stat Counter



Showing posts with label ಕನ್ನಡ ಕವನಗಳು. Show all posts
Showing posts with label ಕನ್ನಡ ಕವನಗಳು. Show all posts

Sunday, October 21, 2018

ರೋಹಿತ್ ಸುಭಾಷ್ ಅವತಿ -- ಕೆಲವು ಕವಿತೆಗಳು


June 26


ಜಿಜ್ಞಾಸೆ
ಇತ್ತು ನನ್ನಲ್ಲಿ,
ಆ ಬಯಲ ನುಂಗುವಾಸೆ
ಕೇಳಿದೆ-ತುಸು ನೀರ, 
ಸಿಗಲಿಲ್ಲ
ಹುಡುಕಲು ಹೊರಟೆ—ಅಮೃತವೇ ಇತ್ತು
ಧುಮುಕಿದೆ ಅದರೊಳಗೆ, 
ಮುಳುಗಿ ಸತ್ತೆ
ಇನ್ನೂ ಇದೆ, ಬಯಲಲ್ಲಿ ಬಯಲಾಗುವಾಸೆ.
ಮತ್ತೆ ಬರುವೆ ಅದಕಾಗಿ.
* * *
ಕಾಕು
ಬಿಸಿಲ ದೃಷ್ಟಿ ನೆಟ್ಟಿದೆ ಆ
ದಿಟ್ಟ ಹೆಂಗಸ ಮೆಟ್ಟಿಗೆ
ನಡೆಯುತ್ತಿದ್ದಾಳೆ ಘಿರಣಿ ಮುಂದಿನ
ಹಾದಿಯಲಿ,
ಮಲಗಿರುವ ಬೀದಿನಾಯಿಗಳ ದಾಟಿ 
ಹರಿದ ಚುಕ್ಕೆ ಸೀರೆಯ 
ಸೆರಗಿಂದ ತಲೆಮುಚ್ಚಿ
ಧಾವಿಸುತ್ತಿದ್ದಾಳೆ-
ಎನೋ ಯೋಚಿಸುತ್ತಾ...
ನನಗನ್ನ ಉಣಿಸಿದ ಆ ಕೈಗಳೀಗ
ಬೆವತಿವೆ-
ಬಿಸಿಲ ತಾಪದಿಂದ 
ಅಲ್ಲ,
ಬದುಕಿನ ಬಿಸಿಲಿಂದ.
* * *
ಕನಸಿನಲ್ಲಿ
ನೀ 
ಹರಿದ ನರಗಳ ಸಿಕ್ಕಾ ಕಂಡು
ಗುಮಾಣಿಸಿದೆ ಬೂದಿಯಾದೀ ಸುಟ್ಟ ಕಂಣ್ಗಳನು
ಪಂಕಾಗಾಳಿಗೆ ಮೈಗೊಟ್ಟು ಬಿದ್ದೆ ನಾ ನಿದ್ದೆಗೆ
ಕಡುಹುಡುಗಿ ಇದ್ದೆ ನೀ ಅಲ್ಲೂ....
—ನೆತ್ತರ ನೆನಪಿಸಲು.
* * *
—ಅವಳಿಗಾಗಿ
ಆ ಹೆಣ್ಣುಜೀವದ ಹಸಿವಿಗೆ—
ಹೊರಚಿಮ್ಮಿದೀ ನನ್ನ ಬಿಸಿನೆತ್ತರ ಆರುವ ಮೊದಲೇ
ಅದರೊಡಲೊಳಿಂದ ಹುಟ್ಟಿತೊಂದು ನಗುಮೊಗದ ನೆತ್ತರುಂಡೆ.
ಆ ಹಾಲುಮೈಯ ಕೆನೆನೆಕ್ಕಿದವ ‘ ನಸೀಬವಾನ ’
—ಎಂದು ಬಡಬಡಿಸುವೀ ಹುಚ್ಚನ ಪಾಲಿಗೆ
ಕಳ್ಳೀಹಾಲು ದಕ್ಕಿತೆಂದು ಕುಡಿದರೆ,
ಜಲ್ದಿ ಅಪ್ಪಿಕೊಳ್ಳಲೊಲ್ಲದೇಕೀ ಸಾವು ?
* * *
— ರೋಹಿತ್ ಸುಭಾಷ್ ಅವಟಿ.
( ಇತ್ತೀಚಿಗೆ ಬರೆದವುಗಳು )

Friday, August 3, 2018

ನಟರಾಜ . ಕೆ. ಪಿ--- ಹುಣಸೆಯ ಮರವ ನೋಡವ್ವ

ಹುಣಸೆಯ ಮರವ ನೋಡವ್ವ ಕಣ್ಣಿಗೆ ಕಟ್ಟಿ ನಿಲ್ಲುವ ಹುಣಸೆ ಮರವ ನೋಡವ್ವ ಶ್ರಾವಣ ಮಾಸದ ಕಡು ಹಸಿರು ಎಲೆ ಎಲೆಗಳಲ್ಲಿ ದಟ್ಟೈಸಿ ನಿಂತಿರುವ ಹುಣುಸೆಯ ಮರವ ನೋಡವ್ವ ನೋಡುವುದಕ್ಕೆರಡು ಕಣ್ಣು ಸಾಲದವ್ವ
ಜಾತರೆ ಯಾತರೆ ಬಿಟ್ಟಿಲ್ಲಿ ಬಾರವ್ವ ನಿಂತ ನಿಲುವಿಗೆ ಲೋಕವ ಕೈಮಾಡಿ ಕರೆದಿರುವ ಹುಣಸೆಯ ಮರವ ನೋಡವ್ವ ಅವ್ವ ನಾನು ಚಿಕ್ಕವನಿರುವಾಗ ನೀನು ಚಿಕ್ಕವಳಿರುವಾಗ ಮುದ್ರೆಯ ಹೊಲದ ತಿಪ್ಪೆಯ ಗುಂಡಿಯ ಹತ್ತಿರವಿದ್ದ ಹುಣಸೆಯ ಮರವ ನೋಡವ್ವ
ಕೊಂಬೆ ರೆಂಬೆ ಟೊಂಗೆ ಟಿಸಿಲುಗಳ ಹೊಕ್ಕು ಒಳ ಹೊಕ್ಕು ಮರದೊಳ ಹೊಕ್ಕು ದಟ್ಟೈಸಿರುವ ಹಸಿರು ಎಲೆಗಳ ನುಸಿದು ಮರದ ಒಳಹೊಕ್ಕು ನಿಗೂಢ ಕತ್ತಲ ಒಳಾಯಕ್ಕೆ ಹೋಗವ್ವ ಹುಣಸೆಯ ಮರಾಂತರಂಗಕ್ಕೆ ಹೋಗವ್ವ
ಬಳ್ಳಿ ಬಿಳಲುಗಳಂತದರ ಇಳಿ ಬೀಳುವ ಟಿಸಿಲುಗಳು ವಾಲಾಡುವ ಪರಿಯ ನೋಡವ್ವ ಅವ ಹಸುರು ಶಿಶುಗಳ ಜೀವವಾಡುವ ಪರಿಯ ನೋಡವ್ವ
ಅವ್ವ ಲೋಕ ಯಾತ್ರೆಯಿದು ಮುಗಿತಾಯ ಕ್ಕೆ ಬರುವ ವೇಳೆಯಾಯಿತು ಬಂದಿಲ್ಲಿ ನಿಲ್ಲವ್ವ
ಹುಣುಸೆಯ ಬೀಜ ಹುಣಸೆಯ ಹಣ್ಣು ಹುಣಸೆಯ ಕಾಯಿ ಹುಣಸೆಯ ಬರಲು ಹುಣಸೆಯ ಹುಳಿ ಹುಣಸೆಯ ಮರದ ಜೊತೆ ಬದುಕಿ ಬಂದಿದ್ದೇವವ್ವ ಹುಣಸೆಯ ಮರ ಮುಪ್ಪು ಹುಣಸೇಯ ಹುಳಿ ಮುಪ್ಪೆ ಗಾದೆಯ ರಸದ ಹೆಸರುವಾಸಿ ಮರವ ನೋಡವ್ವ
ಊರು ಓಡಾಡುವ ಜಾಗದಲ್ಲಿರುವ ಮೂರು ಹಾದಿ ಕೂಡುವ ಜಗದ್ಜಾಗದಲ್ಲಿರುವ ಲೌಕಿಕಕು ಅಲೌಕಿಕಕು ಆಗಿಬರುವ ಹುಣಸೆಯ ಮರಕೆ ಬಾರವ್ವ ಅರಸಿ ಬಾರವ್ವ



Image may contain: Nataraja Kalkere, smiling, closeup

Monday, January 22, 2018

ಶುಭಶ್ರೀಪ್ರಸಾದ್ ಮಂಡ್ಯ -- ಬಿಳಿ ಹಣ ಮತ್ತು ಕೆಂಪು ಬಣ್ಣ

*ಬಿಳಿ ಹಣ ಮತ್ತು ಕೆಂಪು ಬಣ್ಣ..*

ಚಂದ್ರ ಮುಕುಟ ಧರಿಸಿ
ಉಯ್ಯಾಲೆ ತೂಗುತ್ತಿದ್ದ,
ವಿಷಮದ ವಿಷಯ
ಭಿನ್ನರಾಶಿಯ ಹಾಸಿನ ಮೇಲೆ ಕಾಲಾಡುತ್ತ
ಪಗಡೆಯಾಡುವ
ಹೊತ್ತು
ಬೆಳಗೊಳದ ದೇವ
ತಣ್ಣಗೆ ಒಳಗೊಳಗೆ ನಗುತಿದ್ದ.

ಸಿಡಿ ಹಬ್ಬಕ್ಜೆ
ಬಾಯಿಬೀಗ, ಪೂಜಾಕುಣಿತ,
ವೀರಗಾಸೆ ನರ್ತನ,
ಹುಲಿ ವೇಷ ಒಳಗೊಳಗೇ ಹುಟ್ಟಿಸುವ ಅರುಯದ ಹೊಸ ಭಯ,,
ಕಣ್ಮುಚ್ಚಿ ಅಡಗಿದರೂ
ಹೂಬಾಣ ಚುಚ್ಚಿ
ಎದೆಗೂಡು ನಡುನಡುಗಿ
ಮಂಜುಗಡ್ಡೆ ಹೊದಿಕೆಯ
ಸರಿಸಿ ಬಿಸಿ ಹಬೆಯ‌ ಉಸಿರ
ಬಿಡುಗಡೆಗೆ ಕಾತರಿಸಿ ನೋಯುತಿದೆ.
ಚಕ್ರವಾಕ ರಾಗ ಸೂಸುವ‌ ಮೊದಲೇ ಶ್ರೀರಾಗ ತಾಳಹಾಕಿ  ಹೊಸ್ತಿಲು ಮೆಟ್ಟಿ.

ರೈಲು ಹಳಿಗಳ ಮೇಲೆಯೇ
ಓಡುತ್ತದೆ ಎನ್ನುವ ನಂಬಿಕೆ
ಮುರಿದು ಕಣ್ಣು‌ ತೇವ ಆಗಿತ್ತು
ಮಾರಿಕೊಂಡ ನನ್ನ
ಮನಸ್ಸು ಹಿಗ್ಗುವಿಕೆಯ
ಗುಣವನ್ನೇ ಕಳೆದುಕೊಂಡು.

ಹಾರುವ ಬಿಳಿ ಪಾರಿವಾಳಗಳ
ರೆಕ್ಕೆಗೆ ಹಸಿದಾರ ಕಟ್ಟಿ
ಗಾಳಿಪಟ ಹಾರಿಸುವ
ಹಣದ  ತಣ್ಣಗಿನ‌ ಕ್ರೌರ್ಯ
ಹಸಿದ ಹೊಟ್ಟೆಗಳ ತಣಿಸುವುದಿಲ್ಲ.

ಮಂಚಗಳ ಸದ್ದ ಲಾಲಿಸುವ
ಬಿಳಿ ಹಣದ ಕೆಂಡದಂಥ ಕೆಂಪು ಮೂಗಿಗೆ
ನತ್ತು ಹಾಕುವರಿಲ್ಲ,

ಬಿಳಿ ಹಣವೂ 
ಬಣ್ಣ ಬಣ್ಣ ಬಳಿದುಕೊಂಡು
ಮುಖವಾಡ ತೊಟ್ಟಿವೆ.
ರೆಕ್ಕೆ ಬಿಚ್ಚಿ ಚಂದದೆ ಹಾರುವ ಗಿಳಿಮರಿಗಳ ಹಾರಿಸಿಕೊಂಡು ಕಚ್ಚಿ‌ ಚುಚ್ಚಿ ಕೊಲ್ಲುವ ರಣಗಿಡುಗಗಳಿಗೆ ಉಣಿಸುವ ಬೆಳ್ಳಿ‌ ನಾಣ್ಯಗಳ  ನಗು,
ಕಣ್ಣೀರಿಗೆ ಕಟ್ಟೆ ಕಟ್ಟಿ ನೆಲದೊಡಲ ಸೇರಿಸಿದೆ.

ಸದ್ದಡಗಿದ ಬಂದೂಕಿನ‌ ನಳಿಕೆಯಲಿ ಗುಬ್ಬಿ ಗೂಡುಕಟ್ಟಿ‌ ಮೊಟ್ಟೆಯಿಕ್ಕಿದೆ.
ಮರಿಗಳು ಚಿಲಿಪಿಲಿ ಎನುವ ವೇಳೆ  ಹಣದ ಗೆಜ್ಜೆಲಾಲಿತ್ಯಕೆ ಮಣಿದು‌ ಆರ್ಭಟಿಸುವ ನಳಿಕೆಯ ಬಿಸಿಗೆ ಮರಿಗಳೆಲ್ಲ ಕರ್ರಗಾಗಿ ರಕ್ತದ ಕಮಟು ವಾಸನೆ ಸುತ್ತಮುತ್ತ..

ಕಪ್ಪು‌ ಹಣದ ಬಿಳಿ‌ ಮುಖವ ಅರಸುತ್ತ ಅಂಡಲೆಯುತಿಹೆ
ಕಂಡರೊಂದು ದಿನ‌ ಕಾಣಿಸುವೆ.
ಬುದ್ಧ ಎಂದೂ ನಗೆಮುಖವನೇ‌ ಹೊರುತ್ತಾನೆ

ಹಳೇ ಪೇಪರ್ ಖಾಲಿ ಸೀಸೆ ಕೂಗು ರಸ್ತೆಯಾಚೆಗೂ ಹಬ್ಬಿದೆ
ಪ್ಲಾಸ್ಟಿಕ್ ಕವರ್ ಆಯುವ ಹೊಟ್ಟೆ ಬೆನ್ನುಹುರಿ ಒಂದಾದ ಪುಟ್ಟ ಹುಡುಗ 
ಜೇಬಿನಿಂದ ಜಾರಿ‌ ಉರುಳಿ ಕವರಿನ ಸೆರಗಿನಡಿ ಅವಿತಿರಬಹುದಾದ ಐದು ಪೈಸೆ ನಾಣ್ಯವ ಹುಡುಕುತ್ತಲೇ ಇದ್ದಾನೆ 
ಇನ್ನೂ....


-✍ಶುಭಶ್ರೀಪ್ರಸಾದ್, ಮಂಡ್ಯ

Sunday, August 21, 2016

ಚಂದ್ರಿಕಾ ನಾಗರಾಜ್ ಹಿರಿಯಡಕ - ಯಾರ ಬಳಿ ದೂರಲಿ ಕೄಷ್ಣ ?

ಯಾರ ಬಳಿ ದೂರಲಿ ಕೃಷ್ಣ
ನಿನ್ನ ನಾಮ ಜಪಿಸುವ 
ನಾಲಿಗೆಯ ಕುರಿತು
ನಿನ್ನ ಕಾಣ ಬಯಸುತಿರೋ
ಕಂಗಳ ಕುರಿತು
ಉತ್ತರಿಸದ ನಿನ್ನ ಮುಂದೆ
ಪ್ರಶ್ನೆಗಳನೆ ಚೆಲ್ಲುವವಳು ನಾನು
‘ಹುಚ್ಚಿ’ ಎಂದೆಂಬ ಜನಗಳ ಕುರಿತು
ಯಾರ ಬಳಿ ದೂರಲಿ ಕೃಷ್ಣ
ನೀ ವರಿಸಿದ ಹೆಂಗಳ ಕುರಿತು
ಸಣ್ಣ ಮುನಿಸಿದೆ ಕೃಷ್ಣ
ನನ್ನೊಳಗಿನ ಅಸೂಯೆಯ
ಯಾರ ಬಳಿ ದೂರಲಿ ಹೇಳು?
ನಿನಗಾಗಿ ಕಾಯುತಿರುವ 
ಪುಟ್ಟ ರಾಧೆ ನಾನು
ನನ್ನ ಕನಸುಗಳ ಕುರಿತು
ಯಾರ ಬಳಿ ದೂರೆನು ನಾನು
ನೀ ಬರದ ದಾರಿಯಲೆ
ವಯಸ ಕಳೆಯಬೇಕೆಂದಿರುವೆ 
ನೀ ಬರುವ ಭರವಸೆಯ ಕುರಿತು
ಯಾರ ಬಳಿ ದೂರಬೇಕು ಹೇಳು?



Wednesday, April 1, 2015

ಯಮುನಾ Gaonkar - ಕಾಡುವ ಅಬ್ಬೆ ಮಡಿಲು

ಕಾಡುವ ಅಬ್ಬೆ ಮಡಿಲು
ಗೊಂಡಾರಣ್ಯದ ಒಂಟಿ ಮನೆ
ಬೆಳಗಿದ ಖಂಡಕಾವ್ಯ ನನ್ನಬ್ಬೆ
ಸೋರುಮಾಡಿನಡಿಯ ಮಾನಧನ ಸಂಪನ್ನೆ 
ಬಿದಿರ ಕಂಬಿ ತಟ್ಟಿಗೋಡೆಯೊಳಗಿನ
ಭವಿಷ್ಯ ಮುಖಿ
ಶೀಗೆ ರೀಟೆ ಪುಡಿಯಲ್ಲಿ ಶುಭ್ರಮಾಡಿದ
ಕಂಬಿ ಸೀರೆ ನೆರಿಗೆಗಳ ಗುಚ್ಛ
ಬಿಸಿಲ ಪರಿಮಳದ ಅವಳ ಮಡಿಲು
ನೆನಪಿನಲ್ಲೂ ನೆಮ್ಮದಿ
ಹಗರಿನ ದಬ್ಬೆಗೆ ಡಬ್ಬಿ ಜೋಲಿಸಿ
ಶ್ರವಣ ಕುಮಾರನ ತಂದೆ ತಾಯಂತೆ
ನೀರು ಹೊತ್ತು ನನ್ನ ಹೆತ್ತ ಅಬ್ಬೆ
ಶೇಡಿಮಣ್ಣ ಗೋಡೆಗೆ ಬಡಿದು
ಕೆಮ್ಮಣ್ಣ ಪಟ್ಟಿ ಗೆರೆಯ ಎಳೆದು
ಗದ್ದೆ ಮಣ್ಣಿನ ಬಣ್ಣವ ಕೊಟ್ಟು ಚಿತ್ರಿಸಿದವಳೀಕೆ. ..ನಮ್ಮನ್ನ
ತಗ್ಗಿದ ಗೋಣು ಬಗ್ಗಿದ ಬೆನ್ನು
ನೆಟ್ಟಿಹಾಕಿ ಕಳೆಕಿತ್ತ ಪೈರು ಫಸಲು ನನ್ನಬ್ಬೆ
ಸಾಲುಸಾಲು ಗಿಡನೆಟ್ಟು ನೀರೆರೆದ ಜೀವ
ವಿಹ್ವಲಗೊಂಡಿದ್ದು
ಬದುಕ ಭಯಂಕರ ಆಕಸ್ಮಿಕಕ್ಕೆ
ಇಂದು ರುಚಿಯಾದ ಅಡುಗೆ ಸವಿವಾಗ
ರೊಟ್ಟಿ ತಟ್ಟಿ ತಣ್ಣನ್ನ ತಿಂದ ಅಬ್ಬೆ
ಹೇಳುವ 'ಕಣ್ಣೀರ ಸಾರು ಸೋರ್ ಪಳ್ದಿ'
-ಯದೇ ನೆನಪು
ಕಾಲು ಒಡೆತ ಮಂಡಿ ಸೆಳೆತ
ಕೈತಳ ಬಿರಿದ ಅಡಿಕೆ ಚೊಗರು
ಸಗಣಿ ಉಚ್ಚೆ ಬರಗಿ
ಅಕ್ಕಚ್ಚು ಮುರುಗು ದನದೆದುರಿಟ್ಟು
ಕವಳ ತಿನ್ನುತ್ತ ಅಂತರ್ಮುಖಿಯಾದವಳು..
ತಾನು ಕಾವ್ಯಿಸಿದ ಒಡಲಕುಡಿಗಳ ದಿಟ್ಟಿಸಿ...
ಅಪ್ಪಟ ಆಶುಕವಿಯ
ಕೊನೆಯ ಗಾಂವ್ಟಿ ಕವನ ನಾನು
ಚಾಳೀಸ್ ಬಂದ ನನಗೂ
ಅಬ್ಬೆ ಮಡಿಲ ಕಂಡರೆ ತಬ್ಬಿ ತಲೆಯಿಡುವಾಸೆ...
ಅವಳ ಸಂಭ್ರಮ ಸೆರೆಹಿಡಿವ ಪದಗಳೇ
ಜಾಳು ಜಾಳು...
- ಯಮುನಾ (ಕಳೆದ ಹತ್ತಾರು ವರ್ಷಗಳಿಂದ ಆಗಾಗ ತೆಗೆದ ಫೋಟೋ ಬಳಸಿದ್ದು)
—