭೀರ್ಯ ಸುಸ್ಪಷ್ಟ, ಶೃತಿಬದ್ಧ, ಅದರಲ್ಲಿ ಇಂಪಿದೆ, ಹೆಣ್ತನವಿದೆ. ಸ್ತ್ರೀವೇಷಕ್ಕೆ ಹೇಳಿ ಮಾಡಿಸಿದಂತೆ.

ಕಾಲ ಸರಿದಂತೆ ದೇಹಸ್ಥಿತಿಯೂ ಬದಲಾಯಿತು. ಸ್ತ್ರೀ ವೇಷಕ್ಕೆ ಒಪ್ಪುವ ಕಾಯ ಮಂಜಾಗಲು ಶುರುವಾಯಿತು. ದೇಹ ಮಾಗುವುದಕ್ಕೆ ಆರಂಭಿಸಿತು. ಅನಿವಾರ್ಯವಾಗಿ ಪುರುಷ ಪಾತ್ರಕ್ಕೆ ವಾಲಬೇಕಾಯಿತು.

ಅಲ್ಲೂ ಸೋತಿಲ್ಲ. ದಕ್ಷ, ಅತಿಕಾಯ, ಕಾರ್ತವೀರ್ಯ, ಜಲಂಧರ, ರಕ್ತಬೀಜ, ಕರ್ಣ, ದುಶ್ಯಂತ ಪಾತ್ರಗಳು ಪಾತ್ರಗಳಾಗಿಯೇ ಮಿಂಚಿದವು.

ಜೋಡಾಟಗಳಲ್ಲೂ ಶ್ರೀ ದೇವಿ, ಪ್ರಮೀಳೆ, ಶಶಿಪ್ರಭೆ ಪಾತ್ರಗಳನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.

1960ರಲ್ಲಿ ನಿವೃತ್ತಿ. ಪ್ರವೃತ್ತಿಗೆ ತುಕ್ಕು ಹಿಡಿಯಬಾರದೆಂದು ಯಕ್ಷಗಾನ ತರಗತಿಗಳ ಆರಂಭ. ಗುರುಕುಲ ಯಶಸ್ವಿಯಾಯಿತು. ಕಲಾವಿದರು ತಯಾರಾದರು. ಆದರ್ಶ ಗುರುವಾದರು.

ಅನೇಕ ಸಂಘಸಂಸ್ಥೆಗಳು ಭಟ್ಟರನ್ನು ಸನ್ಮಾಸಿವೆ. ಹೊರರಾಜ್ಯಗಳಲ್ಲೂ ಓಡಾಡಿದ್ದಾರೆ.

ತಂದೆಯ ದಾರಿಯಲ್ಲಿ ಮಗ ಕರ್ಗಲ್ಲು ವಿಶ್ವೇಶ್ವರಭಟ್ಟರು ಸಾಗುತ್ತಿದ್ದಾರೆ. 'ತೆಂಕು-ಬಡಗು ಯಕ್ಷಗಾನದೊಂದಿಗೆ ಭರತನಾಟ್ಯ, ಕಥಕ್ ಇತ್ಯಾದಿಗಳನ್ನು ಕಲಿತ ವಿಶ್ವಣ್ಣ ಯಕ್ಷಗಾನ ತರಗತಿ, ಕಮ್ಮಟಗಳಿಗೆಲ್ಲಾ ಬೇಕೇಬೇಕು.

ಸುಬ್ಬಣ್ಣ ಭಟ್ಟರ ಕಲಾ ಪ್ರತಿಭೆಯು ಅವರ ಮಗನಲ್ಲೂ ಮುಂದುವರಿಯುತ್ತಿರುವುದು ಸಮಾಧಾನ-ಸಂತಸ ತರುವಂತಹದು.

ಕರ್ಗಲ್ಲು ಸುಬ್ಬಣ್ಣ ಭಟ್ಟರು ಮತ್ತು ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು - ಮೇಳದಲ್ಲಿ ಬಹಳ ಆಪ್ತರು. ಅವರೆನ್ನುವಂತೆ-

ಸುಬ್ಬಣ್ಣ ಭಟ್ಟರ ಪಾತ್ರ ತುಂಬಾ ಅಚ್ಚುಕಟ್ಟು. ಉಡುಗೆ ತೊಡುಗೆಯಲ್ಲಿ ಬಹಳ ನಯ ನಾಜೂಕು. ವೇಷಕ್ಕಾಗಿ ಸೀರೆ ಉಟ್ಟ ಬಳಿಕ ಸೀರಯ ನೆರಿಗೆ ಎಲ್ಲಿ ಹಾಳಾಗುತ್ತದೋ ಎಂಬ ಭಯದಿಂದ ಪಾತ್ರ ಮುಗಿಯುವ ತನಕವೂ ಕುಳಿತುಕೊಳ್ಳರು. ಮೇಳದ ತಿರುಗಾಟದ ಆರಂಭದಲ್ಲಿ ಹೇಗಿತ್ತೋ, ಪತ್ತನಾಜೆ ತನಕ ಅವರುಡುವ ಸೀರೆ ಹೊಸತಿನಂತಿರುತ್ತಿತ್ತು. ಉತ್ತರ ಕನ್ನಡದಲ್ಲಿ ಕರ್ಗಲ್ಲು ಅವರ ದೇವಿಯ ಪಾತ್ರಕ್ಕೆ ಬಹಳ ಪೂಜ್ಯತೆಯಿತ್ತು. 'ದೇವಿ ಸುಬ್ಬಣ್ಣ ಭಟ್' ಎಂದು ಕೆಲವರು ಕರೆಯುತ್ತಿದ್ದರು.

ವ್ಯಕ್ತಿಶಃ ಭಟ್ಟರು ಸರಳ. ಆಗೊಮ್ಮೆ, ಈಗೊಮ್ಮೆ ಬೀಡಿ ಸೇದುವುದು ಬಿಟ್ಟರೆ ಉಳಿದಂತೆ ಯಾವುದೇ ದುಶ್ಚಟಗಳಿಲ್ಲದ ಅಪರೂಪದ ಕಲಾವಿದ. ಅವರ ಜೀವನವೆ ಒಂದು ಆದರ್ಶ. 'ಇದ್ದರೆ ಸುಬ್ಬಣ್ಣ ಭಟ್ಟರ ಹಾಂಗಿರೆಕು' ಎಂದು ಹಿರಿಯರು ಹೇಳುತ್ತಿದ್ದರು.

ಕ್ಷಣಕ್ಷಣಕ್ಕೂ ಬದಲಾಗುವ ಮನಸ್ಥಿತಿಯಲ್ಲ, ಅದರಲ್ಲಿ ಖಚಿತತೆಯಿರುತ್ತಿತ್ತು. ನಿರ್ಧಾರವಿರುತ್ತಿತ್ತು.

ವಿನಯ, ಶಿಸ್ತುಬದ್ಧತೆ ಸೌಜನ್ಯಕ್ಕೆ ಹೆಸರಾದ ಕೋಡಪದವು ಶ್ರೀ ವೀರಾಂಜನೇಯ ಯಕ್ಷಗಾನ ಕಲಾ ಸಂಘವನ್ನು ಕಟ್ಟಿ ಅದರ
ನಿರ್ದೇಶಕರಾಗಿ ದುಡಿದಿದ್ದರು.

ಮೊನ್ನೆ 27-12-1998ರಂದು ಸುಬ್ಬಣ್ಣ ಭಟ್ಟರು ನಮ್ಮನ್ನೆಲ್ಲಾ ಅಗಲಿ ಬಹುದೂರ ಸಾಗಿದ್ದಾರೆ. ಅವರ ಒಡನಾಟ, ಕಲಾಬದುಕು, ಪಾತ್ರಗಳು - ಇನ್ನು ಮುಂದೆ ನೆನಪು ಮಾತ್ರ. ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕುರುಣಿಸಲಿ - ಎಂಬುದು ಹಾರೈಕೆ.

(ಹೊಸ ದಿಗಂತ, 1-1-1999)

ಟಿಪ್ಪಣಿ

ಕರ್ಗಲ್ಲು ಸುಬ್ಬಣ್ಣ ಭಟ್ಟರು, ನನ್ನ ಪತ್ನಿಯ (ಶಾರದಾ) ಸೋದರ ಮಾವ. 1979ರಲ್ಲಿ ನಾವು ದಂಪತಿಗಳು ಅವರ ಮನೆಗೆ ಹೋಗಿ ಆಶೀರ್ವಾದ ಪಡೆದದ್ದು ನೆನಪಾಗುತ್ತದೆ. ಸುಬ್ಬಣ್ಣ ಭಟ್ಟರ ಮಗ ಕರ್ಗಲ್ಲು ವಿಶ್ವೇಶ್ವರ ಭಟ್, ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕುರಿತು ಅಧಿಕಾರವಾಣಿಯಿಂದ ಮಾತನಾಡಬಲ್ಲ 'ಗುರು'ವಾಗಿ ಬೆಳೆದಿರುವುದು ಅಭಿಮಾನದ ಸಂಗತಿ.

ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment