stat Counter



Tuesday, March 22, 2011

Pranavaroopada Bhavashuddhi

ಪ್ರಣವರೂಪದ ಭಾವಶುದ್ಧಿ (ಯಕ್ಷಗಾನ ಪ್ರೇಕ್ಷಕನೋರ್ವನ ಆಕಾಶಭಾಷಿತಗಳು)
- ದೇವು ಹನೆಹಳ್ಳಿ

ನನ್ನನ್ನು ನಾನು 'ಕೇವಲ ಪ್ರೇಕ್ಷಕ' ಎಂದು ಒಪ್ಪಿಕೊಂಡ ಮೇಲೂ ಇಷ್ಟೆಲ್ಲವನ್ನು ಬರಹದಲ್ಲಿ ನಿವೇದಿಸಿಕೊಂಡದ್ದರಿಂದ ಕಲೆಯಲ್ಲಿ ಬದಲಾವಣೆ, ಕಲೆಯ ವಿಕಾಸಗಳು ಕುರಿತು ನನ್ನ ಧೋರಣೆಯೇನು ಎಂಬ ಪ್ರಶ್ನೆ ಯಕ್ಷಗಾನದ ವಿವಿಧ ಸ್ತರಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಲ್ಲಿ ಉದ್ಭವಿಸುವುದು ಸಹಜ.  ಅದಕ್ಕೆ ಉತ್ತರ ಸಿದ್ಧ-ಸೂತ್ರ-ವ್ಯಾಖ್ಯೆಯ ರೂಪದಲ್ಲಿ ನಾನು ಹೇಳಿರದಿದ್ದರೂ ಅದು ಮೂರ್ನಾಲ್ಕುಲೇಖನಗಳಲ್ಲಿ ಸೂಚ್ಯವಾಗಿ ಬಿಂಬಿತವಾಗಿದೆ.  ನನ್ನ ನಿಲುವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದೇನೋ?  1. ಬದಲಾವಣೆಯೆಂಬುದು ರಂಗದ ಮೇಲೆ ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಯಿಂದ 'ಅಪ್ರಜ್ಞಾಪೂರ್ವಕವಾಗಿ' ಘಟಿಸುವಂತಾದ್ದು.  2. ಬದಲಾವಣೆಯೆಂಬುದು ಪ್ರೇಕ್ಷಕರ, ವಿಮರ್ಶಕರ ಸಾಲಿನಲ್ಲಿ ಕುಳಿತ ವ್ಯಕ್ತಿ ('ಕ್ರಿಯೆಯಲ್ಲಿ ತೊಡಗದ') ಪ್ರಜ್ಞಾಪೂರ್ವಕವಾಗಿ ಹೇರುವಂತಾದ್ದಲ್ಲ.  ಅದಕ್ಕೆ ನಿರ್ದೇಶನವೆಂಬ ದೊಡ್ಡ ಪದ ಬೇಡ.  ಕಲೆ ಕಲಾವಿದನದ್ದು, ಪ್ರೇಕ್ಷಕನದ್ದಲ್ಲ.  3. ವರ್ತಮಾನದ ಸಾಮಾಜಿಕ-ಮತೀಯ-ಆರ್ಥಿಕ-ಸಾಂಸ್ಕೃತಿಕ-ತಂತ್ರಜ್ಞಾನಾಧಾರಿತ ವಿಪ್ಲವದಲ್ಲಿ ಒಂದು ಕಲೆಯ ಸಾಂಪ್ರದಾಯಿಕ ಸ್ವರೂಪವನ್ನು ಉಳಿಸುವುದೆಂದರೆ ಒಂದು ನೆಲೆಯಲ್ಲಿ ಸ್ಥಾಗಿತ್ಯವನ್ನು ಬಯಸುವುದು.  ಅದು ಅನಿವಾರ್ಯವಿರಬಹುದು.  ಆ Freeze Point ಯಾವುದು ಎಂಬುದು ಕಲಾವಿದರ ವಿವೇಚನೆ, ವಿವೇಕಕ್ಕೆ ಬಿಟ್ಟ ವಿಚಾರ.  4. ದೈಹಿಕರೋಗಕ್ಕೆ ಔಷಧವನ್ನು ಸಿದ್ಧಪಡಿಸುವಾಗ ಅಂತಿಮ ಹಂತವನ್ನು ಗಮನದಲ್ಲಿಟ್ಟುಕೊಂಡು ವಸ್ತುಗಳನ್ನು ಸಂಯೋಗಗೊಳಿಸಿದಂತೆ ಭಾವವಿರೇಚನವಲ್ಲ.  ಅಂದರೆ ಅದು ವಾಚ್ಯವಲ್ಲ.  ಅದು ಮನೋಧರ್ಮಕ್ಕೆ ಸಂಬಂಧಿಸಿದ್ದು, ಬೌದ್ಧಿಕ ನಿರ್ದೇಶಕ್ಕೆ ಒಳಪಡುವಂತಾದ್ದಲ್ಲ.  5. ಯಕ್ಷಗಾನ ಪರಿಭಾಷೆಯಲ್ಲಿ ವೇಷ ಮತ್ತು ಪಾತ್ರ ಎಂಬವು ಪ್ರತ್ಯೇಕವಲ್ಲ. (ಪಾತ್ರ ಎಂಬ ಪಾರಿಭಾಷಿಕ ಪದಪ್ರಯೋಗವೇ ಯಕ್ಷಗಾನದಲ್ಲಿ ತೀರಾ ಇತ್ತೀಚಿನದು).  'ವೇಷ' ಎಂಬದು ಬಲು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳದ್ದು. 'ವೇಷ' ಮತ್ತು 'ಚಿತ್ರ' ಎರಡೂ ಸ್ಥಾಯೀಭಾವಕ್ಕೆ ಸಂಬಂಧಿಸಿದವುಗಳು.  ಆದುದರಿಂದ ವೇಷ'ಗಾರಿಕೆ' ಮತ್ತು 'ಚಿತ್ರಣ'ಗಳಲ್ಲಿ ಹಸ್ತಕ್ಷೇಪ ಮಾಡುವ ಮೊದಲು ಒಂದಲ್ಲ, ಹತ್ತಲ್ಲ, ನೂರು ಬಾರಿ ಯೋಚಿಸಬೇಕಾಗುತ್ತದೆ.  6. ಒಂದು ವೇಷವನ್ನು ಹಲವರು ಮಾಡುವುದು; ಓರ್ವ 'ಪಾತ್ರಧಾರಿ' ಹಲವು ವೇಷಗಳನ್ನು ಮಾಡುವುದು (ಏಕಪಾತ್ರಾಭಿನಯ); ಬಯಲಾಟದ ಒಂದೊಂದೇ ಅಂಗಗಳನ್ನು ಪ್ರತ್ಯೇಕವಾಗಿ ತುಣುಕುಗಳಲ್ಲಿ ಪ್ರದರ್ಶಿಸುವುದು; ಪೂರ್ವರಂಗದ ಇತರ ಹಲವು ಸಂಗತಿಗಳಿರಲಿ, ಒಡ್ಡೋಲಗವೂ ಇಲ್ಲದೆ ಪ್ರಸಂಗ ಶುರುವಾಗುವುದು; ಸಮಯ ಇಲ್ಲದ್ದಕ್ಕೆ, 'ಜನ' ಇಲ್ಲದ್ದಕ್ಕೆ, 'ಚಿಕ್ಕಪುಟ್ಟ' 'ಅಮುಖ್ಯ' ಪಾತ್ರಗಳನ್ನು ಬಿಟ್ಟುಬಿಡುವುದು...... ಇವೆಲ್ಲಾ ಯಕ್ಷಗಾನದ ಸಮಗ್ರತೆ ಮತ್ತು ವ್ಯಾಪ್ತಿಗಳನ್ನು ಪ್ರಶ್ನಿಸಿದಂತೆ.  ಎಷ್ಟೆಂದರೆ, ಪೂರ್ವರಂಗವೂ ಪ್ರದರ್ಶನವೇ.  'ಆಟ ನೋಡುವುದೆಂದರೆ ಕುಶಾಲಲ್ಲ.  ಅಷ್ಟು ಸಿದ್ಧತೆ ಬೇಕು' ಎನ್ನುತ್ತಾರೆ ಡಾ. ಕೆ. ಎಂ. ರಾಘವ ನಂಬಿಯಾರರು!  ಈ ನಿಟ್ಟಿನಲ್ಲಿ ಡಾ. ಕೆ. ಮಹಾಲಿಂಗರ ತೆಂಕುತಿಟ್ಟು ಬಯಲಾಟವನ್ನು ನೋಡುವ ಬಗೆ ಎಂಬ ಉಪನ್ಯಾಸ ಉಲ್ಲೇಖನೀಯ.

ಪ್ರಣವರೂಪದ ಭಾವಶುದ್ಧಿ - ದೇವು ಹನೆಹಳ್ಳಿ (2010)

ಗಾಯತ್ರಿ ಪ್ರಕಾಶನ, ಅನಂತ ಪ್ರಕಾಶ
ಕಿನ್ನಿಗೋಳಿ - 574150
ಬೆಲೆ - ರೂ.150

No comments:

Post a Comment