stat Counter



Sunday, January 3, 2016

ಎಚ್. ಎಸ್. ವೆಂಕಟೇಶಮೂರ್ತಿ ಅವರ " ಸುನೀತಭಾವ " - ಮುರಳೀಧರ ಉಪಾಧ್ಯ ಹಿರಿಯಡಕ

 ಇತಾಲಿಯಾದಲ್ಲಿ ಬಾಲ್ಯ ಕಳೆದು , ಇಂಗ್ಲೆಂಡ್ ಮೂಲಕ ಕನ್ನಡಕ್ಕೆ ಬಂದ ಸಾನೆಟ್ , ’ಅಷ್ಟಷಟ್ಪದಿ ’ , ’ ಚತುರ್ದಶಪದಿ’ ಯಾಗಿ ತಿಣುಕುತ್ತ ಕನ್ನಡಿತಿ  ’ ಸುನೀತ ’ ವಾಗಿದೆ . ಗೋವಿಂದ ಪೈಗಳು  ನಾಂದಿ ಹಾಡಿದ ಕನ್ನಡ ಸಾನೆಟ್ ಪ್ರಕಾರವನ್ನು ಬೇಂದ್ರೆ , ಕುವೆಂಪು , ಮಾಸ್ತಿ , ಎಸ್. ವಿ. ಪರಮೇಶ್ವರ ಭಟ್ಟ ರಂಥ ಹಿರಿಯರು , ವೆಂಕಟಗಿರಿ ಕಡೆಕಾರ್ ಅವರಂಥ ಕಿರಿಯರು ಸೃಜನಶೀಲವಾಗಿ ಬೆಳೆಸಿದ್ದಾರೆ.ಕುವೆಂಪು ಅವರ ’ ಕೃತ್ತಿಕೆ ’ [ ೧೯೪೬] ಯಲ್ಲಿ  ತೊಂಬತ್ತಾರು ಸಾನೆಟ್ ಗಳಿವೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರ ’ ಸುನೀತ ಭಾವ ’ [ ೨೦೧೫ ] ದಲ್ಲಿ ಎಪ್ಪತ್ತೊಂದು ಸುನೀತಗಳಿವೆ. ಬೇಂದ್ರೆ , ಕುವೆಂಪು , ಅಡಿಗ , ಕೆ. ಎಸ್. ನ , ಯು. ಆರ್. ಅನಂತಮೂರ್ತಿ , ದೇವನೂರು , ನಿಸಾರ್ , ವೈದೇಹಿ , ವಸುಧೇಂದ್ರ , ಸಿದ್ದಲಿಂಗಯ್ಯ , ಜಿ. ಎಸ್. ಶಿವರುದ್ರಪ್ಪ , ರವಿ ಬೆಳಗೆರೆ ಮತ್ತಿತರ  ಸಮಕಾಲೀನ ಕನ್ನಡ ಸಾಹಿತಿಗಳ , ತನ್ನ ಮಿತ್ರರ  ಸಮೀಪ ಚಿತ್ರಗಳನ್ನು ಎಚ್. ಎಸ್. ವಿ, ಈ ಸಾನೆಟ್ ಗಳಲ್ಲಿ ನೀಡಿದ್ದಾರೆ.
 ಹೆಚ್ಚಿನ ಸಾನೆಟ್ ಗಳು ಸಾಹಿತಿಗಳ ಒಡನಾಟದ ಅನುಭವದಿಂದಾಗಿ ಪುಟ ಬಂಗಾರದ  ಪ್ರತಿಮಾಲೋಕವೊಂದನ್ನು  ನಿರ್ಮಿಸಿವೆ .’ ಅಳಿಲು ರಾಮಾಯಣ ’ ದ  ನಾಟಕಕಾರ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು , ನಾಟಕ ಪ್ರದರ್ಶನದಂದು ವೇದಿಕೆಗೆ ಕರೆಯಲು  ಮರೆತ ಬಿ. ವಿ. ಕಾರಂತರು ಎಚ್. ಎಸ್. ವಿ ಅವರ ಮನೆಗೆ ಬಂದು ಕ್ಷಮೆ ಯಾಚಿಸಿದ ಪ್ರಸಂಗದಲ್ಲಿ ಕಾರಂತರ ವಿನೀತ ಭಾವದ ವ್ಯಕ್ತಿತ್ವ ಕಂಗೊಳಿಸುತ್ತದೆ . ಪು. ತಿ. ನ ಅವರರನ್ನು ಕುರಿತ ಸಾನೆಟ್ ಲಘಿಮಾ        ಕೌಶಲದ ಹಕ್ಕಿಯ  ರೂಪಕದಲ್ಲಿ ಆಪ್ತವಾಗುತ್ತದೆ .’ ಕವಡೆಯಾಟದ ಅನಿಮಿತ್ತ ಕಾರುಣ್ಯ ಕವಿಗಷ್ಟೆ ಗೊತ್ತು ’ ಎಂದು ಮುಕ್ತಾಯಗೊಳ್ಳುವ ಎಸ್. ಮಂಜುನಾಥ್ ಕುರಿತ ಸಾನೆಟ್ ನಲ್ಲಿ ಕವಡೆಯಾಟದ ಧ್ವನಿಪೂರ್ಣ ರೂಪಕವಿದೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರು  ಕುಂದಣಿಸಿದ ಸಾಹಿತಿಗಳು ನಿಮ್ಮ ಖಾಸಗಿ ನೆನಪುಗಳಲ್ಲಿ ಇದ್ದರೆ ಈ ಸಾನೆಟ್ ಗಳು ನಿಮಗೆ ಹೆಚ್ಚು ಖುಷಿ ಕೊಡಬಹುದು . ಚಂಪಾ , ಜಯಂತ ಕಾಯ್ಕಿಣಿ , ಡುಂಡಿರಾಜ್ , ಕೆ. ವಿ. ತಿರುಮಲೇಶ್ , ಪ್ರತಿಭಾ ನಂದಕುಮಾರ್ , ಎಸ್. ಎಲ್. ಭೈರಪ್ಪ , ಎಸ್. ಎಸ್. ರಾಘವೇಂದ್ರ ರಾವ್ , ಕೆ. ಸತ್ಯನಾರಾಯಣ ಇವರನ್ನು ಕುರಿತ ಸಾನೆಟ್ ಗಳಲ್ಲಿ ಆಯಾ ವ್ಯಕ್ತಿತ್ವದ ಚಹರೆಗಳು ಸೊಗಸಾಗಿ ಮೂಡಿ ಬಂದಿವೆ .
 ’ ಒಗ್ಗರಣೆಯ ಮಜವೇ ನಿಜವಾದ ಮಜ, ಮಾತು ಬೇಕೆಂದ ಹಾಗೆ ಆಡುವುದು ನಿಮ್ಮ ಕೈಯ್ಯಲ್ಲಿ ’ [ ಚಂಪಾ ], ’ ತೇಲುನೋಟಕ್ಕೆ  ಸರಳವೆಂಬಂತೆ  ತೋರುವ        ನಿಮ್ಮ ಕಾವ್ಯದ  ಒಳಗೆ ಎಷ್ಟು ಮುಳುಗಿದರಷ್ಟಾಳ ’ [ ಕೆ. ವಿ. ತಿರುಮಲೇಶ್ ] , ’ಆಡುವ ಮುನ್ನ ಮೌನ , ಆಡಿದ್ದಾದ ಮೇಲೂ ಮೌನ .ಅದೇ ವೈನ .ಆಕಾಶದಲ್ಲಿ ನಿಶ್ಶಬ್ದವಾಗುರಿವ ಕೆಂಗದಿರ ನಾಲಗೆ ’[ ದೇವನೂರು ಮಹಾದೇವ ] ,’ ಭಾಷೆಯಲ್ಲಿ ಬೇಷರತ್ತು ಮಗ್ನಗೊಳ್ಳುವ ಶ್ಲೇಷಶಾಯಿ ಆಗದೆ ಇದೆಲ್ಲ ಆಗೊಲ್ಲ ಮಾರಾಯರೇ ’[ ಡುಂಡಿರಾಜ್ ] , ಇಂಥ ಅವಿಸ್ಮರಣೀಯ ಸಾಲುಗಳು ’ ಸುನೀತಭಾವ’ ದಲ್ಲಿವೆ ." ಮಾಸ್ತಿಯವರೊಂದಿಗೆ ತೀರ್ಥ ಸೇವನೆಗೆಂದು ಎಂದು ನೀವು ಹೋದದ್ದು ? " [ ಸಿದ್ದಲಿಂಗಯ್ಯ ]  - ಇಂಥ ಸಾಲುಗಳಿಗೆ ಟಿಪ್ಪಣಿ , ವಿವರಣೆ ಬೇಕಾಗುತ್ತದೆ .’ ಸೆಲ್ಫಿ’ ಯಲ್ಲಿ ಎಚ್. ಎಸ್. ವಿ ಅವರ ಪ್ರಖರ  ಸ್ವವಿಮರ್ಶೆ ಕಾಣಿಸುತ್ತದೆ .
 ’ ಆಷ್ಟಷಟ್ಪದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ ’ ಎಂಬ ಬೇಂದ್ರೆ ಸಾಲನ್ನು , ಕೆ. ಕೆ. ಹೆಬ್ಬಾರರ ರೇಖಾಲೀಲೆಗಳನ್ನು ನೆನಪಿಸುವ ಸುನೀತಗಳಿವು .ಸುನೀತವನ್ನು ತೆಕ್ಕೆಗೊಗ್ಗಿಸಿಕೊಳ್ಲುವುದು ಕವಿಗೆ  ಒಂದು ಅಗ್ನಿದಿವ್ಯ . ಅವಲೋಕಿತೇಶ್ವರನನ್ನು ಎವೆಯಿಕ್ಕದೆ ನೋಡುವಂತೆ  , ಓದಿ ಆಸ್ವಾದಿಸಬೇಕಾದ ಸಾನೆಟ್ ಸಂಕಲನ ’ ಸುನೀತಭಾವ ’. ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಅಭಿನಂದನೆಗಳು.
            - ಮುರಳೀಧರ ಉಪಾಧ್ಯ ಹಿರಿಯಡಕ
ಸುನೀತ ಭಾವ
 ಎಚ್. ಎಸ್. ವೆಂಕಟೇಶಮೂರ್ತಿ
 ಅಂಕಿತ ಪುಸ್ತಕ
  ೫೩ , ಶ್ಯಾಮ್ ಸಿಂಗ್ ಕಾಂಪ್ಲೆ಼ಕ್ಸ್ , ಗಾಂಧಿ      ಬಜಾರ್ ಮುಖ್ಯ ರಸ್ತೆ ,
 ಬೆಂಗಳೂರು - ೫೬೦೦೦೪
 ಬೆಲೆ- ರೂ ೧೫೦  . ಮೊದಲ ಮುದ್ರಣ -೨೦೧೫

No comments:

Post a Comment