stat Counter



Showing posts with label - MURALEEDHARA UPADHYA. Show all posts
Showing posts with label - MURALEEDHARA UPADHYA. Show all posts

Wednesday, August 12, 2020

ಶಾಂತಾರಾಮ ಸೋಮಯಾಜಿಯ ಮಣ್ಣಿನ ಬಳೆ ಮತ್ತು ಇತರ ಕತೆಗಳು.

ಶಾಂತಾರಾಮ ಸೋಮಯಾಜಿಯವರ ’ಕೆಂಪು ಹೂವು’ ಕಥಾಸಂಕಲನ ೧೯೭೨ರಲ್ಲು ಪ್ರಕಟವಾಯಿತು.೧೯೭೯ರಿಂದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂಜಿನಿಯರಿಂಗ್  ಪ್ರೊಫೆಸರ್ ಆಗಿ ನೆಲೆಸಿರುವ ಡಾ| ಸೋಮಯಾಜಿಯವರು ೧೯೯೧-೯೨ರ ಅವಧಿಯಲ್ಲಿ ಬರೆದಿರುವ ಕತೆಗಳು ’ಮಣ್ಣಿನ ಬಳೆ ಮತ್ತು ಇತರ ಕತೆಗಳು’ ಸಂಕಲನದಲ್ಲಿ ಪ್ರಕಟವಾಗಿವೆ. ಈ ಸಂಕಲನದಲ್ಲಿ ಸೋಮಯಾಜಿಯವರ ಸೃಜನಶೀಲ ಆರೋಹರಣಕ್ಕೆ ರುಜುವಾತು ನೀಡುವ ಹನ್ನೊಂದು ಕತೆಗಳಿವೆ. ’ಮಣ್ಣಿನ ಬಳೆ’ ಸೋಮಯಾಜಿಯವರ ಪ್ರಾತಿನಿಧಿಕ ಕತೆ. ಈ ಕತೆಯ ನಿರೂಪಕನ ಪತ್ನಿ ಕ್ಯಾನ್ಸರ್ ರೋಗಿಯಾಗಿ ಸಾವಿನ ದವಡೆಯಲ್ಲಿದ್ದಾಳೆ. ಅವಳ ಮಗ ರವಿ, ಕೌಟುಂಬಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದ ಅಸ್ವಸ್ಥ ಯುವಕ.ಅವನಿಗೆ ತನ್ನ ತಾಯಿಯ ಶವಸಂಸ್ಕಾರಕ್ಕಿಂತ ಗೆಳತಿಯೊಡನೆ ಮಜಾ ಮಾಡುವುದು ಮುಖ್ಯವಾಗುತ್ತದೆ. ಈ ಕತೆಯಲ್ಲಿ  ಬರುವ ರೋಪೀಟಾ ಎಂಬ ಜಲದೇವತೆ, ಕತೆಯ ನಿರೂಪಕ ತನ್ನ  ಸಂಕಟದಲ್ಲಿ ಕಾಣುವ ಕನಸುಗಳ ಸಂಕೇತ ಅಡಿಗರ ’ವರ್ಧಮಾನ’ ಕವನದಲ್ಲಿರುವ ತಂದೆಯಂತೆ ಈ ಕತೆಯ ನಾಯಕ ತನ್ನ ಮಗನ ವರ್ತನೆಯನ್ನು ಕಂದು ಕಂಗಾಲಾಗಿದ್ದಾನೆ.

’ಪಿಂಡೋಸೀಟ್’ ಮನುಷ್ಯನ ಸ್ವಾರ್ಥ ಮತ್ತು ವ್ಯವಸ್ಥೆಯ  ಕ್ರೌರ್ಯಗಳನ್ನು ಧ್ವನಿಸುವ ಕಥೆ. ಅಮಾನುಷವಾಗುತ್ತಿರುವ, ಯಾಂತ್ರಿಕವಾಗುತ್ತಿರುವ ಮನುಷ್ಯ ಸಂಬಂಧಗಳು ಕತೆಗಾರ ಸೋಮಯಾಜಿಯವರನ್ನು ಕಾಡುತ್ತವೆ.’ಅಸಹ್ಯವೆನ್ನು’ ಈ ಸಂಕಲನದ ಇನ್ನೊಂದು  ಒಳ್ಳೆಯ ಕತೆ. ’ಪವಾಡ ಮಾವಿನಮರ’ ಸ್ಥಳ ಪುರಾಣವೊಂದನ್ನು ಜನಪದ ನಂಬಿಕೆಗಳ ಅಧ್ಯಯನ ತಂತ್ರದಲ್ಲಿ ನಿರೂಪಿಸುವ ಕಥೆ.ಮಾಂತ್ರಿಕ ವಾಸ್ತವಿಕತೆ, ಫ್ಯಾಂಟಿಸಿ ಮತ್ತು ಜನಪದ ಕಥನ ತಂತ್ರಗಳನ್ನು ಇತ್ತೀಚೆಗೆ ಕೆಲವು ಕನ್ನಡ ಕತೆಗಾರರು ಬಳಸುತ್ತಿದ್ದಾರೆ. ಸೋಮಯಾಜಿಯವರು ಈ ಕಥನ ತಂತ್ರಗಳ ಪ್ರಯೋಗಗಳನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ’ನಾಟಕ’ ಎರಡು ಮುದ್ದು ಕಣ್ಣುಗಳು’ ’ಒಂದು ಹಂದಿಯ ಕತೆ’ ’ಖಾಲಿ ಲಕೋಟೆ’ ಕತೆಗಳಲ್ಲಿ ಕತೆಗರರು ಏನು ಹೇಳುತ್ತಿದ್ದಾರೆ  ಎನ್ನುವುದರಷ್ಟೆ ಹೇಗೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.

ಕತೆಗಾರ ಸೋಮಯಾಜಿಯವರು ಮುನ್ನುಡಿಯಲ್ಲಿ ತನ್ನ ಕತೆಗಳ ಧ್ವನಿಯನ್ನು ವಿವರಿಸಿದ್ದಾರೆ. ಅವರು ಬಳಸುವ ಸಂಕೇತ, ತಂತ್ರಗಳು ಸಂವಹನದ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ. ಜೀವನದ ಅರ್ಥಪೂರ್ಣ ಸನ್ನಿವೇಶಗಳ  ಮುಂಚುನೋಟ ನೀಡುವ ಸಣ್ಣಕತೆ ತನ್ನ ಧ್ವನಿ ಶಕ್ತಿಯಿಂದ ಜೀವನದ ಸಮಗ್ರ ನೋಟ ನೀಡುವುದು ಸಾಧ್ಯ ಎಂಬ ಕತೆಗಾರಿಕೆಯ ಪವಾಡ   ರಹಸ್ಯ ಸೋಮಯಾಜಿಯವರಿಗೆ ಗೊತ್ತು.  ಅಮೆರಿಕದಲ್ಲಿರುವ ಈ ಕನ್ನಡ ಕತೆಗಾರರಿಂದ ಅನಿವಾಸಿ ಭಾರತೀಯರ ಬದುಕನ್ನು ಚಿತ್ರಿಸುವ ಇನ್ನಷ್ಟು ಆಳ-ಎತ್ತರದ ಕತೆಗಳನ್ನು ನಾವು ನಿರೀಕ್ಷಿಸಬಹುದು.


ಮಣ್ಣಿನ ಬಳೆ ಮತ್ತು ಇತರ ಕತೆಗಳು
ಲೇ: ಶಾಂತಾರಾಮ್ ಸೋಮಯಾಜಿ
ಪ್ರ:ಲೋಹಿಯಾ ಪ್ರಕಾಶಾನ, ’ಕ್ಷಿತಿಜ’
ಕಪ್ಪಗಲ್ ರಸ್ತೆ, ಗಾಂಧೀನಗರ,
ಬಳ್ಳಾರಿ-೫೮೩೧೦೩.
ಮೊದಲ ಮುದ್ರಣ
ಮುರಳೀಧರ ಉಪಾಧ್ಯ, ಹಿರಿಯಡಕ

Muraleedhara Upadhya -- " ಕನಕನ ಕಿಂಡಿ " ಯಲ್ಲಿ ಡುಂಡಿಪನ್ { DUNDIPUN }

ಮುರಳೀಧರ ಉಪಾಧ್ಯ ಹಿರಿಯಡಕ- ಡಾ/ ವಿಶ್ವಾಸ ಅವರ ಸ್ಮೃತಿಪಥ

ಡಾ|| ಎಚ್. ಆರ್. ವಿಶ್ವಾಸ ಅವರ ಕನ್ನಡ - ಸಂಸ್ಕೃತ ಭಾಷಾಂತರಕಾರರಾಗಿ ಪ್ರಸಿದ್ದರಿ. ಎಸ್.ಎಲ್. ಭ್ಯರಪ್ಪನವರ  ಆವರಣ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಷಾಂತರ ಪ್ರಶಸ್ತಿ ಪಡೆದಿದ್ದರೆ. ವಿಶ್ವಾಸ ಅವರು ಕನ್ನಡದಿಂದ ಸಂಸ್ಕೃತಕ್ಕೆ ಭಷಾಂತರಿಸಿರುವ ಇನ್ನೊಂದು ಮಹತ್ತ್ವದ ಕೃತಿ - ಪವ೯. ’ ಅಪಶ್ಚಿಮಃ ಪಶ್ಚಿಮೇ ಮತ್ತು ಪಿಡಿದು ಸಂಸ್ಕೃತ ಸೂತ್ರವ..’ - ಇವು ವಿಶ್ವಾಸ ಅವರು ತನ್ನ ಅಮೇರಿಕ ಪ್ರವಾಸದ ಕುರಿತು ವರೆದಿರುವ ಪ್ರವಾಸಕಥನಗಳು. ಡಾ|| ವಿಶ್ವಸ ಅವರ ಅಂಕಣ ಬರಹಗಳ ಸಂಕಲನ - ಸಂಗತ. ಕೆಲವು ಲಲಿತ ಪ್ರಬಂದಗಳು, ಹಾಗೂ ಸೊಗಸಾದ ವ್ಯಕ್ತಿಚಿತ್ರಗಳು ಈ ಸಂಕಲನದಲ್ಲಿವೆ. ಪಿ.ಎಚ್.ಡಿ. ಸಂಪ್ರಬಂಧ ಬರೆಯಲು ಡಾ|| ವಿಶ್ವಸ ಅವರು ಆಯ್ಕೆ ಮಾಡಿಕೊಂಡ ವಿಷಯ - ಜಗ್ಗು ಶಿಂಗರಾಯ೯ನ ಕೃತಿಗಳು. ಡಾ|| ವಿಶ್ವಸ ಸಂಸ್ಕೃತಭಾರತಿಯ ಪೂಣಾ೯ವಧಿ ಕಾಯ೯ಕತ೯ರಾಗಿ ಈಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. 

ಸ್ಮೃತಿಪಥ ಪುಸ್ತಕದ ಬರವಣಿಗೆಯ ಹಿನ್ನೆಲೆಯನ್ನು ಡಾ|| ವಿಶ್ವಾಸ್  ಹೀಗೆ ವಿವರಿಸುತ್ತಾರೆ - ಎಂಟು ತಿಂಗಳ ಹಿಂದೆ (೧೯-೦೭-೨೦೧೩) ನಡೆದ ರಸ್ತೆ ಅಪಘಾತವೂಂದರಲ್ಲಿ ತೀವ್ರ ಜಜ೯ರಿತನಾಗಿ ಪವಾಡವನ್ನುವ ರೀತಿಯಲ್ಲಿ ಬದುಕಿಬಂದು, ವಿಶ್ರಾಂತಿಗೆಂದು ಲ್ಕಾರು ತಿಂಗಳು  ಮನೆಯಲ್ಲೇ ಅಲ್ಲಾಡದೆ ಪಟ್ಟಾಗಿ ಕುಳಿತಿದ್ದಾಗ ಬಿಡದೆ ಕಾಡಲು ತೊಡಗಿದವು ಹಳೆಯ ನೆನಪುಗಳು.ಅವುಗಳಿಗೆ ಅಕ್ಷರದ ರೂಪು ಕೊಡಲು ಪ್ರಯತ್ನಿಸಿದೆ. ಅದರ ಫಲವೇ ಈ ಸ್ಮ್ಕೃತಿಗಳು.’

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುತ್ತಿನಗದ್ದೆ ಗ್ರಾಮದ ಹುಲಿಯಾಳಿ ವಶ್ವಾಸರ ಹುಟ್ಟೂರು. ಮಲೆನಾಡ ಮಡಿಲಲ್ಲಿ ಎಂಬ ಅಧ್ಯಾಯದಲ್ಲಿ ಮಲೆನಾಡಿನ ಹಳ್ಳಿಗಳ ಆತ್ಮೀಯ ಸಮೀಪ ಚಿತ್ರಣ ಸಿಗುತ್ತದೆ. ಮಲೆನಾಡಿನ ಮಳೆಗಾಲ, ರೈತರ ಸುಖ - ಕಷ್ಟಗಳು, ಮಕ್ಕಳು ಯಕ್ಷಗಾನ ಮಂಡಳಿ, ಆಥಿ೯ಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸಕ್ಕೆ ಪಡುವ ಕಷ್ಟ - ಹೀಗೆ ವೈವಿಧ್ಯಪುಣ೯ ನೆನಪುಗಳು ಇಲ್ಲಿ ಅನಾವರಣಗೊಂಡಿವೆ. ಮಲೆನಾಡಿನ ಗ್ರಾಮೀಣ ಶಿಕ್ಷಣವ್ಯವಸ್ಥೆಯ ಒಂದು ಸ್ಥೂಲ ನೋಟ ಇಲ್ಲಿ ಸಿಗುತ್ತದೆ.

ಮಲೆನಾಡಿನ ಹಳ್ಲಿಗಳಲ್ಲಿ ರಾತ್ರಿ ಕಾಲ್ನಡಿಗೆ ಪ್ರಯಾಣಕ್ಕೆ ಬಳಸುವ ಒಂದು ರೀತಿಯ ಪಂಜಿನ ಹೊತ್ತೆ ಅಡಿಕೆ ಮರದ ಹಾಳೆ ಮತ್ತುದಬ್ಬೆಯಿಂದ ಇದನ್ನು ತಯಾರಿಸುತ್ತಾರೆ. ಈ ಹೊತ್ತೆ ಜಾನಪದ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಜಾನಪದ ನಿಘಂಟಿನಲ್ಲೂ ದಾಖಲಾಗಿಲ್ಲ. ಎತ್ತಿನ ಮೂಗಿನ ಹೂಳ್ಳೆಗಳಲ್ಲಿ ಸೇರಿಕೊಂಡ ಹೂಟ್ಟಿನ ಜಿಗಣೆಯನ್ನು ತೆಗೆಯುವ ಜನಪದ ವೈದ್ಯಕೀಯ ತಂತ್ರ ಕುತೂಹಲಕಾರಿಯಾಗಿದೆ.

ಮನೆಗೆ ನಡೆದುಕೊಂಡು ಹೋಗುವಾಗಲೇ ಕವಾ೯ಲೋ ಕಾದಂಬರಿಯ ಅಧ೯ಭಾಗ ಓದಿದ್ದು ವಿದ್ಯಾಥಿ೯ ಪುಸ್ತಕಪ್ರೀತಿಗೆ ಒಂದು ಪುಟ್ಟ ಉದಾಹರಣೆ. ಶ್ರೀ ವಿಶ್ವೇಶತೀಥ೯ಸ್ವಾಮೀಜಿಯವರ, ಸೋ.ತಿ. ನಾಗರಜ, ರಂಗನಾಥಶಮಾ೯, ಉಡುಪಿಯ ಎನ್. ಲಕ್ಷ್ಮೀನಾರಾಯಣ ಭಟ್ಟ - ಇಂಥ ಸಂಸ್ಕೃತವಿದ್ವಾಂಸರ, ಗೋಪಾಲಕೃಷ್ಣ ಅಡಿಗ, ಹಾ.ಮಾ. ನಾಯಕ, ಎಸ್,ಎಲ್. ಭೈರಪ್ಪನವರಂಥ ಸಾಹಿತಿಗಳ ಆತ್ಮೀಯ ವ್ಯಕ್ತಿಚಿತ್ರಗಳು ಈ ಹೊತ್ತಗೆಯಲ್ಲಿವೆ. ಸೋ.ತಿ. ನಾಗರಾಜರ ವ್ಯಕ್ತಿಚಿತ್ರ ಎಷ್ಟು ಚೆನ್ನಾಗಿದೆ ಎಂದರೆ ತರೀಕೆರೆ ತಾಲೂಕಿನ ಸೋಮಪುರಕ್ಕೆ ಹೋಗಿ ಅವರನ್ನು ಭೇಟಿಯಾಬೇಕೆಂದು ನನಗೆ ಆಸೆಯಾಗಿದೆ. 

ಶಿಂಗರಾಯ೯ ಒಬ್ಬ ಅಲಕ್ಷಿತ ಲೇಖಕನಾಗಿರುವುದರಿಂದ ಡಾ. ವಿಶ್ವಾಸರು ಶಿಂಗರಾಯ೯ನನ್ನು ಕುರಿತುತನ್ನ ಪಿ.ಎಚ್.ಡಿ. ಅದ್ಯತನದ ಬಗ್ಗೆ ವಿವರವಾಗಿ ಬರೆದಿದ್ದರೆ ಚೆನ್ನಾಗಿತ್ತು. ವಿಶ್ವಾಸರು ಹಂಸಕ್ಷೀರ ನ್ಯಾಯದಂತೆ ತನ್ನ ಜೀವನದ ಕಹಿನೆನಪುಗಳನ್ನು ನುಂಗಿಕೂಂಡು ಸಿಹಿ ಅನುಭವಗಖನ್ನು ಕುರಿತು ಮಾತ್ರ ಬರೆದಿದ್ದಾರೆ.

ಸಂಸ್ಕೃತವಿದ್ವಾಂಸರ ಸಂಸ್ಕೃತಭೂಯಿಷ್ಠವಾಗಿ ಬರೆಯದೆ, ಕನ್ನಡಕ್ಕೆ ಹತ್ತಿರವಾದ ಶೈಲಿಯಲ್ಲಿ ಹೇಗೆ ಬರೆಯಬಹುದೆಂಬುದಕ್ಕೆ ಬನ್ನಂಜೆ ಗೋವಿಂದಾಚಾಯ೯ರ ಕನ್ನಡ ಗದ್ಯ ಒಳ್ಳೆಯ ಮಾದರಿ. ಡಾ|| ಎಚ್.ಆರ್. ವಿಶ್ವಾಸ ಅವರ ಸಂಸ್ಕೃತ ಘಾಟನ್ನು ದುರವಿಟ್ಟು, ಕನ್ನಡದಲ್ಲಿ ಬರೆಯುತ್ತಿರುವುದು ಸಂತಸದ ಸಂಗತಿ. ಅವರ ಶೈಲಿ ಕಮ೯ಣಿಸರದೂಳ್ ಚೆಂಬವಳಮಂ ಕೋ"ದಂತಿದೆ. ಡಾ|| ವಿಶ್ವಾಸರ ಬಾಲ್ಯ, ಯೌವನಗಳ ಸುಸಂಸ್ಕೃತ ಅಭಿರುಚಿಗಳ ಸಮೃದ್ದ ನೆನಪುಗಳಿಂದ ಇಡಿಕಿರೊದಿರುವ ಈ ಹೂತ್ತೆಗೆ ಕಾದಂಬರಿಯ ಅದ್ಯಾಯಗಳಂತೆ, ಲಲಿತ ಪ್ರಬಂಧಗಳಂತೆ, ವ್ಯಕ್ತಿಚಿತ್ರಗಳಂತೆ ಸಲೀಸಾಗಿ ಓದಿಸಕೊಂಡು ಹೋಗುತ್ತದೆ.  ನೆನಪಿನ ದೋಣಿಯಲ್ಲಿ ವಿಹರಿಸಿದ ಡಾ|| ವಿಶ್ವಾಸರಿಗೆ ಅಭಿನಂನೆಗಳು.

         ----ಮುರಳೀಧರ ಉಪಾಧ್ಯ ಹಿರಿಯಡಕ 

 

ಮುರಳೀಧರ ಉಪಾಧ್ಯ ಹಿರಿಯಡಕ -- ರಾಧಾಕೃಷ್ಣ ಕಲ್ಚಾರ್ ಅವರ ಕೂಡುಮನೆ { ಕಾದಂಬರಿ }

ರಾಧಾಕೃಷ್ಣ ಕಲ್ಚಾರ್ ಒಬ್ಬ ಕಸುಗಾಯಿ ಕವಿ. ಕತೆಗಾರ, ಪತ್ರಿಕಾಕತ೯ ಎಂಬುದನ್ನು ನಾನು ಗಮನಿಸಿದ್ದೇನೆ. ಒಂದು ಪ್ರಸಿದ್ದ ಜನಪ್ರಿಯ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಈ ಜವ್ವನಿಗ ಕಾಲೇಜೊಂದರಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿದಾಗ ಪತ್ರಿಕಾರಂಗಕ್ಕೆ ವಿದಾಯ ಹೇಳಿದರು. ಈನಿಧಾ೯ರ, ಪ್ರಚಾರವನ್ನು ಇಷ್ಟಪಡದ. ಜನಪ್ರಿಯತೆಯ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ ಅವರ ಅಂತಮು೯ಖಿ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ಮುನ್ನುಡಿಕಾರನಾಗಿ ಒಂದೆರೆಡು ಪ್ರಸಂಗಗಳಲ್ಲಿ ನನಗೆ ಕಹಿ ಅನುಭವವಾದದ್ದುಂಟು, ದಮ್ಮಯ್ಯ ಹಾಕಿ ನನ್ನಿಂದ ಮುನ್ನುಡಿ ಪಡೆದ ಲೇಖಕರು ಅದನ್ನು ಪ್ರಕಟಿಸುವಾಗ ಕತ್ತರಿ ಪ್ರಯೋಗ ಮಾಡಿ ಪ್ರಕಟಿಸಿದ್ದರು! ರಾಧಾಕೃಷ್ಣ ಕಲ್ಚಾರ್ ಅವರ ಕೂಡುಮನೆ ಕಾದಂಬರಿ ಸ್ಪಧೆ೯ಯಲ್ಲಿ ಬಹುಮಾನ ಪಡೆದಿದೆ ಎಂಬ ಸುದ್ದಿ ಓದಿದಾಗ ಸಂತೋಷ ಪಟ್ಟ ನನಗೆ, ಈಕಾದಂಬರಿಗೆ ಮುನ್ನಡಿ ಬರೆಯಬೇಕೆಂಬ ವಿನಂತಿಯನ್ನು ನಿರಾಕರಿಸುವುದು ಸಾದ್ಯವಾಗಲಿಲ್ಲ. ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು ಎಂಬ ಕವಿವಾಣಿಯನ್ನು ನೆನಪಿಸಿಕೊಂಡು ಒಪ್ಪಿದ್ದೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸಿನ ಗ್ರಾಮೀಣ ಪರಿಸರದ ಅಡಿಕೆ ತೋಟದ ಬ್ರಾಹ್ಮಣ ಕುಟುಂಬವೊದರ ಕತೆ ಕಲ್ಚಾರರ ಕೂಡುಮನೆ ಯಲ್ಲಿದೆ. ಶಂಭಟ್ಟರ ಕೂಡುಮನೆ ಒಡೆಯುವುದು, ಅವರ ಮೊಮ್ಮಗನ ಕಾಲದಲ್ಲಿ ಮತ್ತೊಮ್ಮೆ ಕೂಡುಮನೆಯಾಗುವುದು ಈ ಕಾದಂಬರಿಯ ವಸ್ತು. ದುಡ್ಡಿನ ಲೆಕ್ಕಾಚಾರಕ್ಕೆ ಸಂಬಂಧಿಸಿ ಅಣ್ಣ-ತಮ್ಮಂದಿರಾದ ನಾರಾಯಣ - ಶಂಕರರಲ್ಲಿ ಉಂಟಗುವ ಮನಸ್ತಾಪವೇ ಕೂಡುಮನೆ ಒಡೆಯಲು ಕಾರಾಣವಾಗುತ್ತದೆ. ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಪದವೀರನಾಗಿ ಮಹಾನಗರದ ಆಕಷ೯ಣೆಗಳಿಗೆ ಸಿಲುಕದೆ ಹಳ್ಲಿಗೆ ಹಿಂದಿರುಗುವ ಶ್ರೀಧರನ (ಶಂಭಟ್ಟರ ಮೊಮ್ಮಗ) ಕಣ್ಣೆದುರಿನಲ್ಲಿಯೇ ಕೂಡುಮನೆ ಪಾಲಾಗುತ್ತದೆ. ಮುಂದೆ ಕೂಡುಮನೆ ಹಿಸೆಯಾಗಲು ಕಾರಣನಾದ ನಾರಾಯಣ (ಶ್ರೀಧರನ ತಂದೆ) ಪಶ್ಚಾತ್ತಾಪ ಪಡುತ್ತಾನೆ. 

''ಮನೆ ಮಂದಿಯ ಸಂಬಂಧ ಗಾಢವಾಗಿ ಉಳಿದಿದೆಯೇ?ಅಥವಾ ಅದೂ ಬದಲಾಗಿದೆಯೇ? ಅಮ್ಮ. ಅಪ್ಪ, ಅಣ್ಣ, ತಂಗಿ ಇತ್ಯಾದಿ ಸಂಬಂಧಗಳೂ ಬದಲಾಗುತ್ತಿವೆಯೇ? ಈ ಪ್ರಶ್ನೆಗಳು ಶಂಭತ್ತರಿಗೆ ಬಿಡಿಸಲಾಗದ ಒಗಟುಗಳಾಗುತ್ತವೆ. ಮನುಷ್ಯ ಸಂಬಂಧಗಳನ್ನು ಕುರಿತ ನಿಗೂಢ ಒಗಟುಗಳನ್ನು ಬಿಡಿಸುವುದರಲ್ಲಿ ಕಾದಂಬಂರಿಕಾರ ಕಲ್ಚಾರರಿಗೆ ಆಸಕ್ತಿ ಇದೆ.

ಅವಿಭಕ್ತ ಕುಟುಂಬವೂಂದು ತಿರುಗಿ ಒಡೆದ ಮೇಲೆ ತಿರುಗಿ ಕೂಡುಮನೆಯಾಗಬೇಕೆಂಬುದು ಒಂದು ಅಸಾಧ್ಯ ಆದಶ೯ವಲ್ಲವೇ? ಈ ಪ್ರಶ್ನೆ ಕಾದಂಬರಿಕಾರನನ್ನು ಕಾಡಿದೆ. ಈಗ ಮತ್ತೆ ಒಟ್ಟಾಗುವುದು ಹೇಳಿದಷ್ಟು ಸುಲಭವೇ? ಎಂದು ಶ್ರೀಧರನ ಚಿಕ್ಕಪ್ಪ ರಾಜಾರಾಮ ಪ್ರಶ್ನಿಸುತ್ತಾನೆ. ಕೂಡುಮನೆ ಭಗ್ನಗೂಳ್ಳದ ಸ್ಥಾವರವಾಗಿ ಉಳಿಯಲು ಸಾಧ್ಯವೇ? ಈ ಕಾದಂಬರಿಯ ಕೂನೆಯ ಸಾಲುಗಳು ಹೀಗಿವೆ- "ಅಂತೂ ಅಜ್ಜನ ಆಸೆ ಈಡೇರುವ ಲಕ್ಷಣ ಕಾಣುತ್ತದೆ. ಇನ್ನು ನನ್ನ ಮಕ್ಕಳೋ, ರಾಮನೋ ಪಾಲು ಕೇಳುವವರೆಗೆ ಹೀಗೇ ನಡೆದೀತಿ. ಆಮೇಲೆ ಮತ್ತೂಮ್ಮೆ ಪಾಲಿಗೆ ಜಗಳ" ಎನ್ನುತ್ತ ಶೀಧರನೂ ನಕ್ಕ". 

ಕೂಡುಮನೆಯವರು ಮತ್ತು ಅವರ ನೆರೆಹೂರೆಯ ಸ್ವಜಾತಿ ಬಾಂಧವರಲ್ಲದೆ ಅನ್ಯಜಾತಿಯವರಾರೂ ಇಲ್ಲಿ ಕಾಣಿಸುವುದಿಲ್ಲ. ಹೀಗೆ ಸ್ವಜಾತಿಯ ದ್ವೀಪದಲ್ಲಿ  ಬದುಕುವುದು ಈ ಕಾಲದಲ್ಲಿ ಸಾದ್ಯವೇ/ ಇದು ಲೇಖಕರ ಅಖಂಡ ದೃಷ್ಟಿಗೆ ಸಂಬಂಧಿಸಿದ ಪ್ರಶ್ನೆಯೂ . ಕೂಡು ಮನೆ ಯಲ್ಲಿ ನಾವು ಚಿಂತಿಸುವಂತೆ ಮಾಡುವ ಇನ್ನೂಂದು ಚಿಕ್ಕ ಪಾತ್ರ_ಶ್ರೀಹರಿ. ಈತನ ಅಂತರ್ ಜಾತೀಯ ವಿವಾಹದಿಂದಾಗಿ ಇವನ ತಂದೆ ನಾರಾಯಣನಿಗೆ ಮಾನಸಿಕ ಆಘಾತವಾಗುತ್ತದೆ. ಶ್ರೀಧರನ ಕೂಡುಮನೆಯಲ್ಲಿ ಶ್ರೀಹರಿ ದಂಪತಿಗಳಿಗೆ ಸ್ವಾಗತವಿದೆಯೇ? ಕಾದಂಬರಿಕಾರರ ನಿಲುವು ಅಸ್ಪಷ್ಟವಾಗಿದೆ. 

ಕಾರಂತರ ಬೆಟ್ಟದ ಜೀವದ ಗೋಪಾಲಯ್ಯ ಅಂತರ್ ಜಾತೀಯ ವಿವಾಹ ಮಾಡಿಕೂಂಡ ತನ್ನ ಮಗನನ್ನು ಒಪ್ಪಿಕೂಳ್ಳುತ್ತಾನೆ. ಆದರೆ ಕೂಡುಮನೆ ಯ ನಾರಾಯಣನಿಗೆ ಇದು ಸಾಧ್ಯಾವಾಗುದಿಲ್ಲ.

ಅಡಿಕೆತೋಟಗಳಲ್ಲಿ ವಾಸಿಸುವ ದಕ್ಷಿಣ ಕನ್ನಡದ ಹವ್ಯಕ ಬಾಹ್ಮಣರ ಅವಿಭಕ್ತ ಕುಟುಂಬಗಳನ್ನು ಕುರಿತು ಸಮಾಜ ಶಾಸ್ತ್ರಜ್ನರೂಬ್ಬರು ಬರೆದ ಸಂಶೋಧನ ಪ್ರಬಂಧವೂಂದನ್ನುನಾನು ಇತ್ತೀಚೆಗೆ ಓದಿದೆ. ಸಂಶೋಧಕ ಮಾಕ್೯ ವಿಕ್ಟರ್ ಹೇಳುವಂತೆ, ಬೇರೆ ಆಗುವ ಸ್ಥಿತಿಯಲ್ಲಿರುವ ಅಥವಾ ಹೆಸರಿಗೆ ಮಾತ್ರ ಒತ್ತಿಗೆ ಇದ್ದು ಅಸಂತೋಷ ವ್ಯಕ್ತಪಡಿಸುತ್ತಾ ಇರುವ ಸಯುಕ್ತ ಪರಿವಾರಗಳಲ್ಲಿ ವಿಷ ಹಾಕಿರುವ ಬಗ್ಗೆ ಸಂದೇಹ ಪಡುವುದು ಹೆಚ್ಚು ಪ್ರಚಲಿತವಾಗಿದೆ. ನನ್ನ ಎರಡು ಮೂರು ವಷ೯ಗಳ ಅಧ್ಯಯನದಿಂದ ತಿಳಿದು ಬಂದಂತೆ ಓರಗಿತ್ತಿಯವರು ಒಬ್ಬರಿಗೂಬ್ಬರು ಸರಿ ಇಲ್ಲದಿದ್ದು ಯಾವಾಗಲೂ ಪರಸ್ಪರ ಮನಸ್ತಾಪದಿಂದ ಕೂಡಿದವರಾಗಿರುತ್ತಾರೆ. ಪ್ರತಿಯೊಬ್ಬಳೂ ಇನ್ನೂಬ್ಬಳಿ ತನ್ನ ಮಕ್ಕಳು ಅಥವಾ ಗಂಡನಿಗೆ ಗಾಕಿರುವರೆಂದು ಸಂದೇಹಿಸಿದ್ದಳು. ಈ ಸಂದೇಹ ಮಾನಸಿಕ ಉನ್ಮಾದದ ಮಟ್ಟಕ್ಕೆ ಹೋಗಿತ್ತು. (ಸಿರಿ- ಅಮೃತ ಸೋಮೇಶ್ವರ ಅಭಿನಂದನ ಗ್ರಂಥ (ಸಂ) ಡಾ|ಪುರುಷೋತ್ತಮ ಬಿಳಿಮಲೆ, ಎ.ವಿ. ನಾವಡ, ರಾಮಚಂದ್ರ ಉಚ್ಚಿಲ, ೧೯೯೫). ಅಡುಕೆತೋಟದ ನಡುವಿನ ಕೂಡುಮನೆ ಒಂದು ಸಂಕೀಣ೯ ಜಗತ್ತು. ಆದರೆ ರಾಧಾಕೃಷ್ನ ಕಲ್ಚಾರ್ ಅವರ ಕಾದಂಬರಿಯಲ್ಲಿ ಯಾವ ಹೆಣ್ಣು ಪಾತ್ರವೂ ಸರಿಯಾಗಿ ಬೆಳೆದಿಲ್ಲ. ಕಾದಂಬರಿಗೆ ಪ್ರಾದೇಶಿಕ ರಂಗು ನೀಡಲು ಲೇಖಕರು ಇನ್ನಷ್ಟು ಪ್ರಯತ್ನಿಸಬಹುದಿತ್ತು. 

"ಕೂಡುಮನೆ" ಓದುವಗ ನನಗೆ ಕಡೆಂಗೋಡ್ಲು ಶಂಕರ ಭಟ್ಟರ ಕಾದಂಬರಿ ಈ ಪೀಳಿಗೆಯ ನೆನಪಾಯಿತು. ಸ್ವಾತಂತ್ರ್ಯ ಹೋರಾಟದ ಸಂದಭ೯ದ ಕಾದಂಬರಿಯಲ್ಲಿ ರಾಜಕೀಯ ಭಿನ್ನಭಿಪ್ರಾಯಗಳ ಕಾರಣದಿಂದ ಒಂದು ಕುಟುಂಬ ಒಡೆಯುತ್ತದೆ. ಕೂಡುಮನೆಯ ನಾರಾಯಣ ಶಂಕರರಿಗೆ ಆಸ್ತಿಯ ರಾಜಕೀಯವೇ ಮುಖ್ಯವಾಗುತ್ತದೆ.

ವಧ೯ಮಾನದ ವರಾತದಲ್ಲಿರುವ ಕಾದಂಬರಿಕಾರ ರಾಧಾಕೃಷ್ನ ಕಲ್ಚಾರ್ ಅದೃಷ್ಟಶಾಲಿ. ಅವರ ಮೂದಲ ಕಾದಂಬರಿ ಕೂಡುಮನೆ ಹಸ್ತಪ್ರತಿಯ ರೂಪದಲ್ಲಿದ್ದಾಗಲೆ ಪ್ರಶಸ್ತಿ ಪಡೆದು ಈಗ ಪ್ರಕಟವಾಗುತ್ತಿದೆ. ಕೂಡುಮನೆ ಓದುವಾಗ ಮನೆಯೂಳಗೆ ಮನೆಯೂಡೇಯ ಇದ್ದಾನೂ ಇಲ್ಲವೂ ಎಂಬ ಗುಮಾನಿ ಮೂಡುವುದಿಲ್ಲ. ಈ ಕಾದಂಬರಿ ಸಹೃದಯರ, ವಿಮಶ೯ಕ ಗಮನ ಸೆಳೆಯಲಿ ಎಂದು ಹಾರೈಸುತ್ತೇನೆ. ಒಂದು ಹೆಜ್ಜೆ ಮುಂದೆ -ಇಷ್ಟು ಸಾಕು ನನಗೆ ಎಂದು ಗಾಂದೀಜಿ ಹೇಳುತ್ತಿದ್ದರು. ರಾಧಾಕೃಷ್ಣ ಕಲ್ಚಾರ್ ಅವರು ಕೋಡುಮನೆ ಯಲ್ಲಿ ಪುಟ್ತ-ದಿಟ್ಟ, ಹೆಜ್ಜೆಯಿಡುತ್ತಿದ್ದಾರೆ. ಅವರ ಪ್ರತಿಭೆ ಪೂಂಬಾಳೆಯಲ್ಲಿರುವ ಸಿಂಗಾರದಂತಿದೆ. ಈ ಸಿಂಗಾರದ ಹೂ ಬಂಗಾರ ಬಣ್ಣದ ಅಡಾಕೆಗೊನೆ ಯಾಗಿ ಮಾಗಲಿ ಎಂದು ಹಾರೈಸುತ್ತೇನೆ. 


                                                                                 ಮುರಳೀಧರ ಉಪಾಧ್ಯ ಹಿರಿಯಡಕ 

ಜಯರಾಮ ಕಾರಂತ - ವೈದೇಹಿ:ಜೀವನ ಮತ್ತು ಕೃತಿಗಳ ಸಮೂಹ ಶೋಧ { ಸಂ- ಮುರಳೀಧರ ಉಪಾಧ್ಯ ಹಿರಿಯಡಕ }

ವೈದೇಹಿ ಕವ್ಯನಾಮದ ಲೇಖಕಿ ಜಾನಕಿ ಶ್ರೀನಿವಾಸಮೂತಿ೯ ಅವರು ನವ್ಯೋತ್ತರ ಕಾಲದ ಸ್ತ್ರೀ ಅಸ್ಮಿತೆಯ ಸಮಥ೯ ಪ್ರತಿಪಾದಕಿ. ಆದೆರೆ ತಾನು ಸ್ತ್ರೀವಾದಿ ಸಾಹಿತಿ ಎಂದು ಬರಹಗಳಲ್ಲಾಗಲಿ ಭಾಷಣಗಳಲ್ಲಾಗಳಿ ಎಲ್ಲೂ ಹೇಳಿಕೂಳ್ಳಲು ಹೋಗದವರು. ಅವರ ಕತೆ. ಕವಿತೆಗಳಲ್ಲಿ ಪುರುಷ ಪಾರಮ್ಯಕ್ಕೆ ಸವಾಲೆಸೆಯುವ ಸಮಾಜ ವಿಮಶ೯ಕಿಯೊಬ್ಬಳ ಚಿಂತನಶೀಲತೆಯಿದೆ. ಜನಪದೂಯ/ದೇಸಿ/ಕಥನ ತಂತ್ರದ ಸಾಧ್ಯತೆಗಳನ್ನು ಕತೆ.ಕವಿತೆ,ಪ್ರಬಂಧಗಳಲ್ಲಿ ಅಚ್ಚರಿ ಹುಟ್ಟಿಸುವಷ್ಟು ಕಲಾತ್ಮಕವಾಗಿ ದುಡಿಸಿಕೊಂಡವರು ಅವರು. ಸಂಸಾರದೊಳಗಿನ ಕ್ರೌಯ೯ ಹಾಗೂ ದಾಂಪತ್ಯ ವಿಘಟನೆ ಕುರಿತ ವೃತ್ತಾಂತಗಳ ಮಂಡನೆಯ ಮೂಲಕ ಸಾಮಾಜಿಕ ಸ್ಥಿತ್ಯಂತರದ ಅನಿವಾಯ೯ ಸನ್ನಿವೇಶಗಳನ್ನೂ ಅದರೂಂದಿಗೆ ಸ್ಮಿತೆಗಾಗಿ ಹಪಹಪಿಸುವ ಹೆಣ್ಣುಜೀವಗಳ ಅಂತರಂಗದ ಪುಟಗಳನ್ನೂ ಸಹೃದಯ ಓದುಗರೆದುರು ತೆರೆದಿಟ್ಟಿ ಕತೆಗಾತಿ೯ಯಾಗಿ ವ್ಯದೇಹಿಯವರೊಗೆ ಎತ್ತರದ ಸ್ಥಾನವಿದೆ. ಅವರ ಕತೆಗಳು, ಕವನಸಂಕಲನಗಳು, ಪ್ರಬಂಧಗಳು, ಅನುವಾದಿತ ಲೇಖನಗಳ ಸಂಗ್ರಹಗಳು,ಹಾಗೂ ಸಂದಶ೯ನದ ಭಾಗಗಳನ್ನು ಕೂಡ ಇಲ್ಲಿ ಸಂಒಆದಕರು ಅಚ್ಚುಕಟ್ಟಾಗಿ ಕಲೆಹಾಕಿದ್ದಾರೆ.

1979 ರಿಂದ ಒಂಬತ್ತು ಕಥಾಸಂಕಲನಗಳು, ಮೂರು ಕವನಗಳು, ಒಂದು ಕಾದಂಬರಿ, ನಾಲ್ಕು ಜೀವನಚರಿತ್ರೆಗಳು, ಐದು ಅನುವಾದಿತ ಕೃತಿಗಳು, 13  ಮಕ್ಕಳ ನಾಟಕಗಳು, ವಿವಿದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳ ನಾಲ್ಕು ಸಂಕಲನಗಳನ್ನು ನೀಡಿರುವ ವೈದೇಹಿ ಅವರ ಈಅಕ್ಷರಯಾನ, ಕನ್ನಡದ ಸಿದ್ದಮಾದರಿಗಿಂತ ದೂರ ಸರಿದ ಲೇಖಕಿಯೂಬ್ಬಾಳು ವಸ್ತು ನಿವ೯ಹಣೆಯಲ್ಲಿ ತೋರಿದ ಪ್ರಯೋಗಶೀಲತೆಯನ್ನೂ, ಭಾಷೆಯ ಹಾಗೂ ನಿರೂಪಣೆಯ ಪ್ರಯೋಗದಲ್ಲಿನ ಅನನ್ಯತೆಯನ್ನೂ, ಬದುಕಿನ ಕಾಪ೯ಣ್ಯದ ನಡುವೆ ಸ್ವಂತ ಇರುವಿಕೆಯನ್ನು ಚೆಲುವುಗೊಳಿಸಿಕೊಳ್ಳಬೇಕಾದ ಸಾತ್ತ್ವಿಕ ಹಠವನ್ನೂ ಓದುಗರಿಗೆ ಮನದಟ್ಟು ಮಾಡಿಸುವಂಥದ್ದಾಗಿದೆ. ಬದುಕು ಚಂದವೆನಿಸಬೇಕಿದ್ದರೆ ಇಂಥ ಹಠ ಮಾತ್ರವಲ್ಲ ; ಎಲ್ಲದರಲ್ಲೂಹದ ಕಾಯ್ದುಕೊಳ್ಳಬೇಕು ಎಂಬ ನಿಲುವಿನ ಸಹಜ ಅಂತಃಕರಣಿಯಾದ ಈ ಲೇಖಕಿಯ ಬಗ್ಗೆ ಇಲ್ಲಿ ಕಲೆಹಾಕಲಾಗಿರುವ ಬರಹಗಳಿ, ಲೇಖಕಿಯ ಬಹುಮುಖಿಯಾದ ಸತ್ಯದ ಶೋಧವನ್ನು ಸೋಗಿಲ್ಲದೆ ನಡೆಸಿವೆ. ಇಲ್ಲಿನ ಲೇಖನಗಳ ಬಗ್ಗೆ , ಸ್ವತಃ ವಿಮಶ೯ಕರಾಗಿರುವ ಸಂಪಾದಕರು, ವೈದೇಹಿಯವರ ಕೃತಿಗಳನ್ನು ಕುರಿತು ಅವಮಶ೯ಕನ ಸುತ್ತಿ ಕಾಣಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಿರುವ ಮಾತು ಗಮನಿಸತಕ್ಕದ್ದಾಗಿದೆ. ಪುಸ್ತಕದ ಮೊದಲ ಪುಟಗಳಲ್ಲಿ ವೈದೇಹಿಯವರಿಗೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳೂ ಇವೆ. ಪುಟಮಿತಿಯ ಕಾರಣದಿಂದ ಇಲ್ಲಿ ಸೇರಿಲ್ಲದ 12 ಬರಹಗಳ ಪಟ್ಟಿಯೊಂದುನ್ನು ಸಂಪಾದಕರು ನೀಡಿದ್ದಾರೆ. ವೈದೇಹಿಯವರಂಥ ಸೂಕ್ಷ್ಮ-ಸತ್ತ್ವಯುತ ಬರಹಗಾತಿ೯ಯನ್ನು ಓದುವ ಬಗೆ ಹಾಗೂ ಅಥ೯ಮಾಡಿಕೊಳ್ಳುವ ಹಲವು ಬಗೆಗಳನ್ನು ಈ ಸಂಪುಟದ ಬರಹಗಳು ತೋರಿಸಿಕೊಟ್ಟಿವೆ. ಈ ಸಂಪುಟದ ರೂಪಣೆಯ ಹಿಂದಿರುವ ಸಂಪಾದಕರ ಶ್ರಮ ಹಾಗೂ ಶ್ರದ್ಧೆ ಶ್ಲಾಘನೀಯ.


                                                                                                          ಜಯರಾಮ ಕಾರಂತ 

ಸಂ:ಮುರುಳೀಧರ ಉಪಾಧ್ಯ ಹಿರಿಯಡಕ

ಪ್ರ:ಅಭಿನವ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040 ಮೊದಲ ಮುದ್ರಣ: 2018 ಬೆಲೆ:500 ರೂ.

Saturday, July 11, 2020

ಬನ್ನಂಜೆಯವರ ಲೇಖನಗಳು- ಮುರಳೀಧರ ಉಪಾಧ್ಯ ಹಿರಿಯಡಕ

ಬನ್ನಂಜೆಯವರು ಅನುವಾದಿಸಿದ ಬಾಣ ಭಟ್ಟರ ಕಾದಂಬರಿಗೆ ಮುನ್ನುಡಿ ಬರೆದ ಬೇಂದ್ರೆ, ಬನ್ನಂಜೆ ಗದ್ಯದ ಕುರಿತು, " ಇಲ್ಲಿ ಗದ್ಯವು ಚರ್ವಣಾನುಕೂಲವಾಗಿದೆ   ವಜ್ರದಂತಕ್ಕಾಗಿ ಹುಟ್ಟಿದ ಕಬ್ಬಿಣದ ಕಡಲೆ  ಇಲ್ಲಿಲ್ಲ. ಮಾತು ಕಬ್ಬಿನ ಗಣಿಕೆ. ಕಬ್ಬದ ತುಣುಕೆ" ಎಂದು ಕೊಂಡಾಡಿದ್ದಾರೆ. ನನ್ನ ಗುರು ಗಳಾಗಿದ್ದ ಪ್ರೋತಾಶಾ  ಬಲ್ಲಾಳರು ಬನ್ನಂಜೆಯವ ರನ್ನು ಕುರಿತು ನನ್ನ ಒಂದು ಲೇಖನದಲ್ಲಿ ಬೇಂದ್ರೆ ಬನ್ನಂಜೆ ಕುರಿತು ಆಡಿದ ಒಂದು  ಮಾತು ಬರೆದಿದ್ದಾರೆ-"ಬನ್ನಂಜೆ ಅಪೂರ್ವ  ವ್ಯಕ್ತಿ. ಆತನ ಮಹತ್ವ ಎಲ್ಲರಿಗೂ ತಿಳಿಯಬಾರದು. ಆತ ಒಟ್ಟು ಪೋಲಿ ಹುಡುಗನಂತೆ ಇರುತ್ತಾನಲ್ಲ ಅದೇ ನನಗೆ ಇಷ್ಟ", ಮಿತ್ರ ಡಿ.ಆರ್ .ನಾಗರಾಜ್ ರ. ಮಾತು ನೆನಪಾಗುತ್ತದೆ-"ನಾನು ಕನ್ನಡ ಎಂ.ಎ. ಕ್ಲಾಸಿಗೆ ಹೋಗಿ ಪಾಠ ಮಾಡುವಾಗ ಬನ್ನಂಜೆಯವರ  ಬಾಣ ಭಟ್ಟನ ಕಾದಂಬರಿಯ ಅಧ್ಯಾಯಗಳನ್ನು ಓದಿ ಹೇಳುತ್ತೇನೆ.

               ಬನ್ನಂಜೆಯವರ ಲೇಖನಗಳು ’ಬನ್ನಂಜೆ ಬರಹಗಳು ಸಂಪುಟ ೧, ೨, ೩ ರಲ್ಲಿ ಪ್ರಕಟವಾಗಿವೆ. ಬನ್ನಂಜೆಯವರು ’ಉದಯವಾಣಿಯಲ್ಲಿ ೨೫ ವರ್ಷ, ’ರಾಮಾನುಜ’ ಜಡಭರತ’ ಕಾವ್ಯನಾಮಗಳಲ್ಲಿ ೭೫೦ಕ್ಕಿಂತ ಹೆಚ್ಚು ಪುಸ್ತಕ ವಿಮರ್ಶೆಗಳನ್ನು ಬರೆದಿದ್ದಾರೆ. ಅವು ಪುಸ್ತಕರೂಪದಲ್ಲಿ ಪ್ರಕಟವಾಗಿಲ್ಲ, ಬನ್ನಂಜೆ ಯವರು ’ಉದಯವಾಣೆ’ ಯಲ್ಲಿ
"ಕಿಷ್ಕಿಂಧಾ ಕಾಂಡ" ದಲ್ಲಿ ಪಾ.ವೆಂ. ಆಚಾರ್ಯ ಹಾಸ್ಯ ಲೇಖನಗಳಲ್ಲಿರುವಂತೆ  ತೀಕ್ಣ ರಾಜಕೀಯ ವಿಡಂಬನೆ ಇದೆ. ’ಕಿಷ್ಕಿಂಧಾ ಕಾಂಡ’ ಪುಸ್ತಕ ರೂಪದಲ್ಲಿ ಪ್ರಕಟವಾಗಿಲ್ಲ.

ಪ್ರಕಟವಾಗಿರುವ, ಬನ್ನಂಜೆಯವರ ಲೇಖನ ಸಂಪುಟಗಳಲ್ಲಿ ಒಟ್ಟು ೭೫ ಲೇಖನಗಳಿವೆ. ಉಡುಪಿಯ ಕೊಡುಗೆ,  ಭಗವದ್ಗೀತೆ ದಾಸ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಆತ್ಮ ಕಥನ, ಕರಾವಳಿಯ ಕನ್ನಡ ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ- ಹೀಗೆ ವೈವಿಧ್ಯಪೂರ್ಣ ವಿಷಯಗಳನ್ನು ಕುರಿತು ಬನ್ನಂಜೆ ಬರೆದಿದ್ದಾರೆ.

    ಬನ್ನಂಜೆಯವರ ವೈಚಾರಿಕ ನೆಲೆಗಳು ಅವರ ಲೇಖನಗಳಲ್ಲಿ ಹೇಗೆ ಕಾಣಿಸುತ್ತವೆ  ಎನ್ನುವುದಕ್ಕೆ ಒಂದೆರಡು ಉದಾಹರಣೆಗಳು ಇಲ್ಲಿವೆ-

"ಬದುಕು ನನ್ನ ದೃಷ್ಟಿಯಲ್ಲಿ" ಎಂಬ ಲೇಖನದಲ್ಲಿ ಬನ್ನಂಜೆಯವರು "ಬದುಕು ಸಮಷ್ಟಿಗಾಗಿ ಇದೆ ಎನ್ನುವುದು ನಿಜ. ಆದರೆ ಅದಕ್ಕೆ ಸೃಷ್ಟಿಯ ವೈಯಕ್ತಿಕತೆಯ ಛಾವು ಇದೆ ಎನ್ನುವುದು ಅಷ್ಟು ನಿಜ ಪ್ರಾಚೀನರು ಹೇಳುತ್ತಾರೆ-ಬದುಕು ನಿಷ್ಕಾಮವಾಗಿರಬೇಕು, ನಿ:ಸ್ವಾರ್ಥವಾಗಿರಬೇಕು  ಇದು ಸಾಧ್ಯವೇ? ಆಸೆಯೆ ಇರದವನು ಬದುಕಿದ್ದಾನೆ ಎಂಬುದಕ್ಕಾದರೂ ಏನು ಸಾಕ್ಷಿ? ಕೊನೆಗೆ ಬದುಕುವಾಸೆಯಾದರೂ ಇರಬೇಕಲ್ಲ. ಮನುಷ್ಯನ ಬದುಕು ಎಂದರೆ ಬಯಕೆಗಳ ಸರಮಾಲೆ. ಮತ್ತೆ ನಿಷ್ಕಾಮ ಕರ್ಮ’ ಎಂದರೇನು? ನಿಸ್ವಾರ್ಥ ಸೇವೆ ಎಂದರೇನು? ನಿಷ್ಕಾಮ ಎಂದರೆ ಕಾಮನೆಗಳ ತ್ಯಾಗ ಅಲ್ಲ, ವಿಸ್ತಾರ ಎಲ್ಲರಿಗೂ ಒಳಿತಾಗಲಿ ಎನ್ನುವುದು  ನಿಷ್ಕಾಮ  ನನಗೆ ನನ್ನ ಹೆಂಡತಿ ಮಕ್ಕಳಿಗೆ  ಮಾತ್ರ ಎನ್ನುವುದು ಸಕಾಮ.ನನಗೆ ಸಂಪತ್ತು, ಮನೆಮಾತು, ಕಾರು ಬೇಕೆನ್ನುವುದೂ ತಪ್ಪಲ್ಲ . ನನಗೆ ಮಾತ್ರ ಬೇಕೆನ್ನುವುದು ತಪ್ಪು. ಅದು ಸ್ವಾರ್ಥ’  

ಭವಭೂತಿ ಸಾರ್ಥಕ ಬದುಕಿಗೆ ನೀಡಿದ ಸೂತ್ರ ಬನ್ನಂಜೆಯವರಿಗೆ ಇಷ್ಟ-’ಅದ್ವೈತಂ ಸುಖ ದು:ಖಯೋ; ’ "ಸುಖದಲ್ಲು ದು:ಖದಲ್ಲು , ಸಿರಿತನದಲ್ಲು ಬಡತನದಲ್ಲು ಹೊಂದಿ ಬಾಳುವ ಸಾಮರಸ್ಯ."

’ಆಯಿತೇ  ಅರುವತ್ತು’ ಎಂಬ ಲೇಖನದಲ್ಲಿ ಬನ್ನಂಜೆ ನನಗೆ "ಅಶಾಂತಿ ಇಲ್ಲವಲ್ಲ. ಅರುವತ್ತರ ಶಾಂತಿ ಯಾಕೆ?" ಎಂದು ಪ್ರಶ್ನಿಸುತ್ತ ಹೀಗೆ ಬರೆದಿದ್ದಾರೆ-"ಪ್ರಾಯ: ಅಶಾಂತಿಯೇ ಮುಪ್ಪಿನ ಮೂಲ ದ್ರವ್ಯ ದೇಹದ ವಯಸ್ಸು ನನಗೆ ಮುಖ್ಯವಲ್ಲ. ಮಾನಸಿಕವಾಗಿ ನನಗೆ ಮುಪ್ಪು ಬರಲಿಲ್ಲ. ನಾನಿನ್ನೂ ಯುವಕ. ನನ್ನ ಜೀವನದುದ್ದಕ್ಕೂ ನನ್ನ  ಸಂಗಾತಿಗಳಾಗಿ  ನನ್ನನ್ನು ಶಾಂತಿ ಪರ್ವದತ್ತ  ಒಯ್ದಂಥವು ನನ್ನ ಪುಸ್ತಕಗಳು. ಮುಖ್ಯವಾಗಿ ಉಪನಿಷತ್ತುಗಳು ಮತ್ತು ಮಹಾಭಾರತ. ನನ್ನ ಸಂಸಾರದ  ಮಂದಿ ನನ್ನನ್ನು ಮುಪ್ಪಿನತ್ತ ಎಳೆದರೆ, ಇವು ನನ್ನನ್ನು ಅನಂತ    ಯೌವನದತ್ತ  ಎಳೆಯುತ್ತಿವೆ. ಇದು ನನ್ನನೇ ತಪ್ಪಿರಬಹುದು. ನಾನು ಮನೆಯಲ್ಲಿ ಅತಿಥಿಯಂತೆ ಬದುಕಿದೆ. ನಾನು  ಅವರ ಮುಂದೆ ನನ್ನ ಎದೆಯನ್ನು ಬಿಟ್ಟಿಕೊಳ್ಳಲ್ಲಿಲ್ಲ. ನನ್ನ  ಒಳವನಿ ಅವರಿಗೆ ಕೇಳಿಸದಿರಲಿ ಎಂದು ನನ್ನೊಗಳಿಗೆ ನೋವು ಅವರನು ಕಂಗೆಡಿಸದಿರಲಿ ಎಂದು."
’ಧರ್ಮ ಮತ್ತು ಮುಖವಾಡ’ ಎಂಬ ಲೇಖನದಲ್ಲಿ ಬನ್ನಂಜೆಯವರು "ಧರ್ಮ’ ಎಂದರೆ ಸದ್ ಭಾವ ಮತ್ತು ಪ್ರಾಮಾಣಿಕತೆ ಎಂಬ ಮೂಲವ್ಯಾಖ್ಯೆಗೆ ನಾವು ಮತ್ತೆ ಮರಳಬೇಕು’ ಎನ್ನುತ್ತಾರೆ. ಅವರ ಪ್ರಕಾರ  ಎರಡು ವರ್ಗದ ಜನ ಬೆಳೆಯುತ್ತಿದ್ದಾರೆ. ಧಾರ್ಮಿಕತೆಯ ಸೋಗು ಹಾಕಿ, ಮುಖವಾಡದ ಬದುಕು ಬದುಕುತ್ತಿರುವ ’ ಧರ್ಮಧ್ವಜ’ ರದ್ದು ಒಂದು ವರ್ಗ ಇಂಥ ಅಪ್ರಾಮಾಣಿಕತೆಯೇ ಧರ್ಮದ ಮಾನದಂಡವಾದರೆ ನಮಗೆ ಈ ಧರ್ಮವೇ ಬೇಡ ಎನ್ನುವ ಕ್ರಾಂತಿವಾದಿಗಳದ್ದು ಇನ್ನೊಂದು ವರ್ಗ" ಮೊದಲ ವರ್ಗದ ಧರ್ಮ ಧ್ವಜರೇ ಎರಡನೆಯ ವರ್ಗದ ಹುಟ್ಟಿಗೆ ಕಾರಣಪುರುಷರು. ಧರ್ಮಕ್ಕೆ ನಿಜವಾದ ಅಪಾಯ ಇರುವುದು ’ಧರ್ಮ ಬೇಡ’ ಎನ್ನುವ ಕ್ರಾಂತಿ ವಾದಿಗಳಿಂದಲ್ಲ. ಧರ್ಮಧ್ವಜರಿಂದ ಮತ್ತು ಅದನ್ನು  ಸಮರ್ಥಿಸುವ ಧರ್ಮ ಸಂಸ್ಥೆಗಳಿಂದ  ಇದೇ ಧರ್ಮದ ದೊಡ್ಡ ದುರಂತ" ಎನ್ನುತ್ತಾರೆ ಬನ್ನಂಜೆ.

" ಧರ್ಮ ಶಾಸ್ತ್ರಗಳು, ಸ್ಮೃತಿ ಗ್ರಂಥಗಳು ಶಾಶ್ವತ  ಸತ್ಯಗಳಲ್ಲ" ಎಂಬ ಬನ್ನಂಜೆಯವರ ಮಾತನ್ನು ಗಮನಿಸಬೇಕು.-" ಧರ್ಮಶಾಸ್ತ್ರಗಳು, ಸ್ಮೃತಿ ಗ್ರಂಥಗಳು  ಶಾಶ್ವತ ಧರ್ಮದ ಚೌಕಟ್ಟಿ ನಲ್ಲಿ ಸಮಾಜ ಧರ್ಮವನ್ನು ಹೇಳುತ್ತೇವೆ. ಅವು ಆಯಾಕಾಲದ ಕಾನ್ ಸ್ಟಿಟ್ಯೂಶನ್ ಇದ್ದಂತೆ. ಆದ್ದರಿಂದಲೇ ಅವು  ಸಾರ್ವಜನಿಕ ಸತ್ಯಗಳಲ್ಲ, ಕಾಲ ಕಾಲಕ್ಕೆ ಧರ್ಮ ಶಾಸ್ತ್ರಗಳೂ ಬದಲಾಗಿವೆ. ಧರ್ಮಗಳೂ ಬದಲಾಗಿವೆ. ಧರ್ಮಶಾಸ್ತ್ರಗಳು, ಸ್ಮೃತಿ ಗ್ರಂಥಗಳು ಮನೆಯಿದ್ದಂತೆ. ನಮ್ಮ ರಕ್ಷಣೆಗೆಂದೇ ಇರುವಂಥವು.ಆದರೆ ಮನೆ  ಹಳತಾದಾಗ ಬದಲಾಯಿಸಬೇಕು. ಇಲ್ಲ, ನವೀಕರಣ ಮಾಡಬೇಕು. ತೀರ ಹಳತಾದಾಗ ಕೆಡವಿ ಹೊಸ ಮನೆ ಕಟ್ಟಬೇಕು. ಇಲ್ಲವಾದರೆ ರಕ್ಷೆಗಿದ್ದ ಮನೆಯೇ ತಲೆಯ ಮೇಲೆ ಕುಸಿದು ನಾಶಕ್ಕೆ ಕಾರಣವಾದೀತು."

"ಸೆಕ್ಸ್ ಮತ್ತು ಸಮಾಜ" ಎಂಬ ಲೇಖನದಲ್ಲಿ ಬನ್ನಂಜೆಯವರು ವೈದಿಕ ಸಾಹಿತ್ಯದ ಒಂದು ಮಾತಿನತ್ತ ನಮ್ಮ ಗಮನ ಸೆಳೆಯುತ್ತಾರೆ-" ನಾಹಂ ಕರ್ತಾ, ಕಾಮ: ಕರ್ತಾ ನಾಹಂ ಕಾರಯಿತಾ, ಕಾಮ: ಕಾರಯಿತಾ"-ಇದರ ಅರ್ಥ-"ನನ್ನ ಬದುಕಿನಲ್ಲಿ ಏನೆಲ್ಲ  ನಡೆಯಿತು ಅದನ್ನು ಮಾಡಿದ್ದು ನಾನಲ್ಲ-ಕಾಮ, ಮಾಡಿಸಿದವನೂ ನಾನಲ್ಲ, ಕಾಮನೇ,"

ಧಾರ್ಮಿಕ ಗ್ರಂಥಗಳ ತೌಲನಿಕ ಅಧ್ಯಯನದ ಒಳನೋಟಗಳು ಬನ್ನಂಜೆಯವರ ಮೊಸೆನ್ ಮತ್ತು ಉಪನಿಷತ್ತು’ ಎಂಬ ಲೇಖನದಲ್ಲಿದೆ. ಬೇಂದ್ರೆ ಕಾವ್ಯ ಮತ್ತು ಸುಮತೀಂದ್ರ ನಾಡಿಗರ ’ಪಂಚಭೂತಗಳು ಕಾವ್ಯವನ್ನು ಕುರಿತ ವಿಮರ್ಶೆಯಲ್ಲಿ ಬನ್ನಂಜೆಯವರ ಹೊಳಹುಗಳಿವೆ.

ನನಗೆ ತುಂಬ ಇಷ್ಟವಾದ ಬನ್ನಂಜೆಯವರ ವಿಮರ್ಶಾ ಕೃತಿ ವಾಲ್ಮೀಕಿ ಕಂಡ ರಾಮಾಯಣ’ ಎಂಬ ಕಿರು ಹೊತ್ತಗೆ. ವಾಲ್ಮೀಕಿಗೆ ಅನುಷ್ಟು ಪ್ ಛಂದಸ್ಸು ಎಷ್ಟು ಮುಖ್ಯವೋ ವೌನವೂ ಅಷ್ಟೇ ಇಷ್ಟ. ವಾಲ್ಮೀಕೀಯ ವೌನಕಾಂಡ, ಧ್ವನಿಕಾಂಡಗಳನ್ನು ಗುರುತಿಸಿರುವುದು ಬನ್ನಂಜೆಯವರ ಅಗ್ಗಳಿಕೆ. ದಶರಥ ತನ್ನ ಮೂವರು ಪುತ್ರಿಯರಿಗೆ ನಾಲ್ಕು ಪಾಲು ಮಾಡಿ ಪಾಯಸ ಹಂಚಿದ್ದನ್ನು ತಿಳಿಸುವ ವಾಲ್ಮೀಕಿಯ ಶ್ಲೋಕಗಳು ಧ್ವನಿಪೂರ್ಣವಾಗಿವೆ. ದಶರಥನ ಭಯ, ಮುಂದಾಲೋಚನೆಗಳು ಈ ಶ್ಲೋಕದಲ್ಲಿ ಅಡಗಿವೆ.ಚಂದ ಭಾರತದ ತ್ರಿತ್ರಮನಾಡಿ ಭಾನುಮತಿ ಸೋತ್ತೋಲೆ ಎಂಬ ಪದ್ಯದಂಥ ಈ ಧ್ವನಿ ಪೂರ್ಣ ಶ್ಲೋಕಗಳ ಅರ್ಥವನ್ನು ಅನಾವರಣ ಮಾಡುತ್ತ ಬನ್ನಂಜೆಯವರು," ವಾಲ್ಮೀಕಿ ತನ್ನ ವೌನದಲ್ಲಿ ಎಷ್ಟು ಅರ್ಥವನ್ನು ತುಂಬಬಲ್ಲ ಎನ್ನುವುದಕ್ಕೆ ಈ ಪ್ರಕರಣ ಒಮ್ದು ಶ್ರೇಷ್ಠ ಉದಾಹರ್ಣೆ" ಎಂದು ವಿವರಿಸುತ್ತಾರೆ.
ಬನ್ನಂಜೆಯವರಿಗೆ ’ ಕನ್ನಡಂಗಳಲ್ಲಿ ಆಸಕ್ತಿ ಇದೆ. ಆವೆಯ ಮಣ್ಣಿನ ಆಟದ ಬಂಡಿ’ಯ ಸೂತ್ರಧಾರ ಕುಂದಾಪುರ ಕನ್ನಡ ಮಾತನಾಡುತ್ತಾನೆ. " ಅಯ್ಯಯ್ಯೋ ಅಯ್ಯಯ್ಯೋ, ಈ ಹಾಳಾದ್ ಹಾಟ್ ಕುಣ್ತಾ ಕಟ್ಕಂಟ್ ಹಸಿದ್ ಹಸಿದ್ ಸಾಕಾಗಿ ನನ್ನ  ಮೈ ಕೈ ಎಲ ವೂ ಒ ಣ್ಕಟ್ ತಾವ್ರೇ ಬೀಜದಾಂಗೆ ಒಟ್ಟಿ ಬಡ ಆಯಿ ಹೋಯ್ತ್."

ಬನ್ನಂಜೆಯವರ ಕನ್ನಡ ಗದ್ಯದ ಸೊಗಸು ಅವರು ನನ್ನ ಭಾಷಾಂತರ ಕೃತಿಗಳಿಗೆ ನೀಡಿದ ಹೆಸರುಗಳಲ್ಲೆ ಗೊತ್ತಾಗುತ್ತದೆ-ಅಭಿಜ್ಞಾನ ಶಾಕುಂತಲ -ನೆನಪಾದಳು ಶಕುಂತಲೆ, ಉತ್ತರ ರಾಮ ಚರಿತ- ಮತ್ತೆ ರಾಮನ ಕತೆ, ಮೃಚ್ಷಕಟಿಕ-" ಆಮೆಯ ಮಣ್ಣಿನ ಆಟದ ಬಂಡಿ, ವಿಷ್ಣು ಸಹಸ್ರನಾಮ-ದ್ರೆವರ ಸಾವಿರ ಹೆಸರಿನ ಹಾಡು."

ಬನ್ನಂಜೆಯವರು ಸೃಷ್ಟಿಸಿರುವ ಹಲವು ಶಬ್ದಗಳಿವೆ. ಒಂದೆರಡು  ಉದಾಹರಣೆ- ’ದ್ವಿಜೋತ್ತಮ" (ದ್ರೋಣ) -’ಹೆಬ್ಬಾರುವ’ ’ ಕೀಳು ಹಿರಿಮೆ’-

ತನ್ನ ಮಿತಿಯನ್ನು ಮೀರಿದ ದೈವದ ಮಹಿಮೆಯನ್ನು ಕಂಡಾಗ ಉಂಟಾಗುವ ರೋಮಾಂಚ) ಬನ್ನಂಜೆಯವರ ಪತ್ತ್ ರೂಪೊಡು ಜತ್ತಿನಾಯೆ ಎಂಬ ತುಳು ಕವನದ ಸಾಲು ಇದು- "ಏರಾಯೆ ಏರಾಯೆ, ಏರಾಯೆ ಗೊತ್ತಾ, ಮಾರಾಯೆ ಪಂಜುರ್ಲಿ ದೇವೆರತ್ತಾ". ವರಾಹ ಇಲ್ಲಿ ’ ಪಂಜುರ್ಲಿ’ ಆಗಿದ್ದಾನೆ.

ಬನ್ನಂಜೆ  ಗೋವಿಂದಾಚಾರ್ಯರ  ಕನ್ನಡ ಗದ್ಯ ಸತ್ಯ ಶ್ಯಾಮರ  ಗದ್ಯವನ್ನು ನೆನಪಿಸುವ ಗದ್ಯ . ಆದರೆ  ಸತ್ಯ ಶ್ಯಾಮದ ಗದ್ಯದಲ್ಲಿರುವ ಬೆಡಗು (ಅವಿಶದತೆ) ಬನ್ನಂಜೆ ಗದ್ಯದಲ್ಲಿಲ್ಲ. ಬನ್ನಂಜೆ ಗದ್ಯ ವಾಗಾಡಂಬರದ  ವಾಚಸ್ಪತಿ ಗದ್ಯವಲ್ಲ. ಅವರ ಗದ್ಯ ದೇಸಿಯ ಬನಿ ಇರುವ ಕಾವ್ಯ ಸ್ಪರ್ಶದ ಗದ್ಯ. ’ಅವಚನೀಯ  ಬೇರೆನೊ ಇಹುದು’ ಎಂದು ಸೂಚಿಸುವ ಗದ್ಯ . ಸಂಸ್ಕೃತದ ಕೊಡೆಯಡಿ ಯಲ್ಲಿ ನಡೆಯವ ಸ್ವಾಭಿಮಾನಿ ಕನ್ನಡ ಗದ್ಯ. ಮುದ್ದಣನ ಉಡುಪಿಯಲ್ಲಿ ಸಂಸ್ಕೃತದ ದೀವಟಿಗೆಯ ಬೆಳಕಿನಲ್ಲಿ ಸಾಗಿದ ಬನ್ನಂಜೆ, "ಕರಿಮಣಿ ಸರದಲ್ಲಿ ಕೆಂಪು ಹವಳ" ವನ್ನು ಪೋಣಿಸುವ ಮುದ್ದಣನ ಗದ್ಯ ಮಾರ್ಗವನ್ನು ನವೀಕರಿಸುತ್ತ ಮುನ್ನಡೆದಿದ್ದಾರೆ.

(೨೦-೧೨-೨೦೧೫ ರಂದು ಬೆಂಗಳೂರಿನಲ್ಲಿ ನಡೆದ  ಬನ್ನಂಜೆ ೮೦ ವಿಚಾರಗೋಷ್ಟಿಯಲ್ಲಿ ಮಾಡಿದ ಭಾಷಣದ ಸಾರಾಂಶ.)

ಪ್ರೋ ಮುರಳೀಧರ ಉಪಾಧ್ಯ
’ಸಖೀಗೀತ’
ಎಂ.ಐ.ಜಿ-೧(ಎಚ್)
ದೊಡ್ಡನಗುಡ್ಡೆ, ಉಡುಪಿ -೫೭೬೧೦೨
ಮೊಬೈಲ್-೯೪೪೮೨೧೫೭೭೯.
ಬ್ಲಾಗ್-mupadhyahiri.blogspot.in



Thursday, July 2, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎ. ಎನ್. ಮೂರ್ತಿರಾಯರ ವೈಚಾರಿಕ ಪ್ರಶ್ನೆಗಳು.

ಎ.ಎನ್.  ಮೂರ್ತಿರಾವ್(ಜನನ-೧೯೦೦) ಅವರು ಕನ್ನಡದ ಹಿರಿಯ ಗದ್ಯ ಲೇಖಕರಲ್ಲೊಬ್ಬರು. ಲಲಿತ ಪ್ರಬಂಧ, ವ್ಯಕ್ತಿ ಚಿತ್ರ, ಪತ್ರ ಸಾಹಿತ್ಯ, ಪ್ರವಾಸ ಕಥನ, ಸಾಹಿತ್ಯ ವಿಮರ್ಶೆ, ಆತ್ಮಕತೆ, ರೂಪಾಂತರ- ಭಾಷಾಂತರ-ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಮೌಲಿಕ ಕೃತಿಗಳನ್ನು ಬರೆದಿರುವ ಮೂರ್ತಿರಾಯರು ತನ್ನ ವೈಚಾರಿಕ ನಿಲುವಿನಿಂದ ಗಮನ ಸೆಳೆಯುತ್ತಾರೆ. ’ಚಿತ್ರಗಳು- ಪತ್ರಗಳು’ ಪೂರ್ವ  ದೂರಿಗಳೊಡನೆ’ ಮತ್ತು ’ಸಂಜೆಗಣ್ಣಿನ ಹಿನ್ನೋಟ’ ಇವು ಅವರ ಮುಖ್ಯ ಕೃತಿಗಳು.

’ಜನತಾ ಜನಾರ್ಧನ’ದಲ್ಲಿ ಮೂರ್ತಿರಾಯರ ಹದಿನೆಂಟು ಲೇಖನಗಳಿವೆ. ಇವುಗಳನ್ನು ವ್ಯಕ್ತಿ ಚಿತ್ರಗಳು ಮತ್ತು ವೈಚಾರಿಕ ಲೇಖನಗಳು ಎಂದು ವಿಭಾಗಿಸಬಹುದು. ಸಂಪಾದಕರು   ಈ ಲೇಖನಗಳ ಮೊದಲ ಮುದ್ರಣದ ಇಸವಿಗಳನ್ನು ತಿಳಿಸಿಲ್ಲ. ಡ್.ವಿ.ಜಿ. ಮತ್ತು ಮಾಸ್ತಿಯವರನ್ನು ಕುರಿತ ಎರಡೆರಡು ಲೇಖನಗಳು, ಬಿ.ಎಂ.ಶ್ರೀ.,   ಗಾಂಧೀಜಿ ಮತ್ತು ರಾಧಾಕೃಷ್ಣನ್ ರನ್ನು ಕುರಿತ ಒಂದೊಂದು ಲೇಖನಗಳು ಈ ಪುಸ್ತಕದಲ್ಲಿವೆ.
ಮೂರ್ತಿರಾಯರು ಬರೆದಿರುವ ಹೆಚ್ಚಿನ ವ್ಯಕ್ತಿ ಚಿತ್ರ ಲೇಖನಗಳು ಖಾಸಗಿ ನೆನಪುಗಳ ರೀತಿಯಲ್ಲಿವೆ. ಡಿ.ವಿ.ಜಿ., ಮಾಸ್ತಿ ಮತ್ತು ರಾಧಾಕೃಷ್ಣ ನ್ ರನ್ನು ತಾನು ವೈಯಕ್ತಿಕವಾಗಿ ಭೇಟಿಯಾದಾಗ  ನಡೆಸಿದ ಮಾತುಕತೆಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಮೂರ್ತಿರಾಯರ ವ್ಯಕ್ತಿ ಚಿತ್ರಗಳಲ್ಲಿ ವ್ಯಕ್ತಿ ಪೂಜೆ ಮುಖ್ಯವಲ್ಲ, ವ್ಯಕ್ತಿ ವಿಚಾರ ಚಿಂತನೆ ಮುಖ್ಯ. "ಗುಂಡಪ್ಪನವರದ್ದು ಗಟ್ಟಿ ಗಡತವಾದ ಸ್ವಭಾವ, ಯಾವುದಕ್ಕೂ ಹೆದರಿ ಹಿಂಜರಿಯು ವಂಥದಲ್ಲ" ಎನ್ನುವ ಮೂರ್ತಿರಾಯರು ಗುಂಡಪ್ಪನವರ (ಡಿ.ವಿ.ಜಿ.) ಮಡಿವಂತಿಕೆಯನ್ನು ಕುರಿತ ತನ್ನ ಭಿನ್ನಾಭಿಪ್ರಾಯವನ್ನು ಬರೆಯಲು ಹಿಂಜರಿಯುವುದಿಲ್ಲ. ಡಿ.ವಿ.ಜಿ. ಯವರು ತನ್ನ ;ಗೀತಾತಾತ್ಪರ್ಯ’ದಲ್ಲಿ "ಜಾತಿಗಳೂ ಅವುಗಳಲ್ಲಿ ಪಂಗಡಗಳೂ ಇರುವುದು ದೋಷವೆಂದೂ ಸಮಾಜಕ್ಕೆ ಅದರಿಂದ ಹಾನಿಯೆಂದೂ ಕೆಲವರು ವಾದಿಸುತ್ತಾರೆ. ಅದು ಭ್ರಾಂತಿಯ ವಾದ ಎಂಬುದರಲ್ಲಿ ನನಗೆ ಸಂದೇಹವಿಲ್ಲ" ಎಂದಿರುವುದರ ಕುರಿತು ಮೂರ್ತಿರಾಯರ ಟೀಕೆ ಹೀಗೆದೆ-"ಕೆಲವು ವೇಳೆ ಡಿ.ವಿ.ಜಿ.ಯವರಲ್ಲಿ ಸಾಂಪ್ರದಾಯಿಕ ನಂಬಿಕೆ ಮುಂದಾಗಿ ವೈಚಾರಿಕತೆ ಹಿಂದಾಗುತ್ತದೆ." ಗಾಂಧೀಜಿಯವರನ್ನು ಕುರಿತ ವ್ಯಕ್ತಿ ಚಿತ್ರ ನಮಗೂ ಗಾಂಧೀಜಿಗೂ ವ್ಯತ್ಯಾಸವೇನು ಎಂಬ ಸ್ವವಿಮರ್ಶೆಯ ಧಾಟಿಯಲ್ಲಿದೆ. ಶ್ರೀಮಂತರು ಬಡವರ ಟ್ರಸ್ಟಿಗಳಾಗಿರಬೇಕು. ಶ್ರ್ರೀಮಂತರ ಮನಸ್ಸು ಪರಿವರ್ತನೆಯಾಗುವವರೆಗೂ ನಾವು ಕಾಯ ಬೇಕು ಎನ್ನುವ ಗಾಂಧೀಜಿಯ ಅಭಿಪ್ರಾಯವನ್ನು ಮೂರ್ತಿರಾಯರು ಒಪ್ಪುವುದಿಲ್ಲ. ಅವರು ಹೇಳುವಂತೆ, "ದಾನಿ ನೀನು’ ’ದೀನ ನಾನು’ ಇವೆರಡೂ ಶಾಪಗ್ರಸ್ತ ಭಾವನೆಗಳೇ- ಗಾಂಧೀಜಿಯ ಟ್ರಸ್ಟೀ ವಾದವನ್ನು ಎತ್ತಿ ಹಿಡಿಯಲಾಗುವುದಿಲ್ಲ".
ಮೂರ್ತಿರಾಯರು ’ಉದಯವಾಣಿ’ಯ ವಿಶೇಷಾಂಕಕ್ಕಾಗಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ನೀಡಿದ ಸಂದರ್ಶೆನ ’ದೇವರು ಒಂದು ಸಂವಾದ’ ಎಂಬ ಶೀರ್ಷಿಕೆಯೊಡನೆ ಪ್ರಕಟವಾಗಿ ದೆ. ’ದೇವರ ನಿರಾಕರಣೆಗೆ ನಿಮಗಿರುವ ದೃಢ ಆಧಾರ ಯಾವುದು?’ ಎಂಬ ಪ್ರಶ್ನೆಗೆ ಮೂರ್ತಿರಾಯರು ಹೀಗೆ ಉತ್ತರಿಸುತ್ತಾರೆ-’ಲೋಕದಲ್ಲಿ  ಎಲ್ಲೆಂದರಲ್ಲಿ ಕಾಣುವ ಕೇಡು, ಸಂಕಟ, ಕೆಲವು ಮತಗಳು ಸದ್ಗುಣನಿಧಿಯಾದ ದೇವರೊಬ್ಬ ಇರುವಂತೆ ದುರ್ಗುಣಗಳ ಗಣೆಯಾದ ಒಂದು ಶಕ್ತಿಯೂ ಇದೆ ಎಂದು ನಂಬುತ್ತವೆ...ಎಲ್ಲ ಸೃಷ್ಟಿಗೂ ಕರ್ತನಾದವನು ದೇವರೊಬ್ಬನೇ ಎಂದ ಮೇಲೆ ಕೇಡೂ ದೇವರ ಸೃಷ್ಟಿ ಎಂದೇ ಆಯಿತು. ಸಕಲ ಕೇಡುಗಳ ತವರಾದ ಈ ಸೈತಾನನನ್ನು ದೇವರು ಯಾಕೆ ಸೃಷ್ಟಿಸಿದ? ಈ ಪ್ರಶ್ನೆಗೆ ಸಮರ್ಪಕವಾದ ಉತ್ತರವಿಲ್ಲ. ಕೇಡು ಇದೆ, ಆದ್ದರಿಂದ ದೇವರಿಲ್ಲ ಎನ್ನಬೇಕಾಗುತ್ತದೆ". ಮೂರ್ತಿರಾಯರ ವಿಚಾರಧಾರೆಗೂ ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ ದೇವರ ಅಸ್ತಿತ್ವವನ್ನು ಕುರಿತು ನಡೆದಿರುವ ಚರ್ಚೆಗೂ ಇರುವ ಸಂಬಂಧ ಸಾತತ್ಯಗಳನ್ನು ಗುರುತಿಸಬೇಕು.ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳದ ಮೂರ್ತಿರಾಯರ ಮನೋಧರ್ಮಕ್ಕೆ ’ಗುರುಪೀಠಗಳು ಮತ್ತು ಸಮಾಜ’ ಎಂಬ ಲೇಖನ ಒಳ್ಳೆಯ ಉದಾಹರಣೆ.
ಮೂರ್ತಿರಾಯರ ಪ್ರಕಾರ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರಿತ ನಮ್ಮ ಪ್ರತಿಕ್ರಿಯೆ ನಾಲ್ಕು ವಿಧದಲ್ಲಿ ಸಾಗಿತು-ಭಯ, ಆಕರ್ಷಣೆ, ಅನುಕೂಲ ಸಿಂಧುವಿನ ದೃಷ್ಟಿಯಿಂದ ಅದಕ್ಕೆ  ಸ್ವಾಗತ(ಅದರಿಂದಾಗಿ ಗುಲಾಮ ಮನೋವೃತ್ತಿ), ಮನೋವಿಕಾಸದ ದೃಷ್ಟಿಯಿಂದ ಸ್ವಾಗತ, ಈ ನಾಲುಕ್ ವಿಧದ ಪ್ರತಿಕ್ರಿಯೆಗಳನ್ನು ಅವರು ’ಪೂರ್ವ ಪಶ್ಚಿಮ’ಗಳ ಸಂಘರ್ಷ’ ಲೇಖನದಲ್ಲಿ ಗುರುತಿಸುತ್ತಾರೆ.

’ಭಗವದ್ಗೀತೆ’ಯಲ್ಲಿ ಕೃಷ್ಣ ಅರ್ಜುನನಿಗೆ, ’ ಇದರಲ್ಲಿ ಏನನ್ನೂ ಬಿಡದೆ ಎಲ್ಲವನ್ನೂ ಯೋಚಿಸಿ ನೋಡು, ಅನಂತರ ನಿನ್ನ ಇಚ್ಚೆಯಂತೆ ಮಾಡು" ಎನ್ನುತ್ತಾನೆ. ಕೃಷ್ಣ ಅರ್ಜುನನಿಗೆ ನೀಡಿದ ಸ್ವಾತಂತ್ರ್ಯ  ನಮ್ಮ ತತ್ವಜ್ಞಾನ ಪರಂಪರೆಯಲ್ಲಿ ಪ್ರಶ್ನಿಸುವ ಮನೋವೃತ್ತಿಗೆ  ಅವಕಾಶವಿದ್ದುದನ್ನು  ಸೂಚಿಸುತ್ತದೆ. ಪ್ರಶ್ನಿಸುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಷ್ಕರಿಸುವ ಮನೋಧರ್ಮ ವಿ.ಎನ್. ಮೂರ್ತಿರಾಯರಲ್ಲಿದೆ. ವ್ಯಕ್ತಿ ಸ್ತವನಕ್ಕಿಂತ ವಿಚಾರ ಮಂಥನಕ್ಕೆ ಒತ್ತು ನೀಡುವ ’ಜನತಾ ಜನಾರ್ದನ’ ಗಂಭೀರ ಚಿಂತನೆಯಲ್ಲಿ ಆಸಕ್ತರಾದವರೆಲ್ಲ ಓದಬೇಕಾದ ಪುಸ್ತಕ.
ಮುರಳೀಧರ ಉಪಾಧ್ಯ, ಹಿರಿಯಡಕ 
ಜನತಾ   ಜನಾರ್ಧನ
(ಲೇಖನಗಳ ಸಂಗ್ರಹ)
ಲೇ:ಎ.ಎನ್. ಮೂರ್ತಿ ರಾವ್
ಪ್ರ:ಮನೋಹರ ಗ್ರಂಥಮಾಲಾ,
ಲಕ್ಷ್ಮೀಭವನ, ಸುಭಾಸ ರಸ್ತೆ, 
ಧಾರವಾಡ-೫೮೦೦೦೧
ಮೊದಲ ಮುದ್ರಣ:೧೯೯೫, ಬೆಲೆ:ರೂ.೫೦.

Wednesday, July 1, 2020

ಮುರಳೀಧರ ಉಪಾಧ್ಯ ಹಿರಿಯಡಕ - ದೀಪದ ಕೆಳಗೆ{ ಅಮೃತ ಸೋಮೇಶ್ವರ ಚಿಂತನೆ }

ದೀಪದ ಕೆಳಗೆ (ಜಿಜ್ಞಾಸೆಯ ತುಣುಕುಗಳು) ಲೇ:ಅಮೃತ ಸೋಮೇಶ್ವರ 
ಪ್ರ:ಪ್ರಕೃತಿ ಪ್ರಕಾಶನ, ಕೋಟೆಕಾರು, ಮಂಗಳೂರು-೫೭೫೦೨೨.
ಮೊ.ಮುದ್ರಣ:೨೦೦೩  ಬೆಲೆ.ರೂ.೩೦.

ವಿವಿಧ  ಪತ್ರಿಕೆಗಳ  ’ ಸಂಪಾದಕರಿಗೆ ಪತ್ರ’ ವಿಭಾಗದಲ್ಲಿ ಪ್ರಕಟವಾಗಿರುವ, ತುಳು-ಕನ್ನಡ ಸಾಹಿತಿ, ಜಾನಪದ ತಜ್ಞ ಅಮೃತಸೋಮೇಶ್ವರ ಅವರ ೩೩ ವೈಚಾರಿಕ ಪತ್ರಗಳು ’ ದೀಪದ ಕೆಳಗೆ’ ಪುಸ್ತಕದಲ್ಲಿವೆ. ’ಮನಸ್ಸಿಗೆ ಕಸಿವಿಸಿಯನ್ನುಂಟು  ಮಾಡಿದ ಕೆಲವು  ಪತ್ರಿಕಾ ವಾರ್ತೆಗಳಿಗೆ  ಸಾಂದರ್ಭಿಕವಾಗಿ ಸ್ಪಂದಿಸಿ ಇಲ್ಲಿನ ಹೆಚ್ಚಿನ ’ಸಂಪಾದಕರಿಗೆ ಪತ್ರ’ಗಳು  ಕಾಣಿಸಿಕೊಂಡಿವೆ. ಇತರ ಮಹನೀಯರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯಾಗಿ ಮೂಡಿದ ಬರೆಹಗಳೂ ಇಲ್ಲಿವೆ. ಯಾವುದೇ  ವಿಚಾರವು ಚರ್ಚೆಗೆ ಒಡ್ಡಲ್ಪಟ್ಟು ಪ್ರಯೋಜನಕಾರಿಯಾದ ನೆಲೆಗೆ ತಲುಪಿದರೆ ಒಳ್ಳೆಯದೆಂಬ  ಧೋರಣಿಯಿಂದ ಈ ಚರ್ಚೆಗಳು ನಡೆದಿವೆಯೇ ಹೊರತು ತರ್ಕ ಪ್ರತಿಷ್ಠೆ ಗಳಿಗಾಗಿ ಅಲ್ಲ" ಎನ್ನುತ್ತಾರೆ ಅಮೃತ ಸೋಮೇಶ್ವರ.
’ಅಪ್ರಸ್ತುತ ಸಂಪ್ರದಾಯ -ಬಾಲ ಸಂಸ್ಥಾನ’, ಮಂತ್ರಕ್ಕೆ ಭಾಷಾ ಬಂಧನವಿಲ್ಲ’, ’ಸಾಧುಗಳು ನಗ್ನರಾಗಿ ಓಡಾಡುವುದು ಸರಿಯಲ್ಲ’, ಬಹಿರಂಗ ಸ್ಥಳಗಳಲ್ಲಿ ಪ್ರತಿಮೆಗಳು ಬೇಡ’ ಇಂಥ ಪತ್ರ ಶೀರ್ಷಿಕೆಗಳೇ ಅಮೃತರ  ಅಭಿಪ್ರಾಯವನ್ನು ಸ್ಪಷ್ಪಪಡಿಸುತ್ತವೆ. ಜಾತಿ ಪದ್ಧತಿಯನ್ನು  ಅಂಟಿಸಿದ  ಅಪರಂಜಿಯಂತೆ ಕಾಪಾಡುತ್ತಿರುವ  ನಮ್ಮ ಸಮಾಜದ ಅಕಾಲಿಕ ಆಚರಣೆಗಳನ್ನು ಅಮೃತರು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ.

ಇಲ್ಲಿನ ಕೆಲವು ಪತ್ರಗಳು ಬರೇ ಪ್ರಶ್ನೆಗಳಾಗಿ   ಉಳಿಯದೆ, ವೈಚಾರಿಕ ಲೇಖನ ಗಳಾಗಿ ಬೆಳೆದಿವೆ. ’ಸಾಂಸ್ಕೃತಿಕ ವಸ್ತುಗಳನ್ನು ಸುಡುವವರು’, ’ಇದು ನಮ್ಮ ಧಾರ್ಮಿಕತೆ’, ’ಮೂಲಭೂತವಾದದ ಮೊನೆ ಮೊಂಡಾದೀತೆ?’’ ಇಂಥ ಕೆಲವು ಗಂಭೀರ ಲೇಖನಗಳು, ಜಿಜ್ಞಾಸೆಯ ತುಣುಕುಗಳು ಈ ಪುಸ್ತಕದಲ್ಲಿವೆ.

ಮುರಳೀಧರ ಉಪಾಧ್ಯ ಹಿರಿಯಡಕ