stat CounterSaturday, August 1, 2020

ಅರವಿಂದ ಚೊಕ್ಕಾಡಿ - ಪುರುಷೋತ್ತಮ ಬಿಳಿಮಲೆ ಅವರ " ಕಾಗೆ ಮುಟ್ಟಿದ ನೀರು "

ಡಾ. ಪುರುಷೋತ್ತಮ ಬಿಳಿಮಲೆಯವರ ಅನುಭವ ವೃತ್ತಾಂತ ' ಕಾಗೆ ಮುಟ್ಟಿದ ನೀರು' ಇವತ್ತು ಮಾರುಕಟ್ಟೆಗೆ ಬಂದಿದೆ. ಓದಬೇಕಾದ ಪುಸ್ತಕ. ಋತುಮಾನ ಸ್ಟೋರ್ ನ‌ ಲಿಂಕ್ ಕೊಟ್ಟಿದ್ದೇನೆ. ಆಸಕ್ತರು ಸಂಪರ್ಕಿಸಬಹುದು.
ಕಾಗೆ ಮುಟ್ಟಿದ ನೀರು ಒಂದು ರೂಪಕವಾಗಿ ಹಲವು ರೀತಿಯಲ್ಲಿ ಕೃತಿಯನ್ನು ವ್ಯಾಪಿಸಿಕೊಳ್ಳುತ್ತದೆ. ಕಾಗೆ ಮೈಲಿಗೆ ಎಂದು ಲೆಕ್ಕ. ಆದರೆ ಪಿತೃಗಳಿಗೆ ಪಿಂಡವನ್ನು ತಲುಪಿಸುವುದು ಕಾಗೆ ಎಂದು ನಂಬಿಕೆ. ಒಗ್ಗಟ್ಟಿಗೆ ಕಾಗೆಯೇ ಪ್ರತಿನಿಧಿ. ಒಂದಗುಳು ಕಂಡರೆ ಕಾಗೆ ತನ್ನ ಬಳಗವನ್ನು ಕರೆಯುತ್ತದೆ ಎಂದು ಶರಣರು ಹೇಳಿದ್ದಾರೆ. ಒಂದು ಭಾಷೆಗೆ ಕಾಗೆ ಸೀಮಿತವಲ್ಲ." ಕಾಕ್ಕಾಯ್ ಕುಲಮಾಯ್ ಅವಧರಿತ್ತಾಲುಂ ವಟ್ರುಮಯಾವದ್ ವಳರ್ನ್ದಿರುಕ್ಕುಂ" ಎಂದು ತಮಿಳಿನಲ್ಲೂ ಬರುತ್ತದೆ. ಮಕ್ಕಳಿಗೆ ಪ್ರಿಯವಾದ ಹಕ್ಕಿ ಕಾಗೆ. 'ಪ' 'ಮ' ಹೇಗೆಯೋ ಹಾಗೆಯೇ,' ಕಾ..ಕಾ' ವೂ ಮೂಲಧ್ವನಿಯಲ್ಲೆ ಸೇರಿ ಕಾಗೆಯೊಂದಿಗೆ ನಯನ‌ ಸಂಪರ್ಕವನ್ನು ಹೊಂದುತ್ತದೆ. ಹೀಗೆ ಕಾಗೆಯ ಹಲವು ಗುಣ ಸ್ವಭಾವಗಳು ಕೃತಿಯ ವಿವರಗಳನ್ನು ರೂಪಕಾತ್ಮಕವಾಗಿ ಬೆಳೆಯಿಸುತ್ತದೆ.
ಈ ಕೃತಿಯು ಸುಮಾರು ಅರುವತ್ತು ವರ್ಷಗಳ ಹಿಂದಿನ ಅನುಭವಗಳಿಂದ ವಿವರಗಳನ್ನು ತೆಗೆದುಕೊಳ್ಳುತ್ತದೆ ಎಂಬ ನೆಲೆಯಲ್ಲಿಯೇ ಕೃತಿಯನ್ನು ಪರಿಗಣಿಸಬೇಕು. ನನ್ನ ಬಾಲ್ಯದ ಬದುಕೇ ಈಗ ಇಲ್ಲ. ಹಾಗಿರುವಾಗ ಬಿಳಿಮಲೆಯವರ ಬಾಲ್ಯದ ಬದುಕಿನ ಸ್ಥಿತಿ ಈಗಿಲ್ಲ ಎಂಬುದನ್ನು ಪರಿಗಣಿಸಿ ಓದಿಕೊಳ್ಳದಿದ್ದರೆ, ಕೆಲವು ಎಡಪಂಥೀಯರು 'ರಾಮಾಯಣ' ದಲ್ಲಿ ಭಾರತದ ಸಂವಿಧಾನವನ್ನು ಹುಡುಕಲು ಹೊರಟು ರಾಮಾಯಣದ ಓದಿನ ಅನುಭವವನ್ನೆ ಪಡೆಯಲಾಗದೆ ಅಸಹನೆಯನ್ನು ಬೆಳೆಯಿಸಿಕೊಳ್ಳುತ್ತಾರಲ್ಲ ಆ ರೀತಿಯ ಪರಿಸ್ಥಿತಿ ಎದುರಾಗುತ್ತದೆ. 65 ವರ್ಷಗಳ ಹಿಂದಿನ ಪಂಜದಲ್ಲಿ ಬದುಕು ಆರಂಭವಾಗುತ್ತದೆ. ಅಲ್ಲಿನ ಸಾಮುದಾಯಿಕ ಬದುಕು, ಕ್ಷೌರಿಕ, ಬ್ಯಾರಿ, ಜ್ಯೋತಿಷಿ, ಯಕ್ಷಗಾನ, ಕರಿಮಲೆ, ಬಿರುಮಳೆ, ಏಡಿ-ಇದೆಲ್ಲ ಸಮೃದ್ಧ ಅನುಭವಗಳ ಒಂದು ಕಾಲಮಾನದ ಗ್ರಾಮ ಬದುಕಿನ ಚಿತ್ರಣವನ್ನು‌ ನೀಡುತ್ತವೆ. ಬಹುಶಃ ಮುಂದಿನ ದಿನಗಳಿಗೆ ಇವು ಐತಿಹಾಸಿಕ ದಾಖಲೆಗಳೇ ಆಗಬಹುದೇನೊ.
ಎರಡನೆಯದು ಬಿಳಿಮಲೆಯವರ ವಿದ್ವತ್ ಅನುಭವಗಳು. ಜನಪದದ ಕುರಿತ ಅವರ ವ್ಯಾಪಕ ಅಧ್ಯಯನ, ಮೆಕೆಂಜಿಯ ಕೈಫಿಯತ್ ಗಳು ಮುಂತಾದ ಸಂಶೋಧನೆ, ಪಂಜದ ಕಾಡಿನ‌ ಮೂಲೆಯಲ್ಲಿ ಜನಿಸಿ ಟೋಕಿಯೊ, ಇಸ್ರೇಸ್ ಹೀಗೆ ಅಂತಾರಾಷ್ಟ್ರೀಯ ವಿದ್ವತ್ ಸಭೆಯ ಪಾಲುದಾರನಾಗಿ ಬೆಳೆದ ಒಂದು ವೈಚಾರಿಕ ಬದುಕು ಕೃತಿಯ ಮತ್ತೊಂದು ಮಗ್ಗುಲು.
ಮೂರನೆಯದು ಜನರೊಂದಿಗಿನ ಒಡನಾಟ. ಇಲ್ಲಿ ಕಾಣಿಸಲ್ಪಡುವ ಶಿವರಾಮ ಕಾರಂತರು ಸಾಹಿತ್ಯ ಮಾತ್ರ ಅಲ್ಲ; ವ್ಯಕ್ತಿತ್ವವೂ ಹೌದು. ಇಲ್ಲಿ ಬರುವ ಸುನಿಲ್ ಕುಮಾರ್, ತಾಳ್ತಜೆ ವಸಂತ ಕುಮಾರ್, ಕುರುಂಜಿ ವೆಂಕಟ್ರಮಣ ಗೌಡ, ಐತಾಳರು, ಕಂಬಾರರು, ಮಣಿಮಾಲಿನಿ, ದೆಹಲಿ ಕನ್ನಡ ಸಂಘದ ಸಮಸ್ಯೆಗೆ ಸ್ಪಂದಿಸಿದ ಅಂದಿನ ಕೇಂದ್ರ ಸಚಿವ ಅನಂತ ಕುಮಾರ್ -ಹೀಗೆ ಇಂತಹ ಅನೇಕ ವ್ಯಕ್ತಿಗಳು ವರ್ತಮಾನದ ಬದುಕಿನಲ್ಲಿ ಇರುವವರು/ಇದ್ದವರು. ಈ ಒಡನಾಟಗಳು ಬಿಳಿಮಲೆಯವರ ವ್ಯಕ್ತಿತ್ವದ ಒಟ್ಟೂ ಸ್ವರೂಪವನ್ನು ಕಾಣಿಸುತ್ತವೆ.
ಇನ್ನೊಂದು ಆಯಾಮ ಬಿಳಿಮಲೆಯವರ ಸಂಘರ್ಷಗಳು. ಐತಾಳರ ' ಬ್ರಾಹ್ಮಣ ಬಂಡಾಯ' ಕೃತಿಯ ವಿರುದ್ಧದ ಬಿಳಿಮಲೆಯವರ ಹೋರಾಟ ಬರುತ್ತದೆ. ಐತಾಳರು ಬಂಧನಕ್ಕೊಳಗಾದಾಗ ಬಿಳಿಮಲೆಯವರೇ ನ್ಯಾಯಾಲಯದಲ್ಲಿ," ಇದು ಕಾನೂನಿನಿಂದ ತೀರ್ಮಾನ ಆಗಬೇಕಾದ ವಿಷಯವಲ್ಲ" ಎಂದು ಸಾಕ್ಷಿ ಹೇಳುವುದು ಮತ್ತು ಮೊಕದ್ದಮೆ ಬಿದ್ದು ಹೋಗುವುದು ಒಂದು ಕಾಲಮಾನಕ್ಕೆ ಎಡಪಂಥೀಯ ವೈಚಾರಿಕತೆಗೆ ಇದ್ದ ಶಕ್ತಿಯು, "ಹೇಗಾದರೂ ಹಣಿಯಬೇಕು" ಎನ್ನುವ ವರ್ತಮಾನದ ವೈಚಾರಿಕತೆಯನ್ನು ಅಣಕಿಸುತ್ತಾ ವೈಚಾರಿಕತೆ ಹೇಗಿದ್ದಾಗ ಅದಕ್ಕೆ ಮಾನ್ಯತೆ ಬರುತ್ತದೆ ಎಂಬುದಕ್ಕೆ ನಿದರ್ಶನವಾಗುತ್ತದೆ.
ಒಂದು ತುಂಬು ಬದುಕಿನ ಅಂತಃಶಕ್ತಿಯನ್ನು ಅಲ್ಲಿ ಬರುವ ಬುದ್ಧಿವಂತಿಕೆ, ದಡ್ಡತನ, ದಡ್ಡತನದೊಳಗಣ ಪ್ರೀತಿ, ಜೋಕು, ವಿಡಂಬನೆ ಮುಂತಾದವುಗಳಿಂದ ಕೃತಿಯು ಹೇಳುತ್ತಾ ಹೋಗುತ್ತದೆ. "ವಿವೇಕಾನಂದ ಕಾಲೇಜಿನಲ್ಲಿದ್ದಾಗ ನನಗೆ ಪ್ರೀತಿಸಲು ಯಾರೂ ಸಿಗಲಿಲ್ಲ" ಎನ್ನುವಲ್ಲಿನ ತುಂಟತನದ ಗಮ್ಮತ್ತು ಶೋಭನಾ ಅವರನ್ನು ಪ್ರೀತಿಸಿದ ವಿವರ ಬಂದಾಗ "ಯಬ್ಬ, ಕಡೆಗೂ ಇವರಿಗೊಂದು ವ್ಯವಸ್ಥೆ ಆಯಿತಲ್ಲ" ಎಂಬ ಸಮಾಧಾನವನ್ನು ಓದುಗರಿಗೆ ಕೊಡುತ್ತದೆ. ಬಿಳಿಮಲೆ ಆ ಕಾಲಕ್ಕೇ ಬ್ರಾಹಮಣ ಯುವತಿಯನ್ನು ಪ್ರೀತಿಸಿ ಮದುವೆಯಾದವರು. ಮತ್ತು ಅದಕ್ಕಾಗಿಯೇ ಯುವತಿಯ ಮನೆಯ ಬಳಿ ಯಕ್ಷಗಾನ ಮಾಡುವುದು, ಯಕ್ಷಗಾನಕ್ಕೆ ಎಲ್ಲರೂ ಬಂದರೂ ಬೇಕಾದವರು ಬಾರದಿರುವುದು, ಮತ್ತೆ ಮದುವೆ ಇದೆಲ್ಲ ಚಂದದ ವಿಷಯಗಳು. ಮದುವೆ ಮಾಡಿಸಲು ಅಲ್ಲೊಬ್ಬರು ಕಮ್ಯುನಿಸ್ಟ್ ಭಟ್ರು ಬರುತ್ತಾರೆ. ಕಮ್ಯುನಿಸ್ಟಾದರೂ ಭಟ್ರು. ಭಟ್ರಾದರೂ ಕಮ್ಯುನಿಸ್ಟರು. ಈ ಎರಡೂ ಹೇಳಿಕೆಗಳು ಒಂದಾಗುವಲ್ಲಿ ಸೃಷ್ಟಿಯಾಗುವ ಸೌಂದರ್ಯ ಅದ್ಭುತ!. ಮದುವೆಯ ನಂತರ ಯುವತಿಯ ಅಜ್ಜಿ ಬಂದು ದಂಪತಿಯನ್ನು ಮನೆಗೆ ಕರೆದೊಯ್ದು ಸಮಸ್ಯೆ ಪರಿಹರಿಸುವುದು, ಬಿಳಿಮಲೆಯವರ ತಂದೆ "ಸಣ್ಣ ಸೊಸೆ ಡೆಲ್ಲಿಯಿಂದ ಬಂದಿದ್ದಾಳೆ" ಎಂದು ಬರೆದಿಡುವುದು ಇದೆಲ್ಲ ತಲೆಮಾರುಗಳ ಜೀವನ ಧರ್ಮವನ್ನು ಅರ್ಥ ಮಾಡಿಸುತ್ತವೆ. ಇವತ್ತು ಬಿಳಿಮಲೆಯವರ ಕೆಲಸ ಮಾಡುವ ಕಿಡ್ನಿ ಅವರ ಪತ್ನಿಯದು. ಪ್ರೇಮ ವಿವಾಹ ವಿಫಲವಾಗುತ್ತದೆ ಎಂಬ ನಂಬಿಕೆಗೆ ಅವರು ಒಂದು ಚಾಲೆಂಜ್.
ಇದರ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ. ಇಲ್ಲಿಗೆ ಇಷ್ಟು ಸಾಕು. ಕೃತಿಯ ಉದ್ದಕ್ಕೂ ಖುಷಿ ಕೊಡುವ ಭಾಷಾ ಲಾಲಿತ್ಯ ಕೊನೆಯಲ್ಲಿ ಮನುಷ್ಯ ಜೀವನವನ್ನು ಮರು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಬಿಳಿಮಲೆಯವರು ಕೃತಿಯನ್ನು ಕೊನೆಗೊಳಿಸುವುದು ಹೀಗೆ:
".......
ಕಣ್ಣು ಸರಿಯಿಲ್ಲ, ಎಡದ ಕಣ್ಣು ಕಾಣೋದಿಲ್ಲ.
ಎರಡು ಸ್ಟಂಟ್ ಹಾಕಲಾಗಿದೆ
ನಲವತ್ತು ವರ್ಷಗಳಿಂದ ಡಯಾಬೆಟಿಕ್
ಅಂಗಾಲು ಬಿಸಿಯಾಗ್ತದೆ. ನ್ಯೂರೋಪತಿ
ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದೆ"
ಅವನು ತಲೆಯೆತ್ತಿ ನನ್ನ ಕಡೆ ನೋಡಿದ. ಭರ್ತಿ ಮಾಡಿಕೊಳ್ಳಲು ಅವನಲ್ಲಿ ಕಾಲಂಗಳೇ ಉಳಿದಿರಲಿಲ್ಲ. ನಾನು ನಿಧಾನವಾಗಿ ಹೇಳಿದೆ: ನೀನು ಬರೆದುಕೊಳ್ಳಬೇಕಾದ ಮುಖ್ಯ ಟಿಪ್ಪಣಿ ಎಂದರೆ, ಇಷ್ಟೆಲ್ಲ ಕಾಯಿಲೆಗಳ ನಡುವೆ ಇಷ್ಟು ವರ್ಷದ ವರೆಗೆ ಹೇಗೆ ಬದುಕಿದ ಅಂತ. ಅವನು ಮುಗುಳ್ನಕ್ಕ. ದೇಹವನ್ನು ಕೊಂಡೊಯ್ಯುವ ವಾಹನ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಹಾಗಂತ ನಾನೇನೂ ಅದಕ್ಕೆ ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿವೆ. ಬರೆಯಬೇಕಾದ ಪುಸ್ತಕಗಳೂ ಕೆಲವಿವೆ.
"
Image may contain: one or more people, text that says 'ಪುರುಷೋತ್ತಮ ಬಿಳಿಮಲೆ ಕಾಗೆ ಮುಟ್ಟಿದ ನೀರು ಚದುರಿ ಬಿದ್ದ ಆತ್ಮದ ತುಣುಕುಗಳು ಕಾಗೆ ಮುಟ್ಸಿದ ನೀರು ಪುರುಷೋತ್ತಮ ಬಿಳಿಮಲೆ ಆಹರ್ನಿಡಿ'
You, Purushottama Bilimale, Sumithra Lc and 138 others
29 Comments
6 Shares
Like
Comment
Share

No comments:

Post a Comment