stat Counter



Showing posts with label ಮನೆ. Show all posts
Showing posts with label ಮನೆ. Show all posts

Friday, August 10, 2018

ಸುಬ್ರಾಯ ಚೊಕ್ಕಾಡಿ---ಮನೆ



Image may contain: 1 person, smiling









ಸುಬ್ರಾಯ ಚೊಕ್ಕಾಡಿ --- ಮನೆ




ನೀಟಾಗಿ ಕತ್ತರಿಸಿದ ಹೂಗಿಡಗಳ ನಡುವೆ
ಒಡ್ಡೋಲಗಸ್ಥ ಮಹಾರಾಜನ ಹಾಗೆ
ವಿರಾಜಮಾನವಾಗಿದೆ ಆ ಮನೆ.
ಶೆಡ್ಡಿನಲಿ ಮಲಗಿದ ಕಾರು,ಪಕ್ಕದಲೆ
ಆಳೆತ್ತರದ ಆಲ್ಸೇಶನ್ ನಾಯಿ-ಗೇಟಿನಲಿ
*ನಾಯಿಗಳಿವೆ ಎಚ್ಚರಿಕೆ* ಫಲಕ.
ಒಳ ಹೊಕ್ಕರೆ ಸ್ವಾಗತಿಸುವ ಭವ್ಯ ದಿವಾನಖಾನೆ
ಬೃಹದ್ಗಾತ್ರದ ಟಿ.ವಿ.ಮೂಲೆಗಳಲ್ಲಿ ಸೈನಿಕರಂತೆ ನಿಂತ
ಎತ್ತರದ ವಿಗ್ರಹಗಳು;ಹೂ ಕುಂಡಗಳು.
ಕುಳಿತರೆ ಪಾತಾಳಕ್ಕೆಸೆವ ಸೋಫಾಗಳು.ಅದರಾಚೆ
ಹೊಕ್ಕರೆ ಹೊರಡಲು ದಾರಿ ಸಿಗದಂತೆ ಹತ್ತಾರು
ಕೊಠಡಿಗಳು,ಮುಚ್ಚಿರುವ ಬಾಗಿಲುಗಳು,ತಿರುವುಗಳಲ್ಲಿ
ಮಾಯವಾಗುವ ಪುಟ್ಟ ಹಾದಿಗಳು.ಎಲ್ಲಿಂದಲೋ
ಕೇಳಿಸುವ ಹಾಡಿನ ತುಣುಕುಗಳು,ಅಹಹಾ!ಈ
ಮಯನರಮನೆ ತುಂಬ ವಿದೇಶೀ ಸೆಂಟಿನ ಘಮಲು.
ತಾಯಿ,ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು
ಅವರವರ ಕೋಣೆಗಳಲ್ಲಿ.ನಡುವೆ
ಸಂಪರ್ಕ ಆಗೀಗಮೊಬೈಲ್ ಗಳ ಮೂಲಕವೇ
ಇಳಿದನಿಯ ತುಂಡು ಮಾತುಗಳು.ಕಂಪ್ಯೂಟರಲ್ಲಿ
ಕೀಲಿಸಿದ ಕಣ್ಣುಗಳು.ಆಗೀಗೊಮ್ಮೆ ಆಚೀಚೆ
ಸರಿದಾಡುವ ನೆರಳುಗಳು;ಹೆಜ್ಜೆ ಸದ್ದುಗಳು.
ಇನ್ನೂ ಒಳಗೆ-ಅನಾಥ ಎಂಬಂತೆ
ತೆರೆದುಕೊಂಡೇ ಇರುವ ಡೈನಿಂಗ್ ಹಾಲ್ ,ಮೇಜಿನ ಮೇಲೆ
ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ
ವಿಧವಿಧದ ತಿಂಡಿ ತಿನಿಸುಗಳು;ಹಣ್ಣುಗಳು.ಯಾವಾಗ
ಯಾರು ಇಲ್ಲಿಗೆ ಬರುತ್ತಾರೆ;ಯಾವಾಗ
ಇವೆಲ್ಲ ಖಾಲಿಯಾಗುತ್ತವೆ-ಯಾರಿಗೂ ಗೊತ್ತಿಲ್ಲ.
ಒಮ್ಮೊಮ್ಮೆ ಕೇಳಿಸುವ ನಗುವಿನ ಸದ್ದು,ಗದರುವ ಸದ್ದು
ಪಿಸುದನಿಯ ಗೊಣಗಿನ ಸದ್ದು-ಸದ್ದಿನ ಆಚೆ
ಸದಾ ನೆಲೆ ನಿಂತಿರುವ ಗಾಢ ನಿಗೂಢ ಮೌನ.
ಹೊರಗೆ,
ಎಲೆಯುದುರಿಸಿದ ಮರದ ಕೊಂಬೆಯಲಿ
ಕುಳಿತ ಆ ಒಂಟಿ ಹಕ್ಕಿ ಉಲಿಯುತ್ತದೆ:
ಆಹ!ಎಷ್ಟು ಸುಂದರ!ಆಹ!
ಅಲ್ಲಿರುವುದು ಅಂಥ ಮನೆ,
ಇಲ್ಲಿರುವುದು ಸುಮ್ಮನೆ!
--ಸುಬ್ರಾಯ ಚೊಕ್ಕಾಡಿ

Monday, July 16, 2018

ಸುಬ್ರಾಯ ಚೊಕ್ಕಾಡಿ -- ಟಿ. ಜಿ. ರಾಘವರ ಕಾದಂಬರಿ

"ಮನೆ" ಟಿ.ಜಿ.ರಾಘವರ ಒಂದು ವಿಶಿಷ್ಟ ಕಾದಂಬರಿ. ಟಿ.ಜಿ.ರಾಘವರು ನವ್ಯ ಸಾಹಿತ್ಯ ಸಂದರ್ಭದ ಪ್ರಮುಖ ಲೇಖಕರಲ್ಲಿ ಒಬ್ಬರು.ಮೊದಲ ಸಂಕ್ರಮಣ ದ್ವೈಮಾಸಿಕದಲ್ಲಿ ಪ್ರಕಟವಾದ ಅವರ"ಶ್ರಾದ್ಧ"ಕತೆಯು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.1979 ರಲ್ಲಿ ಪ್ರಥಮ ಮುದ್ರಣ ಹಾಗೂ 1990 ರಲ್ಲಿ ದ್ವಿತೀಯ ಮುದ್ರಣ ಕಂಡ ಈ ಪುಟ್ಟ ಕಾದಂಬರಿಯ ಪ್ರಕಾಶಕರು "ಗೀತಾ ಬುಕ್ ಹೌಸ್, ಮೈಸೂರು " ರಾಘವರ ಇತರ ಪ್ರಕಟಿತ ಕೃತಿಗಳಲ್ಲಿ "ಜ್ವಾಲೆ ಆರಿತು"ಹಾಗೂ "ಸಂಬಂಧಗಳು "ಎನ್ನುವ ಕಥಾ ಸಂಕಲನಗಳು,"ವಿಕೃತಿ"ಎನ್ನುವ ಕಾದಂಬರಿ,ಮತ್ತು "ಪ್ರೇತಗಳು"ಎನ್ನುವ ನಾಟಕ ಮುಖ್ಯವಾದವುಗಳು.
"ಸಂತೆಯೊಳಗೊಂದು ಮನೆಯ ಮಾಡಿ,ಸದ್ದು ಗದ್ದಲಕೆ ಅಂಜಿದೊಡೆ ಎಂತಯ್ಯಾ "ಅನ್ನುವುದು ಅಕ್ಕನ ವಚನವೊಂದರ ಸಾಲು. ಈ ಸಾಲಿಗೆ ವಿಷಾದದ ಉದಾಹರಣೆಯಾಗಿ ಈ ಕಾದಂಬರಿಯ ಮುಖ್ಯ-ಆದರೆ ಅಮಾಯಕ-ಪಾತ್ರಗಳಾದ ರಾಜಣ್ಣ ಮತ್ತು ಗೀತಾ ,ನಗರದಲ್ಲಿ ಒಂದು ಪುಟ್ಟ ಮನೆಯು ನೆಮ್ಮದಿಯ ಹಾಗೂ ಖಾಸಗಿಯ ಬದುಕಿಗಾಗಿ ಬೇಕೆಂದು ಹಂಬಲಿಸಿದವರು.;ಅಂಥ ಕನಸು ಕಂಡವರು.ಆದರೆ ನಗರದ ಗದ್ದಲ,ಎಲ್ಲ ಖಾಸಗಿತನವನ್ನೂ ನುಂಗಿ ಹಾಕಿ,ಅದರ ಪಾವಿತ್ರ್ಯವನ್ನು ನಾಶಮಾಡಿ ನಿರ್ದಯವಾಗಿ ವರ್ತಿಸುವ ನಗರದ ಕ್ರೌರ್ಯ,ಖಾಸಗಿ ಬದುಕಿನೊಳಗೆ ಮೂಗುತೂರಿಸುವ ಜನ ಸಮುದಾಯದ ತಲೆಹರಟೆ...ಇವೆಲ್ಲವುಗಳ ನಡುವೆ ರಾಜಣ್ಣ ದಂಪತಿಗಳ ಮನೆಯನ್ನು ಹೊಂದುವ.ಹಾಗೂ ಆಮೇಲೆ ಮನೆಯನ್ನು ಹೇಗೋ ಹೊಂದಿದ ಮೇಲೆ ನೆಮ್ಮದಿಯಾಗಿ ಹಾಗೂ ಖಾಸಗಿಯಾಗಿ ಬದುಕುವ ಕನಸು ವಾಸ್ತವದ ಸುಡು ಬಿಸಿಯಲ್ಲಿ ಕರಗಿ ಹೋಗುವುದನ್ನು ಈ ಕಾದಂಬಲರಿಯು ಅನನ್ಯವಾಗಿ ಚಿತ್ರಿಸುತ್ತದೆ.ಮನೆ ಎನ್ನುವ ಸಂಸ್ಥೆಯ ಸುತ್ತ ನಿರ್ಮಿತವಾಗುವ ಮಧ್ಯಮವರ್ಗದ ಜೀವನದ ದುರಂತವನ್ನು ನಗರದ ಹಿನ್ನೆಲೆಯಲ್ಲಿಈ ಬಗೆಯ ನಿಷ್ಠುರತೆಯಲ್ಲಿ ಕಟ್ಟಿಕೊಟ್ಟ ಕೃತಿ ಇನ್ನೊಂದಿಲ್ಲವೆನ್ನಬಹುದು.ಮನುಷ್ಯನ ಖಾಸಗಿತನದ ಬದುಕು ಕಳೆದು ಹೋಗುತ್ತಿರುವ ನಮ್ಮ ಕಾಲದ ನೋವಿನ ಅನುಭವಕ್ಕೆ ಈ ಕೃತಿಯು ಕನ್ನಡಿ ಹಿಡಿದ ಹಾಗಿದೆ.
ಗಿರೀಶ ಕಾಸರವಳ್ಳಿಯವರ "ಮನೆ" ಸಿನೆಮಾವು ಈ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿದೆ.ಹಿಂದಿ ಹಾಗೂ ಕನ್ನಡ-ಈ ಎರಡೂ ಭಾಷೆಗಳಲ್ಲಿ ತಯಾರಾಗಿರುವ ಈ ಸಿನೆಮಾದಲ್ಲಿ ಖ್ಯಾತ ನಟ ನಟಿಯರಾದ ನಾಸಿರುದ್ದೀನ್ ಷಾ,ದೀಪ್ತಿ ನಾವಲ್,ರೋಹಿಣಿ ಹಟ್ಟಂಗಡಿ ಮೊದಲಾದವರು ಅಭಿನಯಿಸಿದ್ದು ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಪ್ರಶಸ್ತಿಯನ್ನು ಗಳಿಸಿರುತ್ತದೆ.
--ಸುಬ್ರಾಯ ಚೊಕ್ಕಾಡಿ.