stat Counter



Sunday, September 23, 2018

ಎಚ್. ಎಸ್. ಶಿವಪ್ರಕಾಶ್ - ಮಗಳಿಗೆ ಪಾಠ

 
#_ಮಗಳಿಗೆ_ಪಾಠ_೧
--ಎಚ್. ಎಸ್. ಶಿವಪ್ರಕಾಶ್
ಬೇಕು ಬೇಡಗಳ ಆಟ ಆಡುವಾಗ
ಹುಷಾರು ಮಗಳೆ
ನನ್ನಂಥ ಅಪ್ಪಂದಿರು
ನಿಮ್ಮಮ್ಮನ ಥರಾ ಅಮ್ಮಂದಿರು
ಇನ್ನುಳಿದ ಅಣ್ಣ-ತಮ್ಮ, ಅಕ್ಕ-ತಂಗಿ
ಸುತ್ತು ಮುತ್ತಲ ಅಕ್ಕಪಕ್ಕದವರನ್ನೂ ಒಳಗೊಂಡು
ನಿನಗೆ ಎಲ್ಲರೂ ಕಲಿಸುತ್ತಾರೆ
ಈ ಖತರನಾಕ್ ಪಾಠವನ್ನು:
‘ಬೇಕೆನಿಸದ್ದನ್ನು ಬೇಡ ಅನ್ನು
ಬೇಡ ಅನಿಸಿದ್ದನ್ನು ಬೇಕು ಅನ್ನು
ಆಗ ಮಾತ್ರ ನೀನು ಪೂಜೆಗೆ ಲಾಯಕ್ಕು
ಪ್ರಾರ್ಥನೆಯ ವಸ್ತು
ಶಾಪಾನುಗ್ರಹ ಶಕ್ತಿಯೂ ನಿನ್ನ ಸುತ್ತ
ಹೊಡೆಯುತ್ತದೆ ಗಸ್ತು’
ಇದನ್ನು ನಂಬಬೇಡ
ಎಂದೆಂದಿಗೂ
ನಂಬಿದರೆ. ಬೇಕೆನಿಸಿದ್ದು
ಸೋಕುವುದೇ ಇಲ್ಲ ನಿನ್ನನ್ನು
ಬೇಡ ಅನಿಸಿದ್ದು ಬೇಡನ ಹಾಗೆ
ಬೇಟೆಯಾಡುತ್ತಿರುತ್ತದೆ ನಿನ್ನನ್ನು
ಆ ಸಾಚಾ ಸುಳ್ಳಿನ ಮುಳ್ಳು
ಸದಾ ಚುಚ್ಚುತ್ತಲೇ ಇರುತ್ತದೆ
ಆ ನೋವಿಂದ ಪಾರಾಗಲು
ನೀನೊಂದು ನೊಂದ ಜೀವಂತ ಶವವಾಗುತ್ತೀಯ
ಆ ಮೋಡವನ್ನು ಮುಟ್ಟಬೇಕು
ಈ ಚಿಟ್ಟೆ ಮುಂಗೈ ಮೇಲೆ ಕೂಡಬೇಕು
ಆ ಬಟ್ಟೆ ತೊಟ್ಟು ನಲಿದಾಡ ಬೇಕು
ಈ ನವಿಲುಗರಿಯನ್ನು ನೇವರಿಸಬೇಕು
ಇತ್ಯಾದಿ ಈ ಪೃಥ್ವಿ ಮಾತ್ರ ಕೊಡಬಲ್ಲ
ಸಣ್ಣಪುಟ್ಟ ಸುಖಗಳನ್ನೂ ಕಳೆದುಕೊಳ್ಳುತ್ತೀಯ
ಹುಷಾರು ಮಗಳೆ!
11 Comments
Shripad Bhat, Rajendra Prasad and 89 others
LikeShow more reactions
Comment
Comments

No comments:

Post a Comment