stat Counter



Tuesday, June 7, 2011

ಬತ್ತಳಿಕೆ-ಜಾವೇದ್ ಅಖ್ತರ್/-ಕನಕ.ಹಾ. ಮ

ಕಹಿ ಹೇಗಿಲ್ಲದಿದ್ದೀತು ನಮ್ಮ ಕವಿತೆಗಳಲ್ಲಿ?

 'ಹೊಳೆಬಾಗಿಲು', 'ಪಾಪನಾಶಿನಿ' ಕವನಸಂಕಲನಗಳ ಕವಿಯತ್ರಿ ಕನಕ ಹಾ.ಮ., ಜಾವೇದ್ ಆಖ್ತರ್ ಅವರ ಪ್ರಥಮ ಕವನ ಸಂಕಲನ 'ತರ್ಕಶ್'ನ್ನು (ಬತ್ತಳಿಕೆ) ಉರ್ದುವಿನಿಂದ ಕನ್ನಡಕ್ಕೆ ತಂದಿದ್ದಾರೆ.  ಜಾವೇದ್ ಅಖ್ತರ್, 'ಶೋಲೆ', 'ದೀವಾರ್'ಗಳ ಚಲನಚಿತ್ರ ಲೇಖಕರಾಗಿ, 'ಲಗಾನ್', 'ದಿಲ್ ಚಾಹ್ತಾ ಹೈ'ಗಳ ಚಿತ್ರಗೀತಕಾರರಾಗಿ ಜನಪ್ರಿಯರಾಗಿರುವ ಕವಿ.  ಈ ಸಂಕಲನದಲ್ಲಿರುವ 'ನನ್ನ ಬಗ್ಗೆ' ಎಂಬ ಚಿಕಣಿ ಆತ್ಮಕತೆಯಲ್ಲಿ ಜಾವೇದ್ ಅಖ್ತರ್, ತನ್ನ ಗ್ವಾಲಿಯರ್, ಲಖನೌ, ಅಲೀಗಢ, ಭೋಪಾಲ್, ಮುಂಬೈ ನೆನಪುಗಳ ಬಗ್ಗೆ ಹಾಗೂ ಬಾಲ್ಯ, ಯೌವನ, ದಾಂಪತ್ಯ ವಿಚ್ಛೇದನ, ಮರುಮದುವೆಗಳ ಕುರಿತು ಬರೆದಿದ್ದಾರೆ.

 'ಬತ್ತಳಿಕೆ'ಯಲ್ಲಿ ಮೂಲ ಉರ್ದು ಕವನ ಹಾಗೂ ಕನ್ನಡ ಅನುವಾದವನ್ನು ಎದುರು-ಬದುರಾಗಿ ಮುದ್ರಿಸಲಾಗಿದೆ.  ಕವಿ ಜಾವೇದ್ ಅಖ್ತರ್ ಅವರಿಗೆ ಬಾಲ್ಯದ ನೆನಪುಗಳಿಂದ ಬಿಡುಗಡೆ ಇಲ್ಲ.  ಬಾಲ್ಯ ಕಾಲ ಸ್ಮೃತಿ ಅವರ ಅನೇಕ ಕವನಗಳ ವಸ್ತುವಾಗಿದೆ.  'ಹಸಿವು', 'ಆ ಕೋಣೆ ನೆನಪಾಗುತ್ತದೆ', 'ಅಲೆಮಾರಿ' - ಈ ಕವನಗಳು ಸಮೃದ್ಧ ನೆನಪುಗಳಿಂದ ತುಂಬಿವೆ; ಆದರೆ ವಾಚಾಳಿತನದಿಂದ ಸೊರಗಿವೆ.

 ಕೋಮು ಗಲಭೆಗಳಿಂದ ತತ್ತರಿಸಿದ ಮಹಾನಗರವೊದರ ಮನಮಿಡಿಯುವ ಚಿತ್ರಣ 'ದಂಗೆಯ ಮೊದಲು' 'ದಂಗೆಯ ನಂತರ' ಕವನಗಳಲ್ಲಿವೆ.  ಹೆದರಿದ ಮಗುವಿನಂತೆ ತನ್ನ ನೆರಳಿಗೆ ತಾನೇ ಬೆಚ್ಚುತ್ತಿರುವ ನಗರವನ್ನು ಕುರಿತು ಕವಿ 'ಪಂಚಾಂಗ ನೋಡು, ಇಂದೇನೊ ಹಬ್ಬವಿರಬೇಕು' ಎನ್ನುತ್ತಾರೆ.  ಹಬ್ಬ ಬಂತೆಂದು ಹೆದರುವ ಅವಸ್ಥೆ ಭಯಾನಕವಾಗಿದೆ.  'ದಂಗೆಯ ಬಳಿಕ' ಮಹಾನಗರದಲ್ಲಿ ಗಾಢ ಮೌನ ತುಂಬಿದೆ.  ಆದರೆ, ಮೊದಲು ಇವರಿಗಾಗಿ ಅಳೋಣ, ಲೂಟಿ ಮಾಡಲು ಬಂದು ತಾವೇ ಲೂಟಿಯಾದರಲ್ಲ, ಏನು ಲೂಟಿಯಾಯಿತು ಎಂಬ ಅರಿವೂ ಇಲ್ಲ.  ಅವರಿಗೆ ಮಂದದೃಷ್ಟಿ, ಶತಶತಮಾನಗಳ ಸಂಸ್ಕೃತಿ ಆ ಬಡಪಾಯಿಗಳಿಗೆ ಕಾಣಲೇ ಇಲ್ಲ ಎನ್ನುತ್ತಾರೆ ಕವಿ.

 'ಈ ಜಗತ್ತು ಒಳಗೆ ಯಾಕಿಷ್ಟು ಕರಾಳ?' ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ.

 'ಗಜಲ್' ಪರ್ಷಿಯನ್ ಸಾಹಿತ್ಯದಿಂದ ಉರ್ದು ಕಾವ್ಯಕ್ಕೆ ಬಂದಿರುವ ಕಾವ್ಯಪ್ರಕಾರ.  ಗಜಲ್‍ಗೆ 'ನಲ್ಲೆಯೊಂದಿಗೆ ಸಂವಾದ', 'ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ' ಎಂಬ ಅರ್ಥಗಳಿವೆ.  ಐದರಿಂದ ಹನ್ನೊಂದು ದ್ವಿಪದಿ (ಶೇರ್)ಗಳಿರುವ ರಚನೆ - ಗಜಲ್.  ಗಜಲ್ ಕವಿ ರೂಪಕ ಸಂಕೇತಗಳ ಮೂಲಕ ವ್ಯಕ್ತಿನಿಷ್ಠ ಅನುಭವಗಳನ್ನು 'ಹಿಡಿದರೆ ಹಿಡಿತುಂಬ, ಬಿಟ್ಟರೆ ಜಗವೆಲ್ಲ' ಎಂಬಂತೆ ನಿರೂಪಿಸುತ್ತಾನೆ.  ಗಜಲ್ ಪ್ರಣಯ, ಅಧ್ಯಾತ್ಮ, ರಾಜಕೀಯ ವಿಡಂಬನೆ ಎಲ್ಲವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಂಡಿದೆ.  ಉರ್ದು ಕಾವ್ಯದ ಜನಕ ವಲಿ, ಇಕ್ಬಾಲ್, ಫಿರಾಕ್ ಗೋರಖ್ಪುರಿ, ಹಸನ್ ನಯೀಮ್ ಮತ್ತಿತರ ನೂರಾರು ಕವಿಗಳು ಗಜಲ್ನ್ನು ಸೃಜನಶೀಲವಾಗಿ ಬೆಳೆಸಿದ್ದಾರೆ.  ಹಸನ್ ನಯೀಮ್ 'ಗಜಲ್ ಅಕಾಡೆಮಿ'ಯನ್ನು ಸ್ಥಾಪಿಸಿದ್ದಾರೆ. ಗಜಲ್‍ಗಳಲ್ಲಿ
 ಜಾವೇದ್ ಅಖ್ತರ್ ಅವರ ಪ್ರತಿಭೆಯ ಮಿಂಚುಗಳಿವೆ.  "A poem begins in delight and ends in wisdom" (ರಾಬರ್ಟ್ ಫ್ರಾಸ್ಟ್) ಎನ್ನುವಂಥ ರಚನೆಗಳಿವು.

ಮಿಂಚುವ ದೇಹ, ದಟ್ಟ ಮುಡಿ, ಮಾಂತ್ರಿಕ ಕಣ್ಣು, ತುಟಿ ಗುಲಾಬೀ
ಅಮೃತಶಿಲೆ, ನೇರಳೆ ಮೋಡ, ಕೆಂಪು ದಿಗಂತ, ಹೆದರಿದ ಹರಿಣೀ'

 ಎಂದು ಆರಂಭವಾಗುವ ಗಜಲ್ ಮನಮೋಹಕವಾಗಿದೆ.  ಕಹಿ ಹೇಗಿಲ್ಲದಿದ್ದೀತು ನಮ್ಮ ಬದುಕಲ್ಲಿ, ಗತಿಸಿದ್ದು ಬದುಕಲ್ಲಿ ನಮಗೆ ನೆನಪಿದೆ ಎಲ್ಲ ಎನ್ನುತ್ತಾರೆ ಅಖ್ತರ್.

'ಉಸ್ ಚಿರಾಗೋ ಮೆ
ತೇಲ್ ಹಿ ಕಮ್ ಥಾ
ಕ್ಯೊಂ ಗಿಲಾ ಫಿರ್ ಹಮೇ
ಹವಾ ಸೇ ರಹೇ'

'ಹಣತೆಯಲ್ಲೇ ಎಣ್ಣೆ ಕಮ್ಮಿಯಿದೆ
ಸುಮ್ಮನೆ ದೂರುವುದೇಕೆ ಗಾಳಿಯನ್ನು'

- ಸಂಸ್ಕೃತಿ ರಕ್ಷಣೆಯ ಸಂವಾದದಲ್ಲಿ 'ಎಣ್ಣೆ ಹೊಯ್ಯಮ್ಮ ದೀಪಕ್ಕೆ'.ಎಂಬ ಸಾಲಿನೊಂದಿಗೆ ಈ ದ್ವಿಪದಿಯ ಆಶಯವನ್ನು ಕುರಿತೂ ಚಿಂತಿಸಬೇಕು.

ಕನಕ ಹಾ.ಮ. ಅವರ ಅನುವಾದದಲ್ಲಿ ಗಜಲ್‍ನ  ನರ್ತನದ ಬದಲು ನಡಿಗೆ ಕಾಣಿಸುತ್ತದೆ.  ಮುನ್ನುಡಿ ಬರೆದಿರುವ ಕವಿ ಜಯಂತ ಕಾಯ್ಕಿಣಿ ಅವರು ಇಲ್ಲಿನ ಗದ್ಯಗಂಧಿ ಶೈಲಿಯನ್ನು ಗುರುತಿಸಿದ್ದಾರೆ.

ಕಾವ್ಯವನ್ನು ಅನುವಾದಿಸುವ ಸಮಸ್ಯೆಗಳ ಅರಿವಿದ್ದರೂ ಅನುವಾದಿಸುವ ಹಂಬಲ, ನಮ್ಮ ಕವಿಗಳಲ್ಲಿ ಚಿರಂತನವಾಗಿದೆ.  'ಮನದ ಮುಂದಣ ಆಸೆಯೇ ಮಾಯೆ' ಎಂಬಂತೆ ಅನುವಾದಿಸುವ ಆಸೆ ಕವಿಗಳನ್ನು ಕಾಡುತ್ತದೆ.  ಸೋತು ಗೆಲ್ಲುವುದು, ಕಾವ್ಯಪುರುಷ ತೆಕ್ಕೆಗೆ ಒಗ್ಗಲಿಲ್ಲವೆಂದು ಅಳುವುದು ಅನುವಾದದ ಜಾಯಮಾನ.  'ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ'ಯಲ್ಲಿ ಅನುವಾದದ ಪವಾಡಗಳು ಸಾಧ್ಯವಾಗುತ್ತವೆ.

ಜಾವೇದ್ ಅಖ್ತರ್ ಅವರ 'ತರ್ಕಶ್' (ಬತ್ತಳಿಕೆ)ನಲ್ಲಿ ಕೋಮುದ್ವೇಷದ ಬಾಣಗಳ ಬದಲು, ವಾತ್ಸಲ್ಯ, ಪ್ರೀತಿಗಳ ಕುಸುಮಬಾಣಗಳಿವೆ.  ಅಖ್ತರ್ 'ಪುಷ್ಪಕವಿ' ಅಲ್ಲ, ಕಬೀರ್ ದಾಸನ ಸಂಸ್ಕಾರದ ಕಾಲದ ಪುಷ್ಪಪವಾಡ ಈಗಲೂ ನಿಜವಾಗಬಾರದೆ, ದಂಗೆಯ ಮೊದಲೇ ಶಾಂತಿಯ ಹೂಗಳು ಅರಳಬಾರದೆ ಎಂದು ತುದಿಗಾಲ ದಿಗಿಲಿನಿಂದ ಹಾರೈಸುವ ಕವಿ.

ಭಾಷಾಂತರ ಮೂಲಕ್ಕೆ ಪ್ರತಿಸ್ಪಸ್ಪರ್ಧಿಅಲ್ಲ, ಪರ್ಯಾಯಯವೂ ಅಲ್ಲ, ಅಪೂರ್ಣ.  ಯಾವ ಭಾಷಾಂತರವನ್ನೂ ಸಮರ್ಪಕವಾಗಿ ಮುಗಿಸುವುದು ಎಂಬುದಿಲ್ಲ ಎಂಬ ಎ.ಕೆ. ರಾಮಾನುಜನ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಕನಕಾಂಬರ ಹೂವಿನಂತಿರುವ ಈ 'ಬತ್ತಳಿಕೆ'ಯನ್ನು ಸ್ವಾಗತಿಸೋಣ.

ಮುರಳೀಧರ ಉಪಾಧ್ಯ ಹಿರಿಯಡಕ

(ಪುಸ್ತಕ ಸಮೀಕ್ಷೆ, ಉದಯವಾಣಿ, 22-3-2003)

ಬತ್ತಳಿಕೆ
(ಕವನಗಳು, ಗಜಲ್ಗಳು)
ಉರ್ದು ಮೂಲ: ಜಾವೇದ್ ಅಖ್ತರ್
ಕನ್ನಡಕ್ಕೆ - ಕನಕ ಹಾ.ಮ.
ಪ್ರ.: ಕರ್ನಾಟಕ ಸಂಘ
ಪುತ್ತೂರು-574202
ಮೊದಲ ಮುದ್ರಣ: 2003
ಬೆಲೆ ರೂ.150
BATTALIKE
[poems and gazals]
-Javed Aktar
translated from- urdu
by- kanaka. ha.. ma.
published by-
karnataka sangha,
puttur-574202
karnataka- india
first edition- 2003
rs- 2003

No comments:

Post a Comment