stat Counter



Wednesday, November 10, 2010

Literary Works of Koradkal Shrinivasa Rao - A Review

ಕೊರಡ್ಕಲ್ ಶ್ರೀನಿವಾಸರಾಯರ ಕೃತಿಗಳು
ಒಂದು ಸಮೀಕ್ಷೆ

- ಮುರಳೀಧರ ಉಪಾಧ್ಯ ಹಿರಿಯಡಕ

ಕೊರಡ್ಕಲ್ ಶ್ರೀನಿವಾಸರಾಯರು (1895-1948) ತನ್ನ ಮಧ್ಯವಯಸ್ಸಿನಲ್ಲಿ, ಐವತ್ತನಾಲ್ಕು ವರ್ಷ ಪ್ರಾಯದಲ್ಲಿ ತೀರಿಕೊಂಡರು. ನಾಟಕ, ಶಿಶುಗೀತೆ, ಸಣ್ಣಕತೆ ಮತ್ತು ವಿಚಾರ ಸಾಹಿತ್ಯ ಕೃತಿಗಳನ್ನು ಬರೆದಿರುವ ಕೊರಡಲ್ಕರ ಕೆಲವು ಕೃತಿಗಳ ಸಮೀಕ್ಷೆ ಈ ಲೇಖನದ ಉದ್ದೇಶ. ಅವರ ಹೆಚ್ಚಿನ ಪುಸ್ತಕಗಳು ಅವರು ಬೋರ್ಡ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಅವಧಿಯಲ್ಲಿ (ಸುಮಾರು 1925ರಿಂದ 1948) ಪ್ರಕಟವಾಗಿವೆ.
'ಆರೋಗ್ಯ ಪ್ರತಾಪ' ಕೊರಡ್ಕಲರಿಗೆ ಜನಮನ್ನಣೆ ಗಳಿಸಿಕೊಟ್ಟ ನಾಟಕ. ಈ ಪುಸ್ತಕದಲ್ಲಿ ಹದಿನೆಂಟು ಮಂದಿ ಶಿಕ್ಷಣತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಾಹಿತಿಗಳ ಮೆಚ್ಚುಗೆಯ ಮಾತುಗಳಿವೆ. ಕೊರಡ್ಕಲರು ತನ್ನ 'ವಿಜ್ಞಾಪನೆ'ಯಲ್ಲಿ "ಇಲ್ಲಿಯ 'ಶಿಶು ಸಪ್ತಾಹ'ದ ಅಂಗವಾಗಿ ಸಂಘದವರ ಕೋರಿಕೆಯಂತೆ 1925ನೆಯ ಮೊದಲಲ್ಲಿ ಈ ನಾಟಕವನ್ನು ಬರೆದೆನು. ನಮ್ಮ ಶಾಲೆಯ 'ಯುವ ನಾಟಕ ಸಭೆ'ಯವರು ಇದನ್ನು ಮೂರು ಸಲ ಅಭಿನಯಿಸಿದರು. ನೋಡಿದವರು ಮೆಚ್ಚಿ ಕೊಂಡಾಡಿದ್ದರು" ಎಂದಿದ್ದಾರೆ.
'ಆರೋಗ್ಯ ಪ್ರತಾಪ'ದ ಆರಂಭದಲ್ಲಿ ನಾರದ ಶ್ರೀಮನ್ನಾರಾಯಣನಿಗೆ ಭಾರತೀಯರ ಅನಾರೋಗ್ಯ ಸ್ಥಿತಿಯ ಕುರಿತು ವರದಿ ಒಪ್ಪಿಸುತ್ತಾನೆ. ನಾರಾಯಣನ ಅಪ್ಪಣೆಯಂತೆ ನಾರದ ಭಾರತದಲ್ಲಿ ಆರೋಗ್ಯ ಪ್ರತಾಪನಾಗಿ ಅವತರಿಸುತ್ತಾನೆ. ಈ ಆರೋಗ್ಯ ಪ್ರತಾಪ ತನ್ನ ಭಾಷಣದಲ್ಲಿ ಸ್ತ್ರೀಯರಿಗೆ ಆರೋಗ್ಯ ಶಿಕ್ಷಣ ನೀಡುವುದರ ಮಹತ್ವವನ್ನು ವಿವರಿಸುತ್ತಾನೆ. ಮುನ್ಸಿಫ್ ಕೋರ್ಟ್  ಗುಮಾಸ್ತ ರಂಗರಾಯರ ತಾಯಿ ಗೌರಮ್ಮ ತನ್ನ ಮೊಮ್ಮಗುವನ್ನು ಶಿಶುಪ್ರದರ್ಶನಕ್ಕೆ ಕರೆದುಕೊಂಡು ಹೋಗುವುದನ್ನು ವಿರೋಧಿಸುತ್ತಾಳೆ. ಶಿಶು ಸಪ್ತಾಹ ಭಜನಾ ಮಂಡಳಿಯವರು ಚಾ, ಕಾಫಿ, ಬೀಡಿ, ಸಿಗರೇಟುಗಳ ಅಪಾಯವನ್ನು, ಕಾಲರಾ, ಸಿಡುಬು, ಕ್ಷಯ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳನ್ನು ಕುರಿತು ಹಾಡುಗಳನ್ನು ಹೇಳುತ್ತ ಎಚ್ಚರಿಸುತ್ತಾರೆ. ಈ ನಾಟಕದ ಯುವಕ ವಿನೋದರಾಯ ಪಾಶ್ಚಾತ್ಯ ಉಡುಪುಗಳ ಅಂಧಾನುಕರಣೆ ಮಾಡುತ್ತಾನೆ - "ವಿಶೇಷ ಗೌರವಕಾರಿಯು ಹೇಟು ಬೂಟ್ಸೂ ಟ್ರೌಸರು, ವಿಶೇಷ ಗೌರವಕಾರಿಯು ಕ್ರೋಪೂ ನೆಕ್‍ಟಾಯ್ಕೊಲ್ಲರು" ಎಂದು ಹಾಡುತ್ತಾನೆ. ಎಲೋಪತಿ ಚಿಕಿತ್ಸಾಕ್ರಮ ಪ್ರಿಯನಾದ ತುಂಟ ಯುವಕನಾದ ಆನಂದ ದೇಶೀಯ ಚಿಕಿತ್ಸಾಕ್ರಮದ ಆಯುರ್ವೇದ  ಪಂಡಿತರನ್ನು ಗೇಲಿಮಾಡಲು ಹೊರಟು ತಾನೇ ನಗೆಪಾಟಲಿಗೆ ಈಡಾಗುತ್ತಾನೆ. ಮಿಠಾಯಿ ಮಾರುವ ತಿಮ್ಮಣ್ಣ ಮತ್ತು ಖರ್ಜೂರ  ಮಾರುವ ಮಂಜಣ್ಣರ ಸಂಭಾಷಣೆಯಲ್ಲಿ ಪ್ರೇಕ್ಷಕರಿಗೆ ಸೂಳೆಯರ ಸಹವಾಸ ಮತ್ತು ರಸ್ತೆ ಬದಿಯ ಮಿಠಾಯಿಗಳ ಅಪಾಯಗಳು ತಿಳಿಯುತ್ತವೆ. ಆರೋಗ್ಯವರ್ಧಕ ಸಭೆಯ ವಿನಾಯಕರಾಯರ ಭಾಷಣದಿಂದ ತನ್ನ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು 'ಭೀಮ ವಿಲಾಸ ಕಾಫಿ ಕ್ಲಬ್' ಎಂಬ ಗಲೀಜು ಹೊಟೇಲಿನ ಮಾಲಿಕ ವ್ಯಾಜ್ಯ ಮಾಡುತ್ತಾನೆ. ಹೊಟೇಲಿನ ಪರಿಶೀಲನೆಗೆ ಡಾಕ್ಟರರ ಜತೆಯಲ್ಲಿ ಬಂದ ಮುನ್ಸೀಫರು, 'ಈ  hotelಗಳನ್ನು hot-hell (ನರಕದ ಕುಂಡ) ಎಂದು ಕರೆದರೆ ಅರ್ಥಕ್ಕೂ ವಿದ್ಯಮಾನಗಳಿಗೂ ಬಹಳ ಸರಿಬೀಳುವುದು' ಎಂದು ತೀರ್ಮಾನಿಸುತ್ತಾರೆ. ಮದ್ಯಪಾನದ ದುಶ್ಚಟಕ್ಕೆ ಬಲಿಯಾದ ವಕೀಲ ಸುರೇಂದ್ರರಾಯನ ಹೊಡೆತದಿಂದ ಅವನ ಮಗು ಸಾಯುತ್ತದೆ. ಯಮಧರ್ಮರಾಜನ ದರ್ಬಾರಿನಲ್ಲಿ ಪ್ಲೇಗು, ಕೊಲೆರಾ, ಸಿಡುಬು, ಜ್ವರ ಮುಂತಾದ ಸೇನಾನಾಯಕರು ಸೋಲೊಪ್ಪಿಕೊಳ್ಳುವರು. ಆ ಕಾಲದ ಕಂಪೆನಿ ನಾಟಕಗಳಲ್ಲಿದ್ದಂತೆ ಈ ನಾಟಕದಲ್ಲಿಯೂ ಅರುವತ್ತಕ್ಕಿಂತ ಹೆಚ್ಚು ಹಾಡುಗಳಿವೆ.
"ಶ್ರೀಯುತ ಕೊರಡುಕಲ್ಲು ಶ್ರೀನಿವಾಸರಾಯರು ಕೊರಡೂ ಅಲ್ಲ, ಕಲ್ಲೂ ಅಲ್ಲವೆಂದು ಅವರ 'ಆರೋಗ್ಯ ಪ್ರತಾಪ'ದಲ್ಲಿ ಚೆನ್ನಾಗಿ ವಿಶದವಾಗುತ್ತಿದೆ. ಆರೋಗ್ಯ ಪ್ರಚಾರ ದೃಷ್ಟ್ಯಾ ಅತ್ಯವಶ್ಯವಾದ ಪಾಮರರಂಜನ ಉಪಕರಣವಾಗಿ ಇದು ಸರ್ವಗ್ರಾಹ್ಯವೇ ಎಂಬುದರಲ್ಲಿ ಸಂದೇಹವಿಲ್ಲ" ಎಂದು 'ಶ್ರೀ ಕೃಷ್ಣ ಸೂಕ್ತಿ'ಯ ಸಂಪಾದಕ ಎನ್. ರಾಜಗೋಪಾಲ ಕೃಷ್ಣರಾಯರು 'ಆರೋಗ್ಯ ಪ್ರತಾಪ'ವನ್ನು ಮೆಚ್ಚಿದರು.1 ದೇವಶಿಖಾಮಣಿ ಅಳಸಿಂಗಾಚಾರ್ಯರು ಆರೋಗ್ಯ ಪ್ರಚಾರಕ್ಕಾಗಿ ಬರೆದ ಈ ನಾಟಕದ ಇತಿ-ಮಿತಿಯನ್ನು ಮರೆಯದೆ ......ಈ ಸಣ್ಣ ಪುಸ್ತಕವು ತತ್ಕಾಲಿಕ ಪರಿಸ್ಥಿತಿಗೆ ಬಹಳ ಅನುಗುಣವಾಗಿದೆ ಎಂದರು.ವಸಾಹತುಶಾಹಿ ಆಡಳಿತದ ಅಡಕತ್ತರಿಯಲ್ಲಿದ್ದ ದಕ್ಷಿಣ ಕನ್ನಡದಲ್ಲಿ ಇಪ್ಪತ್ತನೆಯಶತಮಾನದ ಪೂರ್ವಾರ್ಧದಲ್ಲಿದ್ದ ಸಾಮಾಜಿಕ ಅನಿಷ್ಟಗಳನ್ನು ಈ ನಾಟಕ ಪರಿಚಯಿಸುತ್ತದೆ. ಆಧುನಿಕ ಶಿಕ್ಷಣ ವ್ಯವಸ್ಥೆಯ ಶಿಕ್ಷಕರಲ್ಲೊಬ್ಬರಾಗಿದ್ದ ಕೊರಡ್ಕಲರು ಮೂಢನಂಬಿಕೆಗಳ ವಿರುದ್ಧ ನಡೆಯುತ್ತಿದ್ದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪಡುವಣದ ಗಾಳಿ ನಮ್ಮ ಕಾಲಬುಡ ತತ್ತರಿಸುವಂತೆ ಮಾಡುತ್ತಿದೆ, ಆಯುರ್ವೇದದಂಥ ದೇಸಿ ವೈದ್ಯಕೀಯ ಪದ್ಧತಿ ಅಲಕ್ಷ್ಯಕ್ಕೀಡಾಗುತ್ತಿದೆ ಎಂದು ಅವರು ಕಳವಳ ಪಡುತ್ತಿದ್ದಾರೆ. ಕೊರಡ್ಕಲರು 1925ರಲ್ಲಿ ಬರೆದಿರುವ ಈ ನಾಟಕದಲ್ಲಿ ನಾರದ ಆರೋಗ್ಯ ಪ್ರತಾಪನಾಗುತ್ತಾನೆ. ಶಿವರಾಮ ಕಾರಂತರು 1930ರಲ್ಲಿ ಬರೆದ 'ದೇವದೂತರು' ಎಂಬ ವಿಡಂಬನಾತ್ಮಕ ಕಾದಂಬರಿಯಲ್ಲಿ ಭೂಲೋಕದವರ ಧರ್ಮ, ಆರೋಗ್ಯ, ವಿದ್ಯೆ, ಆರ್ಥಿಕ  ಸ್ಥಿತಿಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ದೇವಲೋಕದಲ್ಲಿ ಒಂದು ಸಮಿತಿ ತಯಾರಾಗುತ್ತದೆ. ಆರೋಗ್ಯ ಶಿಕ್ಷಣಕ್ಕೆ ನಾಟಕ ಮಾಧ್ಯಮವನ್ನುಹೇಗೆ ಬಳಸಬಹುದೆಂಬುದಕ್ಕೆ ಕೊರಡ್ಕಲರ 'ಆರೋಗ್ಯ ಪ್ರತಾಪ' ಒಂದು ಒಳ್ಳೆಯ ಮಾದರಿಯಾಗಿದೆ. ದಕ್ಷಿಣ ಕನ್ನಡದ ಜಿಲ್ಲಾ ಬೋರ್ಡು  ಈ ನಾಟಕ ಬರೆದ ಕೊರಡ್ಕಲರನ್ನು 1926ರಲ್ಲಿ ಬಂಗಾರದ ಪದಕ ನೀಡಿ ಗೌರವಿಸಿತು.3
1938ರಲ್ಲಿ ಪ್ರಕಟವಾದ 'ಧರ್ಮಸಂಕಟ' ನಾಟಕದ ಪ್ರಸ್ತಾವನೆಯಲ್ಲಿ ಕೊರಡಲ್ಕರು ಅದರ ಪೂರ್ವೇತಿಹಾಸವನ್ನು ಬರೆದಿದ್ದಾರೆ.4   ತಾನು ಬರೆದ 'ಸುಶೀಲಾ ಸುಂದರ' ಸಾಮಾಜಿಕ ನಾಟಕ ಕೆಲವು ಪ್ರಯೋಗಗಳನ್ನು ಕಂಡ ಮೇಲೆ ಕೊರಡ್ಕಲರು ಅದನ್ನು 'ಡಾಕ್ಟರ್ ಆನಂದು' ಎಂಬ ಹೆಸರಿನಲ್ಲಿ ಪರಿಷ್ಕರಿಸಿ ಬರೆದರು, ಮುದ್ರಣಕ್ಕೆ ಕಳುಹಿಸುವ ಮೊದಲು ಅದರ ಹೆಸರನ್ನು 'ಧರ್ಮಸಂಕಟ' ಎಂದು ಬದಲಾಯಿಸಿದರು. ಕೊರಡಲ್ಕರು ಈ ನಾಟಕದ ಅರ್ಪಣೆಯಲ್ಲಿ "ರಸಿಕ ದಾಂಪತ್ಯ ಜೀವನದ ಸುಖ ಸಂತೋಷಗಳನ್ನು ತೋರಿ ಹರೆಯದ ಆದಿಯಲ್ಲೇ ತೀರಿಕೊಂಡ ನನ್ನ ಮೊದಲ ಮುದ್ದಿನ ಮಡದಿ ಕಮಲೆಯ ನೆನಹಿಗಾಗಿ" ಎಂದಿದ್ದಾರೆ.
ಗೌರಮ್ಮ ತನ್ನ ಸೊಸೆ ರಮೆಯನ್ನು (ಡಾಕ್ಟರ್ ಆನಂದುನ ಹೆಂಡತಿ) ಮನೆಯಿಂದ ಹೊರಹಾಕುತ್ತಾಳೆ. ಮರುಮದುವೆಯಾಗಲು ನಿರಾಕರಿಸಿದ ಆನಂದು ತಾಯಿಗೆ ತಿಳಿಯದಂತೆ ಹೆಂಡತಿಯೊಂದಿಗೆ ಮದ್ರಾಸಿನಲ್ಲಿ ವಾಸಿಸುತ್ತಾನೆ. ರಮೆ 'ಗಾನ ವಿಶಾರದೆ'ಯಾಗಿ ಆನಂದುನ ತಂಗಿಯರಿಗೆ ಸಂಗೀತ ಕಲಿಸುತ್ತಾಳೆ. ಅತ್ತೆ-ಸೊಸೆಯ ವಿರಸ ಸುಖಾಂತವಾಗುತ್ತದೆ. ಆನಂದು ಹೇಳುತ್ತಾನೆ - "ಅಮ್ಮ! ಏನೇನೋ ನೋಡಬೇಕಾಗಿ ಬಂತಮ್ಮ! ನೋಡು ನಿನ್ನನ್ನು ಬಿಡಲಿಕ್ಕಾಗಲಿಲ್ಲ; ಇವಳನ್ನು ಬಿಡಲಿಕ್ಕೂ ಆಗಲಿಲ್ಲ, ಧರ್ಮಸಂಕಟಕ್ಕೆ ಬಿದ್ದೆ! ಒಂದು ಕಡೆ ನನಗೆ ವಿದ್ಯಾಬುದ್ಧಿಯನ್ನು ಕಲಿಸಿ ನನ್ನನ್ನು ಈ ರೀತಿಗೆ ತಂದವರ ಮಗಳು - ಅಗ್ನಿಸಾಕ್ಷಿಯಾಗಿ ಕೈಹಿಡಿದ ಹೆಂಡತಿ - ದುರ್ದೈವ  ವಿಲಾಸದಿಂದ ನಿರ್ಗತಿಗಿಳಿದ ಆ ಸಂಸಾರ! ಇನ್ನೊಂದು ಕಡೆ ಹೆತ್ತು ಸಾಕಿ ಸಲಹಿದ ತಾಯಿ ಮತ್ತು ಈ ಸಂಸಾರ! ಯಾವುದನ್ನು ಬಿಡಲಿ? ಯಾವುದನ್ನು ಹಿಡಿಯಲಿ? ಹೀಗೆ ಧರ್ಮಸಂಕಟಕ್ಕೆ ಬಿದ್ದು ನಾಟಕವಾಡಿದೆ. ಇಕ್ಕಡೆಯನ್ನೂ ಸುಖದಲ್ಲಿಟ್ಟು ಸಂದರ್ಭವೊದಗಿದಾಗ ಒಟ್ಟುಗೂಡಿಸಿದೆ! ಇದಕ್ಕಾಗಿ ಸ್ವಲ್ಪ ಕಣ್ಣುಕಟ್ಟು ಆಡಬೇಕಾಯಿತು. ನನ್ನನ್ನು ಕ್ಷಮಿಸು.

ಈ ನಾಟಕದ ಕೆಲವು ದೃಶ್ಯಗಳು ದಕ್ಷಿಣ ಕನ್ನಡದ ಪುತ್ತೂರಿನಲ್ಲೂ, ಕೆಲವು ಮದ್ರಾಸಿನಲ್ಲೂ ನಡೆಯುತ್ತವೆ. ಹೆಣ್ಣಿನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಮಾತುಗಳು ಅಲ್ಲಲ್ಲಿವೆ - "ಆ ರಮಾಬಾಯಿ ಮಗಳು ಕೇಳಿದ್ರಾ, ಇನ್ನೂ ಹದಿನಾಲ್ಕು ವರುಷ ಪೂರ್ತಾ ತುಂಬಿಲ್ಲ". ವಧೂ ಪರೀಕ್ಷೆಯ ಸಂಪ್ರದಾಯದಲ್ಲಿ ಬದಲಾವಣೆಗಳಾಗುತ್ತಿರುವುದನ್ನು ನಾಟಕಕಾರರು ಚಿತ್ರಿಸಿದ್ದಾರೆ. ಈ ನಾಟಕಕ್ಕಾಗಿ ಕೊರಡಲ್ಕರು ಹಾಡುಗಳನ್ನು ಬರೆದಿಲ್ಲ. ಪ್ರಸ್ತಾಪನೆಯಲ್ಲಿ ಅವರು, ರಂಗಭೂಮಿಯು ಸಂಗೀತ ಪ್ರದರ್ಶನದ ವೇದಿಕೆಯಾಗಬಾರದು. ಮಾತುಕತೆಗಳಲ್ಲಿ, ಕೋಪಾವೇಶದಲ್ಲಿ, ಅಳುವಿನಲ್ಲಿ, ಮರಣದಲ್ಲಿ, ಹೀಗೆ ಸಲ್ಲದ ಕಡೆಗಳಲ್ಲೆಲ್ಲ ಪದಗಳನ್ನು ಪ್ರಯೋಗಿಸಿ ರಸಭಂಗಗೊಳಿಸುವುದು ಇಂದಿನ ನಾಟಕಗಳ ದೊಡ್ಡ ಕುಂದು. ನಾಟಕ ಕಲಾಭಿಮಾನಿಗಳ ಕಣ್ಣು ಕುಕ್ಕುತ್ತವೆ ಅವು. ಆದರೆ ಮಂದಿಗೆ ಅವು ಬೇಕಾಗಿವೆ. ಅದು ಕಾರಣ ಈ ನಾಟಕದಲ್ಲೊಂದು ಮಧ್ಯಸ್ಥಿಕೆ ಮಾಡಿಯದೆ. ಪದಗಳು ರಸಭಂಗಗೊಳಿಸದೆ, ಅಸ್ವಾಭಿಕವಾಗದೆ ಸಾಧಾರಣ ಸಹಜವಾಗಿ ರಂಗಭೂಮಿಯಲ್ಲಿ ಸುಳಿಯುವಂತೆ ಹಂಚಿಕೆ ಮಾಡಿಯದೆ ಇದರಲ್ಲಿ ಎಂದಿದ್ದಾರೆ. ನಾಟಕಗಳಲ್ಲಿದ್ದ ಸಂಗೀತದ ಅತಿರೇಕವನ್ನು ಕೊರಡಲ್ಕರು 1938ರಲ್ಲೆ ತಿರಸ್ಕರಿಸಿರುವುದು ಗಮನಾರ್ಹ. 'ಧರ್ಮಸಂಕಟ' ಒಂದು ಸಾಮಾನ್ಯ ಸಾಮಾಜಿಕ ನಾಟಕ.

'ಧರ್ಮಸಂಕಟ' ನಾಟಕದ ಪ್ರಸ್ತಾವನೆಯಲ್ಲಿ ಕೊರಡ್ಕಲರು ಮೂವತ್ತರ ದಶಕದ ಜನಪ್ರಿಯ ರಂಗಭೂಮಿಯನ್ನು ಕುರಿತ ತನ್ನ ತಕರಾರುಗಳನ್ನು ಬರೆದಿದ್ದಾರೆ - "ಇಂದು ಸಿನೆಮಾ ಗೃಹಗಳಲ್ಲಿಯೂ ನಾಟಕ ಮಂದಿರಗಳಲ್ಲಿಯೂ ಲ್ಪಡುವ ಹಲವು ನಾಟಕಗಳ ಅನೀತಿಯ ಅಸಭ್ಯ ದೃಶ್ಯಗಳು ಎಳೆಯರಲ್ಲಿಯೂ ಹರೆಯದವರಲ್ಲಿಯೂ ಮನೋವಿಕಾರವನ್ನುಂಟುಮಾಡಿ ಪಾಪದ ಬೀಜವನ್ನು ಬಿತ್ತುತ್ತಿವೆ. ಕುಲೀನ ಸ್ತ್ರೀಯರೂ ಸಭ್ಯ ಗೃಹಸ್ಥರೂ, 'ನಾವೇಕೆ ಬಂದೆವಪ್ಪಾ ಈ ಹೊಲಸಿನ ಕೊಪ್ಪಕ್ಕೆ!' ಎನ್ನುತ್ತ ಜುಗುಪ್ಸೆಗೊಳ್ಳುವಂತೆ ಮಾಡುತ್ತಿವೆ".
ಪ್ರದರ್ಶಿಸ

'ಮೂರು ಪ್ರಹಸನಗಳು' ಪುಸ್ತಕದಲ್ಲಿ 'ರಂಗಿನ ಬುಡುಬುಡಿಕೆ' 'ಟೊಪ್ಪಿ' ಮತ್ತು 'ವಶೀಕರಣ' ಎಂಬ ಮೂರು ಏಕಾಂಕ ನಾಟಕಗಳಿವೆ. ಭವಿಷ್ಯ ಹೇಳುತ್ತ ಮಂಕುಬೂದಿ ಎರಚುವ ಬುಡುಬುಡಿಕೆಯ ಹಾಲಕ್ಕಿ 'ರಂಗಿನ ಬುಡುಬುಡಿಕೆ'ಯ ಮುಖ್ಯ ಪಾತ್ರ. ಈತ ಹಳ್ಳಿಯಲ್ಲಿ ಒಬ್ಬನಿಂದ ಇನ್ನೊಬ್ಬನ ವಿಷಯ ಸಂಗ್ರಹಿಸಿ ತಾನು ಸರ್ವಜ್ಞನಂತೆ ನಟಿಸುತ್ತಾನೆ. ನಾಟಕದ ಕೊನೆಯಲ್ಲಿರುವ ಲಿಂಗಯ್ಯನ ಮಾತಿನಲ್ಲಿ ಕೊರಡಲ್ಕರ ವೈಚಾರಿಕ ನಿಲುವು ಸ್ಪಷ್ಟವಾಗಿದೆ - "ಇನ್ಮುಂದೆ ಹಾಲಕ್ಕಿ, ಜೋಯ್ಸ, ದರ್ಶನ, ನಿಮಿತ್ತ, ಮಂತ್ರವಾದಿ ಇವೆಲ್ಲ ನಂಬೋದು ಬಿಟ್ಟು, ಆ ಭಗವಂತ ಒಬ್ಬನಲ್ಲೇ ಸರ್ವಭಾರ ಹಾಕಿ, ಸತ್ಯ ಪಿರ್ತಿ ಎಂಬ ಹಾದಿ ಹಿಡ್ದು, ದುಡಿಯೋದು ನಡಿಯೋದು ನಮ್ಮ ಕೆಲ್ಸಾ, ಕೊಡೋದು ಬಿಡೋದು ದೇವ್ರ ಇಷ್ಟಾ - ಎಂಬ್ದೇ ನಮ್ಮ ಮತ

'ಟೊಪ್ಪಿ' ನಾಟಕದ ಶಂಕರಡೋಂಗಿ ತನ್ನ ತಂತ್ರಗಳ ಮೂಲಕ ಇತರರಿಗೆ ಡೋಂಗಿ ಮಾಡುತ್ತಾನೆ, ಟೊಪ್ಪಿ ಹಾಕುತ್ತಾನೆ. ಶಂಕರಡೋಂಗಿಯಿಂದಾಗಿ ಸಟ್ಟಾ ಮತ್ತಿತರ ದುಶ್ಚಟಗಳಿಗೆ ಬಲಿಯಾಗುವ ಶಂಬಯ್ಯ ದಿವಾಳಿಯಾಗುತ್ತಾನೆ. "ಎಷ್ಟೋ ಜನ ದೊಡ್ಡ ದೊಡ್ಡವರು ಅನ್ನಿಸಿಕೊಂಡವರಲ್ಲಿ ಪಬ್ಲಿಕ್ ಲೈಫ್ ಬೇರೆ, ಪ್ರಾಯ್‍ವೆಟ್ ಲೈಫೇ ಬೇರೆ. ಪಬ್ಲಿಕ ಲೈಫನ್ನ ಇಲೆಕ್ಟ್ರಿಕ್ ಲೈಟಿನ ಹಾಗೆ ಜಗ್ ಜಗ್ ಇಟ್ಟುಕೊಂಡರಾಯಿತು.ಪ್ರಾಯ್‍ವೆಟ್  ಲೈಫ್ ಹ್ಯಾಗಿದ್ದರೇನು? ಯಾರು ಕೇಳುತ್ತಾರೆ?" ಎನ್ನುತ್ತಾನೆ ಶಂಕರಡೋಂಗಿ.
'ವಶೀಕರಣ'ದ ಶಂಕರಪ್ಪ ತನಗಿಂತ ಚಿಕ್ಕವಯಸ್ಸಿನ ಪತ್ನಿ ನರ್ಸುವಿನ ವಶೀಕರಣಕ್ಕಾಗಿ ಜೋಯಿಸರಿಗೆ ಶರಣಾಗುತ್ತಾನೆ. ಜೋಯಿಸರು ಶಂಕರಪ್ಪನ ಹೆಂಡತಿಯನ್ನು ತಾನೇ ವಶೀಕರಣ ಮಾಡಿಕೊಂಡು ಅವಳೊಂದಿಗೆ ಪರಾರಿಯಾಗುತ್ತಾರೆ.
'ಮೂರು ಪ್ರಹಸನಗಳು' ಬರೇ ಪ್ರಹಸನಗಳಾಗಿ ಉಳಿಯದೆ ವಿಡಂಬನೆಗಳಾಗಿ ಬೆಳೆಯುತ್ತವೆ. ಜೋಯಿಸರು ಮತ್ತು ಮಂತ್ರವಾದಿಗಳ ಬಗ್ಗೆ ಕೊರಡಲ್ಕರು ವೈಚಾರಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಈ ನಾಟಕಗಳಲ್ಲಿ ದಕ್ಷಿಣ ಕನ್ನಡದ ಗ್ರಾಂಥಿಕ ಕನ್ನಡದ ಬದಲು ಆಡುಮಾತಿನ ಕನ್ನಡವನ್ನು ಬಳಸಿದ್ದಾರೆ.
ಬಾಲಸಾಹಿತ್ಯ - "ಈ ಪದವು ಕನ್ನಡದಲ್ಲಿ ತೀರ ಹೊಸದು. ಅದು ಹುಟ್ಟಿ ಇನ್ನೂ 15 ವರ್ಷ ಕಳೆಯಲಿಲ್ಲವಾದರೂ ಕನ್ನಡ ಬಾಲಸಾಹಿತ್ಯವೂ ಕನ್ನಡ ಭಾಷೆಯ ಬೆಳವಣಿಗೆಯ ಬೆನ್ನು ಹಿಡಿದು ಬಹುಕಾಲದ ಹಿಂದಿನಿಂದ ಬಂದಿದೆ" ಎಂದು ಪಂಜೆ ಮಂಗೇಶರಾಯರು 1935ರಲ್ಲಿ 'ಬಾಲ ಸಾಹಿತ್ಯ' ಲೇಖನದಲ್ಲಿ ತಿಳಿಸಿದರು.5  ಕೊರಡ್ಕಲ್ ಶ್ರೀನಿವಾಸರಾಯರ 'ಬಾಲವಾಙ್ಮಯ' ಎಂಬ ಪುಸ್ತಿಕೆ 1936ರಲ್ಲಿ ಪ್ರಕಟವಾಗಿದೆ.6   ಪಂಜೆಯವರು ತನ್ನ ಲೇಖನದಲ್ಲಿ ಮಕ್ಕಳ ಕತೆಗಳ ಲಕ್ಷಣಗಳನ್ನು ವಿವರಿಸಿದ್ದಾರೆ. ಕೊರಡಲ್ಕರು 'ಬಾಲವಾಙ್ಮಯದ ಆವಶ್ಯಕತೆ ಮತ್ತು  ನಿರ್ಮಾಣ'ದ ಕುರಿತು ಈ ಲೇಖನವನ್ನು ಬರೆದಿದ್ದಾರೆ. ಆಧುನಿಕ ಶಿಕ್ಷಣ ಪದ್ಧತಿ ಮಕ್ಕಳಲ್ಲಿ ವಾಚಾನಾಭಿರುಚಿಯನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿಲ್ಲ ಎಂದು ಕೊರಡಲ್ಕರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಅವರು ನೀಡುವ ಕಾರಣಗಳು: 1) ಭಾಷೆಗೆ ಪ್ರಾಧಾನ್ಯವಿರದೆ ವಿಷಯಕ್ಕೆ ಪ್ರಾಮುಖ್ಯತೆ ನೀಡುವ ಪಠ್ಯಪುಸ್ತಕಗಳು. 2) ಶಾಲೆಗಳಲ್ಲಿ ಮಕ್ಕಳ ಪುಸ್ತಕ ಭಂಡಾರದ ಅಭಾವ. 3) ಮಕ್ಕಳ ಶಿಕ್ಷಣವನ್ನು ಕುರಿತ ಹೆತ್ತವರ ಅಲಕ್ಷ್ಯ. "ಯಾವ ಪುಸ್ತಕ ಪ್ರಪಂಚದಲ್ಲಿ ಮಕ್ಕಳ ಲೋಕವೇ ಪ್ರತಿಬಿಂಬಿತವಾಗುವುದೋ, ಯಾವ ಪುಸ್ತಕಗಳಲ್ಲಿ ಮಕ್ಕಳ ಅನುಭವಕ್ಕೆ, ಅಭಿರುಚಿಗೆ, ಹೃದಯಕ್ಕೆ, ತಿಳಿವಿಗೆ ಮೀರಿದ ವಿಷಯಗಳು ಸುಲಭವಾಗಿ, ಸರಳವಾಗಿ, ಸ್ವಾರಸ್ಯವಾಗಿ ಬರೆಯಲ್ಪಟ್ಟಿರುವವೋ ಆ ಪುಸ್ತಕ ಸಮುದಾಯಕ್ಕೆ 'ಬಾಲವಾಙ್ಮಯ' ಎಂದು ಹೆಸರು. ಎಂದು ಕೊರಡ್ಕಲರು ವ್ಯಾಖ್ಯಾನಿಸಿದ್ದಾರೆ". ಅವರು ಹೇಳಿರುವಂತೆ, ಎಂದಿನ ತನಕ ಶಾಲೆಯನ್ನು ಬಿಟ್ಟು ಮನೆ ಸೇರುವ ಮಕ್ಕಳಲ್ಲಿ ವಾಚಾನಾಭಿರುಚಿಯು ಸ್ಥಿರವಾಗಿ ನೆಲೆಯಾಗುವುದಿಲ್ಲವೋ ಅಂದಿನ ವರೆಗೆ ಸಾರ್ಥಕವಾದ ವಿದ್ಯಾಭ್ಯಾಸವಾಯಿತೆಂದು ಹೇಳಲು ಬರುವುದಿಲ್ಲ...... ಇಂದಿನ ಕನ್ನಡ ಬಾಲವಾಙ್ಮಯವೇ ನಾಳಿನ ಕನ್ನಡ ವಾಙ್ಮಯದ ತಳಗಟ್ಟು...... ಶಾಲೆಯ ವಿವಿಧ ಅಂಗಗಳಲ್ಲಿ ಶಿರೋಪ್ರಾಯವಾದುದು ಬಾಲವಾಙ್ಮಯ ಪುಸ್ತಕ ಭಂಡಾರ. ಕನ್ನಡ ಮಕ್ಕಳ ಸಾಹಿತ್ಯ ವಿಮರ್ಶೆಯ ಇತಿಹಾಸದಲ್ಲಿ ಕೊರಡಲ್ಕರ ಬಾಲವಾಙ್ಮಯ ಒಂದು ಮಹತ್ವದ ದಿಕ್ಸೂಚಿಯಾಗಿದೆ.

ಕೊರಡ್ಕಲರ 'ಪದ್ಯಾವಳಿ' ಸ್ವಾತಂತ್ರ್ಯಪೂರ್ವದ ಕೆಲವು ದಶಕಗಳ ಮಕ್ಕಳಲ್ಲಿ ತುಂಬ ಜನಪ್ರಿಯವಾಗಿದ್ದ ಪುಸ್ತಕ. 1936ರಲ್ಲಿ ಇದರ ಹನ್ನೊಂದನೆ ಮುದ್ರಣ ಪ್ರಕಟವಾಗಿದೆ. ಈ ಸಂಕಲನದ ಮೊದಲ ಭಾಗದಲ್ಲಿ: 1) ಇಬ್ಬರ ನ್ಯಾಯ ಮೂರನೆಯವನಿಗೆ ಆಯ 2) ಎಲ್ಲರೂ ಸರಿ! ಎಲ್ಲರೂ ತಪ್ಪು! 3) ಪಾರಿವಾಳಗಳೂ ಬೇಡನೂ 4) ತೋಳನೂ ಕೊಕ್ಕರೆಯೂ 5) ಬೆಕ್ಕು ಸನ್ಯಾಸಿಯಾದುದು 6) ಸಿಂಹವೂ ಇಲಿಯೂ 7) ನಾಯಿಯೂ ನೆರಳೂ 8) ನಾಳೆ ಎನಬೇಡ ಎಂಬ ಹಾಡುಗಳಿವೆ. ಮಕ್ಕಳಿಗೆ ಇಷ್ಟವಾಗುವ ಪ್ರಾಣಿಪ್ರಪಂಚದ ಕತೆಗಳನ್ನು ಕೊರಡಲ್ಕರು ಆಯ್ದುಕೊಂಡಿದ್ದಾರೆ. ಬಾಲಕಿಯರ ಕೋಲಾಟಕ್ಕಾಗಿ ಬರೆದ ಆರೋಗ್ಯ ಗೀತೆಗಳಲ್ಲಿ: 1) ಕ್ಷೇಮ ಸಮಾಚಾರ 2) ಶಿಶು ಸಂರಕ್ಷಣೆ 3) ಶಿಶು ಪಾಲನೆ 4) ಗೃಹಿಣಿ ಹಿತೋಪದೇಶ ಎಂಬ ಹಾಡುಗಳಿವೆ. ಆರೋಗ್ಯ ಶಿಕ್ಷಣಕ್ಕಾಗಿ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮವನ್ನು ಬಳಸುವ ಹೊಸ ಪ್ರಯೋಗದಲ್ಲಿ ಕೊರಡಲ್ಕರು ಯಶಸ್ವಿಯಾಗಿದ್ದರು. 'ಶಿಶು ಪಾಲನೆ' ಎಂಬ ಹಾಡಿನ ಸಾಲುಗಳಿವು -

ತಾರಲಾರವು ರೋಗರುಜೆಗಳ ಭೂತಪ್ರೇತಗಳ್ ತಿಳಿಯಿರಿ
ಮೀರಿದರೆ ಆರೋಗ್ಯ ನಿಯಮವ ಜಾಡ್ಯ ಬರುವುದು ನಂಬಿರಿ
ದೇಹಧರ್ಮವ ತಿಳಿಯಿರಿ, ಅದರಂತೆ ಮಕ್ಕಳ ಬೆಳೆಸಿರಿ

'ಚರಿತ್ರೆಯ ಹಾಡುಗಳು' ವಿಭಾಗದಲ್ಲಿ 1) ಚಿತ್ತೂರಿನ ಪದ್ಮಿನಿ 2) ಭೀಮಸಿಂಗನ ಕನಸು 3) ಪನ್ನೆಯ ಸ್ವಾಮಿ ಭಕ್ತಿ 4) ಅರ್ಗಳದ ವೀರರಾಣಿ 5) ಪೃಥ್ವಿರಾಜನೂ ಜಯಚಂದನೂ 6) ಬಾಬರ್ ಮತ್ತು ಹುಮಾಯೂನ್ 7) ಅಕ್ಬರ್ ಎಂಬ ಹಾಡುಗಳಿವೆ. ಕೊರಡ್ಕಲರ ಹೆಚ್ಚಿನ ಹಾಡುಗಳು ಭೋಗ, ಭಾಮಿನಿ, ಕುಸುಮ ಷಟ್ಪದಿ ಮತ್ತು ಚೌಪದಿಗಳಲ್ಲಿವೆ. ಮಕ್ಕಳ ಹಾಡುಗಳ ರಚನೆಯಲ್ಲಿ ಕೊರಡ್ಕಲರು ಪಂಜೆಯವರಿಂದ ಪ್ರಭಾವಿತರಾಗಿದ್ದಾರೆ. ಆದರೆ, ಈ ರಚನೆಗಳಲ್ಲಿ ಪಂಜೆಯವರನ್ನು ಮೀರಿಸಿ ಬೆಳೆಯುವುದು ಅವರಿಂದ ಸಾಧ್ಯವಾಗಿಲ್ಲ.
ಕೊರಡ್ಕಲ್ ಶ್ರೀನಿವಾಸರಾಯರ 'ನಂದಾದೀಪ' ಕಥಾಸಂಕಲನ 1938ರಲ್ಲಿ ಪ್ರಕಟವಾಗಿ 1947ರಲ್ಲಿ ಪುನರ್ ಮುದ್ರಣ ಕಂಡಿತು. ಈ ಸಂಕಲನವನ್ನು ಅವರು ತನ್ನ ತಾಯಿಗೆ ಅರ್ಪಿಸಿದ್ದಾರೆ - "ಹರೆಯದಲ್ಲಿ ಪತಿಯಳಿದ ಅಳಲನ್ನು ಏಕಮಾತ್ರ ಪುತ್ರನಾದ ನನ್ನ ಲಾಲನೆ ಪಾಲನೆಗಳಲ್ಲಿ ಸಹಿಸಿಕೊಂಡು ತಾಯ್ತನದ ತ್ಯಾಗವಿಶೇಷದಿಂದ ನನ್ನನ್ನು ಈ ಮಟ್ಟಕ್ಕೆ ತಂದಿಟ್ಟಿರುವ ನನ್ನ ಪೂಜ್ಯ ಮಾತೃಶ್ರೀ ಸುಬ್ಬಮ್ಮನವರ ಕಡೆಗೆ ನನಗಿರುವ ಅಪಾರ ಋಣ ಸೂಚಕವಾಗಿ ಅವರ ಪಾದಗಳಲ್ಲಿದು ಸಮರ್ಪಿತ". ನಂದಾದೀಪ' ಸಂಕಲನದಲ್ಲಿ ಹನ್ನೊಂದು ಕತೆಗಳಿವೆ
ಈ ಸಂಕಲನದಲ್ಲಿರುವ 'ಪಳ್ಪಟನಾಯ್ಕ' 1927ರ ಮಂಗಳೂರು ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ 'ಪಂಚಕಜ್ಜಾಯ'ದಲ್ಲಿ ಪ್ರಕಟವಾಗಿದೆ. 'ಪಳ್ಪಟನಾಯ್ಕ' ಐತಿಹ್ಯವೊಂದರ ಆಧಾರದಿಂದ ಬರೆದ ಕತೆ. ಉಡುಪಿಯ ಬನ್ನಂಜೆಯಲ್ಲಿದ್ದ ಪಳ್ಪಟನಾಯ್ಕ ಪರೋಪಕಾರಿಯಾದ ಬಡವ. ಉಡುಪಿಯಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೊರಟ ಯಾತ್ರಿಕರ ಕೂಲಿಯವನಾಗಿ ಪಳ್ಪಟನಾಯ್ಕನೂ ತಿರುಪತಿ ಯಾತ್ರೆ ಮಾಡುತ್ತಾನೆ. ತಿರುಪತಿಯಲ್ಲಿ ಮಂಗವೊಂದು ಬಂಗಾರದ ಚೂರಿಯೊಂದನ್ನು ಪಳ್ಪಟನಾಯ್ಕನಿಗೆ ನೀಡುತ್ತದೆ. ಊರಿಗೆ ಬಂದ ಅವನು ದಾನಧರ್ಮಗಳಿಂದ ಪ್ರಸಿದ್ಧನಾಗುತ್ತಾನೆ - ಅಲ್ಲಿಂದ ಒಂದೊಂದಾಗಿ ಎಲ್ಲ ಪುಣ್ಯಕ್ಷೇತ್ರಗಳ ಬಳಿಯ ಗ್ರಾಮಗಳಲ್ಲಿ ಹೊಲಗದ್ದೆಗಳನ್ನು ಕ್ರಯಕ್ಕೆ ಪಡೆದು ನಿರ್ಗತಿಕರಿಗೆ ದಾನ ಮಾಡುವುದೂ ಅವುಗಳ ನೆತ್ತಿ ಕಟ್ಟಿನಲ್ಲಿ ಹನುಮಂತನ ಮೂರ್ತಿಯು ಕೆತ್ತಲ್ಪಟ್ಟ ಕಲ್ಲನ್ನು ನೆಡುವುದೂ ಅವನ ಕಟ್ಟಳೆ.
'ನಂದಾದೀಪ' 'ಬಾಲಕೃಷ್ಣನಿಗೆ ನೈವೇದ್ಯ' 'ವಾರಾಂಟ್' ಈ ಕತೆಗಳಲ್ಲಿ ಕೊರಡಲ್ಕರು ಆರ್ಥಿಕ ಅಸಮಾನತೆಯಿರುವ ಸಮಾಜದ ವೈದೃಶ್ಯಗಳನ್ನು ಚಿತ್ರಿಸುತ್ತಾರೆ. 'ನಂದಾದೀಪ' ಕತೆಯ ರಾಮಯ್ಯ ನಿಷ್ಠಾವಂತ ಶ್ರೀಮಂತರು. ಅವರ ಮನೆಯ ನವರಾತ್ರಿಗೆ ಸೇರಿದ್ದ ಜನಜಂಗುಳಿಯಿಂದ 'ಇಲ್ಲಿಯದೊಂದು ದೀಪ ಅಲ್ಲಿದ್ದಿದ್ದರೆ?' ಎಂಬ ಮಾತು ಅವರ ಕಿವಿಗೆ ಬೀಳುತ್ತದೆ. ಅದರ ಅರ್ಥ, ಹಿನ್ನೆಲೆಗಳ ಬಗ್ಗೆ ಅವರು ಶೋಧಿಸಿದಾಗ ಕೆರೆದಂಡೆಯ ಕಿರುಹಾದಿಯಲ್ಲಿ ದೀಪವಿಲ್ಲದೆ, ಸುಬ್ಬಣ್ಣ ಕೆರೆಗೆ ಬಿದ್ದು ಸತ್ತ ಸಂಗತಿ ಗೊತ್ತಾಗುತ್ತದೆ. ಅಂದಿನಿಂದ ಅವರ ಹೃದಯ ಪರಿವರ್ತನೆಯಾಗುತ್ತದೆ.

'ಬಾಲಕೃಷ್ಣನಿಗೆ ನೈವೇದ್ಯ' ಕತೆಯಲ್ಲಿ ವೆಂಕಟೇಶ ಭಟ್ಟರ ಹೆಂಡತಿ ಅನಸೂಯೆ ಕೃಷ್ಣನ ಪೂಜೆಗೆ ತೆಗೆದಿರಿಸಿದ ಹಾಲನ್ನು ಭಿಕ್ಷುಕಿಯ ಮಗುವಿಗೆ ಕೊಡುತ್ತಾಳೆ. 'ಏನಿದು ಅನಾಚಾರ' ಎಂದು ಭಟ್ಟರು ಗದರಿಸುತ್ತಾರೆ. ರಾತ್ರಿ ಕನಸಿನಲ್ಲಿ ಭಟ್ಟರು ಯಶೋದಾ ಕೃಷ್ಣರೇ ಭಿಕ್ಷುಕಿ-ಮಗುವಾಗುವುದನ್ನು ಕಾಣುತ್ತಾರೆ.
'ವಾರಾಂಟ್' ಕತೆಯಲ್ಲಿ ಧನಿ ಗಿರಿಯಪ್ಪನೊಡನೆ ಜಗಳಾಡಿದ ಒಕ್ಕಲು ಜಾರಪ್ಪನನ್ನು ಬಂಧಿಸಲೆಂದು ಹೊರಟ ಲಕ್ಷ್ಮಯ್ಯ, ತಿಮ್ಮನ ಗಾಡಿಯಲ್ಲಿ ಪಯಣಿಸುತ್ತಿದ್ದಾನೆ. ಲಕ್ಷ್ಮಯ್ಯನ ಪ್ರಯಾಣದ ಉದ್ದೇಶ ತಿಳಿದ ತಿಮ್ಮ ಜಾರಪ್ಪನ ಬಂಧನವಾಗದಂತೆ ಉಪಾಯ ಮಾಡಿ ಯಶಸ್ವಿಯಾಗುತ್ತಾನೆ.
'ಅಜ್ಜಯ್ಯನ ಮದುವೆ' 'ದೇವಸ್ಥಾನ ಪ್ರವೇಶ' ಕತೆಗಳಲ್ಲಿ ಕತೆಗಾರ ಕೊರಡಲ್ಕರು ಬದಲಾಗುತ್ತಿದ್ದ ಸಮಾಜವನ್ನು ಚಿತ್ರಿಸಿದ್ದಾರೆ. 'ಅಜ್ಜಯ್ಯನ ಮದುವೆ' ಕತೆಯಲ್ಲಿ ರಾಮಯ್ಯನವರ ನಾಲ್ಕನೆಯ ಮದುವೆಯನ್ನು ನಿಲ್ಲಿಸಲು ಸುಧಾರಕ ಸಂಘದವರು ತಂತ್ರ ಹೂಡುತ್ತಾರೆ. 'ದೇವಸ್ಥಾನ ಪ್ರವೇಶ' ಕತೆಯಲ್ಲಿ, ರಂಗೂನಿನಲ್ಲಿ ದುಡಿದು ಧನಿಕನಾಗಿ ಊರಿಗೆ ಬಂದ ಚೀಂಕ್ರ ಪೂಜಾರಿಯ ಪತ್ನಿಯನ್ನು ಮೇಲ್ಜಾತಿಯ ಮಹಿಳೆಯರು ಅವಮಾನಿಸುತ್ತಾರೆ. ಮುಂದೆ ಅದೇ ಚೀಂಕ್ರ ಪೂಜಾರಿಯ ಮಗ ಜಿಲ್ಲಾ ಕಲೆಕ್ಟರ್ ಆಗಿ ಬಂದಾಗ ಮಠದವರು, ದೇವಸ್ಥಾನದವರು ಸಂಭ್ರಮದಿಂದ ಸ್ವಾಗತಿಸುತ್ತಾರೆ, ದೇವರ ದರ್ಶನ ಮಾಡಿಸುತ್ತಾರೆ.

ಮೂಢನಂಬಿಕೆಗಳನ್ನು ವಿಡಂಬಿಸುವ ಕೊರಡಲ್ಕರ ವೈಚಾರಿಕ ನಿಲುವು 'ಮನೆಯಲ್ಲಿ ಭೂತಸಂಚಾರ' ಕತೆಯಲ್ಲಿದೆ. ನಿವೃತ್ತ ಪೋಲಿಸ್ ಇನ್ಸ್‌ಪೆಕ್ಟರ್ ವಿಠಲರಾಯರ ಬಾಡಿಗೆ ಮನೆಯಲ್ಲಿ ಭೂತದ ಕಾಟ ಆರಂಭವಾಗುತ್ತದೆ. ವಿಠಲರಾಯರು ಪತ್ತೇದಾರರಾಗಿ ಪರೀಕ್ಷಿಸಿದಾಗ ಅದು ಭೂತದ ಕಾಟವಲ್ಲ, ಮನೆಯ ಯಜಮಾನ ಕೊಗ್ಗಣ್ಣನ ಆಟವೆಂದು ಗೊತ್ತಾಗುತ್ತದೆ.

'ದೊಡ್ಡವರ ವಜ್ರ' ಮೊಪಾಸನ ಪ್ರಸಿದ್ಧ ಕತೆಯೊಂದರ ಕನ್ನಡ ರೂಪಾಂತರ. 'ಆಪತ್ತಿನಲ್ಲಿಯೂ ಸಂಪತ್ತು' ಕತೆಯಲ್ಲಿ ಮಹಿಳೆಯೊಬ್ಬಳು ತಾನು ವಿಧವೆಯಾದಾಗ ಇನ್ಶೂರೆನ್ಸ್ ಕಂಪೆನಿಯಿಂದ ನೆರವು ದೊರಕಿದುದನ್ನು ವಿವರಿಸುತ್ತಾಳೆ. 'ಆನಂದನ್ ಬಿ.ಎ. ಡಿಗ್ರಿ' ನಿರುದ್ಯೋಗಿಯಾಗಿ ಕಷ್ಟಪಟ್ಟ ಯುವಕನೊಬ್ಬನ ಬದುಕಿನ ಆಕಸ್ಮಿಕಗಳ ಕತೆ. ಇವೆರಡೂ ಸಾಮಾನ್ಯ ಕತೆಗಳು.

'ಧನಿಯರ ಸತ್ಯನಾರಾಯಣ' ಕೊರಡಲ್ಕರ ಹೆಸರನ್ನು ಉಳಿಸಿರುವ ಅಸಾಧಾರಣ ಕತೆ. ಕೋಟೆಮನೆ ನಾಗಪ್ಪನವರ ಒಕ್ಕಲು ತೌಡ. ಅವನ ಆರು ವರ್ಷದ ಮಗ ಬೂದ ರಸಬಾಳೆಯ ಒಂದು ಕಂದನ್ನು ಅಜ್ಜಿಮನೆಯಿಂದ ಕಷ್ಟಪಟ್ಟು ಹೊತ್ತು ತರುವುದನ್ನು ಸುತ್ತ ಕಥೆ ಆರಂಭವಾಗುತ್ತದೆ. ರಸಬಾಳೆಯ ಕಂದು ಮರವಾಗಿ ಮರ ಗೊನೆ ಬಿಟ್ಟುದನ್ನು ನೋಡಿ ಬೂದ ತುಕ್ರಿ ದೂಮರು ಸಂಭ್ರಮಪಡುತ್ತಾರೆ. ತೌಡನ ಎರಡು ರೂಪಾಯಿ ಬಾಕಿ ಗೇಣಿಯ ವಸೂಲಿಗೆ ಬಂದ ಧನಿ ನಾಗಪ್ಪಯ್ಯ ರಸಬಾಳೆ ಗೊನೆಯನ್ನು ತನ್ನ ಮನೆಯ ಸತ್ಯನಾರಾಯಣ ಪೂಜೆಗಾಗಿ ತಂದು ಒಪ್ಪಿಸಲು ಆಜ್ಞಾಪಿಸುತ್ತಾರೆ. ರಸಬಾಳೆ ಗೊನೆ ಧನಿಯರ ಮನೆ ಸೇರಿದ್ದನ್ನು ತಿಳಿದು ಬೂದ ತುಕ್ರಿಯರು ಹತಾಶರಾಗುತ್ತಾರೆ. ಕತೆಯ ಅಂತ್ಯ ಹೀಗಿದೆ - "ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೊ, ಆ ಬೂದನಿಗೆ-ನೋಡಿ. ಅವನ ಅಂಗಳಕ್ಕೆ ಹಾರಿದ! 'ತುಕ್ರೀ ಬಾ' ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ, ತುಕ್ರಿಯೂ ಓಡಿ ಸೇರಿದ್ದಾಳೆ. ನೋಡಿ, ಬೂದನು ಆ ಕಂದುಗಳನ್ನು ಒಂದೊಂದಾಗಿ ಹಿಡಿ ಹಿಡಿದು ಬಗ್ಗಿಸಿ ತಿರುತಿರುವಿ ಮುರಿಯುತ್ತ, "ಇ ಇ ಇ ಇವು ಗೊನೆ ಹಾಕೋದೂ ಬೇಡಾ ಆ ಆ ಆ ಆಸತ್ತ್ ನಾರ‍್ಣಾ ತಿ ತಿ ತಿನ್ನೋದೂ ಬೇಡ! ಎನ್ನುತ್ತ ಅವನ್ನೆಲ್ಲ ಸೀಳಿ ಸೀಳಿ ಮುರಿ ಮುರಿದು ಹಾಕಿ ಅಲ್ಲೆಲ್ಲ ಕೆಸರೇಳುವಂತೆ ಅವುಗಳ ಮೇಲೆ ತಕತಕ್ ಕುಣಿಯುತ್ತಿದ್ದಾನೆ! ತುಕ್ರಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಅದೆಂತಹ ನೃತ್ಯ

ಗಿರಡ್ಡಿ ಗೋವಿಂದರಾಜರು ಹೇಳಿರುವಂತೆ, "ಪ್ರಗತಿಶೀಲ ಕತೆಗಳಲ್ಲಿರುವಂತೆ ಇಲ್ಲಿಯೂ ಕೂಡ ಹೃದಯಹೀನ ಶ್ರೀಮಂತಿಕೆ ಮತ್ತು ಮುಗ್ಧ ಬಡತನಗಳ ನಡುವಿನ ವೈದೃಶ್ಯವೇ ಇದೆ. ಆದರೆ ಈ ವೈದೃಶ್ಯ ಸಾಕಷ್ಟು ಸೂಕ್ಷ್ಮವಾಗಿದ್ದು, ಸಂಯಮದ ಬರವಣಿಗೆಯ ಮೂಲಕ ತನ್ನ ಉದ್ದಿಷ್ಟ ಪರಿಣಾಮವನ್ನು ಸಾಧಿಸಿಕೊಳ್ಳುವ ರೀತಿ ಗಮನ ಸೆಳೆಯುತ್ತದೆ.7 ಕಥೆಯ ಕೊನೆಯಂತೂ ಬಹಳ ಮಾರ್ಮಿ ಕವಾಗಿದೆ. ತನ್ನ ಅನಿರೀಕ್ಷಿತತೆಯಿಂದಾಗಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿದೆ. ಅನ್ಯಾಯದ ವಿರುದ್ಧ ಸೂಚಿತವಾದ ನೋವು ರೋಷಗಳೆಲ್ಲ ಒಮ್ಮೆಲೆ ಸ್ಫೋಟಗೊಂಡಂತೆ ಪ್ರಕಟವಾಗುವ ಇಲ್ಲಿಯ ರೀತಿ ನಮ್ಮ ಪ್ರಗತಿಶೀಲ ಕತೆಗಳಲ್ಲಿಯ ಬಂಡಾಯಕ್ಕಿಂತ ಬಹಳ ಭಿನ್ನವಾದುದು. ಇದು ಗುರಿ ತಪ್ಪಿದ ಬಂಡಾಯವೆಂದು ತೋರಬಹುದಾದರೂ ಒಂದು ಅಸಹಾಯ ಸ್ಥಿತಿಯಲ್ಲಿ ಅತ್ಯಂತ ಸಹಜವಾದ ಅಷ್ಟೇ ಹೃದಯಸ್ಪರ್ಶಿಯಾದ ಅಭಿವ್ಯಕ್ತಿಯಾಗಿ ಕಾಣುತ್ತದೆ. ಸಾಮಾಜಿಕ ಅನ್ಯಾಯ ಅಪರಿಹಾರ್ಯವಾದ ಸಂದರ್ಭದಲ್ಲಿ ಹತಾಶೆಯಿಂದ ಹುಟ್ಟುವ ರೊಚ್ಚಿನಿಂದಾಗಬಹುದಾದ ವಿನಾಶಕಾರೀ ಪರಿಣಾಮಗಳ ಕಡೆಗೆ ಇದು ಗಮನ ಸೆಳೆಯುತ್ತದೆ.8 ಹೀಗೆ ಮೇಲುನೋಟಕ್ಕೆ ಕೇವಲ ಚಿಕ್ಕ ಮಕ್ಕಳ ಸಂಬಂಧದಲ್ಲಿ ನಡೆದ ಒಂದು ಸಣ್ಣ ಘಟನೆಯಂತೆ ಕಂಡರೂ ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿಯ ಅನ್ಯಾಯವೊಂದರ ವ್ಯಾಪಕತೆಯನ್ನು ಧ್ವನಿಸುವ ಮೂಲಕ ಈ ಕತೆ ಇಂದಿನ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ".9

'ನಂದಾದೀಪ' 'ಬಾಲಕೃಷ್ಣನಿಗೆ ನೈವೇದ್ಯ' ಕತೆಗಳಲ್ಲಿ ಕೊರಡ್ಕಲ್‍ರು   ಸಮಾಜ ಪರಿವರ್ತನೆಯಲ್ಲಿ ಆಸಕ್ತಿ, ಉಳ್ಳವರ ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇದ್ದ ಕತೆಗಾರರಾಗಿ ಕಾಣಿಸುತ್ತಾರೆ. ಆದರೆ 'ಧನಿಯರ ಸತ್ಯನಾರಾಯಣ'ದ ನಾಗಪ್ಪಯ್ಯನವರ ಹೃದಯ ಪರಿವರ್ತನೆಯಾಗುವುದಿಲ್ಲ. ಈ ಕತೆಯಲ್ಲಿ ಪ್ರಗತಿಪರ ಆಶಯ, ಬಂಡಾಯದ ಕನಸುಗಳಿವೆ. 'ಧನಿಯರ ಸತ್ಯನಾರಾಯಣ' ಕನ್ನಡ ಸಣ್ಣಕತೆಯ ಇತಿಹಾಸದ ಒಂದು ನಂದಾದೀಪ
ಕೆಲವು ಐತಿಹಾಸಿಕ ವಾಸ್ತವ ಸಂಗತಿಗಳನ್ನು ಗಮನಿಸಬೇಕು. ಪ್ರೇಮಚಂದರ ಅಧ್ಯಕ್ಷತೆಯಲ್ಲಿ ಲಖನೌದಲ್ಲಿ 'ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಂಘ'ದ ಪ್ರಥಮ ಅಧಿವೇಶನ 1936ರಲ್ಲಿ ನಡೆಯಿತು. ಈ ಸಂಘದ ಬೆಂಗಳೂರು ಶಾಖೆಯ ಮೊದಲ ಸಭೆ 1943ರಲ್ಲಿ ಅ.ನ. ಕೃಷ್ಣರಾಯರ ಅಧ್ಯಕ್ಷತೆಯಲ್ಲಿ ಜರುಗಿತು. "ಹಾಗೆ ನೋಡಿದರೆ ಪ್ರಗತಿಪರ ಆಶಯವನ್ನು ಹೊಂದಿಯೂ ಬಹಳ ಹಿಂದೆ ಪ್ರಕಟವಾಗಿ ಅವಜ್ಞತೆಯಲ್ಲಿ ಮರೆತುಹೋದ ಕೆಲವು ಕಥೆಗಳನ್ನು ಹೆಸರಿಸುವುದು ಸಾಧ್ಯ"10 ಎನ್ನುವ ಎಚ್.ಎಸ್. ರಾಘವೇಂದ್ರರಾಯರು ಪ್ರಗತಿಶೀಲ ಸಾಹಿತ್ಯದ ಇತಿಹಾಸದಲ್ಲಿ ಕೊರಡ್ಕಲರ 'ಧನಿಯರ ಸತ್ಯನಾರಾಯಣ'ವನ್ನು ಉಲ್ಲೇಖಿಸಿದ್ದಾರೆ.

'ಕತೆ ಬರೆವ ಹುರುಪುಳ್ಳವರೊಡನೆ ಒಂದರೆಗಳಿಗೆ' ಎಂಬ ತನ್ನ ಲೇಖನದಲ್ಲಿ ಕೊರಡ್ಕಲ್‍ರು 'ಇಂದು ಬೇಕಾದುದು ರಚನಾತ್ಮಕ ಸಾಹಿತ್ಯ' ಎಂದು ಪ್ರತಿಪಾದಿಸಿದ್ದಾರೆ - "ಕತೆಯೆಂಬುದು ಇಡಿಯ ಸಮಾಜ ಶರೀರವನ್ನು ತೋರಿಸಲಾಗುವ ನಿಲುಗನ್ನಡಿಯಲ್ಲ. ಬಾಳಿನ ಯಾವುದಾದರೊಂದು ಅಂಗದ ಒಂದಿಷ್ಟು ಭಾಗವನ್ನು ಕಾಣಿಸುವ ಕೈಗನ್ನಡಿ ಅಷ್ಟೇ. ಕನ್ನಡಿಯನ್ನು ಕೈಯಲ್ಲಿ ಕೊಡುವುದೇಕೆ? ಅದರಲ್ಲಿ ಕಾಣುವ ಭಾಗದಲ್ಲಿ ತೋರುವ ಕಲೆಗಳನ್ನು ಅಳಿಸಿಕೊಳ್ಳಲೆಂದು ಅಥವಾ ನಾವು ರೂಪವನ್ನು ತಿದ್ದಿಕೊಂಡು ಮತ್ತಷ್ಟು ಚೆಲುವಾಗಿಸಿಕೊಳ್ಳಲೆಂದು."11

'ಮಧುವನ' (1935) ಎಂಬ ವಿವಿಧ ಲೇಖಕರ ಕತೆಗಳಿರುವ ಸಂಕಲನದಲ್ಲಿ 'ಮಿಸ್ 1954' ಎಂಬ ಕತೆ ಇದೆ. 1954ರ ಅಮೇರಿಕವನ್ನು ಕಲ್ಪಿಸಿಕೊಂಡು 1935ರಲ್ಲಿ ಕೊರಡ್ಕಲರು ಈ ಕತೆ ಬರೆದಿದ್ದಾರೆ. ಈ ಕತೆಯ ಸಾಂವೇಲ್ ಪುರುಷ ಸಂಪರ್ಕವಿಲ್ಲದೆ ಸ್ತ್ರೀಯರಿಗೆ ಗರ್ಭಧಾರಣೆ ಮಾಡಿಸುವ ಡಾ| ಹರ್ಬರ್ಟರ ಚಿಕಿತ್ಸಾಲಯಕ್ಕೆ ವೀರ್ಯದಾನ ಮಾಡುತ್ತಾನೆ. ಮುಂದೆ ಸ್ವಿಮ್ಮಿಂಗ್ ಮಾಸ್ತರನಾದ ಸಾಂವೇಲ್ ತನ್ನ ಶಿಷ್ಯೆ ಮೇರಿಯನ್ನು ಮದುವೆಯಾಗುತ್ತಾನೆ. ಇಪ್ಪತ್ತು ವರುಷಗಳ ಅನಂತರ ಅತ್ತೆಯೊಡನೆ ಮಾತನಾಡುವಾಗ ತನ್ನ ಪತ್ನಿ ಮೇರಿ ತನ್ನ ವೀರ್ಯದಾನದಿಂದಲೇ ಜನಿಸಿದವಳೆಂದು ಅವನಿಗೆ ತಿಳಿಯುತ್ತದೆ. 'ಮಿಸ್ 1954' ಕನ್ನಡದ ಮೊದಲ ವೈಜ್ಞಾನಿಕ ಕಥೆಗಳಲ್ಲೊಂದು. ವೈದ್ಯಕೀಯ ರಂಗದ ಹೊಸ ಸಂಶೋಧನೆಗಳ ಬಗ್ಗೆಕುತೂಹಲ ತಾಳಿದ್ದ ಕೊರಡ್ಕಲರು ಸ್ತ್ರೀಯರ ಗರ್ಭಧಾರಣೆಯಿಂದ ಉದ್ಭವಿಸಬಹುದಾದ ಸಾಮಾಜಿಕ ಸಮಸ್ಯೆಗಳ ಕುರಿತು ಯೋಚಿಸಿದ್ದರು. ಇಂದಿನ 1994ರ ಅಮೇರಿಕದಲ್ಲಿ ಕೃತಕ ಗರ್ಭಧಾರಣೆಯ ಫಲವಾದ ಹಲವು ಕೌಟುಂಬಿಕ ಸಮಸ್ಯೆಗಳಿವೆ.
'ಮಧುವನ' (1935)ದ ಸಂಪಾದಕರಾಗಿದ್ದ ಪಾ.ವೆಂ. ಆಚಾರ್ಯ ಮತ್ತು ಕೆ. ಹೊನ್ನಯ್ಯ ಶೆಟ್ಟರು ಕತೆಗಾರ ಕೊರಡಲ್ಕರನ್ನು ಹೀಗೆ ಪರಿಚಯಿಸಿದ್ದಾರೆ - "ಸಮಾಜದ ದೋಷಗಳನ್ನು ಹೆಕ್ಕಿ ತೆಗೆದು ಅವುಗಳ ಮೇಲೆ ಬರೆದ ವ್ಯಂಗ್ಯ ಹಾಸ್ಯಾತ್ಮಕ ಕತೆಗಳೇ ಹೆಚ್ಚು. ಶೈಲಿಯು ಸರಳವಾಗಿದ್ದು ಮಿತವಾದ ಶಬ್ದಗಳ ಕೊಂಚ ಪ್ರಾಸ ಪ್ರಿಯವಾದ ಜೋಡಣೆಯಿಂದ ನಿರರ್ಗಳವಾಗಿ ಹರಿಯುತ್ತವೆ. ಹೇಳುವ ರೀತಿ, ವರ್ಣನೆಯ ಸ್ವಾಭಾವಿಕತೆ ಇವು ಇವರ ಕತೆಗಳನ್ನು ಜನಪ್ರಿಯವನ್ನಾಗಿ ಮಾಡಿರುವುವು. ಕತೆಗಾರಿಕೆಯ ಪರಿಜ್ಞಾನವು ಇವರಿಗೆ ಚೆನ್ನಾಗಿಯೇ ಇದೆ.
ಕೊರಡ್ಕಲ್‍ರು ತನ್ನ 'ನಮ್ಮ ಉಡುಪಿ' (ಪರಿಷ್ಕೃತ ದ್ವಿತೀಯ ಮುದ್ರಣ - 1948) ಎಂಬ ಸಚಿತ್ರ ಗ್ರಂಥದಲ್ಲಿ ಉಡುಪಿಯ ಇತಿಹಾಸ ವರ್ತಮಾನಗಳನ್ನು ಚೆನ್ನಾಗಿ ಪರಿಚಯಿಸಿದ್ದಾರೆ. ಸ್ಥಳ ಪುರಾಣ ಕ್ಷೇತ್ರ ಮಹಾತ್ಮೆಗಳಲ್ಲೆಲ್ಲ ಐತಿಹಾಸಿಕ ಸ್ಥೂಲ ರೇಖೆಗಳಿರುವ ಕಾರಣ ಅವುಗಳನ್ನು ಛೀಗಳೆಯುವ ವಿಚಾರ ಸಾಹಿತ್ಯವನ್ನು ತೋರದೆಯೂ ಅವನ್ನೆಲ್ಲ ಅಕ್ಷರಶ: ಸತ್ಯವೆಂದು ಎತ್ತಿಹಿಡಿಯುವ ಅಂಧಶ್ರದ್ಧೆಗೊಳಗಾಗದೆಯೂ ಐತಿಹಾಸಿಕ ದೃಷ್ಟಿಯಿಂದ ರಚನಾತ್ಮಕ ಧೋರಣೆಯಿಂದ ಪುಸ್ತಕ ಬರೆಯಬೇಕೆಂಬ ಅವರ ಉದ್ದೇಶ ಯಶಸ್ವಿಯಾಗಿದೆ. ಇನ್ನಂಜೆಯಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಶ್ರೀ ವಿಷ್ಣುಮೂತರ್ಿ ಹಯವದನ ಸ್ವಾಮಿ ಹೈಸ್ಕೂಲನ್ನು ಆರಂಭಿಸಿದ ಸೋದೆ ಮಠದ ಶ್ರೀ ವಿಶ್ವೇಂದ್ರತೀರ್ಥರನ್ನು ಕೊರಡ್ಕಲ್‍ರು
'ಉಡುಪಿ ಪರ್ಯಾಯಮ್  ಸೊವನೀರ್' (1938) ಕೊರಡ್ಕಲ್‍ರು ಉಡುಪಿಯನ್ನು ಕುರಿತು ಇಂಗ್ಲಿಷ್‍ನಲ್ಲಿ ಬರೆದಿರುವ ಕೃತಿ. ಉಡುಪಿಯ ಇತಿಹಾಸ ವರ್ತಮಾನಗಳನ್ನು ಪರಿಚಯಿಸುವ ಈ ಪುಸ್ತಕದಲ್ಲಿರುವ 'THE SOCIO-ECONOMIC ASPECT OF MUTTS AND FESTIVITIES' ಎಂಬ ಅಧ್ಯಾಯದಲ್ಲಿ ಕೊರಡ್ಕಲ್‍ರ ಸಾಮಾಜಿಕ ಆರ್ಥಿಕ ಚಿಂತನೆಯನ್ನು ಕಾಣುತ್ತೇವೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿಯ ಕೃಷ್ಣ ಮಠದ ಕಟ್ಟಿಗೆ ರಥ ಕಟ್ಟುವ ಕಾಯಕ ಉಡುಪಿಯ ಹಲವಾರು ಬಡವರಿಗೆ ಉದ್ಯೋಗ ಒದಗಿಸುತ್ತಿದ್ದುದನ್ನು ಅವರು ವಿವರಿಸಿದ್ದಾರೆ.18
ಕೊರಡ್ಕಲ್ ಶ್ರೀನಿವಾಸರಾಯರು ಉಡುಪಿಯ ಮಠಗಳ ಆಂತರಿಕ ವಿಮರ್ಶಕರಾಗಿದ್ದರು. ಮಠಗಳಲ್ಲಿ 'ನಿಂತ ನೀರಿನ ವಾಸನೆ ಸುತ್ತಲೆಲ್ಲ' ತುಂಬದಂತೆ ಅವರು ಎಚ್ಚರ ವಹಿಸಿದ್ದರು. ಶ್ರೀ ಕೃಷ್ಣಮಠದಲ್ಲಿಯ ಸುವ್ಯವಸ್ಥೆ' (1940) ಎಂಬ ಸಂಭಾಷಣಾ ಮಾಲಿಕೆಯ ರೂಪದಲ್ಲಿರುವ ಲೇಖನ ಅವರ ತೀಕ್ಷ್ಣ ವಿಡಂಬನೆ, ವಿಮರ್ಶೆಗಳಿಗೆ ರುಜುವಾತು ನೀಡುತ್ತದೆ. "ಸಂಪ್ರದಾಯದ ಜಾಡು ಹಿಡಿದು ಶತಮಾನಗಳು ಉರುಳಿದ್ದ ಮಠ ಸಂಸ್ಥಾನಗಳಲ್ಲಿ ಸಾಸಿವೆಯಷ್ಟು ಸುಧಾರಣೆಯನ್ನು ತರಲಿಕ್ಕೂ ಪರ್ವತದಷ್ಟು ನೈತಿಕ ಧೈರ್ಯ ಬೇಕಾಗುತ್ತೆ" ಎಂಬ ಅರಿವು ಅವರಲ್ಲಿತ್ತು. ಈ ಸಂಭಾಷಣಾ ಮಾಲಿಕೆಯಲ್ಲಿ ಒಬ್ಬ ಹೇಳುತ್ತಾನೆ - ಸಾಮಾನ್ಯವಾಗಿ ಈಗ ಮಠಾಂದ್ರೆ ಉಂಡಾಡಿಗಳ ಕೇಂದ್ರ ಎಂಬರ್ಥ ಬಂದಿದೆ. ಒಂದು ವೇಳೆ ಅಲ್ಲೇನಾದ್ರೂ ತುಸು ಪ್ರೋತ್ಸಾಹ ಕೊಡುವ ಸಂಪ್ರದಾಯವಿದ್ರೂ ಅದು ಯಾರಿಗಂತೀರಿ? ನಾಲ್ಕು ಶ್ಲೋಕಗಳನ್ನು ಗಿಳಿಪಾಠವೋ ಗಿಳಿಪಾರಾಯಣವೋ ಮಾಡುವವರಿಗೆ.
ಕೊರಡ್ಕಲ್ ಸ್ಮಾರಕ ಸಮಿತಿಯವರು ಪ್ರಕಟಿಸಿರುವ 'ನೆನಪಿಗಾಗಿ' (1949) ಗ್ರಂಥದಲ್ಲಿ ಕೊರಡ್ಕಲರು ಬರೆದಿರುವ 'ದಕ್ಷಿಣ ಕನ್ನಡ ಜನಜೀವನ' ಎಂಬ ಲೇಖನವಿದೆ. ಯಕ್ಷಗಾನ ಮತ್ತು ತುಳು ಜನಪದ ಸಾಹಿತ್ಯದ ಸತ್ವ ಮಹತ್ವಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ.19

'ಸುಲಭದಲ್ಲಿ ಇಂಗ್ಲಿಷ್' ಎಂಬುದು ಕೊರಡ್ಕಲರು ವಿದ್ಯಾರ್ಥಿಗಳಿಗಾಗಿ ಬರೆದ ಪುಸ್ತಕ. ಇಂಗ್ಲಿಷ್ ಭಾಷೆಯ ವ್ಯಾಕರಣ ಮತ್ತು ಉಚ್ಚಾರ ನಿಯಮಗಳನ್ನು ಕೊರಡ್ಕಲರು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ವಿವರಿಸಿದ್ದಾರೆ. ಅವರು ಆಯುರ್ವೇದ ಮತ್ತು ಜನಪದ ಮದ್ದುಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಕೊರಡ್ಕಲ್ ಶ್ರೀನಿವಾಸರಾಯರ ಮಾರ್ಗದರ್ಶನದಲ್ಲಿ ಅವರ ಮಗ ಕೊರಡ್ಕಲ್ ವೆಂಕಟ್ರಾಯರು 'ಮನೆಮದ್ದು' (1946) ಎಂಬ ಜನಪ್ರಿಯ ಪುಸ್ತಕ ಬರೆದರು.
ಕೊರಡ್ಕಲ್ ಸ್ಮಾರಕ ಗ್ರಂಥದ 'ನೆನಪಿಗಾಗಿ' (1949) - ಸಂಪಾದಕರು ಹೇಳಿದಂತೆ, "ಶ್ರೀ ಕೊರಡ್ಕಲ್ ಶ್ರೀನಿವಾಸರಾಯರ ಹೆಸರನ್ನು ಕನ್ನಡ ನಾಡಿನಲ್ಲಿ ಬಹಳವಾಗಿ ಎಲ್ಲ ಜನರೂ ತಿಳಿದಿದ್ದಾರೆ. ನಮಗೆ ಉಡುಪಿಯವರ ಮಟ್ಟಿಗಂತೂ ಯಾವುದೇ ಸಾರ್ವಜನಿಕ ಕೆಲಸ ಮಾಡುವಾಗಲೂ ಕೊರಡ್ಕಲರ ನೆರವು ಬೇಡದೆ ಗೊತ್ತೇ ಇಲ್ಲ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಶ್ರೀ ಕೊರಡ್ಕಲರು ತಾನು ಬಾಳಿದ ದಿನಗಳಲ್ಲಿ ಮಾಡಿದ ಭಾಷಾ ಸೇವೆ-ಜನತಾ ಸೇವೆ ಬಹುಮುಖವಾದುದಷ್ಟೆ ಅಲ್ಲ; ಆದರ್ಶವಾದದ್ದೂ ಆಗಿದೆ.
ಕೊರಡ್ಕಲರ ಕೆಲವು ಕೃತಿಗಳು - 'ಅಡ್ಡ ಬೆಳೆದ ಗಿಡ್ಡಿಯ ಮದುವೆ', 'ಮುದುಕನ ಹೆಂಡ್ತಿ ಥಕ ಥೈ ರಾಧೆ', 'ಭಾರತೀಯ ಕಥೆಗಳು' 'ಚಿತ್ರಾಪುರ ಮಠದ ಇತಿಹಾಸ' - ಈ ಸಮೀಕ್ಷೆ ಬರೆಯುವ ಸಂದರ್ಭದಲ್ಲಿ ನನಗೆ ಓದಲು ದೊರಕಿಲ್ಲ. ದಕ್ಷಿಣ ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಅವರ ಅನೇಕ ಕತೆ, ಲೇಖನಗಳು ಮೂಲೆಪಾಲಾಗಿವೆ. ಕೊರಡ್ಕಲರ ಸಮಗ್ರ ಕೃತಿಗಳು ಪ್ರಕಟವಾದಾಗ ಅವರ ಕೊಡುಗೆಯ ಮೌಲ್ಯಮಾಪನ ಮಾಡುವುದು ಸಾಧ್ಯವಾಗುತ್ತದೆ.
ವಿವಿಧ ಕಾರಣಗಳಿಂದಾಗಿ ಅಲಕ್ಷಿತರಾಗಿರುವ ನವೋದಯ ಕನ್ನಡ ಸಾಹಿತ್ಯದ ಮಹನೀಯರಲ್ಲಿ ಕೊರಡ್ಕಲ್ ಶ್ರೀನಿವಾಸರಾಯರೂ ಒಬ್ಬರು. ಅವರದ್ದು 'ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ' ಹಳಸದ ವ್ಯಕ್ತಿತ್ವ. ಅವರ 'ಧನಿಯರ ಸತ್ಯನಾರಾಯಣ' ಕನ್ನಡ ಸಣ್ಣಕತೆಯ ಇತಿಹಾಸದ ಚಿರಂಜೀವಿ ಕತೆಗಳಲ್ಲೊಂದು. ಅವರು ನಾಟಕ, ಮಕ್ಕಳ ಸಾಹಿತ್ಯ, ವಿಚಾರಸಾಹಿತ್ಯ ಪ್ರಕಾರಗಳನ್ನು ಸಮೃದ್ಧಗೊಳಿಸಿ ಅಳಿಲಸೇವೆ ಸಲ್ಲಿಸಿದ್ದಾರೆ.ಆರ್ಥಿಕ ಅಸಮಾನತೆ, ಮೂಢನಂಬಿಕೆಗಳಿಂದ ತುಂಬಿರುವ ನಮ್ಮ ಸಮಾಜ ತನ್ನ 'ರೂಪವನ್ನು ತಿದ್ದಿಕೊಂಡು, ಮತ್ತಷ್ಟು ಚೆಲುವಾಗಿಸಿಕೊಳ್ಳಲೆಂದು' ಪ್ರಾಮಾಣಿಕವಾಗಿ ಪ್ರಯತ್ನಿಸಿದ ವೈಜ್ಞಾನಿಕ ಮನೋಧರ್ಮದ ಸಾಹಿತಿ ಕೊರಡ್ಕಲ್ ಶ್ರೀನಿವಾಸರಾಯರ ಕೊಡುಗೆ ಅಸಾಧಾರಣವಾದುದು.
ಕೊಂಡಾಡಿದ್ದಾರೆ. ಕೊರಡ್ಕಲ್‍ರು ಹೆಸರಿಸಿರುವ ಅಂದಿನ ಉಡುಪಿಯ ಪ್ರಸಿದ್ಧ ಲೇಖಕರು - ರಾಜಗೋಪಾಲ ಕೃಷ್ಣರಾಯರು, ಕೆ. ವಿಟ್ಠಲ ಶೆಣೈ, ಬನ್ನಂಜೆ ರಾಮಾಚಾರ್ಯ, ಎಸ್, ವೆಂಕಟರಾಜ, ಎಂ.ವಿ ಹೆಗ್ಗಡೆ, ಲೀಲಾಬಾಯಿ ಕಾಮತ್, ಸರಸ್ವತಿಬಾಯಿ ರಾಜವಾಡೆ. ಲೇಖಕಿಯರನ್ನು ಕೊರಡ್ಕಲರು ಅಲಕ್ಷಿಸಿಲ್ಲ ಎಂಬುದು ಗಮನಾರ್ಹ. ಕೊರಡ್ಕಲ್ ಉಡುಪಿಯ ಪ್ರೇಕ್ಷಣೀಯ ಸ್ಥಳಗಳು12, ಸಂಘ ಸಂಸ್ಥೆಗಳು13, ಉದ್ಯಮಗಳು14, ಪತ್ರಿಕೆಗಳು15, ಪ್ರಕಾಶನ ಸಂಸ್ಥೆಗಳು16 ಕುರಿತು ನೀಡಿರುವ ಮಾಹಿತಿಗಳು ಆಧುನಿಕ ಉಡುಪಿಯ ಇತಿಹಾಸ ರಚನೆಗೆ ಮಹತ್ವದ ದಾಖಲೆಗಳಾಗಿವೆ.
ಒಂದಾಲ ಬಲು ದೊಡ್ಡದಾಗಿ ಬೆಳೆದರೆ ಸಾಕೆ
ತೆಂಗು ಬೇಡವೆ ಕಂಗು, ತಾಳೆ, ಬಾಳೆ?
..........................................................
ಯಾವಾಗಲೋ ಬಂದು ಬಡಿವುಲ್ಕೆಗಳಿಗಾಗ
ಲಕ್ಷ ನಕ್ಷತ್ರ ಕಣ್ಮುಚ್ಚಬೇಕೆ?
- ಗೋಪಾಲಕೃಷ್ಣ ಅಡಿಗ-'ದೊಡ್ಡವರ ಸಹವಾಸ'



ಟಿಪ್ಪಣಿಗಳು

1. 'ಆರೋಗ್ಯ ಪ್ರತಾಪ'ವನ್ನು ಕುರಿತ ಎನ್. ರಾಜಗೋಪಾಲ ಕೃಷ್ಣರಾಯರ ವಿಮರ್ಶೆಯ ಪೂರ್ಣ ಪಾಠ - "ಶ್ರೀಯುತ ಕೊರಡ್ಕಲ್ ಶ್ರೀನಿವಾಸರಾಯರು ಕೊರಡೂ ಅಲ್ಲ, ಕಲ್ಲೂ ಅಲ್ಲವೆಂಬುದು ಅವರ 'ಆರೋಗ್ಯ ಪ್ರತಾಪ'ದಲ್ಲಿ ಚೆನ್ನಾಗಿ ವಿಶದವಾಗುತ್ತಿದೆ. ಆ ನಾಟಕವನ್ನು ಆಮೂಲಾಗ್ರವಾಗಿ ಪರಿಶೀಲಿಸಿದ್ದಲ್ಲಿ ನನಗೆ ಗೊತ್ತಾದ ನಿಜವಿದು. ಅವರ ಆ ಕಲ್ಪನಾಶಕ್ತಿ, ಆ ಸಂವಿಧಾನ ರೀತಿ, ಆ ಶಬ್ದಭಂಡಾಗಾರದ ಜೋಡಣೆ, ಆ ನೈಜವಾದ ವಿವರಣ ಕ್ರಮ - ಇದೆಲ್ಲವೂ ಆ ಗ್ರಂಥದಲ್ಲಿ ಹೊಸ ಪರಿ. ಮೇಲಾಗಿ ನೀರಸವಾದ ಆ ಆರೋಗ್ಯ ವಿಷಯಕ್ಕೆ ಪ್ರತಿಪಾದನದ ಅದೊಂದು ಚಮತ್ಕೃತಿಯಿಂದ ಸರಸ ಪರಿಣಾಮವನ್ನು ಹೊದ್ದಿಸುವುದರಲ್ಲಿಯಂತೂ ಅವರು ಶಾಶ್ವತ ಶ್ರಮವನ್ನೇ ವಹಿಸಿರುತ್ತಾರೆ. ಎಲ್ಲೆಲ್ಲಿಯೂ ಕಲಹಪ್ರಿಯನೆಂಬ ಗುಲ್ಲೇ ಕೇಳಿಬರುವ ಆ ನಾರದನು ಇಲ್ಲಿ ಕಲಹಪ್ರಿಯನಲ್ಲ; ಕವಿಯ ಕಾರ್ಯದಿಂದ ಅವನ ಬಣ್ಣವೇ ಬೇರೆ, ಭಾವವೇ ಬೇರೆಯಾಗಿ ಹೋಗಿದೆ. ವಿನೋದ, ಆನಂದ, ಸುರೇಂದ್ರ, ರಮೆ, ಭೀಮವಿಲಾಸ ಮೊದಲಾದ ಕೆಲ ಕೆಲವು ಪಾತ್ರಗಳೂ ದೃಶ್ಯಗಳೂ ಸ್ವಲ್ಪ ವಿಶೇಷವಾಗಿ ಪ್ರಕಟವಾದರೂ ತಿಮ್ಮಣ್ಣ-ಮಂಜಣ್ಣನ ಆ ದೃಶ್ಯವೂ ಕೇವಲ ನೈಜವಾಗಿ ಕಣ್ಣಿಗೆ ಕಟ್ಟಿದಂತಿವೆ. ಪ್ರಯೋಗದಲ್ಲಿ ಕೆಲವೆಡೆ ದೋಷಗಳು ಕಂಡುಬಂದರೂ, ಪದ್ಯಗಳು ಗದ್ಯಗಳಲ್ಲಿ ಪದಾರ್ಪಣ ಮಾಡಿದ್ದರೂ, ಸ್ವಗತಗಳು ಉದ್ದುದ್ದವಾದ ಉಪನ್ಯಾಸಗಳೇ ಆಗಿದ್ದರೂ, ಆರೋಗ್ಯ ಪ್ರಚಾರದೃಷ್ಟ್ಯಾ ಅತ್ಯವಶ್ಯವಾದ ಪಾಮರರಂಜನದ ಉಪಕರಣವಾಗಿ ಇದು ಸರ್ವಗ್ರಾಹ್ಯವೇ ಎಂಬುದರಲ್ಲಿ ಸಂದೇಹವಿಲ್ಲ. ಅದರಲ್ಲಿಯೂ ದೃಶ್ಯಕಾವ್ಯವಾಗಿ ಎಲ್ಲರ ಮನಸ್ಸಿನ ಮೇಲೂ ಮೊದಲು ಪರಿಣಾಮವಾಗುವಂತೆ ವಿಷಯ ನಿರೂಪಣ ಮಾಡುವುದೆಂದ ಮೇಲೆ, ಮುಖ್ಯವಾಗಿ ಸರಕಾರದ ಹೆಲ್ತ್ ಮತ್ತು ಎಜ್ಯುಕೇಶನಲ್ ಡಿಪಾರ್ಟಮೆಂಟಿನವರು ಈ ಗ್ರಂಥಕರ್ತೃವಿನ ಈ ಬಗೆಯ ವಿಶೇಷ ಶ್ರಮವನ್ನು ಉದಾರವಾದ ಸಹಾಯ ಪ್ರೋತ್ಸಾಹಗಳಿಂದ ಸಾರ್ಥಕಗೊಳಿಸುವುದು, ಅಂತವರ ಪ್ರಥಮ ಕರ್ತವ್ಯವೆಂದು ಒತ್ತಿ ಹೇಳುತ್ತೇನೆ." 'ಆರೋಗ್ಯ ಪ್ರತಾಪ' (1930 ಪುಟ XV)

2. 'ಅರೋಗ್ಯ ಪ್ರತಾಪ'ವನ್ನು ಕುರಿತ ದೇವಶಿಖಾಮಣಿ ಅಳಸಿಂಗಾಚಾರ್ಯರ ವಿಮರ್ಶೆಯ  ಪೂರ್ಣಪಾಠ : "ತಾವು ಪ್ರೀತಿಪೂರ್ವಕವಾಗಿ ಕಳುಹಿಸಿಕೊಟ್ಟ 'ಆರೋಗ್ಯ ಪ್ರತಾಪ'ವೆಂಬ ಪುಸ್ತಕವನ್ನು ನಾನು ಆಮೂಲಾಗ್ರವಾಗಿ ಬಹಳ ಉತ್ಸಾಹದಿಂದ ಓದಿದೆನು. ಆರೋಗ್ಯವಿಧಿಗಳನ್ನು ಕುರಿತು ನೀವು ಅದರಲ್ಲಿ ಕಲ್ಪಿಸಿರುವ ನಾಟಕ ಸಂವಿಧಾನಗಳು ಬಹಳ ಚಮತ್ಕಾರವಾಗಿ ಪ್ರಶಂಸನೀಯವಾಗಿವೆ. ಸಾಮಾನ್ಯವಾಗಿ ಯಾವ ವಿಷಯಗಳನ್ನೇ ಆಗಲಿ ಜನರ ಮನಸ್ಸಿನಲ್ಲಿ ದೃಢವಾಗಿ ನಿಲ್ಲುವಂತೆ ಮಾಡಬೇಕಾದರೆ ಪ್ರಕಟಣ ಪತ್ರಿಕೆಗಳು, ಪ್ರದರ್ಶನ ಶಾಲೆಗಳು, ಉಪನ್ಯಾಸಗಳು, ಮುಂತಾದ ಬೇರೆ ಎಲ್ಲ ಮಾರ್ಗಗಳಿಗಿಂತಲೂ ರಂಗಸ್ಥಳದಲ್ಲಿ ನಾಟಕರೂಪವಾಗಿ ಅಭಿನಯಿಸಿ ತೋರಿಸುವುದರಲ್ಲಿ ಹೆಚ್ಚು ಗುಣವುಂಟು. ಈ ಉದ್ದೇಶದಿಂದಲೇ ವೇದಾಂತಾದಿ ಶಾಸ್ತ್ರ ವಿಷಯಗಳೂ ಕೂಡ ನಮ್ಮ ಪೂರ್ವಿಕರಿಂದ ನಾಟಕರೂಪವಾಗಿ ರಚಿಸಲ್ಪಟ್ಟಿವೆ. ವೈದ್ಯಶಾಸ್ತ್ರ ವಿಚಾರದಲ್ಲಿಯೂ 'ಜೀವನಂದನ'ವೆಂಬ ಸಂಸ್ಕೃತ ನಾಟಕವೊಂದು ಇದಕ್ಕೆ ಮೊದಲೇ ರಚಿತವಾಗಿದೆ. ಆದರೆ ಈಗಿನ ಕಾಲದಲ್ಲಿ ಜನಗಳಲ್ಲಿ ಕಂಡುಬರುತ್ತಿರುವ ಅನಾರೋಗ್ಯಕರವಾದ ಅಭ್ಯಾಸಪದ್ಧತಿಗಳನ್ನೆಲ್ಲಾ ಎತ್ತಿತೋರಿಸಿ ಅಜ್ಞರಾದ ಜನರನ್ನು ಆರೋಗ್ಯ ಮಾರ್ಗಕ್ಕೆ ತಿರುಗಿಸುವ ವಿಷಯದಲ್ಲಿ ತಮ್ಮ ಈ ಸಣ್ಣ ಪುಸ್ತಕವು ತತ್ಕಾಲಿಕ ಸ್ಥಿತಿಗೆ ಬಹಳ ಅನುಗುಣವಾಗಿದೆ.

ಶಾಲೆಗಳಲ್ಲಿ ನಾಟಕರೂಪವಾಗಿ ಪ್ರದರ್ಶಿಸುವುದಕ್ಕೂ, ಲೈಬ್ರೇರಿಗಳಲ್ಲಿಡುವುದಕ್ಕೂ ಪಾಠಪುಸ್ತಕವಾಗಿ ಮಕ್ಕಳಿಂದ ಓದಿಸುವುದಕ್ಕೂ ಇದು ಅರ್ಹವಾಗಿರುವುದರಿಂದ ಇದಕ್ಕೆ ವಿದ್ಯಾ ಇಲಾಖೆಯವರಿಂದಲೂ, ಆರೋಗ್ಯ ಇಲಾಖೆಯವರಿಂದಲೂ ಸರ್ವತೋಮುಖವಾದ ಪ್ರೋತ್ಸಾಹವು ದೊರೆತು, ಗ್ರಂಥರಚನೆಯಲ್ಲಿ ತಾವು ಕೈಕೊಂಡ ಶ್ರಮಕ್ಕೆ ಸಾರ್ಥಕವುಂಟಾಗಲೆಂದು ಹಾರೈಸುತ್ತೇನೆ." ('ಆರೋಗ್ಯ ಪ್ರತಾಪ' 1930 - ಪುಟ VIII)
3. ಜಿಲ್ಲಾ ಬೋರ್ಡಿನ ಅಧ್ಯಕ್ಷ ಎನ್. ಸುಬ್ಬರಾಯರು ಕೊರಡ್ಕಲರಿಗೆ ಬಂಗಾರದ ಪದಕ ನೀಡುವುದನ್ನು ಪ್ರಕಟಿಸಿ ಉಡುಪಿಯ ರಾಷ್ಟ್ರೀಯ ಆರೋಗ್ಯ ಮತ್ತು ಶಿಶು ಸಪ್ತಾಹ ಸಂಘಕ್ಕೆ ಬರೆದ 26-1-1926ರ ಪತ್ರ 'ಆರೋಗ್ಯ ಪ್ರತಾಪ'ದ ಅನುಬಂಧಲ್ಲಿದೆ. 'ಆರೋಗ್ಯ ಪ್ರತಾಪ' ನಾಟಕಕ್ಕಾಗಿ ಉಡುಪಿಯ 'ಚೈಲ್ಡ್ ವೆಲ್ಫೇರ್ ಎಸೋಸಿಯೇಶನ್'' 1929ರಲ್ಲಿ ಕೊರಡ್ಕಲರಿಗೆ ಪ್ರಶಸ್ತಿ ಪತ್ರವೊಂದನ್ನು ನೀಡಿತು. 'ಆರೋಗ್ಯ ಪ್ರತಾಪ'ದಲ್ಲಿ ಮುದ್ರಿಸಲಾಗಿರುವ ಈ ಪತ್ರದಲ್ಲಿರುವ ಸಮಿತಿಯ ಸದಸ್ಯರ ಹೆಸರುಗಳಿವು: ಖಾನ್ ಬಹಾದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ M.L.A.. ಜತೆ ಕಾರ್ಯದರ್ಶಿಗಳು ಡಾ|ರಾಮಚಂದ್ರ ರಾವ್, ಡಾ|ಯು. ಸುಂದರರಾಮ ಪೈ, ಯು. ವೆಂಕಟರಾವ್, ಪಿ. ಗೋಪಾಲ ನಾಕ

4. 'ಧರ್ಮ ಸಂಕಟ (1938) ನಾಟಕದ ಪ್ರಸ್ತಾವನೆಯಲ್ಲಿ ನಾಟಕ ಪೂರ್ವೇತಿ ಹಾಸ - ಇದರ ಉದ್ಧರಣ ಯು.ಬಿ. ರಾಜಲಕ್ಷ್ಮಿ ಅವರು ಬರೆದಿರುವ ಕೊರಡಲ್ಕರ ಜೀವನ ಚರಿತ್ರೆಯಲ್ಲಿದೆ. ಪುಟ-15.
5. ಪಂಜೆಯವರ ಕೃತಿಗಳು, ಸಂಪುಟ-4, 'ಪ್ರಬಂಧಗಳು ಮತ್ತು ಸಂಶೋಧನೆ' ಓರಿಯಂಟ್ ಲಾಂಗ್ಮನ್ ಲಿಮಿಟೆಡ್, 1973

6. 'ಬಾಲವಾಙ್ಮಯ' (1936)ವನ್ನು ಪ್ರಕಟಿಸಿದ ಉಡುಪಿಯ ಉಪಾಧ್ಯಾಯರ ಪ್ರಕಟಣ ಸಮಿತಿಯ ಸದಸ್ಯರು: 1) ರಾಖಿ ಡೀಸ್, ಬಿ.ಎ.ಎಲ್.ಟಿ., ಮುಖ್ಯೋಪಾಧ್ಯಾಯರು, ಬೋರ್ಡ್ ಹೈಸ್ಕೂಲ್ ಉಡುಪಿ. 2) ಬಿ.ಎನ್. ರಾವ್, ಬಿ.ಎ. (ಆನರ್ಸ್) ಸಂಪಾದಕರು, ಫೈನಾನ್ಸಿಯಲ್ ಎಕ್ಸ್‌ಪ್ರೆಸ್, ಉಡುಪಿ 3) ಕೆ.ಕೆ. ಶೆಟ್ಟಿ, ಸಂಪಾದಕರು, 'ಬಾಲಚಂದ್ರ' ಉಡುಪಿ. 5) ಕೊರಡ್ಕಲ್ ಶ್ರೀನಿವಾಸ ರಾವ್, ಆನಂದ ಗ್ರಂಥಮಾಲೆಯ ಲೇಖಕರು.
ಫೆರ್ನಾಂ

7, 8, 9 ಗಿರಡ್ಡಿ ಗೋವಿಂದರಾಜ - ಕೊರಡ್ಕಲ್‍ರ'ಧನಿಯರ ಸತ್ಯನಾರಾಯಣ', 'ಮಲ್ಲಿಗೆ', ಸೆಪ್ಟೆಂಬರ್ 1980.
10. ಎಚ್. ಎಸ್. ರಾಘವೇಂದ್ರ ರಾವ್ - 'ಪ್ರಗತಿಶೀಲತೆ', ಕರ್ನಾಟಕಸಾಹಿತ್ಯ ಅಕಾಡೆಮಿ, ಬೆಂಗಳೂರು 1990

11. ಕೊರಡ್ಕಲ್ ಶ್ರೀನಿವಾಸ ರಾವ್ - 'ಕತೆ ಬರೆವ ಹುರುಪುಳ್ಳವರೊಡನೆ ಒಂದರೆಗಳಿಗೆ', 'ಪ್ರಭಾತ' ವಿಶೇಷಾಂಕ, ಮಂಗಳೂರು, 1947.

12. ಕೊರಡ್ಕಲರು 'ನಮ್ಮ ಉಡುಪಿ' (ದ್ವಿತೀಯ ಮುದ್ರಣ-1948)ಯಲ್ಲಿ ಉಲ್ಲೇಖಿಸಿರುವ ಉಡುಪಿಯ ಪ್ರೇಕ್ಷಣೀಯ ಸ್ಥಳಗಳು: 1) ಮಲ್ಪೆ ಮತ್ತು ವಡಭಾಂಡೇಶ್ವರ. 2) ಪಾಜಕ ಕ್ಷೇತ್ರ ಮತ್ತು ದುರ್ಗಾದೇವಿ ಬೆಟ್ಟ. 3) ಶ್ರೀ ಮದ್ಭುವನೇಂದ್ರ ಮಹೌಷಧಾಲಯ, ಕಟ್ಪಾಡಿ. 4) ಮನಿಪಳ ಮತ್ತು ಇಂದ್ರಾಳಿ. (ಮಣಿಪಾಲ ಆಗ 'ಮನಿಪಳ'ವಾಗಿತ್ತು.)

13.  ಕೊರಡ್ಕಲರು  ಉಲ್ಲೇಖಿಸಿರುವ ಉಡುಪಿಯ ಸಂದರ್ಶನೀಯ ಸಂಘ ಸಂಸ್ಥೆಗಳು - 1) ಸಂಸ್ಕೃತ ಮಹಾಪಾಠ ಶಾಲೆ, 2) ಹೈಸ್ಕೂಲು, 3) ಕ್ರಿಶ್ಚಿಯನ್ ಹೈಸ್ಕೂಲು ಮತ್ತು ವಿಮೆನ್ಸ್ ಹಾಸ್ಪಿಟಲ್, 4) ಚಂದ್ರೇಶ್ವರದ ಮಾಳಿಗೆಯ 'ಕಲಾವೃಂದ', 5) ಶ್ರೀ ಕೃಷ್ಣಾ ಪ್ರೆಸ್, 6) ಮೋಡರ್ನ್ ಸ್ಟುಡಿಯೊ, 7) ನವಯುಗ ಪ್ರೆಸ್, 8) ಮುನ್ಸಿಪಲ್ ಲೈಬ್ರರಿ ವಾಚನಾಲಯ, 9) ಪ್ರಭಾಕರ ಪ್ರೆಸ್, 10) ಕೆನರಾ ಇಂಡಸ್ಟ್ರಿಯಲ್ ಎಂಡ್ ಬ್ಯಾಂಕಿಂಗ್‍ನ ಪ್ರಧಾನ ಕಾರ್ಯಾಲಯ 11) ಕೆನರಾ ಮ್ಯೂಚ್ಯುವಲ್ ಲೈಫ್ ಇನ್ಸೂರೆನ್ಸ್ ಕಂಪೆನಿಯ ಪ್ರಧಾನ ಕಾರ್ಯಾಲಯ, 12) ಅಜ್ಜರಕಾಡಿನ ರೇಡಿಯೋ ಗೋಪುರ, 13) ಕೆನರಾ ಬ್ಯಾಂಕಿಂಗ್ ರೇಶನ್ನಿನ ಪ್ರಧಾನ ಕಾರ್ಯಾಲಯ, 14) ಉಡುಪಿಯ ಎಲೆಕ್ಟ್ರಿಕ್ ಕೋರ್ಪರೇಶನ್ ಲಿಮಿಟೆಡ್‍ನ ಪವರ್ ಹೌಸ್,   15) ಹಿಂದುಸ್ಥಾನ್ ಪಬ್ಲಿಷಿಂಗ್ ಹೌಸ್ ಎಂಡ್ ಸ್ಟೇಶನರಿ ಮಾರ್, 16) ಪಂಡಿತ ಟಿ.ಎನ್. ಕೇಳುನಂಬಿಯಾರರ ಕೃಷ್ಣವಿಹಾರ ಆರ್ಯ ವೈದ್ಯಶಾಲಾ, 17) ಕಲ್ಮಂಜೆ ವ್ಯಾಸಾಚಾರ್ಯರ ಭಾಜನ ಭಂಡಾರ
ಬೋರ್ಡು
ಕಾರ್ಪೋ
14. ಕೊರಡ್ಕಲರು ಉಲ್ಲೇಖಿಸಿರುವ ಉಡುಪಿಯ ಸಂಘ-ಸಂಸ್ಥೆಗಳು, ಉದ್ಯಮಗಳು - 1) ಕೆನರಾ ಬ್ಯಾಂಕಿಂಗ್ ಕೋರ್ಪರೇಶನ್ ಲಿಮಿಟೆಡ್, ಉಡುಪಿ, ಸ್ಥಾಪನೆ-1906. ಅಧ್ಯಕ್ಷರು: ಡಾ|ಯು. ಸುಂದರರಾಮ ಪೈ, ಶಾಖೆಗಳು-32, 2) ಕೆನರಾ ಮ್ಯೂಚುವಲ್ ಎಶ್ಶೂರೆನ್ಸ್ ಕಂಪೆನಿ ಲಿಮಿಟೆಡ್, ಉಡುಪಿ, ಸ್ಥಾಪಕರು: ಡಾ|ಟಿ. ಮಾಧವ ಪೈ, 1935, 3) ರಾಯಲ್ ಕೆಫೆ ಮತ್ತು ರಾಯಲ್ ಮಹಲ್, ಮಾಲಕರು- ಕೆ. ವೆಂಕಟ್ರಮಣ ಭಟ್, 4) ಶ್ರೀ ರಾಮಕೃಷ್ಣ ಥಿಯೇಟರ್, ಉಡುಪಿ, ಸ್ಥಾಪಕರು: ಟಿ. ಉಪೇಂದ್ರ ಪೈ, 5) ಕೆನರಾ ಇಂಡಸ್ಟ್ರಿಯಲ್ ಎಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ - ಸ್ಥಾಪಕರು: ಉಪೇಂದ್ರ ಅನಂತ ಪೈ-1925, ಜನರಲ್ ಮ್ಯಾನೇಜರ್-ಟಿ.ಎ.ಪೈ, 6) ಜೈ ಭಾರತ್ ಮಿಲ್ಸ್, ಚೇರ್ಮನ್-ಉಪೇಂದ್ರ ಅನಂತ ಪೈ, 7) ಚಿತ್ತರಂಜನ ಭವನ, 8) ಮನಿಪಳ ಟೆಕ್ಸ್‌ಟಾಯಿಲ್ಸ್ ಲಿಮಿಟಿಡ್ - ಸ್ಥಾಪಕರು: ಪಿ.ಎ.ಪೈ, 9) ಕೊಚ್ಚಿಕಾರ್ ಬ್ರದರ್ಸ್  ಲಿಮಿಟೆಡ್, ಉಡುಪಿ - ಸ್ಥಾಪಕರು: ಕೊಚ್ಚಿಕಾರ್ ಪದ್ಮನಾಭ ಪೈ, 10) ಪಾಂಗಾಳ ನಾಯಕ್ ಬ್ಯಾಂಕ್ ಲಿಮಿಟೆಡ್, ಸ್ಥಾಪನೆ-1920, ಶಾಖೆಗಳು-8, ಕಾರ್ಯದರ್ಶಿ - ಪಾಂಗಾಳ ಲಕ್ಷ್ಮಣ ನಾಯಕ್, 11) ಯುನೈಟೆಡ್ ಕರ್ನಾಟಕ ಇನ್ಶೂರೆನ್ಸ್ ಕಂಪೆನಿ ಮತ್ತು ಇಂಟರ್‌ನ್ಯಾಷನಲ್ ಕಮರ್ಶಿಯಲ್ ಕೋರ್ಪರೇಶನ್ ಲಿಮಿಟೆಡ್, 12) ನವಯುಗ ಎಂಟರ್‌ಪ್ರೈಸ್, ಉಡುಪಿ, ಸ್ಥಾಪನೆ-1939, ಚೇರ್ಮನ್ - ಕೆ.ಜೆ. ಬಲ್ಲಾಳ, ಮ್ಯಾನೇಜಿಂಗ್ ಡೈರೆಕ್ಟರ್ - ಕೆ. ಹೊನ್ನಯ್ಯ ಶೆಟ್ಟಿ, 13) ಸದಾನಂದ ಸ್ಟೋರ್ಸ್, ಸಂತೆಕಟ್ಟೆ-'ಚಂದ್ರಾಸ್ನೋ' ಮತ್ತು ಹೇರ್ ಟೊನಿಕ್' ಪರಿಮಳ ತೈಲದ ಉತ್ಪಾದಕರು, 14) ಉಡುಪಿ ಬ್ಯಾಂಕ್-ಸ್ಥಾಪನೆ-1925, 15) ಶ್ರೀನಿವಾಸ ಭವನ, ರಥಬೀದಿ, ಉಡುಪಿ, 16) ಐಡಿಯಲ್ ಸ್ಟುಡಿಯೋ, ಉಡುಪಿ, 17) ನಾಯಕ್ಸ್ ಸೋಡಾ ಫೇಕ್ಟರಿ ಎಂಡ್ ಕೋಲ್ಡ್ ಡ್ರಿಂಕ್ಸ್ ಹೌಸ್, ತೆಂಕಪೇಟೆ, ಉಡುಪಿ
15. ಕೊರಡ್ಕಲ್‍ರು ಉಲ್ಲೇಖಿಸಿರುವ ಉಡುಪಿಯ ಪ್ರಸಿದ್ಧ ಪತ್ರಿಕೆಗಳು - 1) ನವಯುಗ (ವಾರಪತ್ರಿಕೆ) ಸಂಪಾದಕರು-ಕೆ. ಹೊನ್ನಯ್ಯ ಶೆಟ್ಟಿ ಮತ್ತು ಎಂ.ವಿ. ಹೆಗ್ಡೆ, 2) ಅಂತರಂಗ (ವಾರಪತ್ರಿಕೆ) ಸಂ.-ಎಂ.ವಿ.ಹೆಗ್ಡೆ ಮತ್ತು ಕೆ. ಹೊನ್ನಯ್ಯ ಶೆಟ್ಟಿ, 3) ಧುರೀಣ (ವಾರಪತ್ರಿಕೆ) ಸಂ.-ಆರ್. ಎಸ್. ಶೆಣೈ, 4) ಬಾಲಚಂದ್ರ (ವಿದ್ಯಾವಿಷಯ ಮಾಸಪತ್ರಿಕೆ) ಕೆ. ಆರ್. ಶೆಣೈ ಮತ್ತು ಕೆ. ಹೊನ್ನಯ್ಯ ಶೆಟ್ಟಿ, 5) ಹ್ಯುಮನ್ ಎಫೇರ್ (ಇಂಗ್ಲಿಷ್ ಮಾಸಪತ್ರಿಕೆ) ಸಂ.-ಟಿ.ಆರ್. ಪೈ, 6) ಪ್ರಕಾಶ (ಮಾಸಪತ್ರಿಕೆ) ಸಂ.- ಯು. ವ್ಯಾಸ ರಾವ್, 7) ಶ್ರೀಕೃಷ್ಣ ಸೂಕ್ತಿ (ಮಾಸಪತ್ರಿಕೆ) ಸಂ.-ಎನ್. ರಾಜಗೋಪಾಲ್ ಕೃಷ್ಣರಾಯರು, 8) ಯುಗಪುರುಷ (ಮಾಸಪತ್ರಿಕೆ) ಪ್ರಧಾನ ಸಂಪಾದಕರು - ಬನ್ನಂಜೆ ರಾಮಾಚಾರ್ಯ, 9) 'ಉದಯಭಾರ'ತ' (ವಾರಪತ್ರಿಕೆ) ಸಂ.-ಅಲೆವೂರು ಶೇಷಪ್ಪಯ್ಯ.

16. ಕೊರಡ್ಕಲರು ಉಲ್ಲೇಖಿಸಿರುವ ಉಡುಪಿಯ ಪ್ರಸಿದ್ಧ ಗ್ರಂಥ ಪ್ರಕಾಶನ ಸಂಸ್ಥೆಗಳು - 1) ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯ 2) ಕಿರಿಯರ ಪ್ರಪಂಚ, 3) ನವಭಾರತ ಪುಸ್ತಕ ಭಂಡಾರ, ವ್ಯವಸ್ಥಾಪಕರು-ಕೆ. ಜಗನ್ನಾಥ ಶೆಟ್ಟರು, 4) ವಿ.ಎಲ್.ರಾವ್ ಎಂಡ್ ಸನ್ಸ್, 5) ಮಧ್ವಮುನಿ ಸೇವಾ ಸಂಘ.
17. ಕೊರಡ್ಕಲ್‍ರು ಉಲ್ಲೇಖಿಸಿರುವಂತೆ 1948ರಲ್ಲಿ 3.8 ಚದರ ಮೈಲು ವಿಸ್ತಾರದ ಉಡುಪಿ ನಗರದ ಜನಸಂಖ್ಯೆ ಹದಿನೆಂಟು ಸಾವಿರ.
18.THE UDUPI PARYAYAM SOUVENIR (1938) ಮುಖಪುಟದಲ್ಲಿ ಶ್ರೀ ಪೇಜಾವರ ಮಠದ  ಪರ್ಯಾಯಮ್ ಪ್ರಾಮಿಸರಿ ನೋಟುಗಳ ಜಾಹೀರಾತು ಅಚ್ಚಾಗಿದೆ.
19. ತುಳು ಭಾಷೆಯನ್ನು ಕುರಿತ ಕೊರಡಲ್ಕರ ಪ್ರಶಂಸೆ ಹೀಗಿದೆ: "ತುಳು ಮಾತಿನಲ್ಲಿ ಮೆಲ್ಪು ಇದೆ. ಸಂಸ್ಕೃತಿ ಇದೆ. ಕನ್ನಡಕ್ಕಿಂತಲೂ ಸರಾಗವಾಗಿ ಜೀವನವನ್ನು ಚಿತ್ರಿಸಲು ಬೇಕಾದ ಶಬ್ದ ಸಂಪತ್ತು ಇದೆ. ಸಂಸ್ಕೃತಕ್ಕೆ ಮಣಿಯದೆ ತಾನಾಗಿ ನಿಂತಿರುವ ಭಾಷೆ ತುಳು. ತುಳು ಶಬ್ದ ಭಂಡಾರವನ್ನು ಪರಿಶೀಲಿಸಿದರೆ, ತುಳುವಿನಲ್ಲಿರುವ ಜನಪದ ಸಾಹಿತ್ಯವಾದ ಪಾಡ್ದನಗಳನ್ನು ಕಿವಿಗೊಟ್ಟು ಕೇಳಿದರೆ, ತುಳುವಿನ ಕಿರುಗಾದೆಗಳ ಹಿರಿದರ್ಥವನ್ನು ಮನಗಂಡರೆ ತುಳುವರು ಉಚ್ಚ ಸಂಸ್ಕೃತಿಯುಳ್ಳ ಜನರೆಂಬುದು ಪ್ರಕಟವಾಗುವುದು." 'ನೆನಪಿಗಾಗಿ' ಕೊರಡ್ಕಲ್ ಸ್ಮಾರಕ ಸಮಿತಿ, ಉಡುಪಿ, 1949.
-KORADKAL SRINIVAS RAO[biography]
    -by-U.B. RAJALAXMI
  PUBLISHED BY-GOINDA PAI SAMSHODANA KENDRA,
   UDUPI-576102 GOVINDAPAIRESEARCH.BLOGSPOT.COM

No comments:

Post a Comment