stat CounterWednesday, June 24, 2020

ಗಿರಿಜಾ ಶಾಸ್ತ್ರಿ - ಕೆ. ಸತ್ಯನಾರಾಯಣ ಅವರ " ಬಾಡಿಗೆ ಮನೆಗಳ ರಾಜ ಚರಿತ್ರೆ"


ಇಲ್ಲಿರುವುದೇ ನಮ್ಮ ಮನೆ!

ಚರಿತ್ರೆ ಯೆಂದರೆ, ದಾಖಲಾಗುವ ಲಿಖಿತ ಚರಿತ್ರೆ ಯೆಂದರೆ ಅದು ರಾಜರ ಚರಿತ್ರೆಯೇ. ಮೌಖಿಕ ಪರಂಪರೆಯಲ್ಲಿ ಸ್ಮೃತಿಯ ರೂಪದಲ್ಲಿ ಉಳಿದುಕೊಂಡವು ಚರಿತ್ರೆಯಲ್ಲ, ಎನ್ನುವ ನಂಬಿಕೆ ಈಚಿನವರೆಗೂ ಇತ್ತು. ಈಗೀಗ ಎರಡು ಮೂರು ದಶಕಗಳಿಂದ ಸಬಾಲ್ಟ್ರನ್ ಅಧ್ಯಯನದ ಭಾಗವಾಗಿ ಮೌಖಿಕ ಚರಿತ್ರೆ ಬೆಳಕಿಗೆ ಬರುತ್ತಿದೆ. ಅಂತಹ ಒಂದು ಮೌಖಿಕ ಚರಿತ್ರೆಯ ಭಾಗವಾಗಿ ಕೆ.ಸತ್ಯನಾರಾಯಣ ಅವರು “ಬಾಡಿಗೆ ಮನೆಗಳ ರಾಜ ಚರಿತ್ರೆ” ಯನ್ನು ಕಾಣಬಹುದಾಗಿದೆ.
ಇದನ್ನು “ರಾಜಚರಿತ್ರೆ” ಎಂದು ಕರೆದಿರುವುದೇ ಚರಿತ್ರೆಯ ಬಗೆಗಿನ ಸಾಮಾನ್ಯ ಪರಿಕಲ್ಪನೆಯನ್ನು ವಿರೋಧಿಸುವಂತಿದೆ.
ಒಂದು ಊರಿಗೆ, ಮನೆತನಕ್ಕೆ ತನ್ನದೇ ಆದ ಇತಿಹಾಸ ವಿರುವಂತೆ ಪ್ರತಿಯೊಂದು ಮನೆಗೂ ತನ್ನದೇ ಆದ ಚರಿತ್ರೆ ಇರುತ್ತದೆ.
ಮನೆಯೆಂದರೆ ಕೇವಲ ಗೋಡೆಯಲ್ಲವಲ್ಲ? ಅದರ ಸದಸ್ಯರ ಸಂಬಂಧದ ಸ್ವರೂಪಗಳು, ಬವಣೆ, ಭಾವ ಸಂಭ್ರಮಗಳು ಮಾತ್ರವಲ್ಲ, ಅದರೊಳಗೆ ಲಾಗಾಯ್ತಿನಿಂದ ಬಳಸದೇ ಬಿದ್ದಿರುವ ಸಾಮಾನುಗಳು ಕೂಡ ಹೌದು. (ಇಲ್ಲಿ ಬರುವ ತಂದೆಯ ಮೂಲಕ ಅದು ಬಹಳ ಶಕ್ತಿಯುತವಾಗಿ ವ್ಯಕ್ತವಾಗಿದೆ. ಹೀಗೆ ನಮ್ಮ ಗಮನಕ್ಕೇ ಬಂದಿರದ ಸಾಮಾನುಗಳನ್ನು ನಮಗೇ ಹೊಸದಾಗಿ ಪರಿಚಯಿಸುವವರು ಮನೆಯಲ್ಲಿ ಆಡುವ ಪುಟ್ಟ ಮಕ್ಕಳು. ಇದು ಅವರ ಮೊಮ್ಮಗನ ಪಾತ್ರದ ಮೂಲಕ ಬಹಳ ಲವಲವಿಕೆಯಿಂದ ಮೂಡಿ ಬಂದಿದೆ). ಮನೆಯೆಂದರೆ ಬಂದು ಹೋಗುವವರ ಅದರ ಆಸುಪಾಸಿನವರ ಕಥೆಗಳ ಮೊತ್ತ ಮಾತ್ರವಲ್ಲ. ಮನೆಯೆಂದರೆ ನಮ್ಮ ಗ್ರಹಿಕೆಯ ವಿಶ್ವ, ವಿಶ್ವದ ಗ್ರಹಿಕೆಯೊಳಗಿನ ನಾವು. "ಅಲ್ಲಿರುವುದು ನಮ್ಮ ಮನೆ ಇಲ್ಲಿರುವುದು ಸುಮ್ಮನೆ" ಎನ್ನುವ ದಾಸರ ಮಾತಿದೆ. ಅದಕ್ಕೆ ಪ್ರತಿಯಾಗಿ "ಇಲ್ಲಿರುವುದೇ ನಮ್ಮ ಮನೆ" ಎನ್ನುವ ಮನೆಯ ಪ್ರತೀಕದ ಮೂಲಕವೇ ಮನುಷ್ಯ ಸಂಬಂಧದ ಒಟ್ಟು ಸ್ವರೂಪವನ್ನು ಅನಾವರಣಗೊಳಿಸುವ ಕೃತಿ “ಬಾಡಿಗೆ ಮನೆಗಳ ರಾಜ ಚರಿತ್ರೆ"
ಲೇಖಕರು ತಮ್ಮ ಬಾಲ್ಯದಿಂದ ಹಿಡಿದು ಈ ತನಕ ವಾಸಿಸಿದ ಎಲ್ಲಾ ಮನೆಗಳ 'ಆತ್ಮ'ಚರಿತ್ರೆಯಿದು. (ಮನೆಗಳಿಗೂ ಕೂಡ ಆತ್ಮ ಇದೆ!) ಈ ಮನೆಗಳ ಗೋಡೆಗಳಿಗೆ ಕಿವಿಯಿಟ್ಟು ಕೇಳಿಸಿಕೊಂಡರೆ ಅವು ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಂಡಾವು. ಲೇಖಕರು ಹೀಗೆ ಕಿವಿಯಿಟ್ಟು ಕೇಳಿಸಿಕೊಂಡ ಕಥಾನಕವೇ "ಬಾಡಿಗೆ ಮನೆಗಳ ರಾಜ ಚರಿತ್ರೆ" ಹಾಗೆ ಮನೆಯ 'ಅಡುಗೆ ಕೋಣೆ ಹಿತ್ತಿಲು ಜಗಲಿಗಳ' ಆತ್ಮದ ಮೊರೆಯನ್ನು ಕೇಳಿಸಿಕೊಂಡ ಕಾರಣದಿಂದಲೇ ಕೆ. ಸತ್ಯನಾರಾಯಣ ಇಂದು ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ.
ಲೇಖಕರ ನೆನಪಿನಗುಂಟ ಅವರು ಹೋದಲ್ಲೆಲ್ಲಾ ಈ ಮನೆಗಳೂ ಕೂಡ ಪ್ರವಾಸ ಹೊರಡುತ್ತವೆ. ಯಾವುದೋ ಊರಿನ ಯಾವುದೋ ಮನೆ ಇನ್ನಾವುದೋ ಊರಿನ ಮನೆಯ ಜೊತೆಗೆ ತಳುಕು ಹಾಕಿಕೊಂಡುಬಿಡುತ್ತದೆ.
ಆದುದರಿಂದಲೇ ಈ ಮನೆಗಳ ಚರಿತ್ರೆಯನ್ನು ಕಾಲಾನುಕ್ರಮದಲ್ಲಿ ಜೋಡಿಸಲಾಗಿಲ್ಲವೆನಿಸುತ್ತದೆ.
ಈ ಪ್ರಜ್ಞಾಪ್ರವಾಹವೇ ಅವರು ಮನೆಯಿಂದ ಮನೆಗೆ ಪ್ರಯಾಣ ಮಾಡಿದ ಸ್ವರೂಪವನ್ನು ಬಹಳ ಅನನ್ಯವಾಗಿಕಟ್ಟಿಕೊಡುತ್ತದೆ.
ಭಾರತದಲ್ಲಿರುವ ಲೇಖಕರ ಯಾವುದೋ ಬಾಡಿಗೆ ಮನೆ ಅಮೇರಿಕಾದ ವರ್ಜೀನಿಯಾ ದಲ್ಲಿರುವ ತಮ್ಮ ಮಗನ ಮನೆಗೆ ತಳಕು ಹಾಕಿಕೊಂಡು ಬಿಡುತ್ತದೆ.
ಯಾವುದೋ ಓಣಿಯಲ್ಲಿ ಕಿಷ್ಕಿಂಧದ ಒಂದು ರೂಮು ಲೋಕವಿಖ್ಯಾತ ಸಾಹಿತಿಗಳನ್ನೂ, ಸಂಗೀತಗಾರರು, ಸಿನಿಮಾ ನಟರು, ಲೋಕನಾಯಕರುಗಳನ್ನೂ ಬೆಸೆಯುವ ಸಾಧನವಾಗಿ ಬಿಡುತ್ತದೆ. (ಅಡಿಗ, ಮಾಸ್ತಿ , ದಿವಂಗತ ಜೆಪಿ ಮುಂತಾದವರು ಸಂಪರ್ಕಿಸುವ ಭಾಗ) ಕೆಲವರಂತೂ ಇಸ್ಪೀಟು ಆಟದ ಭಾಗವಾಗಿ ಬಿಡುತ್ತಾರೆ. ಸಾಹಿತ್ಯ, ರಾಜಕೀಯ ಚರ್ಚೆಗಳಿಗೆ ಕಾರಣವಾಗಿ ಬಿಡುತ್ತಾರೆ.
ಮನೆಯೆಂದರೆ ಸಾಹಿತ್ಯ, ಸಂಗೀತ, ರಾಜಕೀಯ, ಮನರಂಜನೆ, ಹೊಡೆದಾಟ, ಜಗಳ ಮನಸ್ತಾಪ ಎಲ್ಲವೂ.
ಲೇಖಕರ ಹಾಸ್ಯ ಪ್ರಜ್ಞೆ ಬಹಳ ಅದ್ಭುತವಾದುದು. ತನ್ನನ್ನೇ, ತನ್ನ ಕೀಳರಿಮೆ, ಬಡತನಗಳನ್ನೇ ಪರಿಹಾಸ್ಯ ಮಾಡಿಕೊಳ್ಳುವ ಪರಿ ಆಧ್ಯಾತ್ಮಿಕವಾದುದು.
ಮನೆಯಿಂದ ಮನೆಗೆ "ತಿರುಪಿರದ ಲಾಂಧ್ರಗಳನ್ನು ತಳವಿರದ ಗೂಡೆಗಳನ್ನು " ಹೊತ್ತೊಯ್ಯುವ ಈ ಕಥಾನಕ ಕೆಳಮಧ್ಯಮ ವರ್ಗದ ಬವಣೆಗಳನ್ನು ಅನನ್ಯ ವಾಗಿ ದಾಖಲಾಗಿಸಿದ್ದರೂ ಅವು ಬವಣೆಗಳಾಗಿ ಕಾಣದೇ, ಬದಲಾಗಿ ಅವುಗಳ ಧಾರಣ ಶಕ್ತಿಯಾಗಿ ಕಾಣುವುದಕ್ಕೆ ಕಾರಣ ಅವರ ಹಾಸ್ಯ ಪ್ರಜ್ಞೆ. ಈ ಧಾರಣ ಶಕ್ತಿಯ ಪ್ರತೀಕವಾದ ಅವರ ತಂದೆ ತಾಯಿಯ ಕಥಾನಕವಂತೂ ಅನನ್ಯವಾಗಿ ಮೂಡಿ ಬಂದಿದೆ. ಅವರ 'ಗೆದ್ದ ದೊಡ್ಡಸ್ತಿಕೆ' ಗಿಂತ ಸೋಲುಂಡ ಪೂರ್ವಾಶ್ರಮದ 'ಭೂತ'ಗಳೇ ಬಹಳ ಪರಿಣಾಮಕಾರಿಯಾಗಿ ವ್ಯಕ್ತವಾಗಿವೆ.
ಮನೆಯೆಂದರೆ ನಿರಂತರವಾಗಿ ಕಂಪಿಸುತ್ತಿರುವ, ಸ್ಮೃತಿ ಸಂಚಯ! ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿರುವ ಭಾವ ಪ್ರಕಾಶ, ಎನ್ನುವುದನ್ನು ಕೆ. ಸತ್ಯನಾರಾಯಣ ಬಹಳ ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಮತ್ತು ಈ ಕೃತಿಯನ್ನು ಪ್ರಕಟಿಸಿರುವ ಅಭಿನವ ರವಿಕುಮಾರ್ ಅವರಿಗೂ ಅಭಿನಂದನೆಗಳು.Ahalya Ballal, Sumithra Lc and 35 others

40 Comments

6 Shares


Like

Comment
Share

No comments:

Post a Comment