stat Counter



Saturday, January 1, 2011

Shri Madhvaprana


ಬೋಲ ಚಿತ್ತರಂಜನ ದಾಸ ಶೆಟ್ಟರ -
ಶ್ರೀ ಮಧ್ವ ಪ್ರಾಣ
(ಕಕ್ರ ಶೆಟ್ಟಿ ಕೃಷಿ ಕಾವ್ಯಲೋಕ)

- ಡಾ| ಎಂ. ಪ್ರಭಾಕರ ಜೋಶಿ


ಕವಿ, ಕಾದಂಬರಿಗಾರ, ಹಳ್ಳಿಗ, ತುಳುವ ಗೇನದ ಬಿರ್ಸ, ಮಿತ್ರ ಬೋಲ ಚಿತ್ತರಂಜನದಾಸ ಶೆಟ್ಟರು ತುಳು, ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯವಾಗಿ ಕಾಣಿಸುತ್ತಾರೆ. ಸಾಹಿತ್ಯದ ವ್ಯವಸ್ಥಿತವಾದ ಕಲಿಕೆಯಾಗಲಿ, ಸಾಹಿತ್ಯವಲಯದ ನಿಕಟವಾದ ಒಡನಾಟವಾಗಲಿ ಇಲ್ಲದ ಈ ’ದೇಸಿ’ ಬರಹಗಾರ ’ಅಳಿದುಳಿದವರು’ ’ಒಂಟಿ ಒಬ್ಬಂಟಿ’ ಕಾದಂಬರಿಗಳ ಮೂಲಕ, ’ಬಿನ್ನೆದಿ’ ಕಾವ್ಯದ ಮೂಲಕ ಸಾಧಿಸಿದ ಸಾಹಿತ್ಯದ ಔನ್ನತ್ಯ, ಸೂಕ್ಷ್ಮ ಮತ್ತು ಅಭಿವ್ಯಕ್ತಿಯ ಸೊಗಸು ಅಸಾಮಾನ್ಯವಾದುದು. ಇದೀಗ ಮಧ್ವ ಭಾರತ ತುಳು ಪಾಡ್ದನದ ಮತ್ತು ಅದರ ಕನ್ನಡ ರೂಪ "ಶ್ರೀ ಮಧ್ವ ಪ್ರಾಣ - ಕಕ್ರ ಶೆಟ್ಟಿ ಕೃಷಿ ಕಾವ್ಯಲೋಕ"ದ ಮೂಲಕ ಅವರ ಗೆಯ್ಮೆ ಹೊಸ ಮಜಲನ್ನು ತಲುಪಿದೆ.

ಆಚಾರ್ಯ ಮಧ್ವರ ತಂದೆ ನಡ್ದಂತಿಲ್ಲಾಯ ನಾರಾಯಣ ಭಟ್ಟರು ಮತ್ತು ಕಕ್ರ ಶೆಟ್ಟಿ ಎಂಬ ಒಕ್ಕಲಿಗನ ಸ್ನೇಹ, ಮಧ್ವರ ಅವತರಣ, ಬಾಲ್ಯ ಇವುಗಳ ಸುತ್ತ ರೂಪಿತವಾದ ಈ ಕಾವ್ಯವು ತನ್ನ ವಸ್ತುವನ್ನು ಬಹಳ ವಿಚಿತ್ರವಾದೊಂದು ಸೃಜನಶೀಲತೆಯಿಂದ ಬಳಸಿಕೊಂಡು ಬೆಳೆಸಿ ತೋರಿಸಿದೆ. ಕುಂಜಾರುಗಿರಿಯ ಸುತ್ತಲಿನ ತುಳು ಬದುಕು, ಅದರ ಬಣ್ಣ ಬೆಡಗುಗಳನ್ನು ಕವಿಯು ಪರಿಭಾವಿಸಿ ಸೃಜಿಸಿದ ರೀತಿ ಅಸಾಧಾರಣ. ಕುಂಜಾರುಗಿರಿ, ಅಲ್ಲಿಯ ದುರ್ಗೆ, ಪರಶುರಾಮ, ಪ್ರಾಣ ದೇವರು, ಪ್ರಾಣ ತತ್ತ್ವ ಇವುಗಳನ್ನು ಅನುಭವವಾಗಿಸಿ ಕಾವ್ಯಪಾಕವಾಗಿಸಿದ ರೀತಿ ತುಂಬ ಮನೋಜ್ಞವಾದುದು. ಪ್ರಾಣವನ್ನು ಜೀವವಾಗಿ, ಗಾಳಿಯಾಗಿ, ಉಸಿರಾಗಿ, ತತ್ತ್ವವಾಗಿ, ಜಗತ್ಪ್ರಾಣವಾಗಿ ಬಗೆ ಬಗೆಯಿಂದ ಬಗೆದು ವರ್ಣಿಸಿದ ಅವರ ರೀತಿ ಓದಿ ಅನುಭವಿಸಬೇಕು.

ನಡ್ದಂತಿಲ್ಲಾಯ ಕಕ್ರ ಶೆಟ್ಟರ ಸ್ನೇಹದಿಂದ ಕೃಷಿಕರಾಗಿ ಪರಿವರ್ತಿತರಾದ ರೀತಿಯು ತುಳುನಾಡಿನ ಒಂದು ಹಂತದ ಸಾಮಾಜಿಕ ಪಲ್ಲಟದ ಮಟ್ಟವಾಗಿಯೂ ಮಹತ್ವದ್ದಾಗಿದೆ. ಅದರ ಚಿತ್ರಣವೂ ಹಾಗೆಯೇ ಬಂದಿದೆ. ಬೋಲದಾಸರ ಕಾವ್ಯದಲ್ಲಿ ಗಾಳಿ, ಬೆಳಕು, ಮರ, ಹೂ, ಗುಡ್ಡ ಬೆಟ್ಟ, ಏರು ತಗ್ಗುಗಳು, ಉಪಕರಣ, ಆಯುಧ, ಪಾತ್ರೆ ಪರಡಿಗಳು ಒಂದು ವರ್ಣನೆಯ ಭಾಗವಾಗದೆ, ತಾವೇ ಪಾತ್ರಗಳಾಗಿ ರೂಪುಗೊಂಡಿರುವ ಓರ್ವ ಉತ್ಕೃಷ್ಟ ಕವಿಗೆ ಮಾತ್ರ ಸಿದ್ಧಿಸುವ ಕ್ರಮದಲ್ಲಿದೆ.

ಕಾವ್ಯದ ವಿಷಯ ವಿಭಾಗ, ಅದರ ಬೆಳವಣಿಗೆ, ಪಾತ್ರಗಳ ವರ್ತನೆ, ಪ್ರತಿಕ್ರಿಯೆಗಳನ್ನು, ಸ್ವಭಾವ ಸ್ವರೂಪಗಳನ್ನು ಕವಿಯು ತೌಳವ ಸ್ವಭಾವೋಕ್ತಿಗೆ ಇತರ ಅಲಂಕಾರ ಜೀವ ವಿಶೇಷವನ್ನು ಬೆರೆಸಿ ಕಡೆದ ರೀತಿ - ಈ ಕವಿಯನ್ನು ತುಳು ಕನ್ನಡಗಳಲ್ಲಿ ಹೋಲಿಕೆಗೆ ಸಿಗದ ಒಬ್ಬ ಕವಿಯನ್ನಾಗಿ ತೋರಿಸುತ್ತದೆ. ಬೋಲದಾಸರ ಕಾವ್ಯ ಬೇರೆ ಯಾರ ಬರವಣಿಗೆಯಂತೂ ಇಲ್ಲ. ತುಳುನಾಡಿನ ಬದುಕಿನ ಸಹಜ ಹಾಗೂ ನಾಜೂಕು, ಸ್ವಭಾವೋಕ್ತಿ, ಅತಿಶಯೋಕ್ತಿಗಳೆಲ್ಲ ಅವರ ಬರವಣಿಗೆಯಲ್ಲಿ ಒಂದಾಗಿವೆ.
ಕೃಷಿ ಜೀವನ, ಪ್ರಾಣತತ್ತ್ವಗಳ ಐಕ್ಯ, ಮಧ್ವರ ಜನ್ಮಭೂಮಿಯನ್ನೇ ಬಂಡೆಯನ್ನಾಗಿ ಕಲ್ಪಿಸಿದ್ದು, ಮಧ್ವರ ಕೈಯ ಕಲ್ಲು ಆಕಾಶವಾಗಿ, ಮೋಡವಾಗಿ ಮಳೆಯಾಗುವುದು, ಗಾಳಿ ನೀರುಗಳ ಐಕ್ಯ, ಪಂಚಭೂತ ತನ್ಮಾತ್ರಗಳ ವಿಲಾಸ, ಕೃಷಿ ಭೂಮಿ ಬರಡಾಗುತ್ತಿರುವುದರ ಮುನ್ನೋಟಗಳು, ಎತ್ತುಗಳ ಜೀವನಾಧಾರತ್ವ - ಹೀಗೆ ಹೆಜ್ಜೆ ಹೆಜ್ಜೆಗೆ ಕವಿಯ ಕಲ್ಪನೆಯ ಲಂಘನವು ಪ್ರಾಣತತ್ತ್ವದಂತೆ, ಮಧ್ವರ ಬಾಲಲೀಲೆಯಂತೆ ಜೀವನೋತ್ಕರ್ಷ ವಿಲಾಸವಾಗಿ ಮೂಡಿದೆ.

ಕಕ್ರ ಶೆಟ್ಟಿ - ನಡ್ದಂತಿಲ್ಲಾಯ - ಆಚಾರ‍್ಯ ಮಧ್ವರ ವೃತ್ತಾಂತವನ್ನು ಆರಿಸಿಕೊಂಡು ಅದನ್ನು ಕೃಷಿ, ಪ್ರಾಣತತ್ತ್ವ ಮತ್ತು ತುಳು ಬದುಕಿನ ರೂಪಕವಾಗಿ ಕಲ್ಪಿಸಿದ್ದೇ ಒಂದು ಅಸಾಧಾರಣ ಸಂಗತಿ. ಸಮರ್ಥ ಕವಿಗೆ ಎಷ್ಟೊಂದು ಕಲ್ಪನೆಗಳು ಅಲ್ಲವೆ?
ಕಾವ್ಯದುದ್ದಕ್ಕೂ ಕವಿ ಕಾವ್ಯದ ಸಂಭವವನ್ನು ಆ ನೆಲದಲ್ಲೇ ಇದ್ದು ಅನುಭವಿಸಿ ಇದಿರಿಗಿದ್ದು ವರ್ಣಿಸಿದ ಹಾಗೆಯೆ ಇದ್ದೂ, ಪೃಥ್ವಿಯಿಂದ ಆಕಾಶಕ್ಕೆ ಸಂಬಂಧ ಕಲ್ಪಿಸುವ ಕಾವ್ಯ ತತ್ವದ ದ್ಯಾವಾಪೃಥ್ವಿ ಸಂಬಂಧವನ್ನು ಸಾಧಿಸಿದ್ದಾರೆ.

ಕವಿ ಎಲ್ಲೂ ಪಂಥೀಯನಾಗದೆ, ಹುಸಿ ಬಂಡಾಯಗಾರನಾಗದೆ, ಕಲ್ಪನೆ, ನಂಬುಗೆಗಳ ನೆಲೆಯಲ್ಲಿ ನಿಂತು, ಮೌಢ್ಯಗಳ ಆರಾಧಕನೂ ಆಗದೆ ಜೀವನನಿಷ್ಠನಾಗಿ ಒಂದು ಸಾಂಸ್ಕೃತಿಕ ದರ್ಶನವನ್ನು ಕಾವ್ಯದೊಳಗೆಯೇ ಅದರ ಶರೀರ ಪ್ರಾಣವಾಗಿ ರೂಪಿಸಿದ್ದಾರೆ.

ಆಚಾರ‍್ಯ ಮಧ್ವರು ಪ್ರತಿನಿಧಿಸುವ ಪ್ರಾಣ ತತ್ತ್ವ, ಕಕ್ರ ಶೆಟ್ಟಿಯ ಕೃಷಿ ದರ್ಶನ, ಅವರ ಕೈಯಲ್ಲಿ ಹುಣಿಸೇ ಬೀಜಗಳು ಸ್ವರ್ಣವಾಗಿ ಋಣ ಸಂದಾಯಗೊಂಡ ಬಗೆಗಳನ್ನು ಸಾವಯವವಾಗಿ ಏಕೀಭವಿಸಿದ ಬೋಲದಾಸರ ಕಾವ್ಯ ಕೃಷಿ ಲೋಕವು ಅಮರವಾಗಿಸಿದೆ.



"ಶ್ರೀ ಮಧ್ವಪ್ರಾಣ" ಪ್ರಕಾಶಕರು-

ದಿವ್ಯಶಕ್ತಿ ಪ್ರಕಾಶನ13-4-356 2nd Floor
C-Arouza Building
Hampanakatta
Mangalore - 575 001
E-Mail - buntarasangama@gmail.com
First published: 2010
Pages: 320
Price: 200
Cover Page: Yajna
mupadhyahiri.blogspot.com
 
(ಕಕ್ರ ಶೆಟ್ಟಿ ಕೃಷಿ ಕಾವ್ಯಲೋಕ)
- ಬೋಲ ಚಿತ್ತರಂಜನದಾಸ ಶೆಟ್ಟಿ

No comments:

Post a Comment