stat Counter



Showing posts with label ಎಮ್. ಆರ್. ಕಮಲ. Show all posts
Showing posts with label ಎಮ್. ಆರ್. ಕಮಲ. Show all posts

Saturday, April 13, 2019

ರಾಜೇಂದ್ರ ಪ್ರಸಾದ್ - ನೆತ್ತರಲಿ ನೆಂದ ಚಂದ್ರ {ಎಮ್. ಆರ್. ಕಮಲ ಅವರ ಕವನ ಸಂಕಲನ }

ನೆತ್ತರಲಿ ನೆಂದ ಚಂದಿರನಿಂದ ತೊಟ್ಟಿಕ್ಕುವ ಕವಿತೆಗಳು
- - - - - - - - - - - - - - - - - - - - - -
ಕವಿತೆ ಮತ್ತು ಅನುವಾದಗಳ ಮೂಲಕ ನಮಗೆ ಚಿರಪರಿಚತರಾಗಿರುವ ಹಿರಿಯ ಕವಯತ್ರಿ ಎಂ.ಆರ್. ಕಮಲ ಅವರ ಹೊಸ ಪುಸ್ತಕ. ಈ ಹಿಂದೆ ಮಾಯಾ ಎಂಜಲೋ ಅವರ ಆತ್ಮ ಚರಿತ್ರೆ 'ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ' ಹಾಗೂ ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ ಇತ್ಯಾದಿಗಳನ್ನೂ ಆಫ್ರಿಕನ್ - ಅಮೆರಿಕನ್, ಆಫ್ರಿಕನ್ ಕವಯತ್ರಿಯರ ಕಾವ್ಯವನ್ನು ಸರಣಿಯಲ್ಲಿ ಕನ್ನಡಕ್ಕೆ ತಂದಿದ್ದರು. ಅದೇ ಸರಣಿಯ ಅರಬ್ ಕಾವ್ಯದ ಪುಸ್ತಕ ಇದಾದರೂ ವರ್ತಮಾನದ ಮಹಿಳಾ ಲೋಕದ ತಲ್ಲಣಗಳ ನಡುವೆ ಈ ಕವನ ಸಂಗ್ರಹದ ಒಳದನಿ ಸ್ವಲ್ಪ ತೀವ್ರ ಸ್ವರೂಪದ್ದಾಗಿದೆ. ಮತ್ತು ಈ ಕಾಲಕ್ಕೆ ಕನ್ನಡ ಓದುಗರಿಗೆ ಇದು ಲಭ್ಯವಾಗಿದ್ದು ಒಳ್ಳೆಯದೇ ಆಗಿದೆ.
ಅರಬ್ ಕಾವ್ಯದ ಭೂತ ಮತ್ತು ವರ್ತಮಾನ
ಅರಬ್ ಕಾವ್ಯಕ್ಕೆ ಅರಬ್ ದೇಶದ ಇವತ್ತಿನ ರಾಜಕೀಯವಾದ ಭೌಗೋಲಿಕ ಪ್ರದೇಶದ ಸರಹದ್ದು ಅಲ್ಲವೇ ಅಲ್ಲ. ದುಬೈ , ಓಮನ್ , ಕುವೈತ್ , ಯುಎಇ ಕೊಲ್ಲಿ ರಾಷ್ಟ್ರಗಳಿಗೆ ಅರಬ್ ಸೀಮಿತವಾಗಿಲ್ಲ. ಈಜಿಪ್ಟ್ , ಲೆಬೆನಾನ್ , ಪ್ಯಾಲೆಸ್ಟೈನ್ , ಸಿರಿಯಾ, ಇರಾಕ್, ಉತ್ತರ ಆಫ್ರಿಕಾ , ಜೋರ್ಡನ್, ಆಲ್ಜಿರೀಯ , ಟ್ಯುನೇಷಿಯಾ , ಲಿಬಿಯಾ, ಮೊರೊಕ್ಕೊ ಸೇರಿದಂತೆ ಸಮಸ್ತ ಮಧ್ಯಪ್ರಾಚ್ಯವೇ ಅರಬ್ ಸಂಸ್ಕೃತಿಯನ್ನು ಒಳಗೊಂಡಿದೆ. ಅಲ್ಲಿ ಯಹೂದಿ, ಕ್ರೈಸ್ತ, ಪಾರಸಿಕ, ಇಸ್ಲಾಂ ಮತಗಳು ಹುಟ್ಟಿ ಹರಡಿ ಆಳಿವೆ. ಯಾವೊಂದೂ ನಶಿಸಿಲ್ಲ! ಆದರೆ ಅಲ್ಲಿ ಹುಟ್ಟಿದ ಸಾಮ್ರಾಜ್ಯಗಳು, ಶಾಂತಿದೂತರನ್ನು ಅಲ್ಲಿನ ರಾಜಕೀಯ ಅನೈತಿಕವಾಗಿ ಹತ್ಯೆ ಮಾಡಿದೆ. ಜೆರುಸೆಲಂ ನಂಥ ನಗರಿ ಸಾವಿರಾರು ವರ್ಷಗಳಿಂದ ರಕ್ತಪಾತಗಳಲ್ಲಿ ಮುಳುಗೆದ್ದಿದೆ. ಆದರೂ 'ಪವಿತ್ರ ನಗರ' ಎಂಬ ತಲೆಪಟ್ಟಿಯನ್ನು ಹೊತ್ತುಕೊಂಡೇ ಇದೆ. ಹೀಗಿರುವಾಗ ಅಲ್ಲಿನ ಹೆಣ್ಣು ಮಕ್ಕಳ ಕಾವ್ಯ ಬಹಳ ಆಸಕ್ತಿಯನ್ನು ಹುಟ್ಟಿಸದೇ ಇರದು. ಮಧ್ಯಪ್ರಾಚ್ಯ ಕೂಡ ನಮ್ಮ ದೇಶದ ಹಾಗೆ ಪುರಾತನ ಮತ್ತು ವೈವಿಧ್ಯ ಪೂರ್ಣ.
ಅರಬ್ ಮಹಿಳೆಯರ ಕಾವ್ಯ ಎಂದಾಕ್ಷಣ 'ಅರಬ್ ಮಹಿಳೆಯರು ಕಾವ್ಯ ಬರೆಯುವುದು ಉಂಟೇ (ಸಾಧ್ಯವಿದೆಯೇ) ?' ಎಂದು ಪ್ರಶ್ನಿಸಬಹುದಾದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಅರಬ್ ರಾಷ್ಟ್ರಗಳ ಸಾಮಾಜಿಕ ಕಾನೂನುಗಳು, ಹೆಣ್ಣು ಮಕ್ಕಳ ಸಿಗಬೇಕಾದ ಮಾನವ ಹಕ್ಕುಗಳ ನಿರಾಕರಣೆ, ಹೇಳಲಾಗದಷ್ಟು ದೌರ್ಜನ್ಯಗಳು ಇದೆಲ್ಲವೂ ನಮ್ಮನ್ನು ನಂಬದಿರುವಂತೆ ಮಾಡುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದರೂ ಕಾಲಕಾಲದಲ್ಲಿ ಅರಬ್ ಕಾವ್ಯದಲ್ಲಿ ಮಹಿಳೆಯರ ಪ್ರಮುಖ ಉಪಸ್ಥಿತಿಯನ್ನು ಈ ಇಡೀ ಕಾವ್ಯ ಸಂಪುಟ ನಮ್ಮ ಮುಂದೆ ಎತ್ತಿ ತೋರಿಸುತ್ತಿದೆ. ಹಾಗಿದ್ದರೆ ಅರಬ್ ಮಹಿಳಾ ಕಾವ್ಯ ಯಾವಾಗ? ಎಲ್ಲಿ? ಹೇಗೆ? ಯಾರಿಂದ? ಹುಟ್ಟಿಕೊಂಡಿತು ಎನ್ನುವ ಕುತೂಹಲವಿದ್ದರೆ ಈ ಕಾವ್ಯ ಸಂಪುಟದ ತುಸು ದೀರ್ಘಪ್ರಸ್ತಾವನೆಯನ್ನು ಓದಬೇಕು. ಕವಿತೆಗಳ ಅನುವಾದದ ಜೊತೆಗೆ ಕಮಲಾ ಅವರು ಅಲ್ಲಿನ ಕಾವ್ಯ -ಕಾಲವನ್ನು ಅಭ್ಯಾಸ ಮಾಡಿ ಕಾಲಾನುಕ್ರಮದಲ್ಲಿ ಅಲ್ಲಿನ ಪ್ರಮುಖ ಅರಬ್ ಕವಯತ್ರಿಯರ ವಿವರಗಳನ್ನು ಅಂದಿನ ರಾಜಕೀಯ -ಸಾಮಾಜಿಕ ಪರಿಸ್ಥಿತಿಗಳ ಜೊತೆಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ . ಇಂತಹವೊಂದು ಪ್ರಯತ್ನಕ್ಕಾಗಿ ಅವರು ಆರೇಳು ವರ್ಷ ಫ್ರೆಂಚ್ ಭಾಷೆಯನ್ನು ಕಲಿತು ಅಭ್ಯಾಸವನ್ನು ಮಾಡಿ ಉತ್ತಮ ಕವಿತೆಗಳನ್ನು ಬಹಳಷ್ಟು ಕಡೆ ಅರಸಿ ಆಯ್ಕೆ ಮಾಡಿದ್ದಾರೆ. ಅವರೇ ಹೇಳುವಂತೆ ನಥಾಲಿ ಹಂದರ್ ರ 'ದಿ ಪೊಯೆಟ್ರಿ ಆಫ್ ಅರಬ್ ವಿಮೆನ್' ಅವುಗಳಲ್ಲಿ ಮುಖ್ಯವಾದ ಮೂಲಕೃತಿ. ನಥಾಲಿ ಫ್ರೆಂಚ್ ಅಮೇರಿಕನ್ ಆದರೂ ಅವರು ಮೂಲ ಪ್ಯಾಲೆಸ್ಟೈನೀ ವಲಸಿಗರು. ಹಾಗಾಗಿ ನಥಾಲಿ ಅವರ ಕಾವ್ಯ ಸಂಗ್ರಹ ಪ್ರಮಾಣೀಕೃತವಾದುದು. ಅವರಿಗೆ ಮಧ್ಯಪ್ರಾಚ್ಯದ ಒಳಉಸಿರಿನ ಸದ್ದು ಉಳಿದವರಿಗಿಂತ ಚೆನ್ನಾಗಿಯೇ ಕೇಳುತ್ತದೆ.
ಕವಯತ್ರಿಯವರೇ ಹೇಳುವಂತೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧವನ್ನು ಅರಬ್ ಮಹಿಳಾ ಸಾಹಿತ್ಯದ ಮುಂಬೆಳಗಿನ ಕಾಲವೆಂದೇ ಗುರುತಿಸಲಾಗಿದೆ. ಈ ಕಾಲದಲ್ಲಿ ಬಂದ ಸಾಹಿತ್ಯವು ಅರಬ್ ಲೋಕದ ರಾಜಕೀಯ -ಸಾಮಾಜಿಕ -ಸಾಂಸ್ಕೃತಿಕ ಸ್ಥಾನ ಪಲ್ಲಟಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವುದರಲ್ಲಿ ಎಷ್ಟು ಸಫಲವಾಗಿಯೆನ್ನುವುದು ಪ್ರಸ್ತುತ ಕಾವ್ಯ ಸಂಪುಟದ ನೂರಾರು ಕವಿತೆಗಳ ಓದಿನಲ್ಲಿ ನಮ್ಮ ಗಮನ ಬರುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಪ್ರಸ್ತಾವನೆಯಲ್ಲಿ ಇಸ್ಲಾಂ ಪೂರ್ವಕಾಲದಿಂದ ಇವತ್ತಿನ ಆಧುನಿಕ ಕಾಲದವರೆಗೆ ಅರಬ್ ಲೇಖಕಿಯರು. ಸಮಾಜ, ಸಾಹಿತ್ಯ ಮತ್ತು ಸನ್ನಿವೇಶಗಳ ವಿವರಣೆ ಉಪಕಾರಿಯಾಗಿದೆ. ಉದಾರವಾದಿಗಳಿಂದ ವರ್ತಮಾನದಲ್ಲಿ ತೀವ್ರ ಟೀಕೆಗೆ ಒಳಗಾಗುತ್ತಿರುವ ಹಿಜಾಬ್ (ಮುಖಗವಸು) ಇಸ್ಲಾಂ ಷರಿಯಾದ ಭಾಗವಲ್ಲವೆಂದು ೧೯ನೇ ಶತಮಾನದ ಮೊದಲಲ್ಲೇ ಅಂದರೆ ನೂರು ವರ್ಷಗಳ ಹಿಂದೆಯೇ ಅರಬ್ ಲೇಖಕಿಯರು ವಿರೋಧಿಸಿದ್ದಾರೆ. ಸಂತಸದ ಸಂಗತಿಯೆಂದರೆ ಇದನ್ನು ಅಂದಿನ ಕೆಲವು ಲೇಖಕರು ಕೂಡ ಬೆಂಬಲಿಸಿದ್ದು. ಇಂತಹ ಹಲವು ರೋಚಕ ಸಂಗತಿಗಳೂ ಕೂಡ ಪುಸ್ತಕದಲ್ಲಿವೆ.
ಅನುವಾದ ಮತ್ತು ಕಾವ್ಯದ ಸ್ವರೂಪ :
ಭಾಷೆಯಿಂದ ಭಾಷೆಗೆ ತರ್ಜುಮೆಗೊಳ್ಳುವಾಗ ಕಾವ್ಯ 'ಪರಕಾಯ ಪ್ರವೇಶ' ವನ್ನು ಮಾಡಲೇಬೇಕು. ಯಥಾಸ್ಥಿತಿಯಲ್ಲಿ ಬಂದರೆ ಎರಡು ದೇಶ-ಭಾಷೆಯ ಪರಿಸರ ವಿಭಿನ್ನವಾಗಿದ್ದಾಗ ಕಾವ್ಯದ ಉದ್ದೇಶವಾಗಲಿ ಅರ್ಥವಾಗಲಿ ನಮಗೆ ಮುಟ್ಟುವುದು ಸಾಧ್ಯವಾಗದೆ ವಿಫಲ ಪ್ರಯತ್ನವಾಗಿಬಿಡುತ್ತದೆ. ಅನುವಾದದಲ್ಲಿ 'ಕಾವ್ಯ ಸವಕಳಿ' ಹೆಚ್ಚಾಗಿ ಸಂಭವಿಸುವ ಅಪಾಯವೂ ಇದೆ. ಆ ದೃಷ್ಟಿಯಿಂದ ಅನುವಾದ ಅನ್ನುವುದು ಭಾಷಿಕ ಭಟ್ಟಿ ಇಳಿಸುವ ಕಾಯಕವಲ್ಲ. ಅದೊಂದು ಸ್ವತಂತ್ರ ಸೃಜನಶೀಲ ಕೃತಿ.
ಈ ಕವಿತೆಗಳ ಅನುವಾದದ ಆರಂಭದ ನಂತರದ ನಡುವಿನ ಆರೇಳು ವರ್ಷಗಳಲ್ಲಿ ಕಮಲಾ ಅವರು ಫ್ರೆಂಚ್ ಭಾಷೆಯನ್ನೂ ಕಲಿತಿದ್ದಾರೆ. ಇದರಿಂದ ಓದಿಗೆ ಮತ್ತೊಂದು ಮಧ್ಯವರ್ತಿ ಭಾಷೆಯನ್ನು ಅವಲಂಬನೆ ತಪ್ಪಿದೆ ಮತ್ತು ಕಾವ್ಯದ ಮೂಲ ದ್ರವ್ಯವನ್ನು ನೇರವಾಗಿ ಫ್ರೆಂಚ್ ನಿಂದ್ ಕನ್ನಡಕ್ಕೆ ತಂದು ನಮಗೆ ಉಣಬಡಿಸಲು ಸಾಧ್ಯವಾಗಿದೆ. ಹಾಗಾಗಿಯೇ ಇಲ್ಲಿನ ಕವಿತೆಗಳ ಯಾವ ತುದಿಯಲ್ಲಿಯೂ ಒಗ್ಗದ ಪದವಿಲ್ಲ, ಒಲಿಯದ ನುಡಿಯಿಲ್ಲ, ಅಗ್ಗದ ಸಾಲುಗಳು ಖಂಡಿತ ಲಭ್ಯವಿಲ್ಲ. ಕಾವ್ಯದ ಹರಿತ, ಮೊನಚು ಮತ್ತು ಲೋಕದೃಷ್ಟಿ ಭಾಷೆಯಿಂದ ಭಾಷೆಗೆ, ದೇಶದಿಂದ ದೇಶಕ್ಕೆ ಹೋದಂತೆಲ್ಲಾ ಸೂಕ್ಷ್ಮವಾಗಬೇಕು. ಅಂತಹ ಸೂಕ್ಷ್ಮತೆಯನ್ನು ಕಮಲಾ ಅವರ ಅನುವಾದದಲ್ಲಿ ಕಾಣಬಹುದಾಗಿದೆ.
ಈ ಕವಿತೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ,
''ಅವಳ ಕೂದಲು ಅದೆಷ್ಟು ನೀಳ, ನೀಳವೆಂದರೆ
ನಿಂತಾಗ ಕಾಲಿಗೆ ಸುತ್ತಿಕೊಳ್ಳುತ್ತಾಳೆ
ಅವಳ ಬೆರಳುಗಳು ಅದೆಷ್ಟು ನೀಳ, ನೀಳವೆಂದರೆ
ತಾವರೆಯ ಗಿಡದ ಹಣ್ಣ ಕೋಣೆಯಿಂದಲೇ ಕೀಳುತ್ತಾಳೆ
ತೊಡೆಯಿಂದ ಉಕ್ಕಿ ಹರಿವ ಮಳೆಯಲ್ಲಿ ಮಡಿಯುಟ್ಟು
ಕನಸು ಕಾಣುತ್ತಾಳೆ ''
ಒಂದು ದೇಶ - ಪುಟ ೧೮೧, ಫೋಜಿಯಾ ಅನು-ಖಾಲಿದ್
ಇದೊಂದು ಪುಟ್ಟ ಕವಿತೆ ಒಂದು ದೇಶವನ್ನು ಒಂದು ಹೆಣ್ಣನ್ನು ಅದೆಷ್ಟು ವಿಸ್ತಾರವಾದ ನೆಲೆಯಲ್ಲಿ ಕಟ್ಟಿಕೊಡುತ್ತದೆ ಎಂಬುದನ್ನು ಹೇಳಲಾಗದು ಬದಲಿಗೆ ಮತ್ತಷ್ಟು ಬಾರಿ ಓದಿ ಓದಿ ಕಣ್ಣಿನಲ್ಲಿ ಕಟ್ಟಿಕೊಳ್ಳಬೇಕು. ಈ ಕಟ್ಟಿಕೊಳ್ಳುವಿಕೆ ಹೆಣ್ತನವನ್ನು ಉಳ್ಳ ಓದುಗನಿಗೆ ಕಷ್ಟವಾಗದು. ಅವನ ತುಟಿಯ ತುದಿಯಿಂದಲೇ ಕವಿತೆ ಸಾಕ್ಷಾತ್ಕಾರವಾಗುತ್ತಾ ಸಾಗುತ್ತದೆ.
ಈ ಸಂಪುಟದಲ್ಲಿ ಕವಿತೆಗಳು ಗಾತ್ರದಲ್ಲಿ ಐದಾರು ಸಾಲಿನ ಪುಟ್ಟ ಕವಿತೆಯಿಂದ ಹಿಡಿದು ಗದ್ಯಕವನಗಳಂತಹ ಪ್ರಯೋಗಗಳ ವರೆಗೆ ಹರಡಿಕೊಂಡಿವೆ. ಅವುಗಳ ಅಭಿವ್ಯಕ್ತಿಯ ಪ್ರಮಾಣ ಮತ್ತು ಪರಿಣಾಮಗಳಲ್ಲಿ ಮಾತ್ರ ಅಂತಹ ಗುರುತರ ವ್ಯತ್ಯಾಸವೇನೂ ನನ್ನ ಓದಿನಲ್ಲಿ ಕಂಡು ಬರಲಿಲ್ಲ. ಸಾಲುಸಾಲುಗಳು ಕೂಡ ಪ್ರಭಾವಶಾಲಿಯಾಗಿವೆ.
''ಆತ್ಮಕ್ಕೇ ಹೊಲಿದ
ಅರೇಬಿಯಾದ ಕಸೂತಿ ವಸ್ತ್ರ
ನನನ್ ಮನೆಯ ನೆನಪು''
ಪುಟ - ೨೨೪ , ಲೊರೆನ್ ಜರೋ -ಜೊಜೊನಿಸ್
''ಇರುಳಿಗೆ ನೋವು , ವ್ಯಥೆ ತುಂಬಿ
ಕಣ್ಣೊಳಗಿನ ನಿದಿರೆಯ ಕಸಿಯುತ್ತದೆ''
ಪುಟ ೧೩೨ , ನಜಿಕ್ ಅಲ್ -ಮಲೈಕಾ
''ಸೂರ್ಯ ಮೈಮೇಲೆ ಸುರಿಯುತ್ತಾನೆ
ಒಳಗೆ, ಭಾವನೆಗಳ ಕಸೂತಿ ಮಾಡಿದ ಬೆಳ್ಳಿಕೊಳ''
ಪುಟ ೧೨೯, ಧಾಬ್ಯಾ ಖಮೀಸ್
''ಇವುಗಳಲ್ಲದೇ
ಬೈರುಟ್ , ಕ್ಲೇರ್ ಗೆಬೀಲಿ
ಹಳದಿ ಕೈಗವಸು , ನಯೋಮಿ ಶಿಹಾದ್ ನೈ
ಬಾಗಿದ ಮನೆಯಿಂದ, ಸಬಾಹ್ ಅಲ್ ಖರ್ರತ್ ಜ್ವೆನ್''
ಋತುಮಾನಗಳು , ಸಫಾ ಪಾತಿ
ಈ ಎಲ್ಲ ಗಪದ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.
ಮೂರೂ ನೂರು ಪುಟ ಈ ಸಂಪುಟದಲ್ಲಿ ಎಪ್ಪತ್ತಾರು ಜನ ಅರಬ್ ಕವಯತ್ರಿಯರ ಕವಿತೆಗಳಿವೆ. ಈ ಎಲ್ಲರೂ ೧೯೪೦ ನಂತರದ ಎರಡು ದಶಕಗಳಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ಜನಿಸಿದವರು. ಅವರಲ್ಲಿ ಕೆಲವರು ತವರಿನಲ್ಲೇ ನೆಲೆಸಿದ್ದರೆ ಮತ್ತು ಕೆಲವರು ಪಶ್ಚಿಮ ದೇಶಗಳಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಅವಧಿಯಲ್ಲಿ ಮಧ್ಯ ಪ್ರಾಚ್ಯ ಕೂಡ ಸಾಕಷ್ಟು ರಾಜಕಾರಣದ ಏಳುಬೀಳುಗಳನ್ನ, ಸಾಮಾಜಿಕ ಬದುಕಿನಲ್ಲಿ ಬರ್ಬರತೆಯನ್ನು ಕಂಡಿದೆ. ಹಾಗಾಗಿ ಈ ಕಾವ್ಯಗಳು ಆ ಕಾಲದ ದಿನಚರಿಯನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡಿವೆ.
ಗಾಜಾ ತೆವಳುತ್ತಿದೆ
ತನ್ನ ತಣ್ಣನೆಯ ಕೈಕಾಲುಗಳೊಂದಿಗೆ
ಪಾಪದ ಕೊಡ ತುಂಬಿ ತುಳುಕಿರುವ
ಈ 'ಉರಿನಗರ'ದ ನನ್ನ ಜೀವನದಂತೆ
ಪುಟ - ೧೨೬ , ದೋನಿಯ ಎಲ್ - ಅಮಲ್ ಇಸ್ಮಾಯಿಲ್
ನೆನಪಿಸಿಕೋ - ಪುಟ್ಟಕಂದನ ಗುಟ್ಟು ಸಾಮ್ರಾಜ್ಯವನ್ನು ,
ಲೆಬನಾನ್ ಬೆಟ್ಟದ ಪಂಜರದ ತಳದಲ್ಲಿ
ಸತ್ತ ಹಕ್ಕಿಗಳ ಬಗೆಗಿನ ಶಕುನ ..
ಹೇಗೆ ಓಡುವುದೆಂದು ಮಾತ್ರ ನಮಗೆ ತಿಳಿಯಲಿಲ್ಲ.
ಪುಟ ೧೪೬ - ನದಿಯಾ ತುಯೇನಿ
ನಗರಗಳನ್ನು ಕಟ್ಟಿ
ಕಾಲಕ್ಕೆ , ಕಾಲದ ಬೀಜಗಳಿಗೆ,
ಹೃದಯಕ್ಕೆ , ಕಣ್ಣಿಗೆ ,
ಯುಗಕ್ಕೆ ಮತ್ತು ಮಕ್ಕಳಿಗೆ
ಸಿಪ್ಪೆಯನ್ನು ಕಿತ್ತೆಸೆಯಿರಿ -ನಂತರ!
ಗಡಿಯಿರದ ಗಾಳಿಗೆ
ನಿಮ್ಮನು ತೂಗು ಹಾಕಿಕೊಳ್ಳಿ
ಪುಟ - ೬೪ ಆಂದ್ರೆ ಶೆದಿ
ಬಿಟ್ಟುಬಿಡು ನನ್ನ ;
ಇರುಳಿಗೆ,
'ಸುನ್ನಿಗಳ ಕಿಟಕಿಯಿಂದ
ಹೊಮ್ಮಿಬರುವ ಕತ್ತಲಿಗೆ,
ನೋವಿನಿಂದ ಚರಗುಟ್ಟುವ ಒಣಗಿದೆಲೆಗಳಿಗೆ
ಪುಟ - ೨೧೬ , ಲೀನಾ ಟಿಬಿ
ಈ ಕವಿತೆಗಳ ಆಯ್ದ ಸಾಲುಗಳು ಅಲ್ಲಿನ ಸ್ಥಿತ್ಯಂತರಗಳ ಅನಧಿಕೃತ ದಾಖಲೆಗಳೇ ಆಗಿವೆ. ದೇಶ - ಗಡಿ -ಧರ್ಮ - ಜಾತಿ ಕಡೆಗೆ ಹೆಣ್ಣು ಎನ್ನುವ ತಾರತಮ್ಯಗಳು ಹೇಗೆಲ್ಲಾ ನಮ್ಮನು ನಮ್ಮ ಬದುಕನ್ನು ಶೋಷಿಸಿಕೊಂಡು, ದೌರ್ಜನ್ಯಗಳನ್ನು ಪೋಷಿಸಿಕೊಂಡು ಬಂದಿವೆ ಎನ್ನುವುದರ ಇತಿಹಾಸವೂ ಈ ಕವಿತೆಗಳಲ್ಲಿ ಅಡಗಿಕೊಂಡಿದೆ. ಆದರೆ ಅದನ್ನು ಹುಡುಕಿ ಓದುವ ಮತ್ತು ಗಂಭೀರವಾಗಿ ಪರಿಗಣಿಸುವ ಮನಸುಗಳು ಈ ಕಾಲಕ್ಕೆ ತುರ್ತಾಗಿ ಬೇಕಾಗಿವೆ.
***
'' ಬೆಟ್ಟದಡಿಯ
ಕಲ್ಲುಬಂಡೆಗಳ ನಡುವೆ
ಸಾಯಲೆಂದು ಚಿಟ್ಟೆಯೊಂದು ಬಂತು!
ಬೆಟ್ಟ ತನ್ನ ನೆರಳನ್ನು ಚೆಲ್ಲಿ
ಸಾವಿನ ಗುಟ್ಟನ್ನು ಮುಚ್ಚಿಟ್ಟುಬಿಟ್ಟಿತು! ''
ಪುಟ - ೭೬ , ಎಟೆಲ್ ಅದ್ನಾನ್
ಝೆನ್ ಕಾವ್ಯದಂತಿರುವ ಈ ರೂಪಕಕಾವ್ಯ ದೊಡ್ಡ ದೊಡ್ಡ ಕವಿತೆಗಳ ಅಕ್ಷರ ರಾಶಿಯನ್ನೇ ನಾಚಿಸಿ ಅರ್ಥಸಂಪತ್ತಿನ ಅಧಿಪತಿಯಾಗಿಬಿಡುತ್ತದೆ. ಅರಬ್ಬಿನ ಬಿಸಿಲ ಬೇಗೆಯ ನಡುವೆ ಬೆಟ್ಟದಡಿ ಸಿಕ್ಕು ಸಾಯಲು ಬಂದ ಚಿಟ್ಟೆ ಅದರ ನೆರಳಲ್ಲೇ ಸಾವ ಮರೆತು ಬದುಕು ಕಟ್ಟಿಕೊಳ್ಳುವುದು ಎಷ್ಟು ಚೆಂದ. ಚೂರಾದರೂ ಭಾಷೆ ಮತ್ತು ಭಾವ ಇದು ಅನುವಾದ ಎನಿಸದೆ ನಮ್ಮದೇ ಜೀವ ಮಿಡಿದುದೊಂದು ಸಾಲಿನಂತೆ ಮಿಂಚಿದೆ ಕವಿತೆ.
‘’ಸಾವು,
ಎತ್ತರೆತ್ತರದ ಮರಗಳು ರಾತ್ರಿ ಬೇರಿನೊಂದಿಗೆ
ಚೆಲ್ಲಾಟವಾಡಿ ಎಲೆಗಳ ಮಬ್ಬುಗೊಳಿಸುತ್ತವೆ
ಸಾವು,
ಆಕಾರವಿಲ್ಲದ ದೇಹ
ಅಲೌಕಿಕ ಅಳಿವಿಗೆ ಹೊಗೆಯಂತೆ ಹಂಬಲಿಸುತ್ತದೆ
ನೀನದರ ನೆರಳಿನಲ್ಲಿ ಹೆಜ್ಜೆಗುರುತು ಬರೆಯುತ್ತೀಯ
ನಜ್ಜುಗುಜ್ಜಾದ ಎದೆಯಲ್ಲಿ ಮಳೆಯ ಮುಚ್ಚಿಡುತ್ತೀಯ
ನಿನ್ನ ಹೆಜ್ಜೆಗೆ ದಾರಿಹೋಕರ ದಾರಿಯೇ ಮರೆಯಾಗುತ್ತದೆ ‘’
ಪುಟ - ೬೨ , ಅಲ್ - ಜಹ್ರಾ ಅಲ್ - ಮನ್ಸೂರಿ
ಎಷ್ಟೋ ದಿನಗಳ ನಂತರ
ನಿನ್ನ 'ನಿಲುವುಗನ್ನಡಿ'ಯೆದುರು ನಿಂತರೆ
ಧೂಳು ಹಿಡಿದ ಕಪ್ಪಿನಲಿ
ಹೇರ್ ಪಿನ್ನುಗಳು !
ಪುಟ -೫೪ ಡಿಯಾಸ್ಪೋರ
ನೋವೇ ಒಂದಷ್ಟು ಕಾಲ ದೂರವಿರು
ನನ್ನ ನೋಟ್ ಪುಸ್ತಕದಲ್ಲಿ
ಎದೆಯ ತೋಟಗಳ ಬರೆಯುತ್ತೇನೆ
ಪುಟ - ೨೭೩ , ಹಮ್ದ ಖಮೀಸ್
ಈ ಇಡೀ ಕಾವ್ಯಸಂಪುಟ ಹೆಣ್ಣಿನ ಕಣ್ಣಿನೊಳಗಿನ ಹಸಿಕೆಂಡದಂತೆ ಓದುತ್ತ ಸಾಗಿದಂತೆಲ್ಲಾ ಸುಡುತ್ತದೆ, ಬೆಚ್ಚಗಾಗಿಸುತ್ತದೆ, ಇನ್ನೊಂದಷ್ಟು ಹೆಜ್ಜೆ ಮುಂದಿಟ್ಟರೆ ಕಣ್ಣಾಲಿ ತುಂಬಿಸುತ್ತದೆ. ಸಾವು ಅದರ ಆಕಾರವಿಲ್ಲದ ದೇಹ ಮತ್ತು ಅದರ ಪ್ರಯಾಣ ನಮ್ಮ ನೆರಳಾಗೇ ಸಾಗುತ್ತಿರುವ ದೃಶ್ಯವನ್ನು ಕವಿತೆ ಎಷ್ಟು ಸರಳವಾಗಿ ಹೇಳುತ್ತದೆಯೆಂದರೆ ಒಮ್ಮೆ ಬಾಯಿ ಬಿಟ್ಟು ಓದಿದರೆ ಸಾಕು ಅನಿಸುತ್ತದೆ. ಉಳಿದ ಅರ್ಥವ್ಯಾಖ್ಯಾನ ವ್ಯರ್ಥ.
ಪೌರಸ್ತ್ಯ ಚಿಂತನೆ ಮತ್ತು ಕನ್ನಡ ಸಾಹಿತ್ಯ
ಮೂರೂ ನೂರು ಪುಟಗಳಷ್ಟು ದೊಡ್ಡದಿರುವ ಈ ಅನುವಾದ ಸಂಗ್ರಹ ಬಹುಶಃ ನನ್ನ ಓದಿನ ಮಿತಿಯಲ್ಲಿ ಕನ್ನಡದ ಮೊತ್ತ ಮೊದಲ ಅರಬ್ ಕಾವ್ಯದ ಸಂಪುಟ. ಅದರಲ್ಲುವು ಅಲ್ಲಿನ ಮಹಿಳಾಲೋಕದ ಒಳದನಿಯನ್ನು ತೆರೆದಿಟ್ಟ ಮಹತ್ವದ ಪುಸ್ತಕ ಇದಾಗಿದೆ. ವರ್ತಮಾನದ ಹಲವು ತಲ್ಲಣಗಳ ಹಿನ್ನೆಲೆಯಲ್ಲಿ ಅರಬ್ ಮಹಿಳಾ ಸಂವೇದನೆಯ ಕುರಿತ ಕುತೂಹಲ ಬಹಳ ದೊಡ್ಡದು. ಅದಕ್ಕೆ ಸಂಬಂಧಿಸಿದಂತೆ ಈ ಪುಸ್ತಕ ಪೂರ್ಣ ನಮ್ಮ ಕುತೂಹಲವನ್ನು ತಣಿಸದಿದ್ದರೂ ಕೆಲವು ದಶಕಗಳ ಹಿಂದಿನ ಮತ್ತು ಇವತ್ತಿನ ದಿನಗಳ ಕುರಿತ ಒಂದು ವಾರೆನೋಟ ನಮಗೆ ಖಂಡಿತ ಲಭ್ಯ.
ಆಧುನಿಕ ಕಾಲವನ್ನು ಮುಖ್ಯವಾಗಿಟ್ಟುಕೊಂಡು ಅರಬ್ಬಿನ ಸಾಹಿತ್ಯ ನಿರ್ಮಾಣದ ಹಿನ್ನೆಲೆ, ಆಧುನಿಕ ಕಾವ್ಯ ಮತ್ತು ಮಹಿಳೆಯರನ್ನು, ಅರಬ್ ದೇಶಕಾಲ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ತುಂಬಾ ಅಚ್ಚುಕಟ್ಟಾಗಿ ಈ ಪುಸ್ತಕವು ಪರಿಚಯಿಸಿದೆ. ಪ್ರಸ್ತಾವನೆಯನ್ನು ಓದದೇ ಬರಿಯ ಕಾವ್ಯಕ್ಕೆ ಪ್ರವೇಶಿಸಿದರೆ ಕಾವ್ಯನಿರ್ಮಿತಿಯ ಹಿನ್ನೆಲೆಯನ್ನು ಅರ್ಥಮಾಡಿಕೊಳುವುದರಲ್ಲಿ ಓದುಗನಿಗೆ ಕಷ್ಟವಾಗಬಹುದು. ಕಾರಣ ಅರಬ್ ಸಂಸ್ಕೃತಿ ಇಂದು ನಾವು ನೋಡುವಷ್ಟು ಮಟ್ಟಿಗೆ ಧರ್ಮಾಂಧತೆ , ಜನಾಂಗೀಯ ದ್ವೇಷ, ಮಹಿಳಾ ದೌರ್ಜನ್ಯ , ಮಾನವ ಹಕ್ಕುಗಳ ಉಲ್ಲಂಘನೆಯಂತಹ ಕರ್ಮಕೂಪದಲ್ಲಿ ಸಿಲುಕಿರಲಿಲ್ಲ. ನಾಗರೀಕತೆಯ ಉಗಮ ಸ್ಥಾನಗಳಲ್ಲಿ ಒಂದಾದ ಮಧ್ಯಪ್ರಾಚ್ಯ ಉತ್ತಮವಾದ ಏಳ್ಗೆಯನ್ನು ಸಾಧಿಸಿದ್ದ ಜೊತೆಗೆ ಕಲೆ, ಸಾಹಿತ, ವಾಸ್ತುಶಿಲ್ಪ, ವಿಜ್ಞಾನ ಮೊದಲಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದ ನಾಡಾಗಿತ್ತು . ಆದರೆ ಇಂದು ಅದರ ಸ್ಥಿತಿಯೂ ನರಕ ಸದೃಶವಾಗಿದೆ. ಈ ನಾಕ ನರಕಗಳ ನಡುವೆ ಅಲ್ಲಿನ ಹೆಣ್ಣು ಮಕ್ಕಳು ಕಟ್ಟಿದ ಕಾವ್ಯ ಈ ಪುಸ್ತಕದ ಮೂಲಕ ಕನ್ನಡದ ಓದುಗರಿಗೆ ಲಭ್ಯವಾಗಿದೆ.
ಪ್ಯಾಲೆಸ್ಟೈನ್ ಚಿಂತಕ , ಬರಹಗಾರ ಎಡ್ವರ್ಡ್ ಸೈದ್ ನಮಗೆ ಒದಗಿಸಿದ ಪೌರಸ್ತ್ಯ ಚಿಂತನೆ ನೆಲೆಗಟ್ಟಿನ ಓದಿಗೆ ಈ ಕೃತಿ ಸಹಾಯಕವಾಗಬಲ್ಲುದು. ಪೌರಸ್ತ್ಯ ಚಿಂತನೆಯನ್ನು ಅರಬ್ ಗೆ ಸೀಮಿತಮಾಡುವುದು ಈ ಮಾತಿನ ಉದ್ದೇಶವಲ್ಲ. ಹೊರ ಪ್ರಪಂಚಕ್ಕೆ ಪಾಶ್ಚಿಮಾತ್ಯ ಸಾಹಿತ್ಯ ಪ್ರಮಾಣಗಳಿಗೆ ಹೊರತಾದ ಮಾನದಂಡಗಳನ್ನು ರೂಪಿಸಿಕೊಳ್ಳುವುದು ಯಾಕೆ ಅವಶ್ಯಕವಾಯಿತು ಎನ್ನುವುದನ್ನು ತಿಳಿಯಲು ಮತ್ತು ನಮ್ಮ ಸಾಹಿತ್ಯ , ಕಾವ್ಯಗಳು ಹೇಗೆ ಇವುಗಳಿಗೆಲ್ಲಾ ವಿಭಿನ್ನ ಎಂದು ತಿಳಿದುಕೊಳ್ಳಲು ಪೌರಸ್ತ್ಯ ಚಿಂತನೆಯ ಅಗತ್ಯವಿದೆ. ಇದು ಶುರುವಾಗಿ ನಾಲ್ಕಾರು ದಶಕಗಳೇ ಕಳೆದರೂ ಈ ಕುರಿತ ಗಂಭೀರ ಚರ್ಚೆಗಳನ್ನು ನಾವು ಎತ್ತಿಕೊಳ್ಳುವುದರಲ್ಲಿ ಎಲ್ಲಿಯೋ ಸೋತಿದ್ದೇವೆ. ( ಈ ಕುರಿತು ಸಿ ಏನ್ ರಾಮಚಂದ್ರನ್ ಅವರ ಬರಹಗಳು ಮಾತ್ರ ಹೆಚ್ಚು ಚಾಲ್ತಿಯಲ್ಲಿವೆ ) ಹಾಗಾಗಿ ಈ ಕಾವ್ಯದ ಓದು ನಮಗೆ ಪೌರಸ್ತ್ಯ ಚಿಂತನೆಯ ಓದಿಗೆ ಸಹಾಯಕವಾಗಬಲ್ಲುದು ಎಂದೆನಿಸುತ್ತದೆ.
ಕಡೆಯಲ್ಲೊಂದು ಆಸಕ್ತಿಕರ ಸಂಗತಿಯು ನೆನಪಾಯಿತು ಅರಬ್ ಅಮೇರಿಕನ್ ಬರಹಗಾರರರು ತಮ್ಮ ಕಾವ್ಯ - ಬರಹಗಳನ್ನು ಆಹಾರದ ಶೀರ್ಷಿಕೆಗಳಲ್ಲಿ ಅಭಿವ್ಯಕ್ತಿಸುವ ಕುರಿತ ಸಂಗತಿಯನ್ನು ಕಮಲಾ ಅವರು ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. (ಉದಾ : ಗ್ರೇಪ್ ಲೀವ್ಸ್ ; ಎ ಸೆಂಚುರಿ ಆಫ್ ಅರನ್ ಅಮೇರಿಕನ್ ಪೊಯೆಟ್ರಿ ; ಫುಡ್ ಫಾರ್ ಅವರ್ ಗ್ರ್ಯಾಂಡ್ ಮದರ್ಸ್ ) ಇದು ಬಹಳ ಕುತೂಹಲಭರಿತವಾಗಿದೆ. ಆಹಾರ ಮತ್ತು ಆಸ್ವಾದ ಎನ್ನುವುದು ಎಲ್ಲಿಲ್ಲಿಗೆ ತಳುಕು ಹಾಕಿಕೊಂಡಿವೆಯೋ ತಿಳಿಯದು. ಆದರೆ ಆಹಾರ ಮನಷ್ಯನ ಕಲಾಮಾರ್ಗದಲ್ಲಿ ಬಹುಮುಖ್ಯ ವಿಷಯವಾಗಿದೆ. ಆದರೆ ಅದು ಅಷ್ಟೇ ವಸ್ತುನಿಷ್ಠವಾಗಿ ಕಾಣಿಸಿಕೊಳ್ಳುವುದಿಲ್ಲವಷ್ಟೆ. ಅದೊಂದೂತರನಾದ ಗುಪ್ತಗಾಮಿನಿ.
ಅರಬ್ ಮಹಿಳಾ ಕಾವ್ಯದ ಹರವು ತುಂಬಾ ದೊಡ್ಡದಾಗಿದೆ. ಒಂದು ಸಾವಧಾನದ ಓದು ಖಂಡಿತ ಈ ಕೃತಿಗೆ ಬೇಕು. ಅಲ್ಲದೇ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಕಾವ್ಯಪ್ರೇಮಿಗಳು ಈ ಸಂಪುಟವನ್ನು ಓದಲೇಬೇಕೆಂಬುದು ನನ್ನ ಶಿಫಾರಸ್ಸು.
ಪುಸ್ತಕ : ನೆತ್ತರಲಿ ನೆಂದ ಚಂದ್ರ - ಅನುವಾದಿತ ಕವಿತೆಗಳು
ಕನ್ನಡಾನುವಾದ : ಎಂ. ಆರ್. ಕಮಲ
ಬೆಲೆ: ೧೭೫ ರೂ. ಪುಟ : ೩೦೩
ಪ್ರಕಾಶನ : ಕಥನ , ಬೆಂಗಳೂರು
- - - - - - - - - - - - - - - - - - - -
- ರಾಜೇಂದ್ರ ಪ್ರಸಾದ್
Thank you so much Rajendra Prasad. ನಿನ್ನ ಪುಸ್ತಕ ಪ್ರೀತಿಗೆ ಋಣಿ 

Friday, October 26, 2018

ಎಮ್. ಆರ್. ಕಮಲ -- ನಿನ್ನ ಕಣ್ಣಂಚಿನಲಿ ನೂರಾರು ರಾಗಗಳು

ನಿನ್ನ ಕಣ್ಣಂಚಲ್ಲಿ ನೂರಾರು ರಾಗಗಳು 
ಕದ್ದಲೆಯುತ್ತಿದ್ದಾಗ ನಾನು ಬಂದೆ
`ಎಲ್ಲಿದ್ದಿತೋ ಬಾನು? ಎಲ್ಲಿದ್ದಿಯೋ ನೀನು?
ಈ ಹಾಡು ನಿನ್ನದೇ' -ನೀನು ಅಂದೆ
ಸಾವಿರದ ನೋವಲ್ಲಿ ಜೀವ ಜಂಜಾಟದಲ್ಲಿ
ನಾನು ಮತಿಗೆಟ್ಟಾಗ ನೀನು ಬಂದೆ
ಕಿಚ್ಚು ನಂಜಿನ ಹೊಳೆಯಿಂದೀಚೆ ತೆಗೆದು
ಈ ಕಾಡು ಬಿದಿರಿನ ಕೊಳಲು ನಿನ್ನದೆಂದೆ.
ತುಂಬಿ ಎದೆ ಬಿಗಿದಿದ್ದ ವೇದನೆಯ ಮೊಗ್ಗೊಂದು
ನಿನ್ನ ಹಿತಸ್ಪರ್ಶಕ್ಕೆ ಹೂವಾಯಿತು
ಹೂವಾಯಿತು ನನ್ನ ಕೊಳಲ ಹಾಡಾಯಿತು
ಹಾಡು ಬೃಂದಾವನದಲ್ಲಿ ತಾ ತಣಿಯಿತು
ಅರಳುತ್ತಿರಲಿ ಸಖೀ ನಿನ್ನ ಮುಖಭಾವದಲಿ
ಕವಿತೆ ಹಾಗೆ ಕೋಟಿ ವಿಕಸಿತ ಕಮಲ
ತಡೆದು ನಿಲ್ಲಿಸಲದು ಈ ಜಗದ ಪ್ರಳಯ ವಿಲಯ
ಮನದಲ್ಲಡಗಿದ ಕುರುಕ್ಷೇತ್ರದ ಹಾಲಾಹಲ
ನಾನು ಮೋಹನ ಮುರಳಿ, ನೀನು ರಾಧಾಲೋಲೆ
ಕಳೆಯಲಿ ಹೀಗೆ ಶಿಶಿರ ಗ್ರೀಷ್ಮ ವರ್ಷ
ನಾನು ನುಡಿಸುವೆ ನಿನ್ನ, ನೀನೆ ಅಲ್ಲವೇ ಉಸಿರು
ಎಂಥ ಸೋಜಿಗದ್ದೀ ಜೀವದಾಕರ್ಷ!

Tuesday, September 18, 2018

ಎಮ್. ಆರ್. ಕಮಲ - ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ

ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ!-ಎಂ. ಆರ್. ಕಮಲ
ಪುಟ್ಟು ಚಿಕ್ಕವನಿದ್ದಾಗ ಜಗತ್ತಿನ `ಸುಕುಮಾರ' `ಸುಕುಮಾರಿ'ಯರ ಕತೆಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದ. ಅದರಲ್ಲಿ `ವಡ್ಡಾರಾಧನೆ' ಯ `ಸುಕುಮಾರಸ್ವಾಮಿ'ಯ ಕಥೆ ಮತ್ತು `ರಾಜಕುಮಾರಿ ಮತ್ತು ಬಟಾಣಿ' ಎಂಬ ವಿದೇಶದ ಕತೆ ಬಹು ಮುಖ್ಯವಾದವು. ನಮ್ಮ ಜನಪದರು ಸಹ ಈ ವಿದೇಶಿ ಕಥೆಯಂತಹ ಅನೇಕ ಕತೆಗಳನ್ನು ಹೆಣೆದಿದ್ದಾರೆ. ರಾಜಕುಮಾರನೊಬ್ಬ ನಿಜವಾದ ರಾಜಕುಮಾರಿಯನ್ನು ಹುಡುಕಿಕೊಂಡು , ದೇಶ ವಿದೇಶ ಸುತ್ತಿ ಕೊನೆಗೆ ಯಾರನ್ನು ಒಪ್ಪದೇ ಮನೆ ಸೇರುತ್ತಾನೆ. ತಂದೆ-ತಾಯಿಗಳು ಬೇಸತ್ತು ಹೋಗಿರುವಾಗ ಒಂದು ರಾತ್ರಿ ಭಯಂಕರವಾದ ಮಳೆ ಆರಂಭವಾಗುತ್ತದೆ. ಬಿರುಗಾಳಿ ಬೇರೆ! ಅವೇಳೆಯಲ್ಲಿ ಯಾರೋ ಬಾಗಿಲು ತಟ್ಟಿದ ಶಬ್ದ! ತಂದೆ ಹೋಗಿ ನೋಡಿದರೆ ನಿಜವಾದ ರಾಜಕುಮಾರಿ ಬಾಗಿಲಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿದ್ದಾಳೆ. ಅವಳನ್ನು ಒಳಗೆ ಕರೆದು, ಉಡುಪು ಬದಲಿಸಲು ಹೇಳಿದ ರಾಜಕುಮಾರನ ತಾಯಿ ಅವಳು ನಿಜವಾದ ರಾಜಕುಮಾರಿಯೋ ಅಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಒಂದು ಉಪಾಯ ಮಾಡುತ್ತಾಳೆ. ಮೆತ್ತನೆಯ ಹಾಸಿಗೆಯ ಮೇಲೆ ಮತ್ತೆ ಇಪ್ಪತ್ತು ಮೆತ್ತನೆಯ ಹಾಸಿಗೆಗಳನ್ನು ಹಾಸಿ, ಕೆಳಗಿದ್ದ ಹಾಸಿಗೆಯ ಕೆಳಗೆ ಒಂದು ಬಟಾಣಿ ಇಡುತ್ತಾಳೆ. ರಾಜಕುಮಾರಿ ಹೂವಿನ ಏಣಿಯನ್ನೇರಿ ಹಾಸಿಗೆಯಲ್ಲಿ ಮಲಗುತ್ತಾಳೆ. ಬೆಳಗ್ಗೆ ಬಂದು ತಾಯಿ ನೋಡಿದರೆ ಕಣ್ಣುಗಳೆಲ್ಲ ಕೆಂಪಾಗಿ, ತಲೆ ಕೆದರಿಕೊಂಡು ನಿದ್ದೆಯನ್ನೇ ಮಾಡದೆ ಇಡೀ ರಾತ್ರಿಯನ್ನು ರಾಜಕುಮಾರಿ ಕಳೆದಿದ್ದಾಳೆ. ರಾಜಕುಮಾರನ ತಾಯಿ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಾಸಿಗೆಯಲ್ಲಿ ಏನೋ ಒತ್ತುತ್ತಿದ್ದರಿಂದ ನಿದ್ದೆ ಬರಲಿಲ್ಲವೆಂದು ತಿಳಿಸುತ್ತಾಳೆ! ಆಗ ಗಂಡ-ಹೆಂಡತಿ ಇವಳು ನಿಜವಾದ ರಾಜಕುಮಾರಿ ಎಂದು ನಿರ್ಧರಿಸಿ ಮಗನನ್ನು ಮದುವೆಗೆ ಒಪ್ಪಿಸುತ್ತಾರೆ. ನಿಮಗೆಲ್ಲ ಈ ಕಥೆ ಹೇಳುವುದಕ್ಕೆ ದೊಡ್ಡ ಕಾರಣವಿದೆ.
ನಿನ್ನೆ ರಾತ್ರಿ ಕಣ್ಣೆಳೆಯಿತು ಎಂದು ಮಂಚದ ಮೇಲೆ ಹೊದಿಕೆಯನ್ನು ಹೊದ್ದುಕೊಳ್ಳದೆ, ದಿಂಬನ್ನು ಇಟ್ಟುಕೊಳ್ಳದೆ ಮಲಗಿಬಿಟ್ಟಿದ್ದೆ. ಪಾಪ ರಮೇಶ್, ಸಿನಿಮಾದಲ್ಲಿ ಹೆಂಡತಿಯರನ್ನು ನೋಡಿಕೊಳ್ಳುವಂತೆ ಒಂದು ಹೊದಿಕೆಯನ್ನು ಹೊದ್ದಿಸಿದ್ದಾರೆ, ದಿಂಬನ್ನು ಇಟ್ಟಿದ್ದಾರೆ. ಹತ್ತಾರು ದಿನದಿಂದ ನನ್ನ ದಿಂಬು ಹತ್ತಿಯನ್ನೆಲ್ಲ ಉದುರಿಸಿಕೊಂಡು, ನೆಪಕ್ಕೆ ಮಾತ್ರ ದಿಂಬಿನಂತೆ ಕಾಣುತ್ತಿದೆ ಎಂದು ಗಂಡನಿಗೆ ಒಮ್ಮೆ ಹೇಳಿದ್ದೆ. ಇಷ್ಟೆಲ್ಲಾ ದುರವಸ್ಥೆಯಲ್ಲಿರುವ, ದಿಂಬಿನಂತೆಯೂ ಕಾಣದ ಇದರ ಬಗ್ಗೆ ನನಗೆ ಕೊನೆಯಿರದ ವ್ಯಾಮೋಹ. ನನ್ನ ಮೂವತ್ತೈದು ವರ್ಷದ ಹೊದಿಕೆಯದು ಇನ್ನೊಂದು ಕತೆ. ಅದು ಅಲ್ಲಲ್ಲಿ ಎಳೆ ಬಿಟ್ಟು, ಕಂಡಿಗಳಾಗಿ, ಫ್ಯಾನ್ ಗಾಳಿ ಜೋರಾಗಿ ಬೀಸುವಾಗ ಒಂದು ಕಂಡಿಯಲ್ಲಿ ಮೂಗನ್ನಿಟ್ಟುಕೊಂಡು, ಗಾಳಿ ಹೀರುತ್ತಲೇ ಬೆಚ್ಚಗೆ ಮಲಗುವ ಸೌಭಾಗ್ಯ ಈ ಹೊದಿಕೆಯಿಂದ ಮಾತ್ರ ಸಿಗುವುದು. ಜೊತೆಗೆ ಒಗೆದು, ಒಗೆದು ಅದೆಷ್ಟು ಮೆತ್ತಗಾಗಿದೆ ಎಂದರೆ ಮೈಮೇಲಿರುವುದೂ ಗೊತ್ತಾಗುವುದಿಲ್ಲ. ಮಕ್ಕಳು ನನ್ನ ಹೊದಿಕೆ, ದಿಂಬುಗಳನ್ನು ನೋಡಲಾರದೆ ಹೊಸದನ್ನು ತಂದುಕೊಟ್ಟರು. ಪುಟ್ಟುವಂತೂ ಫ್ರಾನ್ಸ್ ನಿಂದ ಮೆತ್ತಗೆ ಇರುವ ಹೊದಿಕೆಗಳನ್ನು ನನಗೆ, ಗಂಗಮ್ಮನಿಗೆ ಒಂದು ದೊಡ್ಡ ಸೂಟ್ ಕೇಸ್ ನಲ್ಲಿ ಹಾಕಿಕೊಂಡು ತಂದ. ನಾನು ಒಂದು ದಿನವೂ ಹೊದ್ದುಕೊಳ್ಳಲಿಲ್ಲ. ರಾತ್ರಿ ನನ್ನ ಕಾಲ ಬಳಿ ನಿದ್ರಿಸುವ ಕಾಳ ಅದರ ಮೇಲೆ ಸುಖವಾಗಿ ಗೊರಕೆ ಹೊಡೆಯುತ್ತಿರುತ್ತಾನೆ. ನಿನ್ನೆ ನಾನು ನಿದ್ರಿಸಿದ ಮೇಲೆ ನನ್ನ ಗಂಡ ಅನುಕಂಪಗೊಂಡು ನನ್ನ ದಿಂಬಿಗೆ ಒಂದಿಷ್ಟು ಹತ್ತಿಯನ್ನು ತುರುಕಿ, ಅದಕ್ಕೊಂದು ಆಕಾರ ಕೊಟ್ಟು, ಮೆತ್ತಗೆ ಮಾಡಿ ತಲೆಗಿಟ್ಟಿದ್ದಾನೆ. ಒಳ್ಳೆಯದೊಂದು ಹೊದಿಕೆಯನ್ನು ಬೇರೆ ಹೊದಿಸಿದ್ದರಲ್ಲ! ಮಲಗಿ ಸ್ವಲ್ಪ ಹೊತ್ತಿಗೆ ನನಗೆ ಎಚ್ಚರಾಗಿ ಹೋಯಿತು. ಏನು ಮಾಡಿದರೂ ನಿದ್ದ ಬರುತ್ತಿಲ್ಲ. ಒಂದು, ಎರಡು ಎಣಿಸಿ ನೋಡಿದೆ. ಪಕ್ಕದಲ್ಲಿದ್ದ ಕಾಳನನ್ನು ಮಾತಾಡಿಸಿದೆ. ತಲೆ ಕಿತ್ತುಕೊಂಡೆ, ಕಣ್ಣುಗಳು ಕೆಂಪಗಾದವು. ಬೆಳಗ್ಗೆ ನಾಲ್ಕು ಗಂಟೆಯಾಗುವುದನ್ನೇ ಕಾಯುತ್ತ ಲೈಟ್ ಹಾಕಿದೆ. ನನ್ನ ಗಂಡ ಎದ್ದು ನೋಡುತ್ತಾನೆ. `ರಾಜಕುಮಾರಿ ಮತ್ತು ಬಟಾಣಿ' ಕಥೆಯ ರಾಜಕುಮಾರಿಯಂತಾಗಿ ಒದ್ದಾಡುತ್ತಿದ್ದೇನೆ. `ಪುಟ್ಟು ಊರಲ್ಲಿ ಇಲ್ಲ, ಇಷ್ಟು ಬೇಗ ಎದ್ದು ಏನು ಮಾಡಬೇಕು?ಮಲಕ್ಕೋ, ಮುಖ ನೋಡ್ಕೋ ಹೇಗಾಗಿದೆ?' ಎಂದು ಬೈದು, ತನ್ನ ನಿದ್ದೆಯನ್ನು ಕೆಡಿಸಿದ್ದಕ್ಕೆ ಗೊಣಗಿದ. ನಾನು ಕಣ್ಣು ಬಿಟ್ಟು ನೋಡಿ ಹೌಹಾರಿದೆ!
ದಿಂಬನ್ನು ಯಾರೋ ಸರಿಮಾಡಿದ್ದಾರೆ! ಯಾವುದೋ ಹೊದಿಕೆಯನ್ನು ಹೊದಿಸಿಬಿಟ್ಟಿದ್ದಾರೆ. ಹತ್ತಿಯೆಲ್ಲ ಮೂಲೆ ಸೇರಿ, ಒಂದು ಕಡೆ ಕಲ್ಲಿನಂತಾಗಿದ್ದ, ಒಂದು ಕಡೆ ಹತ್ತಿಯೇ ಇಲ್ಲದೆ ಟೊಳ್ಳಾಗಿದ್ದ ನನ್ನ ದಿಂಬಿನ ಸ್ವರೂಪ ಬದಲಾಗಿ ಹೋಗಿದೆ. ಜೊತೆಗೆ ಯಾವುದೋ ಮೆತ್ತೆಯನ್ನು ಬೇರೆ ಹೊದ್ದಿಸಿ ನನಗೆ ನಿದ್ರೆ ಬಾರದಂತಾಗಿದೆ ಎಂದು ಹೊಳೆಯಿತು. `ಯಾರು ನನ್ನ ದಿಂಬು ಮುಟ್ಟಿದ್ದು?' ಕಿರುಚಿದೆ. ಅವಳು ಯಾವಳೋ ರಾಜಕುಮಾರಿಗೆ ಬಟಾಣಿ ಒತ್ತಿ ನಿದ್ದೆ ಬಂದಿಲ್ಲ, ನನಗೆ ಈ ಕಲ್ಲಿನ ದಿಂಬು ಒತ್ತದೆ ನಿದ್ದೆ ಬಂದಿಲ್ಲ! ನನ್ನ ಈ ವಿಚಿತ್ರ ವರ್ತನೆ ನನ್ನ ಗಂಡನಿಗೆ ಆಘಾತ ಉಂಟು ಮಾಡಿರಬೇಕು. ನಾನು ಚಿಕ್ಕವಳಿದ್ದಾಗ ನನ್ನ ತಂದೆ ಕೊಬ್ಬರಿ ಸುಲಿಸಿ, ಒಳ್ಳೆ ರೇಟ್ ಬರಲಿ, ಆಮೇಲೆ ಮಾರೋಣ ಎಂದು ಮೂಟೆಗಳಲ್ಲಿ ಅದನ್ನು ತುಂಬಿ ನಡುಮನೆಯಲ್ಲಿ ಸಾಲಾಗಿ ಇಟ್ಟಿರುತ್ತಿದ್ದರು. ಆಗ ಮನೆಯಲ್ಲಿ ಮಂಚ ಇರಲಿಲ್ಲ. ನನಗೆ ಈ ಕೊಬ್ಬರಿ ಮೂಟೆಗಳು ಮಂಚದಂತೆ ಕಂಡು ಖುಷಿಯಾಗಿ ರಾತ್ರಿ ಅವುಗಳ ಮೇಲೆ ಕೂತು ಓದಿಕೊಳ್ಳುತ್ತಿದ್ದೆ. ಹಾಗೆ ನಿದ್ದೆ ಮಾಡಿಬಿಡುತ್ತಿದ್ದೆ. ಈ ಕಲ್ಲಿನಂಥ ಕೊಬ್ಬರಿ ಗಿಟುಕಿನ ಮೇಲೆ ನಿದ್ದೆ ಮಾಡುತ್ತೆ ಪಾಪ ಅಂತ ಅಮ್ಮ ಯಾವುದೋ ಹೊತ್ತಿನಲ್ಲಿ ಎಳೆದು ಹಾಸಿಗೆಗೆ ಹಾಕಿರುತ್ತಿದ್ದಳು. ಆ ಹಾಸಿಗೆಗಳೇನೂ ಹಂಸ ತೂಲಿಕಾ ತಲ್ಪಗಳಾಗಿರಲಿಲ್ಲ. ಅಲ್ಲಲ್ಲಿ ಹತ್ತಿ ಗಂಟು ಕಟ್ಟಿಕೊಂಡು ಹೋಗಿರುತ್ತಿತ್ತು. ದಿಂಬುಗಳಿಗೂ ಕಲ್ಲುಗಳಿಗೂ ಅಂತಹ ವ್ಯತ್ಯಾಸ ಕೂಡ ಇರುತ್ತಿರಲಿಲ್ಲ!
ವರ್ಷಕ್ಕೊಮ್ಮೆ ಸಾಬಣ್ಣ ತನ್ನ ಉಪಕರಣಗಳನ್ನು ದೊಡ್ಡ ಚೀಲಕ್ಕೆ ತುಂಬಿಕೊಂಡು ಹಾಸಿಗೆ ಮಾಡಿಕೊಡಲು ಬರುತ್ತಿದ್ದ. ಆ ದಿನ ಅಂಗಳಕ್ಕೆ ಅಥವಾ ಜಗುಲಿಗೆ ಮನೆಯಲ್ಲಿದ್ದ ಹತ್ತಾರು ಹಾಸಿಗೆಗಳು ವರ್ಗಾವಣೆಯಾಗುತ್ತಿದ್ದವು. ಮೊದಲು ಹಾಸಿಗೆಯ ಹೊಲಿಗೆಗಳನ್ನು ಬಿಚ್ಚುವುದು, ನಂತರ ಒಳಗಿದ್ದ ಹತ್ತಿಯನ್ನೆಲ್ಲ ಮಂದಳಿಗೆ ಚಾಪೆ ಮೇಲೆ ಹಾಕುವುದು. ಸಾಬಣ್ಣ . ತಂಬೂರಿ ತರಹ ಎಂಥದ್ದೋ ಒಂದು ಉಪಕರಣ ತರುತ್ತಿದ್ದ. ಅದಕ್ಕೆ ಒಂದೋ, ಎರಡೂ ದಪ್ಪ ತಂತಿಗಳು. ಆ ತಂತಿಯಲ್ಲಿ ಮೀಟಿಕೊಂಡು ಹತ್ತಿಯನ್ನು ಮೃದು ಮಾಡುತ್ತಿದ್ದ. ಆ ಸಮಯದಲ್ಲಿ ಅಂಗಳದ ತುಂಬಾ ಹಾರುತ್ತಿದ್ದ ಹತ್ತಿಯನ್ನು ಹಿಡಿಯಲು ನಾವು ಖುಷಿಯಿಂದ ಓಡುತ್ತಿದ್ದೆವು. ಅವು ಗಿಡದ ಮೇಲೆ, ಹೆಂಚಿನ ಮೇಲೆಲ್ಲಾ ಕೂತಿರುತ್ತಿದ್ದವು. ಹೊಸ ಹಾಸಿಗೆಯ ಕವರ್ ಬೇಕೆಂದರೆ ಮೊದಲೇ ಹೊಲಿದು ತಂದಿದ್ದ (ಒಂದು ಭಾಗವನ್ನು ಬಿಟ್ಟು) ಪಟಾ ಪಟಿ ಡಿಸೈನ್ ಬಟ್ಟೆಗೆ ಈ ಹತ್ತಿಯನ್ನು ತುಂಬಿ, ಹತ್ತಿ ಹಾಸಿಗೆಯಲ್ಲಿ ಜಾರದಂತೆ ಮಧ್ಯೆ ಮಧ್ಯೆ ಒಂದೊಂದು ಟಾಕ್ ಹಾಕಿ ಹೊಲಿದುಕೊಡುತ್ತಿದ್ದ. ಆಮೇಲೆ ಸರಿಯಾಗಿ ಕೂರುವಂತೆ ಯಾವುದೋ ಬಡಿಗೆಯಿಂದ ಬಡಿಯುವುದು ಇತ್ಯಾದಿ. ಅವತ್ತು ಸಾಬಣ್ಣನಿಗೆ ಊಟ, ತಿಂಡಿಯೆಲ್ಲ ನಮ್ಮ ಮನೆಯಲ್ಲೇ. ಅವನ ಕಥೆಯನ್ನು ಕೇಳಿಕೊಂಡು ಸುತ್ತ ನಾಲ್ಕಾರು ಜನ ಕುಳಿತಿರುತ್ತಿದ್ದರು. ನಾವು ಮಕ್ಕಳು ಹತ್ತಿಯನ್ನು ಅಂಗಳದ ತುಂಬಾ ಹಾರಿಸಿಕೊಂಡು, ಅಮ್ಮನ ಹತ್ತಿರ ಬೈಸಿಕೊಂಡು ಓಡಾಡುವುದು. ಆದರೆ ಹಾಸಿಗೆಯ ಮೇಲೆ ನಾವು ಕುಣಿಯುತ್ತಿದ್ದ ಪರಿಗೆ ಬಹುಬೇಗನೆ ಹಾಸಿಗೆಗಳು ಕಲ್ಲಾಗಿ, ಟೊಳ್ಳಾಗಿ ಹೋಗುತ್ತಿದ್ದವು. ಈ ರೀತಿ ಬಾಲ್ಯವನ್ನು ಕಳೆದ ನನಗೆ ಒಳ್ಳೆಯ ಹೊದಿಕೆ, ದಿಂಬುಗಳು ಶತ್ರುಗಳಂತೆ ಕಂಡಿದ್ದು ಅಚ್ಚರಿಯೇನಲ್ಲ. ಬೆಳಗ್ಗೆ ಬಂದ ಸಿಟ್ಟಿಗೆ ದಿಂಬಿನ ಮೂಲೆಯಲ್ಲಿನ ಹೊಲಿಗೆಯನ್ನು ಕಿತ್ತು, ಒಂದಿಷ್ಟು ಹತ್ತಿಯನ್ನು ತೆಗೆದೆಸೆದೆ. ನನ್ನ ಗಂಡ ಇಂಥ ವಿಚಿತ್ರ ಹೆಂಗಸನ್ನು ಬೇರೆಲ್ಲೂ ಕಂಡಿಲ್ಲ ಎನ್ನುವಂತೆ ನೋಡಿದ. ಈ ಮೆತ್ತನೆಯ ದಿಂಬಿನ ಮೇಲೆ ಮಲಗಿ, ಕತ್ತು ಬೇರೆ ಉಳುಕಿ, ಬರೆಯಲು ಒದ್ದಾಡುತ್ತಿದ್ದೇನೆ! ನನಗೆ ಹೊದಿಕೆ ಹೊದಿಸಿ, ದಿಂಬು ಸರಿ ಮಾಡಿಕೊಟ್ಟಿದ್ದಕ್ಕೆ ಇವತ್ತು ಇಡೀ ದಿನ ಬೈಗುಳವನ್ನು ಬೇರೆ ಕೇಳಬೇಕು!
`ಪುಷ್ಪಕ ವಿಮಾನ' ಮೂಕಿ ಚಿತ್ರದಲ್ಲಿ ಹೋಟೆಲ್ ನಲ್ಲಿ ನಿದ್ದೆ ಬಾರದೆ, ತಾನಿದ್ದ ಮನೆಗೆ ಮರಳಿ ಬಂದು, ಪಕ್ಕದ ಟೆಂಟಿನ ಚಲನಚಿತಗಳ ವಿಚಿತ್ರ ಸದ್ದುಗಳನ್ನು ರೆಕಾರ್ಡ್ ಮಾಡಿಕೊಂಡು, ಹೋಟೆಲ್ ಗೆ ಮರಳಿ, ಅವುಗಳನ್ನು ಹಾಕಿಕೊಂಡು ಕೇಳುತ್ತ ಮಲಗುತ್ತಾನಲ್ಲ ಹಾಗಾಗಿದೆ ನನ್ನ ಸ್ಥಿತಿ. ಮೀನಿನ ಪೇಟೆಯಲ್ಲಿರುವವರಿಗೆ ಮೀನಿನ ವಾಸನೆಯಿಲ್ಲದೆ ಬದುಕಲು ಸಾಧ್ಯವಾಗದಂತೆ. ಇದ್ದಕ್ಕಿದ್ದಂತೆ ನೀವ್ಯಾರು ದಯವಿಟ್ಟು ನಮ್ಮ ಮನೆಗೆ ಬರಬೇಡಿ. ನಾನು ಹಾಕಿಕೊಳ್ಳುವ ಕಿತ್ತುಹೋದ ಬಟ್ಟೆಗಳು, ಅವತಾರಗಳನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿದ್ದ ನನ್ನ ರೂಪ ಅಳಿದುಹೋಗಬಹುದು!.

Friday, June 15, 2018

ಎಮ್. ಆರ್. ಕಮಲಾ - ಎಷ್ಟು ವರ್ಷಗಳಾದವೋ ?

ಎಷ್ಟು ವರುಷಗಳಾದವೋ?
ಎಷ್ಟು ವರುಷಗಳಾದವೋ
ಅಂಗಳದಿ ನಿಂತ ನೀರಲ್ಲಿ ಗುಬ್ಬಿ ಮೈಯೊದರಿ?
ಎಷ್ಟು ವರುಷಗಳಾದವೋ
ಶಾಲೆಯ ಡೆಸ್ಕಿನಲ್ಲಿ ಹೆಸರ ಬರೆದು ಕೊರೆದು?
ಎಷ್ಟು ವರುಷಗಳಾದವೋ
ಹಿತ್ತಲಿನ ಹೂ ಕಿತ್ತ ಬೆರಳ ಘಮವ ಹೀರಿ?
ಎಷ್ಟು ವರುಷಗಳಾದವೋ
ಸೀದ ರಾಗಿರೊಟ್ಟಿಯ ಚೂರಿಗೆ ಬಡಿದಾಡಿ ?Image may contain: Metikurke Ramaswamy Kamala
ಎಷ್ಟು ವರುಷಗಳಾದವೋ
ಗೋರಂಟಿ ಗಿಡದೆಲೆಯ ಜಜ್ಜಿ ಅಂಗೈಗೆ ಹಚ್ಚಿ?
ಎಷ್ಟು ವರುಷಗಳಾದವೋ
ಮನೆಯೊಳಗಿಳಿದ ಬಿಸಿಲ ಕೋಲ ಹಿಡಿದು?
ಎಷ್ಟು ವರುಷಗಳಾದವೋ
ಅಕ್ಕರೆಯ ಕಣ್ಣಿನಲಿ ಸಕ್ಕರೆ ನೀರು ಹರಿದು?
ಎಷ್ಟು ವರುಷಗಳಾದವೋ
ಕಣ್ಣೊಳಗೆ ಒಂದೊಂದೇ ಕಾಮನಬಿಲ್ಲ ಬಣ್ಣವಿಳಿದು?
ವರುಷಗಳೆಷ್ಟಾದವು
ನನ್ನದೇ ನಿಜ ಮುಖವ ಕನ್ನಡಿಯಲ್ಲಿ ನೋಡಿ?!

Friday, June 7, 2013

`ಖಿನ್ನತೆ'ಗಿದು ಕಾಲ! -ಎಮ್.ಆರ್. ಕಮಲ

ಲಡಾಯಿ ಪ್ರಕಾಶನ: `ಖಿನ್ನತೆ'ಗಿದು ಕಾಲ!: `ಅರಬ್ ಜಗತ್ತಿನ' ಹೆಣ್ಣು ಮಕ್ಕಳ ಕವಿತೆಗಳ ಅನುವಾದ ಫ್ರಂಚ್ ಮತ್ತು ಇಂಗ್ಲಿಶ್ ಭಾಷೆಯಿಂದ  ಹಮ್ ದಾ ಖಮೀಸ್ ಎಂ.ಆರ್. ಕಮಲಾ ಕಿಟಕಿ, ಬಾಗಿಲಲ್ಲಿ..
M. R. KAMALA.