stat Counter



Wednesday, July 27, 2016

ಪಿಯೂಷ್ ಮಿಶ್ರಾ - ದ್ವಿಪದಿಗಳು { ಕನ್ನಡಕ್ಕೆ- ಸಂವರ್ತ ’ ಸಾಹಿಲ್ " }

ಮಾನವ ತನ್ನ ದೃಷ್ಟಿಯಲ್ಲಿ ತಾ ಸರಿಯಿರಬೇಕು ಅಷ್ಟೇ,
ಲೋಕವು ದೇವರ ಕುರಿತೂ ಅಸಮಾಧಾನ ಹೊಂದಿದೆ.

2

ಬರೇ ಒಂದು ಕುರ್ಸಿಯದು ಚಟ್ಟವೇನಲ್ಲ ಹೆಣದ ಪೆಟ್ಟಿಗೆಯೇನಲ್ಲ,
ಏನೂ ಮಾಡಲಾಗದಿದ್ದರೆ ಎದ್ದೇಳುವ ಕೆಲಸವಾದರೂ ಮಾಡು.

3

ಇರುಳಿಡೀ ಮೊಬೈಲ್ ಸ್ಪರ್ಶಿಸುತ್ತಿರುತ್ತದೆ ಬೆರಳುಗಳು,
ಪುಸ್ತಕ ಎದೆಗೊತ್ತಿ ಮಲಗಿ ಅದೆಷ್ಟೋ ಕಾಲವಾಯಿತು.

4

ಇಂದು ಮತ್ತೆ ಭಾವನೆಗಳ ಹರಿಯಬಿಟ್ಟೆ,
ನಿನಗೆ ಮತ್ತೆ ಬರೀ ಪದಗಳಾಗಿ ಕಂಡವು.

5

ನಿನ್ನ ಬಳಿ ಇನ್ನೇನೂ ನಾ ಬೇಡುವುದಿಲ್ಲ ಶಿವನೇ,
ಕೊಟ್ಟು ಕಸಿಯುವ ನಿನ್ನ ಚಾಳಿ ನನಗೊಪ್ಪಿಗೆಯಿಲ್ಲ.

6

ಹಾಳೆಯ ಮೇಲೆ ಎರಡಕ್ಷರ ಇಳಿಸಿ ಹಗುರಾಗುತ್ತೇನೆ,
ಚೀರಾಡುತ್ತೇನೆ ಹೀಗೆ ನಾನು ಸದ್ದುಗದ್ದಲವಿಲ್ಲದೆಯೆ.

7

ಕೆಲಸವೆಂಥಾ ಕೆಲಸವದು ಮಾಡುತಾ ಹೃದಯವೇ ಅತ್ತರೆ,
ಪ್ರೀತಿಯದು ಎಂಥಾ ಪ್ರೀತಿಯು ಸುಲಭದಲ್ಲಿ ಕೈಗೂಡಿದರೆ.

8

ನೋವು ಭೋರ್ಗರೆದು ಸುರಿದಾಗ ನಾ ಅದೆಷ್ಟು ಒಬ್ಬಂಟಿಯಾಗಿದ್ದೆ,
ಎರಡು ಹನಿ ಖುಷಿ ಬಿದ್ದಾಗ ಅದೆಲ್ಲಿಂದ ಹರಿದು ಬಂತೋ ಜನಸ್ತೋಮ.

9

ಹಗುರ ಬಹಳ ಹಗುರ ಜೀವನವು,
ಹೊರೆಯೇನಿದ್ದರೂ ಆಸೆಗಳದು.

10

ಸಂಬಂಧಗಳ ಪೋಷಣೆಗೆ ಇರುವುದು ಆದಿತ್ಯವಾರವೊಂದೇ ನೋಡು,
ಉಳಿದೆಲ್ಲ ದಿನಗಳು ಉಳುಮೆ ದುಡಿಮೆಯಲ್ಲಿ ಖರ್ಚಾಗಿ ಹೋಗುತ್ತವೆ.

11

ಔತಣಕ್ಕೆ ಕರೆದು ನನ್ನೆಲ್ಲಾ ಕನಸುಗಳನ್ನು ಒಂದು ದಿನ,
ಮೋಸದಿಂದ ವಿಷ ಉಣ್ಣಿಸಬೇಕು ಎಂದುಕೊಳ್ಳುತ್ತೇನೆ.

12

ಎಲ್ಲಿ ಖರ್ಚಾಗಿ ಹೋಯಿತೋ ದೇವರೇ ಬಲ್ಲ,
ಬದುಕಲೆಂದೇ ಬಚ್ಚಿಟ್ಟಿದ್ದ ಆ ಕ್ಷಣಗಳೆಲ್ಲಾ.

~ ಪಿಯೂಷ್ ಮಿಶ್ರಾ

ಕನ್ನಡಾನುವಾದ: ಸಂವರ್ತ  'ಸಾಹಿಲ್'

No comments:

Post a Comment