stat Counter



Sunday, December 19, 2010

U R Ananthamurthy's Novels

ಯು. ಆರ್. ಅನಂತಮೂರ್ತಿ
(
ಕಾದಂಬರಿಗಳು)
-ಮುರಳೀಧರ ಉಪಾಧ್ಯ ಹಿರಿಯಡಕ



'ಸಂಸ್ಕಾರ'
 ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಕಾದಂಬರಿ. 'ಮಾನವಶಾಸ್ತ್ರೀಯ ಕಾದಂಬರಿ; ಒಬ್ಬ ಸುಸಂಸ್ಕೃತ ವ್ಯಕ್ತಿಯ ಆಂತರಿಕ ಆಧ್ಯ್ಮಾತಿಕ ಧರ್ಮಸಂಕಟದ ಚಿತ್ರಣ; ಅಥವಾ ಮೂಲಕವಾಗಿ ಪ್ರಕಟವಾಗುವ ಒಂದು ಜಾತಿ ಧರ್ಮ ಸಮಾಜದ ವಿಘಟನೆಯ ಕಥೆ - ಹೀಗೆ ವೈವಿಧ್ಯಪೂರ್ಣ ವಿಮರ್ಶೆ-ವ್ಯಾಖ್ಯಾನಗಳನ್ನು ಕಾದಂಬರಿ ಪಡೆದಿದೆ.
ಕೀರ್ತಿನಾಥ ಕುರ್ತಕೋಟಿಯವರು, " ಕಾದಂಬರಿಯ ಸಮಸ್ಯೆ ಇರುವುದು ಕತೆಯ ಮೂಲಪ್ರಜ್ಞೆ ಮತ್ತು ಅದರ ಜೀವನಸಾಮಗ್ರಿಗೂ ಇರುವ ವಿರೋಧದಲ್ಲಿ. ಇಲ್ಲಿಯ ನಾಯಕ ಪಾತ್ರವಾದ ಪ್ರಾಣೇಶಾಚಾರ್ಯರು ಕತೆಯ ಮೂಲಪ್ರಜ್ಞೆಯಾಗಿದ್ದಾರೆ. ಇಡೀ ಅಗ್ರಹಾರದಲ್ಲಿಯೇ ಶ್ರೇಷ್ಠ ವಿದ್ವಾಂಸರಾಗಿರುವ ಪ್ರಾಣೇಶಾಚಾರ್ಯರ ಮೇಲೆ ಪ್ರಜ್ಞಾಶೀಲತೆಯ ಹೊಣೆ ಬಿದ್ದಿರುವುದು ಸ್ವಾಭಾವಿಕವಾಗಿದೆ. ಆದರೆ ಕೃತಿಯ ವಿಶೇಷವಾದ ಪ್ರಜ್ಞೆಯನ್ನು ಹೊರುವ ಮತ್ತು ಅದನ್ನು ಪ್ರಕಟಿಸುವ ಯೋಗ್ಯತೆ ಪ್ರಾಣೇಶಾಚಾರ್ಯರ ಪಾತ್ರಕ್ಕಿದೆಯೇ ಎಂಬುದು ಪ್ರಶ್ನೆಯಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಸಂವೇದನೆಗೂ ಅದು ಪ್ರಕಟಿಸುವ ಪ್ರಜ್ಞೆಗೂ ವಿರೋಧ ಉಂಟಾಗಿ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಪ್ರಸಂಗ ಬರುತ್ತದೆ" ಎಂದಿದ್ದಾರೆ.

ಶಾಂತಿನಾಥ ದೇಸಾಯಿ ಅವರಿಗೆ ಕಾದಂಬರಿಯಲ್ಲಿ ವ್ಯಂಗ್ಯ, ವಿಡಂಬನಾತ್ಮಕ, ವಿನೋದಪಾತಳಿ ಹಾಗೂ ಗಂಭೀರ ಕಾವ್ಯಾತ್ಮಕ-ಬೌದ್ಧಿಕ ಪಾತಳಿ ಇವೆರಡು ಒಂದಕ್ಕೊಂದು ಪೂರಕವಾಗಿ ಬೆರೆತಿಲ್ಲ ಅನ್ನಿಸಿದೆ. ಎಂ.ಜಿ. ಕೃಷ್ಣಮೂರ್ತಿಯವರ ಪ್ರಕಾರ ಕಾದಂಬರಿಯ ಪ್ರಾಣೇಶಾಚಾರ್ಯ ಮತ್ತು ನಾರಣಪ್ಪ ಇಬ್ಬರೂ ಎರಡು ಪ್ರವೃತ್ತಿಗಳ ಸಂಕೇತಗಳಾಗಿ ನಿಲ್ಲುತ್ತಾರೆ ಮತ್ತು ಎರಡು ಪ್ರವೃತ್ತಿಗಳ ನಡುವೆ ನಡೆಯುವ ತುಮುಲಯುದ್ಧವೇ ಕಾದಂಬರಿಯ ವಸ್ತುವಾಗುತ್ತದೆ -" 'ಸಂಸ್ಕಾರ' ಬ್ರಾಹ್ಮಣ ಸಮಾಜದ ಬಗೆಗೆ ಮಾಡುವ ವಿಮರ್ಶೆ ನಿಷ್ಠುರವಾದುದು. ಕಾದಂಬರಿ ಸಮಾಜದ ಅವನತಿಯನ್ನು ಮಾತ್ರ ಚಿತ್ರಿಸುವ ಸಾಂಪ್ರದಾಯಿಕ ಕೃತಿಯಿಲ್ಲ. ಸಮಾಜದ ಜೊತೆಗೆ ಸಮಾಜದ ಮೂಲಭೂತ ತತ್ವಗಳನ್ನು ಪ್ರಶ್ನಿಸುವ ಕೃತಿ."

ಜಿ.ಎಸ್. ಅಮೂರ ಅವರು 'ಸಂಸ್ಕಾರ' ಪ್ರಾಣೇಶಾಚಾರ್ಯರ ಪಾತ್ರವನ್ನು ವಿವರವಾಗಿ ಚರ್ಚಿಸಿದ್ದಾರೆ. - ಪ್ರಾಣೇಶಾಚಾರ್ಯ ತನಗೊದಗಿದ ಧಾರ್ಮಿಕ ಪ್ರಶ್ನೆಗಳನ್ನು ಎದುರಿಸಲು ಶಕ್ತನಾಗುವುದಿಲ್ಲ. ಇದು ಪ್ರಾಣೇಶಾಚಾರ್ಯರು ಒಪ್ಪಿಕೊಂಡಿರುವ ಸಂಸ್ಕೃತಿಯ ದೌರ್ಬಲ್ಯವೇ ಅಥವಾ ಅವರ ಚರಿತ್ರೆಗೆ ಸಂಬಂಧಪಟ್ಟ ಪ್ರಶ್ನೆಯೇ? "ನನಗನ್ನಿಸುವ ಮಟ್ಟಿಗೆ ಅನಂತಮೂರ್ತಿಯವರು ವೈಯಕ್ತಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪ್ರಾಣೇಶಾಚಾರ್ಯನ ವ್ಯಕ್ತಿತ್ವದಲ್ಲಿ ಸೇರಿಸುವ ತಂತ್ರದಲ್ಲಿ ಗೊಂದಲಕ್ಕೆಡೆಮಾಡಿಕೊಟ್ಟಿದ್ದಾರೆ.... ಹೀಗಾಗಿ ಪ್ರಾಣೇಶಾಚಾರ್ಯನ ಸೋಲು ಎಷ್ಟರ ಮಟ್ಟಿಗೆ ಅವನು ನಂಬಿದ ಸಂಸ್ಕೃತಿಯದು, ಎಷ್ಟರ ಮಟ್ಟಿಗೆ ಅವನ ಮನೋವೃತ್ತಿಯದು ಎನ್ನುವುದು ಸಂದಿಗ್ಧವಾಗಿಯೇ ಉಳಿಯುತ್ತದೆ" ಎನ್ನುತ್ತಾರೆ. ಜಿ. ಎಸ್. ಅವರ ಅಭಿಪ್ರಾಯದಂತೆ "ವಾಸ್ತವದ ವಿಕೃತ, ಆಂಶಿಕ ಹಾಗೂ ವಸ್ತುನಿಷ್ಠ ಗ್ರಹಿಕೆ ಹಾಗೂ ಆದರ್ಶದ ಪರಕೀಯತೆ ಹಾಗೂ ಅಮೂರ್ತತೆಗಳಿಂದಾಗಿ 'ಸಂಸ್ಕಾರ' ಎಷ್ಟೇ ಉಜ್ವಲವಾದ ಬರವಣಿಗೆಯಾದರೂ ಸೋಲುತ್ತದೆ." 'ಸಂಸ್ಕಾರ'ವನ್ನು ಚಿನುವಾ ಅಚಿಬೆಯವರ 'ಥಿಂಗ್ಸ್ ಫಾಲ್ ಎಪಾರ್ಟ್ಕಾದಂಬರಿಯೊಡನೆ ಹೋಲಿಸುತ್ತ ಅಮೂರ್ ಹೀಗೆನ್ನುತ್ತಾರೆ - 'Things Fall Apart' ಕಾದಂಬರಿಯಲ್ಲಿ ಅಚಿಬೆ, ಐಬೊ (Ibo) ಸಮಾಜವನ್ನು ನಾಶದ ಹಾದಿಯಲ್ಲಿ ತೋರಿಸುತ್ತಾನೆ. ನಾಶಕ್ಕೆ ಹೊರಗಿನ ಕಾರಣಗಳಂತೆ ಒಳಗಿನ ಕಾರಣಗಳೂ ಇವೆ. ಆದರೆ ತನ್ನ ಸಮಾಜದ ಕ್ರಮ, ಸಾಮರಸ್ಯ, ಸೌಂದರ್ಯಗಳನ್ನು ತೋರಿಸಲೂ ಆತ ಮರೆಯುವುದಿಲ್ಲ. ಕಾದಂಬರಿಯ ಬಹುಭಾಗ ಉದ್ದೇಶಕ್ಕಾಗಿಯೇ ಮೀಸಲಾಗಿದೆ. ಆದರೆ ಅನಂತಮೂರ್ತಿಯವರು ತೋರಿಸುವ ಬ್ರಾಹ್ಮಣ ಸಮಾಜ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡ ಬ್ರಾಹ್ಮಣ ಸಮಾಜ. ಇತಿಹಾಸದಲ್ಲಿ ಘಟಕ ಮಹತ್ವದ ಪಾತ್ರ ವಹಿಸಿತ್ತೆನ್ನುವುದನ್ನು ನಂಬುವುದೇ ಕಠಿಣವಾಗುತ್ತದೆ.

ರಾಜೀವ ತಾರಾನಾಥರು 'ಸಂಸ್ಕಾರ'ವನ್ನು 'ಕಾನೂನು ಹೆಗ್ಗಡತಿ'ಯೊಡನೆ ಹೋಲಿಸುತ್ತ ಹೀಗೆ ಬರೆದಿದ್ದಾರೆ - "ಸಾಮಾನ್ಯವಾಗಿ ಹೇಳಬಹುದಾದರೆ 'ಸಂಸ್ಕಾರ' ಕಾದಂಬರಿಯ ಅನುಭವ ಕನ್ನಡವಾಗಿದ್ದರೂ ಅದು ಪಡೆದಿರುವ ಸಂಸ್ಕಾರ ಮತ್ತು ಅದಕ್ಕೆ ಬಂದಿರುವ ಅರ್ಥದ ಮೊನೆ ಇವು ಪ್ರಮುಖವಾಗಿ ಪಾಶ್ಚಾತ್ಯ ದೇಶಗಳ ಸಮಕಾಲೀನ ಸಂಸ್ಕೃತಿಗಳ ಮೂಲಕ ಬಂದುವುಗಳಾಗಿವೆ. 'ಕಾನೂರು ಹೆಗ್ಗಡತಿ'ಯಲ್ಲಿ ಕೃತಿಯ ಸಾಮಗ್ರಿ ಕನ್ನಡವಾಗಿದ್ದು ಅದರ ತಾತ್ವಿಕ ಅಭಿವ್ಯಕ್ತಿ ಕನ್ನಡದ ತಿಳುವಳಿಕೆಗೆ ಸುಲಭವೇದ್ಯವಾಗಿ, ಸಮ್ಮತವಾಗಿಯೂ ಇದೆ. ಕಾದಂಬರಿಯ ನೈತಿಕ ಹಾಗೂ ತಾತ್ವಿಕ ತಿಳುವಳಿಕೆ ಕಾದಂಬರಿಯನ್ನು ಸೃಷ್ಟಿಸಿದ ಸಂವೇದನೆಗೆ ಹಿನ್ನೆಲೆಯಾಗಿರುವ ಸಾಂಸ್ಕೃತಿಕ ಪರಿಸರದಲ್ಲಿಯ ತಿಳುವಳಿಕೆಗಿಂತ ಭಿನ್ನವಾದುದ್ದಲ್ಲ."


ಚಂದ್ರಶೇಖರ ಕಂಬಾರ ಅವರು 'ಸಂಸ್ಕಾರ'ವನ್ನು ಕುರಿತು, "ಕಥೆಯ ಕ್ರಿಯೆ ಅನೇಕ ವರ್ಷಗಳ ಹಿಂದಿನದಾಗಿದ್ದು ನಾಯಕನ ವೈಚಾರಿಕತೆ ಇಂದಿನದಾಗಿದೆ. ಅಂದರೆ ಪ್ರಾಣೇಶಾಚಾರ್ಯರ ದೇಹಕ್ಕೆ ಅನಂತಮೂರ್ತಿಯವರ ತಲೆ ಕೂಡಿಸಿದಂತೆ ಆಗಿದೆ. ಅಂದರೆ ವೈಚಾರಿಕತೆ ಪಾತ್ರದ ಸ್ವಭಾವಧರ್ಮವಾಗಿ ಮೂಡಿಲ್ಲ ಅಥವಾ ಅಸಾಂಗತ್ಯ ಮುಂದಿನವರಿಗೆ ತೋರದಿರಲೂಬಹುದು" ಎಂದಿದ್ದಾರೆ.

ಇದುವರೆಗೆ ಉಲ್ಲೇಖಿಸಿರುವ ಎಲ್ಲ ಲೇಖನಗಳೂ ಗಂಗಾಧರಮೂರ್ತಿ ಅವರು 1970ರಲ್ಲಿ ಸಂಪಾದಿಸಿದ 'ಸಂಸ್ಕಾರ ಸಮೀಕ್ಷೆ'ಯಲ್ಲಿವೆ. 'ಸಂಸ್ಕಾರ'ವನ್ನು ಕುರಿತ ಎಂ.ಜಿ. ಕೃಷ್ಣಮೂರ್ತಿ , ಶಾಂತಿನಾಥ ದೇಸಾಯಿ, ಎಚ್. ಎಸ್. ರಾಘವೇಂದ್ರ ರಾವ್, .ಕೆ. ರಾಮಾನುಜನ್ (ಭಾಷಾಂತರ - ಮಹಾಬಲೇಶ್ವರ ರಾವ್) ಹಾಗೂ ಶ್ರೀಮತಿ ಹೈಡ್ರನ್ ಬ್ರೂಕ್ನರ್ (ಭಾಷಾಂತರ - ರಾಮಚಂದ್ರ ಉಡುಪ) ಅವರ ಲೇಖನಗಳನ್ನು ನಾನು ಗ್ರಂಥಕ್ಕಾಗಿ ಆಯ್ಕೆಮಾಡಿದ್ದೇನೆ. ಗ್ರಂಥದಲ್ಲಿರುವ ಕೆ.ವಿ. ಸುಬ್ಬಣ್ಣ, ಜಿ. ಎಸ್. ಅಮೂರ, ಕೀರ್ತಿನಾಥ ಕುರ್ತಕೋಟಿ, ಮನುಚಕ್ರವರ್ತಿ ಹಾಗೂ ರಾಮಚಂದ್ರದೇವ ಅವರ ಲೇಖನಗಳಲ್ಲಿ 'ಸಂಸ್ಕಾರ'ವನ್ನು ಕುರಿತ ಚರ್ಚೆ ಮುಂದುವರಿದಿದೆ.

ಎಚ್. ಎಸ್. ರಾಘವೇಂದ್ರ ರಾವ್ ಅವರು ದೂರ್ವಾಸಪುರದ ಬ್ರಾಹ್ಮಣರ ಮೌಲ್ಯಗಳಿಗೂ ಇಂಗ್ಲಿಷರ ಮೌಲ್ಯಗಳಿಗೂ ಇರುವ ವ್ಯತ್ಯಾಸಗಳತ್ತ ನಮ್ಮ ಗಮನ ಸೆಳೆಯುತ್ತಾರೆ - "ದೂರ್ವಾಸಪುರದ, ಪ್ರಾಣೇಶಾಚಾರ್ಯರ ಚಕ್ರಾಧಿಪತ್ಯದ ಅಗ್ರಹಾರದ ಹೊರಗೆ ಇಂಗ್ಲಿಷರ ಕಾನೂನಿನ ನಾಗರಿಕತೆಯ ಇನ್ನೊಂದು ವಲಯ ರೂಪಿತವಾಗುತ್ತಿರುತ್ತದೆ. ಅಗ್ರಹಾರದ ಮೌಲ್ಯಗಳಿಗೂ, ಇಂಗ್ಲಿಷರ ಮೌಲ್ಯಗಳಿಗೂ ಅಂತರವಿದೆ-ವಿರೋಧವಿದೆ. ಇಂಗ್ಲಿಷರಿಗೆ ಅಧಿಕಾರ ಇರುವುದರಿಂದ, ಅದನ್ನು ತಡೆಯುವ ಧೈರ್ಯ ಅಗ್ರಹಾರಕ್ಕಿಲ್ಲ. ಇದ್ದಿದ್ದರೆ ಅವರು ನಾರಣಪ್ಪನಿಗೆ ಬಹಿಷ್ಕಾರ ಹಾಕುತ್ತಿದ್ದರು".


 ಸಂಸ್ಕಾರ'ವನ್ನು ಕುರಿತು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ವಿಮರ್ಶೆಗಳನ್ನು ಪ್ರತ್ಯೇಕವಾಗಿ ನೋಡಬಹುದು. ಸಾಹಿತ್ಯ ವಿಮರ್ಶಕರು ಮಾತ್ರವಲ್ಲದೆ ಮನೋವಿಜ್ಞಾನಿಗಳು ಮತ್ತು ಮಾನವಶಾಸ್ತ್ರಜ್ಞರು ಕಾದಂಬರಿ ಚರ್ಚಿಸಿದ್ದಾರೆ. 'ಸಂಸ್ಕಾರ' ಇಂಗ್ಲಿಷ್ ಆವೃತ್ತಿಯ, .ಕೆ. ರಾಮಾನುಜನ್‍ರ ಅನುವಾದದ ಗುಣಮಟ್ಟ ಇದಕ್ಕೆ ಕಾರಣ.
'
 ಸಂಸ್ಕಾರ' ತನ್ನ ಇಂಗ್ಲಿಷ್ ಭಾಷಾಂತರಕ್ಕೆ ಬರೆದ ಮುನ್ನುಡಿಯಲ್ಲಿ .ಕೆ. ರಾಮಾನುಜನ್ "ಇದು ಹಳೆಯ ಕಥಾವಸ್ತುವೊಂದನ್ನು ಸಮಕಾಲೀನಗೊಳಿಸುವ ಧಾರ್ಮಿಕ ಕಾದಂಬರಿ, ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಸತತ ವಿಳಂಬವೇ ಕಾದಂಬರಿಯ ಕಥಾವಸ್ತು" ಎನ್ನುತ್ತಾರೆ. ಅವರ ಅಭಿಪ್ರಾಯದಲ್ಲಿ, ಕಾದಂಬರಿ ಪೂರ್ಣವೃತ್ತಗಳನ್ನು ರಚಿಸಲಾಗದ, ವಕ್ರರೇಖೆಗಳನ್ನಷ್ಟೇ ಎಳೆಯಬಲ್ಲ ಆಚಾರ್ಯರ ಜೀವನ ವಿವರಗಳ ಮೂಲಕ ಹಿಂದೂಧರ್ಮದ ಅವನತ ಸ್ಥಿತಿಯನ್ನು ನಮ್ಮ ಮುಂದಿಡುತ್ತದೆ. 'ಸಂಸ್ಕಾರ'ದಲ್ಲಿ ಆಗೊಮ್ಮೆ ಈಗೊಮ್ಮೆ ವಾಸ್ತವ ಹಾಗೂ ರೂಪಕದ ಮಿಶ್ರಣದಿಂದಾಗಿ ಓದುಗರಿಗೆ ಕೊಂಚ ರಗಳೆಯಾಗುವುದನ್ನು, ಕೆಲವು ವರ್ಣನೆಗಳಲ್ಲಿ ದೇಶೀಯ ಸಾಮಾನ್ಯ ಜ್ಞಾನದ ಕೊರತೆ ಕಂಡುಬರುವುದನ್ನು ರಾಮಾನುಜನ್ ಗಮನಿಸಿದ್ದಾರೆ.
'

ಅಮೆರಿಕದ ವಿಮರ್ಶಕ ಜಾನ್ ಪೆರ್ರಿ ಅವರ ಪ್ರಕಾರ, 'ಸಂಸ್ಕಾರ' ಆಳವಾದ ಖಾಸಗಿ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಕಾದಂಬರಿ. ಸಮಸ್ಯೆಗಳು ಸಾರ್ವತ್ರಿಕವಾಗಿವೆ.

 ಖ್ಯಾತ ಮನಶಾಸ್ತ್ರಜ್ಞ ಎರಿಕ್ ಎರಿಕ್ಸನ್, 'ಸಂಸ್ಕಾರ'ವನ್ನು ಇಂಗ್ಮಾರ್ ಇಂಗ್‍ಮಾರ್ ಬರ್ಗ್‍ಮನ್ನ 'ವೈಲ್ಡ್ ಸ್ಟ್ರಾಬೆರೀಸ್' ಚಲನಚಿತ್ರದ ಜೊತೆ ಹೋಲಿಸುತ್ತ, " ಎರಡೂ ಕೃತಿಗಳ ನಾಯಕರು ತಮ್ಮ ತಮ್ಮ ಸಮಾಜಗಳ ಬೌದ್ಧಿಕ ಮುಂದಾಳುಗಳಾಗಿರುವುದನ್ನೂ, ಅವರಿಬ್ಬರೂ ತಮ್ಮ ತಮ್ಮ ಬದುಕಿನ ನಿರ್ಣಾಯಕ ಕ್ಷಣಗಳಲ್ಲಿ ಹೊರಗೆ ಪ್ರಯಾಣ ಬೆಳೆಸುವುದರ ಜೊತೆ, ತಮ್ಮೊಳಗೇ ತಮ್ಮ ನೆನಪಿನ ದಾರಿ ಹಿಡಿದು, ಗತಕಾಲದ ಕಡೆ ಸಾಗುತ್ತಾರೆ" ಎಂಬುದನ್ನು ತೋರಿಸುತ್ತಾರೆ

ಸಮಾಜಶಾಸ್ತ್ರಜ್ಞ ಟಿ. ಎನ್. ಮದನ್ 'ಸಂಸ್ಕಾರ' ಬಗ್ಗೆ ಬರೆಯುತ್ತ, ಕಾದಂಬರಿಯನ್ನು ಸಾಹಿತ್ಯಕವಾಗಿ ತೂಗಿನೋಡಲು ತಾನು ಸಮರ್ಥನಲ್ಲವೆಂದೂ, ಒಬ್ಬ ಸಮಾಜವಿಜ್ಞಾನಿಯಾಗಿ ಕಾದಂಬರಿ ಚಿತ್ರಿಸುವ ಹಿಂದೂ ಸಮಾಜದ ನೈತಿಕ ಆಯ್ಕೆಗಳ ಚಿತ್ರಣವನ್ನು ಮಾತ್ರ ವಿಶ್ಲೇಷಿಸುತ್ತೇನೆ ಎಂದೂ ಬರೆಯುತ್ತಾರೆ. ಕಾದಂಬರಿಯಲ್ಲಿ ( ನೆಲದ್ದಲ್ಲದ) ಅಸ್ತಿತ್ವವಾದೀ ಚಿಂತನೆಯ ಪ್ರಭಾವವಿದೆ ಎಂಬ ಮಾತನ್ನು ಪ್ರಸ್ತಾಪಿಸುತ್ತ ಮದನ್, ಅಸ್ತಿತ್ವವಾದೀ ಆಯ್ಕೆಯ ಸಂಕಟದ ಅನುಭವ ಪರಂಪರಾಗತ ಹಿಂದೂ ಚಿಂತಕರಿಗೆ ಹೊಸತೇನೂ ಅಲ್ಲ ಎಂಬ ಅಭಿಪ್ರಾಯಪಡುತ್ತಾರೆ.

ಭಾರತೀಯ ಮೂಲದ ಖ್ಯಾತ ಇಂಗ್ಲಿಷ್ ಲೇಖಕ ವಿ.ಎಸ್. ನೈಪಾಲ್ ತನ್ನ 'India - A Wounded Civilization' ಕೃತಿಯಲ್ಲಿ 'ಕಾದಂಬರಿ ಬೌದ್ಧಿಕ ಅನ್ವೇಷಣೆ, ನೈತಿಕ ಹೊಣೆಗಾರಿಕೆ, ಕ್ರಿಯಾಶೀಲತೆ ಮತ್ತು ಸಂವೇದನೆಗಳಿಲ್ಲದ ಒಂದು ಬರ್ಬರ ಸಂಸ್ಕೃತಿಯನ್ನು ಚಿತ್ರಿಸುತ್ತದೆ. ಕಾದಂಬರಿಯ ನಾಯಕ ಪ್ರಾಣೇಶಾಚಾರ್ಯರ ಮೃತಾವಸ್ಥೆಯಲ್ಲಿರುವ ಸಂಸ್ಕೃತಿಯೊಂದರ ಬಂಧಿ; ಅದರಲ್ಲಿ ಮಾತ್ರ ಆತ ತನ್ನ ನೆಲೆಯನ್ನು ಗುರುತಿಸಿಕೊಳ್ಳಲು ಸಾಧ್ಯ. ಸಂಸ್ಕೃತಿಯ ಗುಂಪಿನಿಂದ ಹೊರಬಂದು ತನ್ನ ಸ್ವಂತಿಕೆಯನ್ನು ಕಂಡುಕೊಳ್ಳವುದೇ ಆತನಿಗೆ ದೊಡ್ಡ ಹೋರಾಟವಾಗಿಬಿಡುತ್ತದೆ' ಎಂದು ಹೇಳುತ್ತಾರೆ. ಆದರೆ ನೈಪಾಲ್ ಭಾರತದ ಬಗ್ಗೆ ಬರೆಯುವಾಗ ಅನೇಕ ವಿಷಯಗಳಲ್ಲಿ ಮಾಡಿದಂತೆ, 'ಸಂಸ್ಕಾರ' ಬಗ್ಗೆ ಬರೆಯುವಾಗಲೂ, ಕಾದಂಬರಿಯ ಸೂಕ್ಷ್ಮಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಉಡಾಫೆಯ ತೀರ್ಮಾನಗಳನ್ನು ಮಂಡಿಸುತ್ತಾರೆ. ಉದಾಹರಣೆಗೆ, ಅವರ ಪ್ರಕಾರ ಭಾರತೀಯರು ಪ್ರವೃತ್ತಿಯ ಮಟ್ಟದಲ್ಲಿ ಬದುಕುವವರಾದ್ದರಿಂದ ಜಗತ್ತಿನ ವಿವರಗಳನ್ನು ಕಾಣಲಾರರು. ಮತ್ತು ಹೊಸ ವಿಚಾರಗಳನ್ನು ಯೋಚಿಸಲಾರರು. ಆದರೆ ಪ್ರಾಣೇಶಾಚಾರ್ಯ ಪ್ರವೃತ್ತಿಯ ಮಟ್ಟದಲ್ಲಿ ಬದುಕುವ ಪಾತ್ರವಲ್ಲ. ಆತ ಪರಾಂಪರಗತ ಹಿಂದೂ ಸಮಾಜದ 'ಬುದ್ಧಿಜೀವಿ'. ನೈಪಾಲ್‍ರಿಗೆ ಮುಖ್ಯ ಅಂಶವೇ ಹೊಳೆದಿಲ್ಲ. 'ಸಂಸ್ಕಾರ' ಬಗ್ಗೆ ಬರೆದಿರುವ ಎಲ್ಲ ಮಹತ್ವದ ಚಿಂತಕರು, ಎರಿಕ್ ಎರಿಕ್ಸನ್, ಮದನ್, ಮೀನಾಕ್ಷಿ ಮುಖರ್ಜಿ, ಹೈಡ್ರೂನ್ ಬ್ರೂಕ್ನರ್ ಎಲ್ಲರೂ 'ಸಂಸ್ಕಾರ' ನಾಯಕ ಎದುರಿಸುವ ಬಿಕ್ಕಟ್ಟು ಯಾವುದೇ ಸಮಾಜದಲ್ಲಿ ಒಬ್ಬ ಸೂಕ್ಷ್ಮಜ್ಞನಿಗೆ ಎದುರಾಗುವಂಥದ್ದು ಎಂಬ ಕಾರಣಕ್ಕೆ ನೈಪಾಲ್‍ರ ತೀರ್ಮಾನವನ್ನು ತಿರಸ್ಕರಿಸುತ್ತಾರೆ.

ಪ್ರಸಿದ್ಧ ಇಂಗ್ಲಿಷ್ ವಿಮರ್ಶಕಿ ಮೀನಾಕ್ಷಿ ಮುಖರ್ಜಿ 'ಸಂಸ್ಕಾರ' ಗ್ರಾಮೀಣ ಪರಿಸರದ ಚಿತ್ರಣವನ್ನು ಆರ್. ಕೆ. ನಾರಾಯಣರ ಕಾದಂಬರಿಗಳ ಮಾಲ್ಗುಡಿಯ ಜತೆ ಹೋಲಿಸುತ್ತಾರೆ. 'ಸಂಸ್ಕಾರ' ಹಳ್ಳಿ 'ಮಾಲ್ಗುಡಿ'ಗಿಂತ ಹೆಚ್ಚು ಅತಂತ್ರವಾಗಿದೆ ಮತ್ತು ಅವನತಿಯ ಕಡೆ ಮುಖಮಾಡಿದೆ. 'ಸಂಸ್ಕಾರ'ದಲ್ಲಿ ಹಳ್ಳಿಯ ಬದುಕಿನ ಹಲವು ವಿವರಗಳಿದ್ದರೂ ಒಂದೇ ಒಂದು ಮದುವೆಯೂ ಇಲ್ಲ; ಹೆರಿಗೆಯೂ ಇಲ್ಲ; ಬದಲಿಗೆ ಕಾದಂಬರಿಯಲ್ಲಿ ಸಾವು ಮೇಲಿಂದ ಮೇಲೆ ಬರುವ ವಿವರವಾಗಿದೆ ಎಂದು ಬರೆಯುತ್ತಾರೆ. 'ಸಂಸ್ಕಾರ' ಕಾದಂಬರಿಯ ಕೇಂದ್ರದಲ್ಲಿರುವ ಸಮುದಾಯದ ಕಟ್ಟುಪಾಡುಗಳು ಮತ್ತು ವ್ಯಕ್ತಿಯ ಆಯ್ಕೆಯ ನಡುವಿನ ತೊಡಕು ಹಿಂದೂ ಧರ್ಮದ ಸಮಸ್ಯೆ ಮಾತ್ರವಲ್ಲ; ಅದು ಎಲ್ಲ ಸಂಸ್ಕೃತಿಗಳಲ್ಲೂ ಇರುವಂತಹದ್ದು; ಹಾಗಾಗಿ ನೈಪಾಲ್ ಮಾಡಿದಂತೆ ಕಾದಂಬರಿ ಹಿಂದೂ ಅಥವಾ ಬ್ರಾಹ್ಮಣ ಬದುಕಿನ ವಿಮರ್ಶೆ ಮಾತ್ರ ಎಂದು ಭಾವಿಸುವುದು ಕಾದಂಬರಿಯ ಅರ್ಥವನ್ನು ಕುಗ್ಗಿಸಿದಂತೆ ಎಂದು ಮುಖರ್ಜಿ ಅಭಿಪ್ರಾಯಪಡುತ್ತಾರೆ. ಕಾದಂಬರಿಯ ನಾಯಕ ತನಗೆ ಕೊಟ್ಟ 'ಆಚಾರ್ಯ' ಪಾತ್ರದಿಂದ, ಸ್ವಂತದ ಗೊಂದಲಗಳಲ್ಲಿ ಸಿಕ್ಕಿಕೊಂಡ ಪಾತ್ರವಾಗಿ ಬೆಳೆಯುವುದನ್ನು ವಿಮರ್ಶಕ ಲುಕಾಚ್ಸ್ ಹೇಳುವ 'ಸಂದಿಗ್ಧಗಳಿಲ್ಲದ ಪೌರಾಣಿಕ ಪಾತ್ರವೊಂದು ಆಧುನಿಕ ಕಾದಂಬರಿಯ ಸಮಸ್ಯಾತ್ಮಕ ನಾಯಕನಾಗಿ ಬೆಳೆಯುವುದು' ಎಂದು ಮುಖರ್ಜಿ ಭಾವಿಸುತ್ತಾರೆ. 'ಸಮಸ್ಯೆಯ ಪರಿಹಾರ ಮತ್ತು ಸಮಸ್ಯೆಯ ಗುರುತಿಸುವಿಕೆಗಳಲ್ಲಿ ಕಲಾವಿದನಿಗೆ ಇರುವ ಜವಾಬ್ದಾರಿ ಸಮಸ್ಯೆಯನ್ನು ಗುರುತಿಸುವುದು ಮಾತ್ರ' ಎಂಬ ಚೆಖೋವ್‍ನ ಮಾತನ್ನು ಉದ್ಧರಿಸುತ್ತ ಮುಖರ್ಜಿ ' ಕಾರಣಕ್ಕೇನೆ 'ಸಂಸ್ಕಾರ' ಒಂದು ಮಹತ್ವದ ಕೃತಿ' ಎಂದು ಹೇಳುತ್ತಾರೆ.

'ಸಂಸ್ಕಾರ' ಕಾದಂಬರಿಯ ವಿವರಪೂರ್ಣ ಅಧ್ಯಯನ ನಡೆಸಿರುವ ಹೈಡ್ರೂನ್ ಬ್ರೂಕ್ನರ್ ತಮ್ಮ ಪ್ರಬಂಧದಲ್ಲಿ ನೈಪಾಲ್‍ರ ತಿರ್ಮಾನವನ್ನು ತಿರಸ್ಕರಿಸಿ, 'ಸಂಸ್ಕಾರ' ನೈತಿಕ ದ್ವಂದ್ವಕ್ಕೆ ಕಾಲದೇಶಗಳ ಮಿತಿ ಎಂಬುದಿಲ್ಲ. ಯಾವುದೇ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನಿಗೆ ಇಂತಹ ಬಿಕ್ಕಟ್ಟುಗಳು ತಲೆದೋರಬಹುದು ಎಂದು ಅಭಿಪ್ರಾಯಪಡುತ್ತಾರೆ. ಬ್ರೂಕ್ನರ್ 'ಸಂಸ್ಕಾರ'ದಲ್ಲಿ ಸಾಮಾಜಿಕ, ಮಾನಸಿಕ (ವೈಯಕ್ತಿಕ) ಮತ್ತು ಪೌರಾಣಿಕ ಎಂಬ ಮೂರು ಸ್ತರಗಳನ್ನು ಗುರುತಿಸಿ ಅವುಗಳಲ್ಲಿ ಪೌರಾಣಿಕ ಸ್ತರದ ಕುರಿತು ದೀರ್ಘವಾಗಿ ಚರ್ಚಿಸಿದ್ದಾರೆ. " ಕಾದಂಬರಿ ಸಾಮಾಜಿಕ ಕಾದಂಬರಿಗಳ ಪರಂಪರೆಗೆ ಹಾಗೂ ಆಧುನಿಕ ಅಸ್ತಿತ್ವವಾದಿ ನಿಲುವಿಗೆ ಒಂದು ಉತ್ತಮ ಪರ್ಯಾಯವನ್ನು ಸೂಚಿಸುತ್ತದೆ. ಆಚಾರ್ಯರು ಕಾಮುವಿನ ಸಿಸಿಫಸ್‍ನಂತಲ್ಲ, ಬದಲಿಗೆ ಅವರು ವಿಶ್ವಾಮಿತ್ರನ ತ್ರಿಶಂಕುವಿನಂತೆ. ತ್ರಿಶಂಕು ಸಂದಿಗ್ಧತೆಯ ಪ್ರತಿರೂಪ" ಎನ್ನುತ್ತಾರೆ ಬ್ರೂಕ್ನರ್. ಆಧುನಿಕ ಭಾರತೀಯ ಸಾಹಿತ್ಯದ ಸೈದ್ಧಾಂತಿಕ ಚೌಕಟ್ಟು ಮುಖ್ಯವಾಗಿ ಪಾಶ್ಚಿಮಾತ್ಯವಾದದ್ದು ಎಂಬ ಅನಂತಮೂರ್ತಿಯವರ ವಾದವನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ.

'ಸಂಸ್ಕಾರ' ಕಾದಂಬರಿಯ ವಿಮರ್ಶೆಗಳ ಕುರಿತು ಅನಂತಮೂರ್ತಿಯವರ ಪ್ರತಿಕ್ರಿಯೆ ಹೀಗಿದೆ- "ಪ್ರತಿ ಪಾತ್ರದಲ್ಲೂ ಹೀಗೆ ವಿಶಿಷ್ಟವಾಗಿ ಕಂಡ 'ಸಂಸ್ಕಾರ' ದೇಶಕ್ಕೆ ದೂರವಾಗುತ್ತಿದ್ದಂತೆಯೇ ಹೇಗೆ ಹೆಚ್ಚು ಹೆಚ್ಚು ಅಮೂರ್ತವಾಗುತ್ತ ಹೋಗಿದೆ ಎಂಬುದು ನನಗೆ ಈಗಲೂ ಅಚ್ಚರಿಯ ಸಂಗತಿ. ನಮ್ಮ ಜಿಲ್ಲೆಯಲ್ಲಿ 'ಸಂಸ್ಕಾರ' ಕೃತಿಯು ಮಾಧ್ವರ ಮೇಲಿನ ಟೀಕೆಯಾಗಿ ಕಂಡರೆ, ನಮ್ಮ ದೇಶದಲ್ಲಿ ಅದು ಒಟ್ಟಾರೆ ಬ್ರಾಹ್ಮಣರ ಮೇಲಿನ ವ್ಯಂಗ್ಯವಾಗಿ ಕಂಡಿತು. ನಮ್ಮ ದೇಶದಿಂದ ದೂರವಿರುವ ನಯಪಾಲರಿಗೆ ಒಟ್ಟು ಹಿಂದೂಧರ್ಮದ ವಿಶ್ಲೇಷಣೆಯಾಗಿ ನನ್ನ ಕೃತಿ ಕಂಡರೆ, ಖ್ಯಾತ ಮನೋವಿಜ್ಞಾನಿ ಎರಿಕ್ ಎರಿಕ್ ಸನ್‍ರಿಗೆ, ಶ್ರೇಷ್ಠ ನಿರ್ದೇಶಕ ಬರ್ಗ್‍ಮನ್ನಂತೆಯೇ ಮಧ್ಯವಯಸ್ಸಿನ ಮನಸ್ಸಿನ ಕ್ಷೊಭೆಯನ್ನು ಕುರಿತು ನಾನೂ ಬರೆಯುತ್ತಿದ್ದೇನೆ ಎನ್ನಿಸಿತು. ಹೀಗೆ ತನ್ನ ವಿವರಗಳ ವಿಶಿಷ್ಟತೆಯಲ್ಲಿ ನಿಜವಾಗಿಯೂ ಬದುಕಿದ್ದ, ನಮ್ಮೊಡನೆ ಇದ್ದ ವ್ಯಕ್ತಿಗಳನ್ನು ನೆನಪುಮಾಡಿಕೊಡುವ ಕೃತಿಮಾತ್ರವಾಗಿ 'ಸಂಸ್ಕಾರ' ನನ್ನೂರಿನ ಜನರ ಪಾಲಿಗೆ ಸೀಮಿತವಾಯಿತು. ಅವರು ಓದುವಾಗ ನಿಜವಾಗಿಯೂ ನನ್ನ ಕೃತಿಯನ್ನು ಓದಿಲ್ಲ, ಓದುತ್ತಿಲ್ಲ ಎಂದೇ ನಾನು ತಿಳಿದುಕೊಂಡಿದ್ದೇನೆ. ಆದರೆ ಕೃತಿಯ ಇನ್ನೊಂದು ತುದಿಯ ಧ್ವನಿಯನ್ನು ವಿಚಾರವಾಗಿ ಮಾತ್ರವಲ್ಲದೆ ವಿವರಗಳ ಮೂಲಕವೂ ಎರಿಕ್‍ಸನ್‍ನಂತೆ ಹಿಡಿದವನು, ಕೃತಿಯ ಆಶಯಕ್ಕೆ ನಿಜವಾಗಿಯೂ ಹತ್ತಿರವಾಗಿದ್ದಾನೆ".

'ಭಾರತೀಪುರ'

ಯು. ಆರ್. ಅನಂತಮೂರ್ತಿಯವರ 'ಭಾರತೀಪುರ' (1973) ಕಾದಂಬರಿಯನ್ನು ಕುರಿತು ಕೋ.. ಕಾರಂತ, ಎಸ್. ವೆಂಕಟರಾಂ, ಜಿ.ಎಸ್. ಅಮೂರ ಹಾಗೂ ಡಿ. ಆರ್. ನಾಗರಾಜರ ಲೇಖನಗಳು ಪುಸ್ತಕದಲ್ಲಿವೆ. ಗ್ರಂಥದಲ್ಲಿರುವ ಕೆ.ವಿ. ಸುಬ್ಬಣ್ಣ, ಮನುಚಕ್ರವರ್ತಿ, ರಾಮಚಂದ್ರದೇವ ಅವರ ಲೇಖನಗಳಲ್ಲಿ 'ಭಾರತೀಪುರ' ಕಾದಂಬರಿಯ ಚರ್ಚೆ ಇದೆ. 'ಭಾರತೀಪುರ'ವನ್ನು ಕುರಿತ ವಿಮರ್ಶೆಗಳ ಒಟ್ಟಂದದ ಅಭಿಪ್ರಾಯಗಳನ್ನು ಕೆ.ವಿ. ಸುಬ್ಬಣ್ಣ ಹೀಗೆ ಸಂಗ್ರಹಿಸಿದ್ದಾರೆ - "ಒಬ್ಬ 'ಭಾರತೀಯ ಸೋಶಲಿಸ್ಟ್' ಸುಧಾಕರನ ಸಮಾಜ ಸುಧಾರಣೆಯ ಕಥೆ; ಆಧುನಿಕ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಇಂಡಿಯಾದ ತರುಣನೊಬ್ಬನ ತಲ್ಲಣಗಳ ಕಥೆ; ಸಮಾಜ ಸುಧಾರಣೆಯ ವಿಫಲತೆಯ ಕಥೆ."


 ಕೋ. . ಕಾರಂತರ ಪ್ರಕಾರ, ಉಚ್ಚ ವರ್ಗದ-ಫ್ಯೂಡಲ್ ಮನೆತನದ ಬುದ್ಧಿಜೀವಿಯೊಬ್ಬ ಗಟ್ಟಿಯಾಗಲು, ನಿಜವಾಗಲು ಕ್ರಿಯೆಯಲ್ಲಿ ತೊಡಗುವ, ಹಾಗೆ ಕ್ರಿಯೆಯಲ್ಲಿ ತೊಡಗುವಾಗಿನ ಮತ್ತು ತೊಡಗುತ್ತಿರುವಾಗಿನ ದ್ವಂದ್ವ, ಪ್ರಜ್ಞಾಶೀಲತೆ ಮತ್ತು ತೊಡಗುವಿಕೆಯ ದುರಂತ - 'ಭಾರತೀಪುರ' ವಸ್ತು. ಅವರೆನ್ನುವಂತೆ, " ಕಾದಂಬರಿಯನ್ನು ಭಾರತೀಯ ಸಮಾಜವ್ಯವಸ್ಥೆ, ಅದರಲ್ಲಿರುವ ಜಾತಿಪದ್ಧತಿ, ಮೂಢನಂಬಿಕೆ, ದೇವರ ಸರ್ವಾಧಿಕಾರಗಳ ವಿರುದ್ಧ ನಡೆಸಿದ ಬಂಡಾಯ ಎಂದು ವ್ಯಾಖ್ಯಾನಿಸದರೆ ಅದನ್ನು ನಿರ್ದಿಷ್ಟ ಕಾಲ-ವ್ಯವಸ್ಥೆಗೆ ಬಂಧಿಸಿ ವಿಮರ್ಶೆಯಲ್ಲಿ ಅನ್ಯಾಯ ಮಾಡಿದಂತಾಗುತ್ತದೆ. ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಚಾರಿತ್ರಿಕ ಕ್ರಿಯೆಯಲ್ಲಿ ಗಟ್ಟಿಯಾಗಿ ಗರಿಯೊಡೆದು ಹಾರುವ ತೀವ್ರ ಬಯಕೆಯಿಂದಾಗಿ ಕಾದಂಬರಿಯ ಸಂವೇದನಾಶೀಲ ಬುದ್ಧಿಜೀವಿ ಸಾರ್ವಕಾಲಿಕನಾಗುತ್ತಾನೆ. ಹ್ಯಾಮ್ಲೆಟ್‍ನ ದ್ವಂದ್ವ ಹೇಗೆ ಸಾರ್ವಕಾಲಿಕ ಮತ್ತು ಸರ್ವವ್ಯಾಪಿಯೋ ಹಾಗೆಯೇ ಜಗನ್ನಾಥನ ತೊಡಗುವಿಕೆಯೂ ತಲ್ಲಣವೂ ಆಗುತ್ತದೆ" ಎಂದು ಕಾರಂತರು ಅಭಿಪ್ರಾಯಪಟ್ಟಿದ್ದಾರೆ.

ಎಸ್. ವೆಂಕಟರಾಂ ತನ್ನ ಲೇಖನದಲ್ಲಿ, 'ಭಾರತೀಪುರ' ಮನೋನಿರ್ಧಾರ ಮತ್ತು ಪರಿಸರ ಇವುಗಳಲ್ಲಿ ಯಾವುದು ಮುಖ್ಯ? ಅವುಗಳ ಪರಸ್ಪರ ಸಂಬಂಧ ಎಂಥದ್ದು ಎಂಬ ಮುಖ್ಯ ಪ್ರಶ್ನೆಯನ್ನು ಕೇಳುತ್ತದೆ" ಎನ್ನುತ್ತಾರೆ. ಅವರ ಅಭಿಪ್ರಾಯದಂತೆ " ಕಾದಂಬರಿಯಲ್ಲಿ ಒಂದು ಮೋಹಕವಾದ ದಾರ್ಶನಿಕ ಅರಾಜಕತೆಯಿದೆ. ಇದರಲ್ಲಿ ಮಾರ್ಕ್ಸ್, ಸಾರ್ತ್ರೆ, ಲೋಹಿಯಾ ಒಬ್ಬರನ್ನೊಬ್ಬರು ತಳ್ಳಾಡುತ್ತಾರೆ".
 ಜಿ.ಎಸ್. ಅಮೂರ್ ಅವರಿಗೆ 'ಭಾರತೀಪುರ' ನೆಹರೂಯುಗವನ್ನು ಪ್ರತಿನಿಧಿಸುವ ಕಾದಂಬರಿಯಾಗಿ ಕಾಣಿಸುತ್ತದೆ. ತನ್ನ ಲೇಖನದ ಕೊನೆಯಲ್ಲಿ ಅವರು 'ಭಾರತೀಪುರ'ವನ್ನು ರಾಜಾರಾಯರ 'ಕಾಂತಾಪುರ'ದೊಡನೆ ಹೋಲಿಸಿದ್ದಾರೆ.


 ಡಿ. ಆರ್. ನಾಗರಾಜ್ ಅವರು 'ಭಾರತೀಪುರ' ಮೂಲತಃ ಬುದ್ಧಿಜೀವಿ ಮಧ್ಯಮ ವರ್ಗದ ಮಿತಿಗಳ ವಿಮರ್ಶಾ ಬರಹ ಎಂದು ವ್ಯಾಖ್ಯಾನಿಸುತ್ತಾರೆ. ಕಾದಂಬರಿ ಬದಲಾವಣೆ ಮತ್ತು ಪ್ರತಿಭಟನೆಗಳ ಸಾಧ್ಯತೆಯ ಶೋಧವಾಗಿದೆ ಎನ್ನುವ ನಾಗರಾಜ್, ವಾಸ್ತವವಾದೀ ಕಾದಂಬರಿ ಪ್ರಕಾರದ ಎಲ್ಲ ಬಾಹ್ಯ ಗುಣಗಳೂ ಇರುವ ಕಾದಂಬರಿ, ಒಳಗಿನಿಂದ ವಾಸ್ತವವಾದಿ ಕಾದಂಬರಿ ಪ್ರಕಾರದ ಎಲ್ಲ ನಿಯಮಗಳನ್ನೂ ಮುರಿಯಲು ಪ್ರಯತ್ನಿಸುತ್ತದೆ ಎಂದು ವಿವರಿಸುತ್ತಾರೆ. ಅವರೆನ್ನುವಂತೆ, 'ಭಾರತೀಪುರ' ಚರಿತ್ರೆಯನ್ನು ಮೀರಿ ನಿಂತು ತನ್ನ ಪ್ರಸ್ತುತತೆಯನ್ನು ಸಾಬೀತುಪಡಿಸುವ ಕಾದಂಬರಿ. 'ಭಾರತೀಪುರ'ವನ್ನು ಕುರಿತ ಡಿ. ಆರ್. ನಾಗರಾಜರ ಆಕ್ಷೇಪ ಏನೆಂದರೆ ಇದರಲ್ಲಿ ಬರುವ ದಲಿತರು ಸರಿಯಾಗಿ ಚಿತ್ರಿತರಾಗಿಲ್ಲ; ಅವರ ಪಾತ್ರಚಿತ್ರಣದಲ್ಲಿ ಒಳಬದುಕಿನ ಅರಿವಿನ ಅಭಾವವಿದೆ.

'ಅವಸ್ಥ'

'ಅವಸ್ಥೆ' 1978ರಲ್ಲಿ ಪ್ರಕಟವಾದ ಕಾದಂಬರಿ. 'ಅವಸ್ಥೆ' ಕುರಿತು ಬಂದ ವಿಮರ್ಶೆಗಳ ಆಶಯವನ್ನು ಕೆ.ವಿ. ಸುಬ್ಬಣ್ಣ ಹೀಗೆ ಸಂಗ್ರಹಿಸಿದ್ದಾರೆ - "ಹಿಂದುಳಿದ ಜಾತಿಗಳಿಂದ ಮೇಲೆದ್ದು ಬಂದ ಉತ್ಸಾಹಿ ಪ್ರಾಮಾಣಿಕ ರಾಜಕೀಯ ನಾಯಕನೊಬ್ಬನು ಭ್ರಷ್ಟ ರಾಜಕಾರಣದ ಬಲೆಯಲ್ಲಿ ಸಿಲುಕಿ ಸೋಲುವ ಕಥೆ; ರೈತ ಚಳುವಳಿಯ ರಾಜಕಾರಣದ ಸೋಲಿನ ಕಥೆ. 'ಅವಸ್ಥೆ' ಕುರಿತು ಎನ್. ರಾಮಚಂದ್ರ ಉಡುಪ, ಡಾ| ಜಿ.ಎಸ್. ಅಮೂರ, ಡಾ| ಸಿ. ಎನ್. ರಾಮಚಂದ್ರನ್, ಡಾ| ಕಾರ್ಲೋಸ್ ಅವರು ಬರೆದಿರುವ ಲೇಖನಗಳು ಗ್ರಂಥದಲ್ಲಿವೆ. ಗ್ರಂಥದಲ್ಲಿರುವ ಕೆ.ವಿ. ಸುಬ್ಬಣ್ಣ, ಮನುಚಕ್ರವರ್ತಿ ಹಾಗೂ ರಾಮಚಂದ್ರದೇವ ಅವರ ಲೇಖನಗಳಲ್ಲಿ 'ಅವಸ್ಥೆ' ಚರ್ಚೆ ಇದೆ. (ಡಾ| ಸಿ.ಎನ್. ರಾಮಚಂದ್ರನ್ ತನ್ನ ಲೇಖನದಲ್ಲಿ 'ಅವಸ್ಥೆ'ಯನ್ನು ಕುರಿತ ಯಶವಂತ ಚಿತ್ತಾಲ, ಶಿವರಾಮು ಕಾಡನಕುಪ್ಪೆ, ಪೋಲಂಕಿ ರಾಮಮೂರ್ತಿ ಹಾಗೂ ರಾಮಚಂದ್ರ ಉಡುಪರ ಲೇಖನಗಳನ್ನು ಚರ್ಚಿಸಿದ್ದಾರೆ.

ಎನ್. ರಾಮಚಂದ್ರ ಉಡುಪರ ಅಭಿಪ್ರಾಯದಂತೆ 'ಅವಸ್ಥೆ' ನಮ್ಮ ರಾಜಕೀಯ ಸಂಸ್ಕೃತಿಯ ಇತಿಮಿತಿಗಳನ್ನು ತಳಮಟ್ಟ ಶೋಧಿಸುವ ಕೃತಿ. ಅವರು 'ಅವಸ್ಥೆ' ರಾಜಕೀಯ ಹಂದರವನ್ನು ಮೂರು ಸ್ತರಗಳಲ್ಲಿ ಗುರುತಿಸುತ್ತಾರೆ: ಒಂದು - ಬೈರಾಗಿ, ಮಹೇಶ್ವರಯ್ಯ ಮತ್ತು ಹನುಮನಾಯ್ಕ ಮುಂತಾದವರ ಅದಮ್ಯ ಜೀವನೋತ್ಸಾಹವನ್ನು ಪ್ರತಿನಿಧಿಸುವ ಪ್ರಪಂಚ; ಎರಡು - ಒಂದು ಸ್ಪಷ್ಟ ಉದ್ದೇಶಕ್ಕಾಗಿ ಜೀವನವನ್ನು ರೂಪಿಸಿಕೊಳ್ಳುವ, ಒಂದು ರೀತಿಯಲ್ಲಿ ಮಿತಿಗೊಳಿಸಿಕೊಳ್ಳುವ ಅಣ್ಣಾಜಿ, ನಾಗರಾಜರ ಕ್ರಾಂತಿಕಾರಿ ರಾಜಕೀಯ; ಮೂರು - ಎರಡು ಪ್ರಪಂಚಗಳಲ್ಲೂ ಬೇರುಬಿಟ್ಟ ಕೃಷ್ಣಪ್ಪ ಗೌರಿ ದೇಶಪಾಂಡೆಯವರ ಲಿಬರಲ್ ಪ್ರಪಂಚ. ಅನಂತಮೂರ್ತಿಯವರ ಮೊದಲಿನ ಕಾದಂಬರಿಗಳಿಗೆ ಸಾಧ್ಯವಾಗದಂಥ ಆದರ್ಶ-ವಾಸ್ತವಗಳ 'ಡಯಲೆಕ್ಟಿಕ್'ನ್ನು 'ಅವಸ್ಥೆ' ಸಾಧಿಸುತ್ತದೆ ಎಂದು ಜಿ.ಎಸ್. ಅಮೂರ್ ಅಭಿಪ್ರಾಯಪಡುತ್ತಾರೆ.

'ಅವಸ್ಥೆ' ಒಂದು ಗಂಭೀರ ರಾಜಕೀಯ ಕಾದಂಬರಿ ಎನ್ನುತ್ತಾರೆ ಡಾ| ಸಿ.ಎನ್. ರಾಮಚಂದ್ರನ್ - ಏಕೆಂದರೆ ಅದು ವ್ಯವಸ್ಥೆಯ ಆಳದಲ್ಲಿರುವ - ವ್ಯವಸ್ಥೆ ಶಾಸಕ ಮತ್ತು ಶಾಸನಯಂತ್ರ ಇವುಗಳನ್ನೊಳಗೊಂಡಿರಬಹುದು ಅಥವಾ ಮಾಲೀಕವರ್ಗ-ನೌಕರವರ್ಗ ಇವರುಗಳ ಮಧ್ಯೆ ಸಂಪರ್ಕ ಕಟ್ಟಿಸುವ ಟ್ರೇಡ್ ಯೂನಿಯನ್ ವ್ಯವಸ್ಥೆಯಾಗಿರಬಹುದು. ( ಇಂಗ್ಲಿಷ್‍ನಲ್ಲಿ ಡಿಸ್ರೇಲಿಯ 'ಸಿಬಿಲ್' ಕೃತಿಯಂತೆ, ಅಥವಾ ಕನ್ನಡದಲ್ಲಿ ವ್ಯಾಸರಾಯ ಬಲ್ಲಾಳರ 'ಬಂಡಾಯ'ದಂತೆ.) ಯಾವುದೇ ವ್ಯವಸ್ಥೆಯ ಆಳದಲ್ಲಿ ಅನಿವಾರ್ಯವಾಗಿರುವ ದ್ವಂದ್ವಾತ್ಮಕ ಸ್ಥಿತಿಯನ್ನು ಮತ್ತು ಪರಸ್ಪರ ವಿರೋಧಾತ್ಮಕ ಸ್ಥಿತಿಗಳನ್ನು 'ಅವಸ್ಥೆ' ನಿಖರವಾಗಿ, ಪರಿಣಾಮಕಾರಿಯಾಗಿ ಗುರುತಿಸುತ್ತದೆ ಎಂಬ ಕಾರಣಕ್ಕಾಗಿ. 'ಅವಸ್ಥೆ' ಗದ್ಯದಲ್ಲಿ ಕಾವ್ಯದ ಧ್ವನಿಶಕ್ತಿ ಇರುವುದನ್ನೂ ರಾಮಚಂದ್ರದೇವ ಗುರುತಿಸಿದ್ದಾರೆ. ಲಂಕೇಶ್ ಅವರು ಅನಂತಮೂರ್ತಿಯವರಿಗೆ ಬರೆದ ಸುದೀರ್ಘ ಪತ್ರವೊಂದರಲ್ಲಿ 'ಅವಸ್ಥೆ' ಗುಣದೋಷಗಳನ್ನು ಚರ್ಚಿಸಿದ್ದಾರೆ. ( ಪತ್ರ ಬೆಂಗಳೂರಿನ 'ಶೂದ್ರ' ಪತ್ರಿಕೆಯ 1979ರಮಾರ್ಚ್ ಸಂಚಿಕೆಯಲ್ಲಿ ಪ್ರಕಟವಾಗಿದೆ).


ಡಾ| ಕಾರ್ಲೋಸ್ ಅವರು 'ಅವಸ್ಥೆ' ತಮಿಳು ಭಾಷಾಂತರಕ್ಕೆ ಬರೆದಿರುವ ಮುನ್ನುಡಿಯಲ್ಲಿ ತಮಿಳು ಸಂಸ್ಕೃತಿಯ ಇಂದಿನ ಸ್ವರೂಪಕ್ಕೂ, 'ಅವಸ್ಥೆ' ಚಿತ್ರಿಸುವ ಸಂಸ್ಕೃತಿಯ ಸ್ವರೂಪಕ್ಕೂ ಇರುವ ವ್ಯತ್ಯಾಸ ವಿವರಿಸಿದ್ದಾರೆ.
 ಪ್ರಸಿದ್ಧ ರಂಗಭೂಮಿ ವಿಮರ್ಶಕ ರುಸ್ತುಂ ಭರೂಚ ತನ್ನ 'ನಂಬಿಕೆಯ ಪ್ರಶ್ನೆ' ಗ್ರಂಥದಲ್ಲಿ 'ಅವಸ್ಥೆ'ಯನ್ನು ವಿವರವಾಗಿ ಚರ್ಚಿಸಿದ್ದಾರೆ. ಭರೂಚಿ ವಿಶ್ಲೇಷಿಸಿರುವಂತೆ," 'ಅವಸ್ಥೆ' ವಿವೇಚನೆಯಿಂದ ಪ್ರಾಮಾಣಿಕತೆಯಿಂದ ಬದುಕಿನಲ್ಲಿ ನಂಬಿಕೆಯ ಸ್ವರೂಪವನ್ನು ಶೋಧಿಸುವ, ಶೋಧನೆಯಿಂದ ದಕ್ಕುವ ಕಾಣ್ಕೆಯ ವೈರುಧ್ಯಗಳನ್ನು ಅನ್ವೇಷಿಸುವ ಕಾದಂಬರಿ. ಅನಂತಮೂರ್ತಿ ತಮ್ಮಲ್ಲಿರುವ ಧರ್ಮದ ಟೀಕಾಕಾರರನ್ನು ಎಂದೂ ಅವರು ಅಪಹಾಸ್ಯ ಮಾಡದಂತೆ ಎಚ್ಚರದಲ್ಲಿಡುವುದನ್ನು ನಾವು ಗಮನಿಸಲೇಬೇಕು. ಪ್ರತಿಯೊಬ್ಬ ವ್ಯಕ್ತಿಯ ಯಥಾರ್ಥತೆಯನ್ನು ಗೌರವಿಸುವ ಅನಂತಮೂರ್ತಿ ನಡುವೆ ಬರುವ ಮತಾಚಾರಗಳ ಸಾಧ್ಯತೆಯನ್ನ ಗೌರವಿಸುತ್ತಾರೆ. ಮತಾಚಾರಗಳನ್ನು ಗೌರವಿಸಿದರಷ್ಟೆ ಸಾಲದು ಎಂದು ಇಲ್ಲಿ ವಾದಿಸಬಹುದು. ಇಲ್ಲಿ ಮುಖ್ಯವಾಗುವುದು ನಿರ್ದಿಷ್ಟ ಪ್ರಾತಿನಿಧಿಕೆಯಲ್ಲಿ ಮತಾಚಾರಗಳು ದಾಖಲುಗೊಳ್ಳುವ ನಿರ್ದಿಷ್ಟ ಕ್ರಮ. ಅನಂತಮೂರ್ತಿ ಅವರ ಕಥನಶೈಲಿ ಎಲ್ಲಾ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಆಚರಣೆ, ಕಲ್ಪನೆ, ಪುರಾಣ, ಪ್ರತಿಮೆಗಳ ಮೂಲಕ ಶೋಧಿಸಿದರೂ, ಅವುಗಳ ಪರಿಣಾಮಕ್ಕೆ ಪಕ್ಕಾಗದಂತೆ ಉಳಿಯುವುದರ ಮೂಲಕ ತನ್ನ ವಿಶಿಷ್ಟತೆಯನ್ನು ಸಾಧಿಸುತ್ತದೆ. ನಾವೇನು ಹೇಳಲು ಬಯಸುತ್ತಿದ್ದೆವೋ, ಅದರ ಮೇಲೆ ನಿಯಂತ್ರಣವಿಲ್ಲದ ಇಂದಿನ ಸ್ಥಿತಿಯನ್ನು ಅನಂತಮೂರ್ತಿಯವರಿಂದಾಗಿ ಕಥನಕಲೆ ನಮ್ಮ ಸುತ್ತಲಿನ ರೋಗಗ್ರಸ್ತ ವಾತಾವರಣಕ್ಕೆ ಖಚಿತ ಉತ್ತರವಷ್ಟೆ ಅಲ್ಲ, ರೋಗಗ್ರಸ್ತ ಸ್ಥಿತಿಗೆ ಸ್ಪಷ್ಟನೆ ಮತ್ತು ಪರಿವರ್ತನೆಯ ಮೂಲಕ ನಿಗ್ರಹ ಮತ್ತು ಪಾರಮಾರ್ಥಿಕ ಚಿಂತನೆಯ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಸೂಕ್ಷ್ಮವಾದ ಪ್ರಯತ್ನ ಕೂಡ. ಕಾಣ್ಕೆಯಲ್ಲಿ ಸಾಹಿತಿಗಳನ್ನು ನಮ್ಮ ವಿಶ್ವದ ಅಸ್ವೀಕೃತ ಶಾಸಕರೆಂಬ ವೈಚಾರಿಕ ಮಾತಿನಲ್ಲಿರುವ ಸತ್ಯನ್ನು ಕಾಣಬಹುದು" ಎನ್ನುತ್ತಾರೆ ರುಸ್ತುಂ ಭರೂಚ.
 ಭವ'ರಲ್ಲಿ ಪ್ರಕಟವಾದ 'ಭವ' ಕಾದಂಬರಿಯನ್ನು ಕುರಿತು ಅನಂತಮೂರ್ತಿಯವರು, "ಅದೊಂದು ಅಸ್ತವ್ಯಸ್ತ ಕೃತಿ, ನಾನು ಹೇಳುತ್ತಿರುವದರ ಮೇಲೆ ಸಂಪೂರ್ಣ ಹತೋಟಿ ನನಗೆ ಇರಲಿಲ್ಲ" ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಖರ ಸ್ವವಿಮರ್ಶೆ ಇರುವ ಲೇಖಕರು ಮಾತ್ರ ಹೀಗೆ ಹೇಳುವುದು ಸಾಧ್ಯ. ಗ್ರಂಥದಲ್ಲಿ 'ಭವ'ವನ್ನು ಕುರಿತ ಜಿ.ಎಸ್. ಅಮೂರ ಹಾಗೂ ಡಾ| ಸಿ.ಎನ್. ರಾಮಚಂದ್ರನ್ ಅವರ ಲೇಖನಗಳಿವೆ. ಕುರ್ತಕೋಟಿ ಹಾಗೂ ರಾಮಚಂದ್ರದೇವ ಅವರು ಗ್ರಂಥದಲ್ಲಿರುವ ತಮ್ಮ ಲೇಖನಗಳಲ್ಲಿ 'ಭವ'ವನ್ನು ಚರ್ಚಿಸಿದ್ದಾರೆ.
'1994
 ಸಂಸ್ಕಾರದಲ್ಲಿ ಇರುವಿಕೆಯ ಸಮಸ್ಯೆಯನ್ನು, ಜೀವಿಗಳು ಎದುರಿಸುವ ಬೇರೆ ಬೇರೆ ವಿಧಾನಗಳನ್ನು ವಾಸ್ತವ ಪಾತ್ರ, ಸನ್ನಿವೇಶಗಳ ಮೂಲಕ ಶೋಧಿಸುವ ಪ್ರಯತ್ನ 'ಭವ'ದಲ್ಲಿದೆ. ಅವರ ಬಹುಮುಖತೆಯಿಂದಾಗಿ ಅನಂತಮೂರ್ತಿಯವರ ಬೇರೆ ಕಾದಂಬರಿಗಳಿಗಿಲ್ಲದ ಮುಕ್ತತೆ ಅದಕ್ಕೆ ದೊರಕಿದೆ ಎನ್ನುತ್ತಾರೆ ಜಿ.ಎಸ್. ಅಮೂರ್.
 ಕೀರ್ತಿನಾಥ ಕುರ್ತಕೋಟಿಯವರು ಬರೆದಿರುವಂತೆ, 'ಭವ' ಕಾದಂಬರಿಯ ಇನ್ನೊಂದು ವಿಶೇಷತೆ ಏನೆಂದರೆ ಅನಂತಮೂರ್ತಿಯವರ, ಹೆಣ್ಣಿನ ಬಗೆಗಿನ ದೃಷ್ಟಿಕೋನ, ಪರಕೀಯಳಾದ ಹೆಣ್ಣನ್ನು ಸ್ವಕೀಯಳನ್ನಾಗಿಸಿಕೊಳ್ಳುವ ಸಾಮಾಜಿಕ ಕ್ರಮವನ್ನು 'ಭವ' ಅಲ್ಲಗೆಳೆಯುವುದಿಲ್ಲ. ಗಂಡು ಹೆಣ್ಣಿನಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆಯೂ ಕಾದಂಬರಿಗೆ ಅರಿವಿದೆ. ಆದರೆ ಕಾಮವೊಂದನ್ನು ಬಿಟ್ಟು ಬೇರೆ ವಿಧಾನಗಳಿಂದಲೂ ಹೆಣ್ಣಿನೊಡನೆ ಸಂಬಂಧ ಅಷ್ಟೇ ಉತ್ಕಟವಾಗಬಲ್ಲದೆಂಬುದನ್ನು 'ಭವ' ಸಮರ್ಥವಾಗಿ ನಿರೂಪಿಸುತ್ತದೆ. ದಿನಕರ ಮತ್ತು ಸೀತಮ್ಮ ಅವರ ಸಂಬಂಧ ಬಗೆಯದು.
 ಕೆ. ಸತ್ಯನಾರಾಯಣ ಅವರು ಬರೆದಿರುವಂತೆ, ಬರವಣಿಗೆಯಲ್ಲಿಯ ಆವೇಗ ಮತ್ತು ಕಥಾವಸ್ತುವಿನ ಮೇಲಿರುವ ಅತಿವ್ಯಾಮೋಹದಿಂದಾಗಿ ಸ್ವಲ್ಪ ಸೊರಗಿದಂತೆ ಕಾಣುವ ಕಾದಂಬರಿಯಲ್ಲಿ ಅನಂತಮೂರ್ತಿ ಒಂದು ಮುಖ್ಯವಾದ ವಿಚಾರವನ್ನು ಪ್ರಕಟಿಸಿದ್ದಾರೆ. ಕತೆ ಕಾದಂಬರಿಗಳೆಂದರೆ ಸಾಮಾಜಿಕ ಚರಿತ್ರಗಳೆಂದು ತಿಳಿದು ಓದುವವರಿಗೆ ಕಾದಂಬರಿ ಒಂದು ಆಘಾತವೇ ಸರಿ. ಚಾರಿತ್ರಿಕ ದೃಷ್ಟಿಯಿಂದ ನೋಡಿದಾಗ ದಿಕ್ಕುದೆಸೆ ಕಾಣದ, ತೀರಾ ಅಪ್ರಸ್ತುತವಾದ ಹುಡುಕಾಟಗಳಲ್ಲಿ ತೊಡಗಿದಂತೆ ಕಾಣುವ ಜನರ ಬದುಕಿನ ಮೂಲಕವೇ ನಮ್ಮ ಕಾಲವನ್ನು ಶೋಧಿಸುವುದಕ್ಕೆ ಬದ್ಧವಾಗಿರುವುದೇ ಕಾದಂಬರಿಯ ಹೆಗ್ಗಳಿಕೆ. ಅನಂತಮೂರ್ತಿಯವರ ಹಿಂದಿನ ಬರವಣಿಗೆಗಳನ್ನು ಗಮನಿಸಿದವರೆಗೆ ಇದು ಎಂತಹ ಮಹತ್ವದ ಬದಲಾವಣೆ ಎಂದು ಅರ್ಥವಾಗುತ್ತದೆ.
 ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು 'ಭವ' ಕಾದಂಬರಿಯನ್ನು ವಿಮರ್ಶಿಸುತ್ತ, ಹಾಗೆ ನೋಡಿದರೆ 'ಭವ' ಕಾದಂಬರಿ ಒಟ್ಟಂದದಲ್ಲಿ 'ಸಂಸ್ಕಾರ'ದಂತೆ ನಮಗೆ ದಟ್ಟವಾದ ಅನುಭವವನ್ನು ನೀಡುವುದಿಲ್ಲ. 'ಭಾರತೀಪುರ' 'ಅವಸ್ಥೆ'ಗಳಂತೆ ಚಿಂತನೆಯನ್ನೇ ಅನುಭವವಾಗಿಸುವ ಪ್ರಯತ್ನವೂ ಇಲ್ಲಿಲ್ಲ. ಅನಂತಮೂರ್ತಿ ಈ ಕಾದಂಬರಿಯ ಮೂಲಕ ತಮ್ಮ ಸೃಜನಶೀಲತೆಯನ್ನು ಹೊಸ ಪ್ರಯೋಗಕ್ಕಾಗಿ ಒಡ್ಡಿಕೊಂಡಿದ್ದಾರೆ. ಆದ್ದರಿಂದಲೇ ಇಲ್ಲಿ ಪ್ರಾಣೇಶಾಚಾರ್ಯ, ಜಗನ್ನಾಥ ಅಥವಾ ಕೃಷ್ಣಪ್ಪ - ಇಂಥ ಪ್ರಾತಿನಿಧಿಕ ಪಾತ್ರಗಳಿಲ್ಲ. 'ನನ್ನ ಬರವಣಿಗೆಯ ಆಶಯ ಪಾತ್ರ ಸೃಷ್ಟಿಯಲ್ಲ' ಎಂದು ಅನಂತಮೂರ್ತಿಯವರೇ ಹೇಳಿಕೊಂಡಿದ್ದರೂ ಇದುವರೆಗಿನ ಅವರ ಕಾದಂಬರಿಗಳು ಪಾತ್ರಸೃಷ್ಟಿಯ ಮೂಲಕವೇ ಸಮಸ್ಯೆಯ ಪೃಥಕ್ಕರಣಕ್ಕೆ ಪ್ರಯತ್ನಿಸಿದಂಥವು. ಆದರೆ 'ಭವ' ಕಾದಂಬರಿಯಲ್ಲಿ; ಅನಂತಮೂರ್ತಿಯವರು ತಮ್ಮ ಆಶಯವನ್ನು ಸೃಜನಶೀಲ ಸಂದರ್ಭದಲ್ಲಿ ನಿಜವಾಗಿಸುವ ಅರ್ಥಪೂರ್ಣ ಪ್ರಯೋಗ ನಡೆಸಿದ್ದಾರೆ. ಇದೇ ಕಾರಣದಿಂದಿರಬೇಕು 'ಭವ' ಕಾದಂಬರಿಯ ಪಾತ್ರಗಳು ರಕ್ತಮಾಂಸ ತುಂಬಿಕೊಳ್ಳದೆ ಪೇಲವವಾಗಿ ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ. ಅವರು ಗುರುತಿಸಿರುವಂತೆ, ಮದುವೆ ಎಂಬ ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿರುವುದರ ಬಗಗಿನ ಚಿಂತನೆ - 'ಭವ' ಕಾದಂಬರಿಯ ಮತ್ತೊಂದು ನೆಲೆ. ಕಾದಂಬರಿಯಲ್ಲಿ ಬರುವ ದಾಂಪತ್ಯವೆಲ್ಲವೂ ವಿಷಮದಾಂಪತ್ಯಗಳಾಗಿ ಚಿತ್ರಿತವಾಗಿದ್ದು, ದಾಂಪತ್ಯೇತರ ಗಂಡು-ಹೆಣ್ಣಿನ ಸಂಬಂಧದಲ್ಲಿ ಸೌಹಾರ್ದತೆಯನ್ನು ನಾವು ಕಾಣುತ್ತೇವೆ.
 ಭವ'ವನ್ನು ಕುರಿತ ತನ್ನ ಅತೃಪ್ತಿಗೆ ಡಾ| ಸಿ.ಎನ್. ರಾಮಚಂದ್ರನ್ ಎರಡು ಕಾರಣಗಳನ್ನು ನೀಡುತ್ತಾರೆ - ಸಿದ್ಧ ಪಾತ್ರಗಳು ಮತ್ತು ಸ್ತ್ರೀ-ಪುರುಷ ಸಂಬಂಧಕ್ಕೆ ಅಸಮರ್ಥನೀಯ ಎನಿಸುವಷ್ಟು ಕೊಟ್ಟಿರುವ ಒತ್ತು. ಅನಂತಮೂರ್ತಿಯವರ ಯಶಸ್ವೀ ಕೃತಿಗಳೆಲ್ಲವೂ ('ಸಂಸ್ಕಾರ', 'ಅವಸ್ಥೆ', 'ಬರ' ಇತ್ಯಾದಿ) ವೈಯಕ್ತಿಕ ಹಾಗೂ ಸಾಮಾಜಿಕ ಮುಖಗಳನ್ನು, ಕಾಳಜಿಗಳನ್ನು ಒಟ್ಟಿಗೇ ಪರಸ್ಪರ ಪೂರಕವಾಗಿ ಬೆಸೆಯುತ್ತವೆ. ಆದರೆ 'ಭವ' ವೈಯಕ್ತಿಕ ನೆಲೆಯಲ್ಲಿ ಮಾತ್ರ ತನ್ನ ಶೋಧವನ್ನು ಮುಂದುವರಿಸುತ್ತದೆ ಎನ್ನುತ್ತಾರೆ ರಾಮಚಂದ್ರನ್. ಅವರು ಹೇಳುವಂತೆ, 'ಭವ'ದಲ್ಲಿ ಆರ್ದ್ರತೆಯಿದೆ. ಕಸುಬುದಾರಿಕೆ ಇದೆ. ಆದರೆ ಇವೆರಡೂ ಒಂದನ್ನೊಂದು ಸಂಧಿಸುವುದೇ ಇಲ್ಲ. ಕೃತಿಯಲ್ಲಿ ಚಿಕ್ಕ ಚಿಕ್ಕ ದ್ವೀಪಗಳನ್ನು ನಾವು ಕಾಣುತ್ತೇವೆಯೇ ಹೊರತು ಎಲ್ಲವನ್ನೂ ತನ್ನೊಳಗೆ ಸೆಳೆದು ಹೊಸತೊಂದು ಸೃಷ್ಟಿಸುವ 'ಕಾಣ್ಕೆ'ಯನ್ನಲ್ಲ. ರಾಮಚಂದ್ರದೇವ ಅವರ ಪ್ರಕಾರ, "'ಭವ' ಇನ್ನೂ ತಿದ್ದಬೇಕಾದ ಒಂದು ಡ್ರಾಫ್ಟಿನಂತಿದೆ. ಪಾತ್ರಗಳು ಸ್ಫುಟವಾಗಿ ಬೆಳೆದಿಲ್ಲ; ಶ್ರೀಚಕ್ರ ಮೆಟಫರ್ ಆಗಿ ಬೆಳೆದಿಲ್ಲ."ಡಾ| ಆರ‍್ಕೆ ಮಣಿಪಾಲ ಅವರು 'ಭವ'ವನ್ನು ವಿಮರ್ಶಿಸುತ್ತ ಅದು ಒಂದು ಸಣ್ಣಕತೆಯ ಕ್ಯಾನ್ವಾಸ್ ಉಳ್ಳ ಸಾಮಾನ್ಯ ಕಾದಂಬರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಲಂಕೇಶರು 'ಭವ' ಶಿಥಿಲ ಬರವಣಿಗೆಯನ್ನು ಚರ್ಚಿಸಿದ್ದಾರೆ.
 ಕಾದಂಬರಿ ತ್ರಿವಳಿ'ಅನಂತಮೂರ್ತಿಯವರ ಕಾದಂಬರಿ ತ್ರಿವಳಿ' ಎಂಬ ಕೆ.ವಿ. ಸುಬ್ಬಣ್ಣನವರ ಲೇಖನದಲ್ಲಿ ಕನ್ನಡ ವಿಮರ್ಶೆಯನ್ನು ಬೆಳೆಸುವ ಒಳನೋಟಗಳಿವೆ. 'ಸಂಸ್ಕಾರ' 'ಭಾರತೀಪುರ' 'ಅವಸ್ಥೆ' ಕೃತಿಗಳನ್ನು 'ಕಾದಂಬರಿ ತ್ರಿವಳಿ' ಎಂದು, ಇವು ಪ್ರತ್ಯೇಕ ಕಾದಂಬರಿಗಳಲ್ಲ, ಒಂದೇ ಕೃತಿಯ ಮೂರು ಭಾಗಗಳು ಎಂದು ಸುಬ್ಬಣ್ಣ ಪರಿಗಣಿಸುತ್ತಾರೆ. ಮೂರರಲ್ಲಿ ಜಾತಿವ್ಯವಸ್ಥೆಯ ಬೇರು ಸಡಿಲವಾಗಿ ಅಲ್ಲಾಡಲು ತೊಡಗುವುದು, ಅಲ್ಲಿಂದ ಸಾಮಾಜಿಕ ಚಲನೆ ವ್ಯವಹಾರ ಕ್ರಿಯೆಗಳು, ಅನಂತರ ಸಾಮಾಜಿಕ ಕ್ರಿಯೆಗೆ ಅಗತ್ಯವಾದ ರಾಜಕೀಯ ಚಟುವಟುಕೆ ಹೀಗೆ ಅನುಕ್ರಮವಾದ ಹರಿವು ಕಾಣಿಸುತ್ತದೆ; ತೀರ್ಥಹಳ್ಳಿಯ ಮೂಲವಾಗಿ ಕಡೆಗೆ ರಾಜಧಾನಿಯ ತನಕ ವಿಸ್ತರಿಸಿಕೊಳ್ಳುವ ಕಾದಂಬರಿ ತ್ರಿವಳಿಯು ಒಂದು ರೀತಿಯಲ್ಲಿ ಕಾಲದ ಇಂಡಿಯಾದ ಇತಿಹಾಸವನ್ನೇ ಬಿಂಬಿಸುವಂತೆ ಕಾಣುತ್ತದೆ ಎಂದು ಸುಬ್ಬಣ್ಣ ವಿವರಿಸುತ್ತಾರೆ. 'ಸಂಸ್ಕಾರ' ಕಾದಂಬರಿಯ ಘಟನೆಗಳ ಕಾಲ 1945-46 ಎಂಬ ಅಂಶದತ್ತ ಸುಬ್ಬಣ್ಣ ನಮ್ಮ ಗಮನ ಸೆಳೆಯುತ್ತಾರೆ. ಎನ್. ಮನುಚಕ್ರವರ್ತಿಯವರು ತನ್ನ ಲೇಖನದಲ್ಲಿ ವಸಾಹತುಶಾಹಿ ಅನುಭವಕ್ಕೆ ಅನಂತಮೂರ್ತಿಯವರ ಸೃಜನಾತ್ಮಕ ಕೃತಿಗಳು ತೋರುವ ಕ್ರಿಯಾತ್ಮಕ ಪ್ರತಿಕ್ರಿಯೆಗಳನ್ನು ಚರ್ಚಿಸಿದ್ದಾರೆ. ವಸಾಹತುಶಾಹಿ ಅನುಭವಕ್ಕೆ ಸಂಬಂಧಿಸಿದ ಹಾಗೆ ಅನಂತಮೂರ್ತಿಯವರ ಕೃತಿಗಳಲ್ಲಿ ಕಾಣಿಸುವ ವಿಶಿಷ್ಟ ನೋಟ ಸೃಜನಶೀಲತೆಗೆ ಮಾತ್ರ ಸೀಮಿತವಾಗದೆ ಅವೈಚಾರಿಕತೆ, ಇರುವಿಕೆಯ ಸ್ಥಿತಿ, ವಿಕೇಂದ್ರೀಕರಣ ಮುಂತಾದ ವಿವಿಧ ದಿಕ್ಕೆನೆಡೆ ತನ್ನ ಅರ್ಥಸಾಧ್ಯತೆಯನ್ನು ಚಾಚುತ್ತದೆ ಎನ್ನುವ ಮನುಚಕ್ರವರ್ತಿ ವಿಶಿಷ್ಟ ನೋಟವನ್ನು 'ಜರತ್ಕಾರು ಸ್ಥಿತಿಯ ನೋಟ' ಎಂದು ಕರೆಯುತ್ತಾರೆ. ಲೇಖನ ಆತುರದ ಓದಿಗೆ ದಕ್ಕುವುದಿಲ್ಲ.ಸಂಸ್ಕಾರ' 'ಭವ' ಕಾದಂಬರಿಗಳಲ್ಲಿ ಹಾಗೂ 'ಪ್ರಕೃತಿ' ಸಣ್ಣಕತೆಯಲ್ಲಿ ಕಾಮಿನಿ-ಕಾಂಚನಗಳ ನಿಗ್ರಹವನ್ನು ವಿರೋಧಿಸುತ್ತ ಮುಕ್ತ ಸಮಾಜವೊಂದನ್ನು ಆಶಿಸುವ ಅನಂತಮೂರ್ತಿ, ಲೈಂಗಿಕತೆ ಹಾಗೂ ಕಾಂಚನಾಸಕ್ತಿಯನ್ನು ನಿಗ್ರಹಿಸುವ ಶಕ್ತಿ ಅಸಹಜವಾದುದು ಹಾಗೂ ವಿಕೃತವಾದುದು ಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸುತ್ತಾರೆ ಎಂದು ಡಾ| ದಾಮೋದರ ರಾವ್ ಅಭಿಪ್ರಾಯಪಡುತ್ತಾರೆ. ಅನಂತಮೂರ್ತಿಯವರ ಮಲೆನಾಡಿನ ಚಿತ್ರಣವನ್ನು ಕುವೆಂಪು ಅವರ ಮಲೆನಾಡಿನ ಚಿತ್ರಣದೊಂದಿಗೆ ಹೋಲಿಸುತ್ತ 'ಕುವೆಂಪು ಚಿತ್ರಣ ಹೆಚ್ಚು ವಿಸ್ತಾರವಾಗಿದೆ' ಎನ್ನುವ ಡಾ| ದಾಮೋದರ ರಾವ್ ಅವರು ಅದಕ್ಕೆ ಕಾರಣವನ್ನೂ ನೀಡುತ್ತಾರೆ - ಅನಂತಮೂರ್ತಿಯವರ ಪ್ರತಿಭೆಯಲ್ಲಿ ಎಲ್ಲವನ್ನು ಅನುಮಾನದ ಒತ್ತಡಕ್ಕೆ ಒಳಪಡಿಸಿಕೊಂಡು ನೋಡಬಲ್ಲ ವಿಮರ್ಶಕಪ್ರಜ್ಞೆ ಜಾಗ್ರತವಾಗಿರುವುದರಿಂದ ಅವರ ಕೃತಿಗಳ ವಿಸ್ತಾರ ಕಡಮೆಯಾಗುತ್ತದೆ. ಇದೇ ಕಾರಣದಿಂದ ಅವರಿಗೆ ಇನ್ನೂ ಬೃಹತ್ ಕಾದಂಬರಿಯೊಂದನ್ನು ಕೊಡಲು ಸಾಧ್ಯವಾಗಿಲ್ಲ. ಕಾದಂಬರಿಗಿಂತಲೂ ಸಣ್ಣಕತೆ ಅನಂತಮೂರ್ತಿಗೆ ಹೆಚ್ಚು ಸಹಜವಾಗಿ ಒಗ್ಗುವ ಪ್ರಕಾರವಾಗಿ ಕಾಣುವುದಕ್ಕೆ ಇವು ಕಾರಣವಾಗಿರಬಹುದು.

 ಡಾ| ಬಿ. ದಾಮೋದರ ರಾವ್ ಅವರ ಅಭಿಪ್ರಾಯದಂತೆ, ಅನಂತಮೂರ್ತಿಯವರ ಸಾಂಸ್ಕೃತಿಕ ಚಿಂತನೆ ಮತ್ತು ಸಾಹಿತ್ಯದ ಕುರಿತ ಚಿಂತನೆಗಳ ಸಂಪೂರ್ಣ ಸಮೀಕರಣ ಸಾಧುವಾಗಲಾರದು. ಆದರೆ ಅವು ತೀರಾ ಭಿನ್ನ ಎಂದು ಹೇಳುವಂತಿಲ್ಲ. ವಿಮರ್ಶನಕ್ರಿಯೆ ಅನಂತಮೂರ್ತಿಯ ಸೃಜನಶೀಲತೆಯ ಪ್ರಮುಖ ಚಹರೆಯಾಗಿದ್ದು ಅವರ ಕೃತಿಗಳ ರೂಪವಿಸ್ತಾರಗಳನ್ನು ನಿಯಂತ್ರಿಸುತ್ತದೆ. ಮಹತ್ವದ ಸಾಂಸ್ಕೃತಿಕ ಚಿಂತನೆಯನ್ನು ಆಂತರೀಕರಿಸಿಕೊಳ್ಳುತ್ತ, ತಾನು ತನ್ನನ್ನು ತೆರೆದುಕೊಳ್ಳುವ ಅನುಮಾನಗಳ ಭಾರದಿಂದಾಗಿ ಗಾತ್ರದಲ್ಲಿ ಹಾಗೂ ತಾನು ಪ್ರತಿಪಾದಿಸುತ್ತಿರುವ ಮೌಲ್ಯಗಳಲ್ಲಿ ಬಹಳ ಹಿಗ್ಗಲಾರದ ಸಾಹಿತ್ಯ ಹಾಗೂ ಸಾಹಿತ್ಯವಿಮರ್ಶೆ ಕನ್ನಡಕ್ಕೆ ಅನಂತಮೂರ್ತಿಯ ವಿಶಿಷ್ಟ ಕೊಡುಗೆಯಾಗಿ ಬಂದಿದೆ.


ಯು. ಆರ್.ಅನಂತಮೂರ್ತಿ(2000)
(
ಸಂ) ಮುರಳೀಧರ ಉಪಾಧ್ಯ ಹಿರಿಯಡಕ



'
'

No comments:

Post a Comment