stat Counter



Thursday, June 18, 2020

ಮುರಳೀಧರ ಉಪಾಧ್ಯ ಹಿರಿಯಡಕ - ಯರ್ಮುಂಜ ರಾಮಚಂದ್ರ ರ ಸಮಗ್ರ ಕತೆ ಕಾವ್ಯ {2002 }

ಯರ್ಮುಂಜ  ರಾಮಚಂದ್ರ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡ ಕನ್ನಡ ಲೇಖಕ. ಅವರ ಮೊದಲ    ಸಣ್ಣಕತೆ ’ ಆರಿದ ಹಂಬಲ’ ೧೯೪೮ರಲ್ಲಿ ಮಂಗಳೂರಿನ  ’ಅರುಣ ’ ಪತ್ರಿಕೆಯಲ್ಲಿ ಪ್ರಕಟವಾಯಿತು. ’ಸ್ನೇಹಿ ತರು" ಎಂಬಕತೆ ೧೯೪೯ರಲ್ಲಿ ’ ಜಯಒತೆ’ ಮಾಸ ಪತ್ರಿಕೆ ನಡೆಸಿ ಅಖಿಲ ಕರ್ನಾಟಕ ಕಥಾ ಸ್ಪರ್ಧೆಯಲ್ಲಿ    ಬಹುಮಾನ   ಪಡಯಿತು. ತರುಣ ಯರ್ಮುಂಜರು ಪುತ್ತಾರು ತಾಲೂಕಿನ ಕಬಕ ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್, ಕಲ್ಲಡ್ಕ ಸಮೀಪದ ಬೋಳಂತೂರು ಶಾಲೆಯಲ್ಲಿ ಉಪಾಧ್ಯಾಯ, ಪುತ್ತೂರು ತಾಲೂಕು ಕಚೇರಿಯಲ್ಲಿ ಟೈಪಿಸ್ಟ್, ಮಂಗಳೂರಿನ ’ ನವಭಾರತ’ದಲ್ಲಿ ಉಪಸಂಪಾದಕ, ’ರಾಷ್ಟ್ರಮತ’ದಲ್ಲಿ ಉಪಸಂಪಾದಕ, -ಹೀಗೆ ವಿವಿಧ ವೃತ್ತಿಗಳಲ್ಲಿದ್ದರು. ಅವರ್ ’ ಚಿಕಿತ್ಸೆಯ ಹುಚ್ಚು ಮತ್ತು ಇತರ ಕತೆಗಳು ’ ೧೯೫೪ ರಲ್ಲಿ ಪ್ರಕಣವಾಯಿತು. ಅವರು ತನ್ನ ಇಪ್ಪತ್ತ ಮೂರನೆಯ ವಯಸ್ಸಿನಲ್ಲಿ ೧೯೫೫ರಲ್ಲಿ ತೀರಿಕೊಂಡರು. ಅವರ ’ ವಿದಾಯ’ ಕವನ ಸಂಕಲನ ೧೯೫೬ ರಲ್ಲಿ ಕವಿ ಎಂ.ಗೋಪಾಲ್ ಕೃಷ್ಣ ಅಡಿಗರ್ ಮುನ್ನುಡಿಯೊಂದಿಗೆ ಪ್ರಕಟವಾಯಿತು.

ಯರ್ಮುಂಜರ’ ಚಿಕಿತ್ಸೆಯ ಹುಚ್ಚು’, ’ಚೆನ್ನಪ್ಪ ಒಡೆದ ಮೂರ್ತಿ, ’ನಾನು ಮನುಷ್ಯ, ;ಎಂಕಪ್ಪುವಿನ ದ್ವೇಷಾಗ್ನಿ’, ಪ್ರೇತಾತ್ಮಗಳು ಈ ಕತೆಗಳು  ಈಗಾಗಲೇ ಕನ್ನಡದ ಓದುಗರ ವಿಮರ್ಶಕರ ಗಮನ ಸೆಳೆದಿವೆ. ಈ ಯರ್ಮುಂಜರ ’ ಸಮಗ್ರ ಕಥೆ-ಕಾವ್ಯಕ್ಕೆ ಪ್ರಸ್ತಾವನೆಯನ್ನು ಬ್ರೆದಿರುವ ರಾಮ್ಚಂದ್ರದೇವ, ಯರ್ಮುಂಜರ ಸೃಜನಶೀಲತೆ ಹೆಚ್ಚು ಪ್ರಖರವಾಗಿ ಕಾಣುವುದು ಕಾವ್ಯಕ್ಕಿಂತಲೂ ಹೆಚ್ಚಾಗಿ ಸಣ್ಣಕತೆಯಲ್ಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಗೋಪಾಲಕೃಷ್ಣ ಅಡಿಗರು ’ವಿದಾಯ’ದ ಮುನ್ನುಡಿಯಲ್ಲಿ ಯರ್ಮುಂಜರ ’ಬೆಳಕು’, ’ಚಂದ್ರ ಬಿಂಬ’, ಕ್ಷೋಭೆ, ’ಕಲ್ಪನೆ’, ಯಾರಲ್ಲಿಗೆ ಬಂದರು ಕಳೆದಿರುಳು?’ ಕವನಗಳನ್ನು ಮೆಚ್ಚಿಕೊಂಡಿದ್ದಾರೆ. ’ಯಾರಲ್ಲಿಗೆ ಬಂದರು. ಕಳೆದಿರುಳು’-ಕವನದಲ್ಲಿ ’ಏನೂ ಅರಿಯದ ಮುಗ್ದೆಯೊಬ್ಬಳು’ ತನ್ನ ಕಟು ಮಧುರ ಅನುಭವವೊಂದನ್ನು ನೆನೆಪಿಸಿಕೊಂಡು ಗಾಳಿಯನ್ನು ಮಾತನಾಡಿಸುತ್ತಿದ್ದಾರೆ. ಇದೊಂದು ನಿಗೂಢ, ಧ್ವನಿ ಪೂರ್ಣ ಕವನ. ಅಡಿಗರು ಬರೆದಿರುವಂತೆ, "ಇಲ್ಲಿ ಬಂದವರು ಯಾರು? ಪ್ರೇಯಸಿಯ ಬಳಿಗೆ ಪ್ರಿಯನೇ? ಜೀವಾತ್ಮನ  ಬಳಿಗೆ ಪರಮಾತ್ಮನೇ? ಸಾಂತದ ಕಿವಿಯಲ್ಲಿ ಅನಂತ ಪಿಸುನುಡಿದು ಹೋಯಿತೆ? ಅಥವಾ ಸಾವು  ಹೀಗೆ ಹಠಾತ್ತನೆ ಬಂದು ಮೈ ಸೋಂಕಿಸಿ ಅದೃಶ್ಯವಾಯಿತೆ? ಈ ಎಲ್ಲ ಅರ್ಥಗಳೂ ಇಲ್ಲಿ  ಸಲ್ಲುತ್ತವೆ."
ವೇಣುಗೋಪಾಲ ಕಾಸರಗೋಡು ಅವರ ’ಯರ್ಮುಂಜ  ರಾಮಚಂದ್ರ- ಬದುಕು-ಬರಹ’ ಗ್ರಂಥವನ್ನು ಪುತ್ತೂರು ಕರ್ನಾಟಕ ಸಂಘ ೧೯೯೩ರಲ್ಲಿ ಪ್ರಕಟಿಸಿದೆ. ಯರ್ಮುಂಜರು ಕನ್ನಡ ಸಾಹಿತ್ಯ ಲೋಕಕ್ಕೆ ಅತಿಥಿಯಂತೆ ಬಂದು, ಬೇಗನೆ ’ ವಿದಾಯ’ ಹೇಳಿ ಕಣ್ಮರೆಯಾದ, ತನ್ನ ಹೆಜ್ಜೆ ಹುರುತುಗಳನ್ನು ಉಳಿಸಿ ಹೋದ ಲೇಖಕ. ಪ್ರಿಸಮ್  ಬುಕ್ಸ್ ನವರು ಪ್ರಕಟಿಸಿರುವ ಯರ್ಮುಂಜರ ’ ಸಮಗ್ರ ಕತೆ ಕಾವ್ಯ’ ಯರ್ಮುಂಜರಿಗೊಂದು ಜಂಗಮ ಸ್ಮಾರಕವಾಗಿದೆ.

ಮುರಳೀಧರ ಉಪಾಧ್ಯ, ಹಿರಿಯಡಕ.
ಸಮಗ್ರ ಕಥೆ-ಕಾವ್ಯ
ಲೇ: ಯರ್ಮಂಜ ರಾಮಚಂದ್ರ
ಪ್ರ: ಪ್ರಿಸಮ್ ಬುಕ್ಸ್ ಪ್ರೈ. ಲಿ.
ನಂ.:೧೮೬೫, ೩೨ನೇ ಕ್ರಾಸ್
ಬನಶಂಕರಿ ಎರಡನೇ ಹಂತ,
ಬೆಂಗಳೂರು-೫೬೦೦೭೦.
ಮುದ್ರಣ:೨೦೦೨ ಬೆಲೆ:ರೂ.೮೫

No comments:

Post a Comment