stat Counter



Tuesday, December 7, 2010

Krishnaveni (a novel in Kannada) by Venkatagiri Kadekar

ವೆಂಕಟಗಿರಿ ಕಡೆಕಾರ್ ಅವರ 'ಕೃಷ್ಣವೇಣಿ' (ಕಾದಂಬರಿ)

ಮುರಳೀಧರ ಉಪಾಧ್ಯ ಹಿರಿಯಡಕ

ವೆಂಕಟಗಿರಿ ಕಡೆಕಾರ್ ಅವರು ಮೂವತ್ತು ವರ್ಷಗಳ ಹಿಂದೆ ಬರೆದ ಕೃಷ್ಣವೇಣಿ ಕಾದಂಬರಿಯನ್ನು ಪರಿಷ್ಕರಿಸಿದ್ದಾರೆ.  ಕೃಷ್ಣವೇಣಿಯ ಕತೆ ಮೂವತ್ತು ವರ್ಷಗಳಾದ ಮೇಲೆ ಕೂಡಾ ಈ ಕಾದಂಬರಿಕಾರರನ್ನು ಕಾಡುತ್ತಿದೆ.  ಉಡುಪಿ ಈ ಕಾದಂಬರಿಯ ಕ್ರಿಯಾಕೇಂದ್ರ.  ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕಗಳಿಂದ ಇಪ್ಪತ್ತನೆಯ ಶತಮಾನದ  ಪೂರ್ವಾರ್ಧದ ವರೆಗೆ ಬದುಕಿದ್ದ ಉಡುಪಿಯ ಶಿವಳ್ಳಿ ಬ್ರಾಹ್ಮಣ ಕುಟುಂಬವೊಂದರ ಬಾಲವಿಧವೆಯೊಬ್ಬಳ ಬದುಕಿನ ಆಖ್ಯಾನ-ವ್ಯಾಖ್ಯಾನ ಈ ಕಾದಂಬರಿಯ ವಸ್ತು.
ಏಳು ವರ್ಷದ ಹುಡುಗಿ ಕಿಟ್ಟಿಯ (ಕೃಷ್ಣವೇಣಿ) ಮದುವೆ, ಜಾತಕ ಕೂಡಿಬಂದ ವರ, ಸಂಸ್ಕೃತ ವಿದ್ಯಾರ್ಥಿ ಪದ್ದು (ಪದ್ಮನಾಭ)ವಿನೊಡನೆ ನಡೆಯುತ್ತದೆ.  ಮದುವೆಯಾಗಿ ಮೂರು ವರ್ಷಗಳ ಅನಂತರ, ಮೈನರೆದ ಕಿಟ್ಟಿಯ ಮೂರನೇ ದಿನ ಅವಳ ಗಂಡ ಸರ್ಪ ಕಚ್ಚಿ ಸಾಯುತ್ತಾನೆ.  ಕಿಟ್ಟಿ ತಲೆ ಬೋಳಿಸಿಕೊಂಡು, ಕೆಂಪುಸೀರೆ ಉಟ್ಟು, ಧರ್ಮಭೀರು ವಿಧವೆಯಾಗಿ ಬದುಕುತ್ತಾಳೆ.  ಹೈಸ್ಕೂಲು ಅಧ್ಯಾಪಕನಾಗಿದ್ದ ಅಣ್ಣ ವೆಂಕಟದಾಸ ತನ್ನ ನಲುವತ್ತೊಂಬತ್ತನೆಯ ವಯಸ್ಸಿನಲ್ಲಿ ಕ್ಷಯರೋಗದಿಂದ ಸತ್ತಮೇಲೆ ಕಿಟ್ಟಿ ಸಂಸಾರ ನಿರ್ವಹಣೆಯ ಜವಾಬ್ದಾರಿ ಹೊರುತ್ತಾಳೆ.  ಎರಡನೆಯ ಮಹಾಯುದ್ಧದ ಬೆಲೆ ಏರಿಕೆಯ ದಿನಗಳಲ್ಲಿ ಕಷ್ಟಪಡುತ್ತಾಳೆ.  ಕಿಟ್ಟಿಯನ್ನು ಮೃತ್ಯು ಮುಟ್ಟುವ ಮುನ್ನ ನಡೆಯುವ ಸರ್ಪತುಳಿವ ಪ್ರಸಂಗ ಸಾಂಕೇತಿಕವಾಗಿದೆ.  ತನ್ನನ್ನು ಬದುಕಿದ್ದಾಗಲೇ ನರಕಕ್ಕೆ ತಳ್ಳಿದ  ಧಾರ್ಮಿಕ ವ್ಯವಸ್ಥೆಯನ್ನು ಕುರಿತ ಕಿಟ್ಟಿಯ ಅಂತರಾಳದ ಸಿಟ್ಟು ಇಲ್ಲಿ ಸ್ಫೋಟಗೊಂಡಿದೆ.
ಕಿಟ್ಟಿಯ ಮಾವ ಸುಬ್ರಾಯರು ವಿಧವೆ ಸೊಸೆಗೆ ವರ್ಷಕ್ಕೆ ಮೂರು ಮುಡಿ ಅಕ್ಕಿ, ಮೂರು ರೂಪಾಯಿ ಅಶನಾರ್ಥ ಕೊಡುತ್ತಾರೆ.  ಅವರ ಒಳ್ಳೆಯತನದಿಂದಾಗಿ ಕಿಟ್ಟಿ ತೌರುಮನೆಯ ಹಂಗಿಲ್ಲದೆ ಬದುಕುವುದು ಸಾಧ್ಯವಾಗುತ್ತದೆ.  ಅಶನಾರ್ಥಕ್ಕಾಗಿ ವಿಧವೆಯರು ಕೋರ್ಟ್‍ಗೆ ಅಲೆಯುವ ಪ್ರಸಂಗಗಳು ಆ ಕಾಲದಲ್ಲಿದ್ದವು. ಲೇಖಕಿ ವೈದೇಹಿಯವರ ಬಾಲ್ಯದ ನೆನಪುಗಳಲ್ಲಿ ಕುಂದಾಪುರದಲ್ಲಿ ವಕೀಲರಾಗಿದ್ದ ಅವರ ತಂದೆಯ ಆಫೀಸಿಗೆ ಅಶನಾರ್ಥದ ವ್ಯಾಜ್ಯಕ್ಕಾಗಿ ಬರುತ್ತಿದ್ದ ವಿಧವೆಯವರಿದ್ದಾರೆ.  ಕಿಟ್ಟಿಯ ಕೆಟ್ಟ ಕನಸಿಗೆ ಜೋಯಿಸರು ನೀಡುವ ವಿವರಣೆ ವೈಜ್ಞಾನಿಕವಾಗಿದೆ.  ಕಿಟ್ಟಿಯ ತಮ್ಮ ಮಧ್ವಾಚಾರ್ಯ ಕಿವುಡ, ಮೂಕ.  ಒಂದು ಪೆಸ್ಸಿನಲ್ಲಿ ಕೆಲಸಮಾಡುತ್ತಿದ್ದ ಅವನಿಗೆ ಮದುವೆಯಾಗುವ ಆಸೆಯಿದ್ದರೂ ಹೆಣ್ಣು ಸಿಗುವುದಿಲ್ಲ.  ಅಡುಗೆವೃತ್ತಿಯ ಗೋಪಾಲಕೃಷ್ಣ ಭಟ್ಟರ ಹೆಂಡತಿ ಭಾಮೆ ಸೂತಕವಾಯುವಿನಿಂದ ಕೆರೆಗೆ ಹಾರಿ ಸಾಯುತ್ತಾಳೆ.  ಪರಿತ್ಯಕ್ತೆ ಕಾವೇರಿಯಲ್ಲಿ ಲೈಂಗಿಕ ಅತೃಪ್ತಿ ಇದೆ.  ಆ ಕಾಲದ ಸಮಾಜದ ಅಸ್ವಸ್ಥ, ಅತೃಪ್ತ ಬದುಕಿನ ವಿವಿಧ ಮುಖಗಳು ಈ ಪಾತ್ರಗಳಲ್ಲಿವೆ.
ಮಡಿವಂತಿಕೆಯ ಕೇಂದ್ರವಾಗಿದ್ದ ಉಡುಪಿ ನಿಧಾನವಾಗಿ ಆಧುನಿಕತೆಯತ್ತ ಹೊರಳುವ ಚಿತ್ರ ಈ ಕಾದಂಬರಿಯಲ್ಲಿದೆ.  ಕಿಟ್ಟಿಯ ತಂದೆ ರಾಘವೇಂದ್ರ ಆಚಾರ್ಯರು ಉಡುಪಿಯ ಮಠದಲ್ಲಿ ಪಾರುಪತ್ಯಗಾರರು.  ಅವರ ಮಗ ವೆಂಕಟದಾಸ ಉಡುಪಿಯ ಸರಕಾರಿ ಹೈಸ್ಕೂಲಿನಲ್ಲಿ ಸಂಸ್ಕೃತ ಅಧ್ಯಾಪಕನಾಗುತ್ತಾನೆ.  ವೆಂಕಟದಾಸನ ಒಬ್ಬ ಮಗ ಆಧುನಿಕ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಹೋಗುತ್ತಾನೆ.  ಮತ್ತೊಬ್ಬ ಮಗನಿಗೆ ಬ್ಯಾಂಕಿನಲ್ಲಿ ಕೆಲಸ ಸಿಗುತ್ತದೆ.
ಪಾಡಿಗಾರಿನಲ್ಲಿ ನಡೆದ ಕಿಟ್ಟಿಯ ಬಾಲ್ಯವಿವಾಹ, ಪಡುಬಿದ್ರೆಯ ಪಾದೆಬೆಟ್ಟಿನಲ್ಲಿ ನಡೆದ ವೆಂಕಟದಾಸನ ಮದುವೆ - ಇವುಗಳನ್ನು ಕಾದಂಬರಿಕಾರರು ಸಂಭ್ರಮದಿಂದ ಚಿತ್ರಿಸಿದ್ದಾರೆ.  ಕಿಟ್ಟಿಯ ತಂದೆ ಉಡುಪಿಯ ರಥಬೀದಿಯಲ್ಲಿ ಮಠದ ಪಾರುಪತ್ಯಗಾರರು.  ಕೃಷ್ಣಮಠದ ಭೋಜನಶಾಲೆಯ ಮುಖ್ಯಪ್ರಾಣನೆದುರು ಕಿಟ್ಟಿ ಬರಿನೆಲದಲ್ಲಿ ಊಟಮಾಡುವ ಒಂದು ಪ್ರಸಂಗ ಕಾದಂಬರಿಯಲ್ಲಿದೆ.  ಆದರೆ ಉಡುಪಿಯ ಪರ್ಯಾಯ, ಮಕರಸಂಕ್ರಮಣ ಜಾತ್ರೆ, ವಿಟ್ಲಪಿಂಡಿ, ತುಳಸಿ ಸಂಕೀರ್ತನೆ - ಇವುಗಳ ಚಿತ್ರಣದಲ್ಲಿ ಲೇಖಕರಿಗೆ ಆಸಕ್ತಿ ಇಲ್ಲ.  ಶಿವಳ್ಳಿ ಬ್ರಾಹ್ಮಣ ಸಮಾಜದ ಅಂತರ್ಜಾತೀಯ ಸಾಮಾಜಿಕ ಸಂಬಂಧ, ಇವರ ಮನೆಮಾತಾದ ತುಳು ಭಾಷೆಯ ಚೆಲುವು ಇಲ್ಲಿ ದಾಖಲಾಗಿಲ್ಲ.
ಉಡುಪಿಯ ಬ್ರಾಹ್ಮಣ ಸಮಾಜದ ವಿಧವೆಯರ ಮನಕತದ ಕತೆ - ಕೃಷ್ಣವೇಣಿ.  ಕವಿ ಗೋಪಾಲಕೃಷ್ಣ ಅಡಿಗರು ಉಡುಪಿಯನ್ನು ಬಣ್ಣಿಸುತ್ತಾ, "ಪ್ರಾಣಮುಖ್ಯರ ಮುಟ್ಟು ಚಟ್ಟು ತೊಟ್ಟಿಗಳಲ್ಲಿ, ನಿಂತನೀರಿನ ವಾಸ ಸುತ್ತಲೆಲ್ಲಾ" ಎಂದರು. ಉಡುಪಿಯ ಧಾರ್ಮಿಕ ವ್ಯವಸ್ಥೆಯ ಇನ್ನೊಂದು ಮುಖ ಬೋಳಾರ ಬಾಬುರಾಯರ "ವಾಗ್ದೇವಿ" ಕಾದಂಬರಿಯಲ್ಲಿ, ಸರಸ್ವತಿಬಾಯಿ ರಾಜವಾಡೆಯವರ ಸಣ್ಣಕತೆಗಳಲ್ಲಿ ಸಿಗುತ್ತದೆ.  ಪಾ.ವೆಂ. ಆಚಾರ್ಯರು ತನ್ನ ಆತ್ಮಕತೆಯಲ್ಲಿ ಉಡುಪಿಯ ತನ್ನ ಬಾಲ್ಯವನ್ನು ನೆನೆಪಿಸಿಕೊಳ್ಳುತ್ತಾ, "ಮಠಗಳ ಸಂಪೂರ್ಣ ಪತಿತ ಸ್ವರೂಪವನ್ನು ಚಿಕ್ಕಂದಿನಂದಿನಲ್ಲಿ ಕಂಡದ್ದರಿಂದಲೋ ಏನೋ, ಆ ಕಡೆ ತಲೆ ಹಾಕಿ ಮಲಗಲೂಬಾರದು ಅನಿಸುತ್ತಿತ್ತು" ಎಂದಿದ್ದಾರೆ.  ಉಡುಪಿಯ ಮಠಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದೇ ವೆಂಕಟಗಿರಿ ಕಡೆಕಾರ್ ಅವರ ಉದ್ದೇಶವಾಗಿದೆ.  ಉಡುಪಿಯಲ್ಲಿ ಆರಂಭವಾದ ಸ್ವಾತಂತ್ರ್ಯ ಹೋರಾಟದ ಚಿತ್ರಣ ವ್ಯಾಸರಾಯ ಬಲ್ಲಾಳರ ಹೆಜ್ಜೆ ಕಾದಂಬರಿಯಲ್ಲಿದೆ.
ಶಿವರಾಮ ಕಾರಂತರ ಕಾದಂಬರಿಗಳ ಚಿಂತನಶೀಲ ವಾಸ್ತವಮಾರ್ಗ ಹತ್ತಾರು ಕಾದಂಬರಿಕಾರರಿಗೆ ಪ್ರೇರಣೆ ನೀಡಿದೆ.  ಕೃಷ್ಣವೇಣಿ ಕಾರಂತರ ಕಾದಂಬರಿಯಿಂದ ಎದ್ದುಬಂದ ಪಾತ್ರದಂತೆ ಕಾಣಿಸಿದರೆ ಆಶ್ಚರ್ಯವೇನಿಲ್ಲ.  ಕೃಷ್ಣವೇಣಿಯ ಕತೆ ಸ್ವಾತಂತ್ರ್ಯಪೂರ್ವದ, ಕಾಲೇಜು, ಹೋಟೇಲುಗಳಿಗಿಂತ ಮೊದಲಿನ ಉಡುಪಿ ಬ್ರಾಹ್ಮಣರ ಮನೆಮನೆಯ ಕತೆಯೂ ಹೌದು.  ಕಾದಂಬರಿಕಾರ ವೆಂಕಟಗಿರಿ ಕಡೆಕಾರ್ ಅವರದು ಸಮೃದ್ಧ ಜೀವನಾನುಭವದ, ಉದ್ದೇಶರಹಿತ, ಸಂಯಮದ ಬರವಣಿಗೆ.  ನಮ್ಮ ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯ ಅಂಚಿನಲ್ಲಿದ್ದ ಕೃಷ್ಣವೇಣಿಯಂಥ ವಿಧವೆಯ ಬದುಕನ್ನು ಕಾದಂಬರಿಯ ವಸ್ತುವನ್ನಾಗಿ ಆಯ್ಕೆಮಾಡಿರುವುದರಲ್ಲಿ ಇವರ ಸ್ತ್ರೀಪರ ಕಾಳಜಿ ನಿಚ್ಚಳವಾಗಿದೆ.    ಸಾಮಾಜಿಕ ದಾಖಲೆಯಾಗಿರುವುದರ ಜೊತೆಗೆ ಕಲಾತ್ಮಕವೂ ಆಗಿರುವ ಅಸಾಧಾರಣ ಕಾದಂಬರಿ ಕೃಷ್ಣವೇಣಿ.
ಮುನ್ನುಡಿ ಬರೆಯುವ ನೆಪದಲ್ಲಿ ನನ್ನ ಕುಟುಂಬದ ಹಳೆಯ ನೆನೆಪುಗಳಿಗೆ ಹೊರಳುವ ಅವಕಾಶ ನೀಡಿದ ಶ್ರೀ ವೆಂಕಟಗಿರಿ ಕಡೆಕಾರ್ ಅವರಿಗೆ, ಅವರ ಬಂಧು ಪ್ರೊ| ರಾಧಾಕೃಷ್ಣ ಆಚಾರ್ಯರಿಗೆ, ಮನೋಹರ ಗ್ರಂಥಮಾಲೆಯ ಶ್ರೀ ರಮಾಕಾಂತ ಜೋಶಿ ಹಾಗೂ ಸಮೀರ ಜೋಶಿ ಅವರಿಗೆ ಕೃತಜ್ಣತೆಗಳು.


'ಕೃಷ್ಣವೇಣಿ' (ಕಾದಂಬರಿ) (2007)
- ವೆಂಕಟಗಿರಿ ಕಡೆಕಾರ್
ಪ್ರ -  ಮನೋಹರ ಗ್ರಂಥಮಾಲಾ
 ಲಕ್ಷ್ಮೀ ಭವನ, ಸಭಾಸ್ ರಸ್ತೆ
 ಧಾರವಾಡ - 580001

No comments:

Post a Comment