ರಾಜೀವ ತಾರಾನಾಥರೊಡನೆ ಒಂದು ದಿನ
ಸೂಫಿಗಳ ಮೇಲೆ ಅಧ್ಯಯನ ಮಾಡಿದ್ದ ನಾನು, ಪ್ರಸಿದ್ಧ ಸರೋದ್‍ವಾದಕರಾದ ಪಂಡಿತ್ ರಾಜೀವ ತಾರಾನಾಥರನ್ನು ಭೇಟಿ ಮಾಡುವುದಕ್ಕೆ ಹಲವು ದಿನಗಳಿಂದ ಹಂಬಲಿಸಿದ್ದೆ. ಕಾರಣ, ಸೂಫಿಸಂ ಭಾಗವೇ ಆಗಿರುವ ಸಂಗೀತ, ಧರ್ಮಾತೀತ ಪ್ರಜ್ಞೆ ಹಾಗೂ ವೈಚಾರಿಕತೆಗಳು ಸಂಗಮಿಸಿದ ಪರಂಪರೆಯೊಂದರ ಕುಡಿ ಅವರು. ಈಗಿನ ಭಾರತದ ಸನ್ನಿವೇಶದಲ್ಲಿ ಅವರು ಈ ಪರಂಪರೆಯ ಕೊನೆಯ ಕೊಂಡಿಗಳಲ್ಲಿ ಒಂದೆಂದು ತೋರುವರು. ಈ ವಿಶಿಷ್ಟ ಪರಂಪರೆಯು ಎರಡು ಭೂಮಿಕೆಗಳಲ್ಲಿ ಬೇರು ತಳೆದಿದೆ. ಮೊದಲನೆಯ ಭೂಮಿಕೆ- ತಂದೆ ಪಂಡಿತ ತಾರಾನಾಥರದು. ತಾರಾನಾಥರು ನಿಷ್ಠುರ ವೈಚಾರಿಕರೂ ವೈದ್ಯರೂ ಸಂಗೀತ ಗುರುವೂ ಮಾನವತಾವಾದಿಯೂ ಯೋಗಿಯೂ ರಾಜಕೀಯ ಚಳುವಳಿಗಾರರೂ ಆಗಿದ್ದವರು; ರಾಯಚೂರಿನಲ್ಲಿ ಹಮದರ್ದ್ ಮದರಸಾ ಎಂಬ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು. ಹೈದರಾಬಾದ್ ನಿಜಾಮನ ನಿರಂಕುಶ ಪ್ರಭುತ್ವದ ಬಂಡೆದ್ದು, ಆತನನ್ನು ಜನರಲ್ ಡಯರ್‍ಗೆ ಹೋಲಿಸಿ ಲೇಖನ ಬರೆದು ಗಡಿಪಾರು ಮಾಡಲ್ಪಟ್ಟ ಬಳಿಕ, ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ತುಂಗಭದ್ರಾ ಎಂಬ ಜಾಗದಲ್ಲಿ ‘ಪ್ರೇಮಾಯತನ’ ಆಶ್ರಮ ಕಟ್ಟಿಕೊಂಡು ನೆಲೆನಿಂತವರು; ಈ ‘ಪ್ರೇಮಾಯತನ’ವು ಗಾಂಧಿಯವರ ಸಬರಮತಿಯ ಹಾಗೆ ಭಾರತದಲ್ಲೇ ವಿಶಿಷ್ಟ ಆಶ್ರಮ. ತಾರಾನಾಥರು ಸೂಫಿಗಳ ಇಷ್ಕ್ (ಪ್ರೇಮ) ಪರಿಕಲ್ಪನೆಯನ್ನು ನೆನಪಿಸುವಂತೆ ‘ಪ್ರೇಮ’ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು; ಮಂಗಯ್ಯ ಎಂಬ ಯೋಗಿಯ ಶಿಷ್ಯರಾಗಿದ್ದ ಅವರು, ಪ್ರಸಿದ್ಧ ಯೋಗಿನಿ ಅದೋನಿ ಲಕ್ಷ್ಮಮ್ಮನವರ ಸಹವರ್ತಿಯಾಗಿದ್ದವರು. ಎರಡನೇ ಭೂಮಿಕೆಯು, ಸೂಫಿತತ್ವದ ಭಾಗವಾಗಿರುವ ಸಂಗೀತಲೋಕಕ್ಕೆ ಸೇರಿದ ಬಾಬಾ ಅಲ್ಲಾವುದ್ದೀನ್, ಅವರ ಮಕ್ಕಳೂ ಶಿಷ್ಯರೂ ಆದ ಅಲಿಅಕ್ಬರ್‍ಖಾನ್ ಹಾಗೂ ಅನ್ನಪೂರ್ಣಾದೇವಿ, ಗುರುಪುತ್ರಿಯನ್ನೇ ಲಗ್ನವಾದ ಪಂಡಿತ್ ರವಿಶಂಕರ್ ಮುಂತಾದ ಗುರುಗಳಲ್ಲಿದೆ. ಧರ್ಮ ಜಾತಿ ಭಾಷೆ ಪ್ರದೇಶಗಳ ಎಲ್ಲೆದಾಟಿ ಸಂಗೀತವನ್ನೇ ಒಂದು ಧರ್ಮದಂತೆ ಬಾಳಿದ ಈ ಗುರು ಗರಡಿಯಲ್ಲಿ ಪಳಗಿದ ರಾಜೀವ್, ಈ ಪರಂಪರೆಯ ಅತ್ಯುತ್ತಮ ಗುಣಗಳನ್ನು ಬಾಳುತ್ತಿರುವರು.
ರಾಜೀವರ ಮುಂಗೋಪ (ಮೈಕ್ ತೊಂದರೆ ಕೊಟ್ಟದ್ದಕ್ಕಾಗಿ ಭಾಷಣ ನಿಲ್ಲಿಸಿ ಸಭ್ಯಾತ್ಯಾಗ ಮಾಡುವುದು ಇತ್ಯಾದಿ) ಹಾಗೂ ನಿಷ್ಠುರ ನುಡಿಯ ಬಗ್ಗೆ ದಂತಕತೆಗಳನ್ನು ಕೇಳಿದ್ದ ನಾನು, ನೇರವಾಗಿ ಕಾಣಲು ಹಿಂಜರಿದುಕೊಂಡಿದ್ದೆ. ಅವರ ಶಿಷ್ಯರಾದ ಶೈಲಜಾ ವೇಣುಗೋಪಾಲ್ ಹಾಗೂ ಸರ್ವಮಂಗಳಾ ಮುಂತಾದವರ ಮೂಲಕ ಭೇಟಿಗೆ ಯತ್ನಿಸುತ್ತಲೂ ಇದ್ದೆ. ಹೀಗಿರುತ್ತ ಒಂದು ಸಂಜೆ, ಸ್ವತಃ ಅವರಿಂದಲೇ ಅನಿರೀಕ್ಷಿತ ಕರೆ ಬಂತು. ನನಗದು ಉತ್ಕಂಠಿತ ಗಳಿಗೆ. ಸೂಫಿಗಳ ಮೇಲೆ ನನ್ನ ಪುಸ್ತಕವನ್ನು ಹಿಂದೆ ಓದಿದ್ದ ಅವರು ಆಗಷ್ಟೆ ‘ಧರ್ಮಪರೀಕ್ಷೆ’ ಪುಸ್ತಕ ಓದಿದ್ದರು. ‘ಬಹಳ ಚೆನ್ನಾಗಿದೆ. ಸಂತೋಷವಾಗಿದೆ. ಮನೆಗೆ ಬನ್ನಿ. ಮುಂದಿನ ತಿಂಗಳು ಅಮೇರಿಕಾಕ್ಕೆ ಹೋಗ್ತೀನಿ. ಅಷ್ಟರೊಳಗೇ ಬರಬೇಕು’ ಎಂದರು. ‘ಬರಲುಗೊಂಡ ಗಿಡಕೆ ತೊರೆ ಬಂದು ಹೊಯ್ದ’ಂತಾಯಿತು. ಕೂಡಲೇ ಹೊರಟು, ಗೆಳೆಯರಾದ ವಿ.ಎಸ್.ಶ್ರೀಧರ್ ಅವರ ಜತೆ ಹೋಗಿ ಒಂದು ಹಗಲು ಮತ್ತು ರಾತ್ರಿ ಅವರ ಜತೆ ಕಳೆದೆ. ಅವರು ಲಹರಿಯಲ್ಲಿ ಹರಿಸುವ ವಾಗ್ವಿಲಾಸ ಕೇಳಲು, ಹಲವು ವಿಷಯಗಳನ್ನು ಚರ್ಚಿಸಲು, ಬೆಳಗುಜಾವ ಅವರು ಮಾಡುವ ಸರೋದ್ ರಿಯಾಜ್ ಆಲಿಸಲು ಸಾಧ್ಯವಾಯಿತು. ನನ್ನ ಬಾಳುವೆಯಲ್ಲಿ ಅದೊಂದು ಅಪೂರ್ವ ದಿನ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಮನೆಗೆ ಹೋದಾಗ ಗುಹೆಮುಂದೆ ವಿಶ್ರಮಿಸಿಕೊಳ್ಳುತ್ತಿರುವ ಹುಲಿಯಂತೆ ಆಜಾನುಬಾಹು ರಾಜೀವ್ ಹಾಲಿನಲ್ಲಿ ಪತ್ರಿಕೆ ಓದುತ್ತ ಕುಳಿತಿದ್ದರು. ತುಸು ದೂರದಲ್ಲಿ ಅವರ ಬಲಿಷ್ಠ ನಾಯಿಯೂ ಪವಡಿಸಿತ್ತು. ನಮ್ಮನ್ನು ಅಕ್ಕರೆಯಿಂದ ಬರಮಾಡಿಕೊಂಡ ಅವರು ಅಡುಗೆ ಕೋಣೆಯತ್ತ ಕತ್ತುಹೊರಳಿಸಿ ಅಡಿಗೆಯಮ್ಮನಿಗೆ “ನೋಡಮ್ಮಾ ಮಂದಿ ಬಂದಿದ್ದಾರೆ. ಮೊದಲು ಟೀಕೊಡು’’ ಎಂದರು. ಎದುರು ಗೋಡೆಯ ಮೇಲೆ ಪಂಡಿತ ತಾರಾನಾಥರ ಫೋಟೊ ಇತ್ತು. ಚಹಾಪಾನ ಮಾಡುತ್ತ, ತಾರಾನಾಥರ ಬಗೆಗಿನ ನೆನಪುಗಳನ್ನು ಮೆಲ್ಲಗೆ ಕೆದಕಿದೆ. 70 ವರ್ಷಗಳಷ್ಟು ಹಿಂದಕ್ಕೆ ಜಾರಿ ನಿಧಾನವಾಗಿ ತಮ್ಮನ್ನು ಬಿಚ್ಚಿಕೊಂಡು ರಾಜೀವ್ ಮಾತಾಡತೊಡಗಿದರು.
