stat Counter



Sunday, January 16, 2011

My Favourite Teacher by Shashikala


ನನ್ನ ನೆಚ್ಚಿನ ಶಿಕ್ಷಕ

- ಶಶಿಕಲಾ
 
ನನ್ನ ಮೆಚ್ಚಿನ ಶಿಕ್ಷಕರು ಪ್ರೊ  ಮುರಳೀಧರ ಉಪಾಧ್ಯ ಹಿರಿಯಡಕ. ನಾನು ಪದವಿಪೂರ್ವ ಹಂತದಲ್ಲಿ ಇರುವಾಗ ಪ್ರತಿದಿನವೂ ಅವರನ್ನು ನೋಡುತ್ತಿದ್ದೆ. ತೀರಾ ಸಾಮಾನ್ಯ ವ್ಯಕ್ತಿಯಂತೆ ಕಂಡರೂ ಅಸಾಮಾನ್ಯ ವ್ಯಕ್ತಿತ್ವ ಅವರದು. ನಂತರ ನಾನು ಪದವಿಗೆ ಆಗಮಿಸಿದಾಗ ಅವರ ಮೊದಲ ತರಗತಿಯಲ್ಲಿ ಎಲ್ಲರೂ ಕೇಳುವಂತಹ ಮಾಮೂಲಿ ಪ್ರಶ್ನೆಗಳಲ್ಲದೆ, ನೀವು ಓದಿದ ಪುಸ್ತಕಗಳು, ನೀವು ಓದಲಿಕ್ಕೆ ಇಷ್ಟಪಟ್ಟು ಸಿಗದೇ ಇರುವ ಪುಸ್ತಕಗಳು, ನೆಚ್ಚಿನ ಲೇಖಕರು ಯಾರು? ಮುಂತಾದ ಪ್ರಶ್ನೆಗಳೂ ಸೇರಿದ್ದವು. ನಾನು ಹಲವು ಪುಸ್ತಕದ ಹೆಸರನ್ನು ಸೂಚಿಸಿದ್ದೆ. ನಂತರ ಎಲ್ಲವನ್ನು ಓದಿದೆ ಕೂಡ.
ಅವರು ತರಗತಿಗೆ ಬರುವಾಗ ಕೈಯಲ್ಲಿ ಬರೀ ಪಠ್ಯಪುಸ್ತಕ ಮಾತ್ರವಲ್ಲದೆ ಹೊಸಹೊಸ ಸಾಹಿತ್ಯ ಕೃತಿಗಳೂ ಇರುತ್ತಿದ್ದವು. ಅವುಗಳ ಬಗ್ಗೆ ನಮಗೆ ಸಮಗ್ರ ಮಾಹಿತಿಯನ್ನು ನೀಡುತ್ತಿದ್ದರು. ತರಗತಿಯಲ್ಲಿ ಕನ್ನಡ ಮಾತ್ರವಲ್ಲದೆ ಇತಿಹಾಸ, ವಿಜ್ಞಾನ, ಸಂಶೋಧನೆ, ಹಾಸ್ಯ, ರಾಜಕೀಯ, ಆರ್ಥಿಕ , ಸಾಮಾಜಿಕ ಮೌಲ್ಯ, ಪ್ರವಾಸ, ವಿಚಾರಗಳು, ಹೀಗೆ ಎಲ್ಲಾ ವಿಷಯಗಳನ್ನು ಕುರಿತು ಚರ್ಚೆ ಆಗುತ್ತಿದ್ದವು. ನಾವು ಎಂದೂ ಕೇಳರಿಯದ ಮತ್ತು ಆ ದಿಕ್ಕಿನಲ್ಲಿ ಯೋಚಿಸಿಯೂ ಇರದ ಮಾಹಿತಿಗಳನ್ನು ನೀಡುತ್ತಿದ್ದರು. ಅದಕ್ಕೆ ನಾವು ಅವರನ್ನು ನಡೆದಾಡುವ ಜ್ಞಾನಕೋಶ ಎಂದೇ ಕರೆಯುತ್ತಿದ್ದೆವು.
  ಅವರು ನೀಡಿದಂತಹ ಕಾದಂಬರಿಯ ಕಥಾವಿಮರ್ಶೆಯನ್ನು ಬರೆಯುವುದೂ ಅದರಲ್ಲಿ ಒಂದು. ಉಡುಪಿಯ ಸೀತಾ ಬುಕ್ ಹೌಸ್‍ಗೆ ಭೇಟಿಕೊಟ್ಟು ಅಲ್ಲಿ ನಮಗೆ ಸಿಕ್ಕಿದಂತಹ ಲೇಖಕ/ಕವಿಯು ಬರೆದಂತಹ ಎಲ್ಲಾ ಕೃತಿಗಳ ಹೆಸರನ್ನು ಉಲ್ಲೇಖಿಸಿ ಅದನ್ನು ಗ್ರಂಥಋಣದ ರೂಪದಲ್ಲಿ ನೀಡಬೇಕಾಗಿತ್ತು. ಈ ರೀತಿಯಿಂದಾಗಿ ನಾನು ಇನ್ನಷ್ಟು ಹೆಚ್ಚು ಪುಸ್ತಕಗಳ ಬಗ್ಗೆ ತಿಳಿಯಲು ಸಾಧ್ಯವಾಯಿತು. ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸಲು ವಿದ್ಯಾರ್ಥಿಗಳಿಗೆ ಕೃತಿಯನ್ನು ನೀಡಿ ಅದರ ಬಗ್ಗೆ ತಮ್ಮ ವಾಕ್ಯದಲ್ಲಿಯೇ ಕಥಾನಿರೂಪಣೆ ಮತ್ತು ವಿಮರ್ಶೆಯನ್ನು ಮಾಡಬೇಕಾದ ಕೆಲಸವನ್ನು ಅವರು ನಮಗೆ ಕೊಡುತ್ತಿದ್ದರು.
ದತ್ತಕಾರ್ಯಗಳಿಗೆ ಅವರು ನೀಡುತ್ತಿದ್ದ ಚಟುವಟಿಕೆಗಳು ತುಂಬಾ ಆಸಕ್ತಿ ಮತ್ತು ಶ್ರಮದಿಂದ ಕೂಡಿರುತ್ತಿದ್ದವು.
 ಅಂಕಣದಲ್ಲಿ ಬೇರೆ ಬೇರೆ ಕೃತಿಗಳನ್ನು ಕುರಿತು ವಿಮರ್ಶೆ ಮಾಡುತ್ತಿದ್ದರು. ಎಲ್ಲರಿಗೂ ಪತ್ರಿಕೆ ಸಿಕ್ಕಿದ ನಂತರ ಕೃತಿ ವಿಮರ್ಶೆ ತಿಳಿದರೆ ನಮಗೆ ಮೊದಲೇ ತಿಳಿಯುತ್ತಿತ್ತು. ಹೇಗೆಂದರೆ ಕೊನೆಯ ಅವಧಿ ಅವರದ್ದು. ನಾವು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದೆವು. ನಾಳೆ ಬರುವಂತಹ ಪುಸ್ತಕ ವಿಮರ್ಶೆ ಯಾವುದೆಂದು. ನಾನು ಅವರ ವಿಮರ್ಶೆಯ ಸಂದರ್ಭದಲ್ಲಿ ನೀಡುತ್ತಿದ್ದ ಶೀರ್ಷಿಕೆಯನ್ನು ಕುರಿತು ಹೆಚ್ಚು ಆಸಕ್ತಿ ವಹಿಸುತ್ತಿದ್ದೆ. ಅವರು ನೀಡುತ್ತಿದ್ದ ಶೀರ್ಷಿಕೆಯ ಸಾಲುಗಳಲ್ಲಿ ಅತ್ಯಂತ ಇಷ್ಟವಾದ ಸಾಲು "ಗೆಂಡದ ಬರ್ಸೊಗು ಕರ್ಬದ ಕೊಡೆ"..
ಅವರು ಆದಿತ್ಯವಾರ ಉದಯವಾಣಿಯ ಸಾಪ್ತಾಹಿಕ ಸಂಪದಲ್ಲಿ ನಿಯತವಾಗಿ ಬರೆಯುತ್ತಿದ್ದ ಪುಸ್ತಕ ಪ್ರೀತಿ
ನಾನು ಯಾವುದೇ ಹೊಸ ಪುಸ್ತಕವನ್ನು ನೋಡಿದರೂ ಅದನ್ನು ಅವರ ಬಳಿ ಬಂದು ಬೇಕು ಎಂದು ಕೇಳುತ್ತಿದ್ದೆ. ಕವನ, ಚುಟುಕು, ಕಾವ್ಯದ ಸಾಲುಗಳನ್ನು ಅವರು ಹೇಳುತ್ತಿದ್ದರು. ಅವೆಲ್ಲವೂ ನನ್ನಲ್ಲಿ ಸಂಗ್ರಹವಾಗಿದೆ. ಅವರಿಂದಲೇ ನನಗೆ ಝೆನ್ ಕತೆಗಳನ್ನು ಓದುವ ಹಾಗೂ ಸಂಗ್ರಹಿಸುವ ಆಸಕ್ತಿ ಉಂಟಾಯಿತು. ನಿವೃತ್ತಿಯ ನಂತರವೂ ನಮ್ಮ ತೃತೀಯ ಬಿ.ಎ. ಕನ್ನಡ ಐಚ್ಛಿಕ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಬೋಧಿಸಲು ಆಗಮಿಸುತ್ತಿದ್ದರು. ಅವರಿಂದ ನಾನು, ಒಬ್ಬ ಶಿಕ್ಷಕ ತರಗತಿಯಲ್ಲಿ ಯಾವ ರೀತಿ ಇರಬೇಕು? ವಿಷಯ ಪ್ರಸ್ತುತೀಕರಣ ಹೇಗೆ ಮಾಡಬೇಕು? ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೇಗಿರಬೇಕು? ಯಾವುದೇ ಬಾಹ್ಯ ಹಿಡಿತವಿಲ್ಲದೆ ತರಗತಿಯನ್ನು ನಿಯಂತ್ರಣದಲ್ಲಿಡುವುದು ಹೇಗೆ? ಎಂದು ಅರಿತುಕೊಂಡಿದ್ದೇನೆ.

 
 

ಶಿಕ್ಷಕ (ವಾರ್ಷಿಕ ಸಂಚಿಕೆ) ೨೦೧೦
ಡಾ| ಟಿ.ಎಂ.ಪೈ ಶಿಕ್ಷಣ ಕಾಲೇಜು, ಉಡುಪಿ

mupadhyahiri.blogspot.com

No comments:

Post a Comment