stat Counter



Thursday, August 13, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎಸ್. ಮಂಜುನಾಥ್ ಅವರ " ಮೌನದ ಮಣಿ " - ಧ್ಯಾನದ ಗಿಡದ ಹೂವುಗಳು

ಎಸ್. ಮಂಜುನಾಥ್ ಅವರ ’ಮೌನದ ಮಣಿ’ ಕಾಂತಾವರ ಕನ್ನಡ ಸಂಘದ ೧೯೯೯ರ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿರುವ ಸಂಕಲನ. ಈ ಸಂಕಲನದಲ್ಲಿ ೫೮ ಕವನ ಗಳಿವೆ. ಮಂಜುನಾಥ್, ದೈನಂದಿನ ಜೀವನದ ಸಣ್ಣ ಸಂಗತಿಗಳನ್ನು ಕಾವ್ಯದ ಕುಸುರಿಯಲ್ಲಿ ಹಿಡಿದಿಡುವ ಕವಿ.
’ಕವಿತೆ’ ಕವನದ ಕೊನೆಯ ಸಾಲು ಗಳಿವು-"ಗೊತ್ತಿರುವ ವಿಗ್ರಹಗಳಲ್ಲಿ ನಮ್ಮ ಮರವೆ ಮಬ್ಬಿನ ಮುಸುಕೆಳೆದು ಅಣ್ಕಿಸುತ, ಆ ವಿಗ್ರಹದ ಮುಖಕ್ಕೆರಗಿ ಹಾರಾಡುತ್ತಿರುವ ಚಿಟ್ಟೆಯ ತೆರದಿ ಅಚ್ಚರಿಗೊಳಿಸುವೆ." ’ಜಪದಕಟ್ಟೆ’ ಮಂಜುನಾಥ್ ರ ಪ್ರಾತಿನಿಧಿಕ ಕವನ. ಜಪದಕಟ್ಟೆ, ಒಡೆದ ಮಣೆಗಳು ಇಡಿಯಾಗುವ ತಾಣ.’ ಮಣಿಯ ನೆಣೆಸುತಿವೆ ಎಲ್ಲ ಪೊದೆಗಳು, ಮುನಿಗಳಾಗಿವೆ ತೋಪಿನ ಮರಗಳು.’ ಜಪದ ಕಟ್ಟೆಯಲ್ಲಿ ಮುನಿಗಳಿಲ್ಲದಿದ್ದರೂ ಅವರ ತಪಸ್ಸು ಗೋಚರಿಸುತ್ತಿದೆ. " ಕವಿಗಿರುವ ಮಾಸ್ಟರ್ ಕೀ ಮಾತೊಂದೇ" ಎನ್ನುತ್ತಾರೆ ಪು.ತಿ.ನ. ಮಂಜುನಾಥ್ ರ ಕಾವ್ಯದ ಮಾತು ಮೌನದ ಸೆರಗಿನಲ್ಲಿ ಅಡಗಿರುತ್ತದೆ. ಇವರ ಮಾತು ವಾಚಾಳಿತನವಾಗುವುದಿಲ್ಲ. ರಾಜ ಕಾರಣದ ಭಾಷಣಾವಾಗುವುದಿಲ್ಲ. ಕವಿತೆಯೆಂಬ ಕರಣದಿಂದ ನುಡಿಯ ಆಕೃತಿಯನ್ನು ತಡವಲು ಈ ಕವಿ ಹವಣೆಸುತ್ತಾರೆ. ಗಂಜೀಫಾ ರಘುಪತಿ ಭಟ್ಟಾರ ರೇಖೆಗಳಂತೆ, ’ಮೌನದ ಮಣೇ’ ಯ ಸಾಲುಗಳು  ಕಂಗೊಳಿಸುತ್ತವೆ.
ಲೋಕವಸ್ತು ಕವಿತೆಯೊಳಗೆ ಪ್ರವೇಶಿಸುವುದು ಅಲಂಕಾರದ ಮೂಲಕ. ಮಂಜುನಾಥ್ ಕವನಗಳಲ್ಲಿ ಉಪಮೆ, ರೂಪಕಗಳು ವಿಶೇಷವಾಗಿ ಗಮನ ಸೆಳೇಯುತ್ತವೆ. ಬಲು ಚುರುಕಿನ ಹುಡುಗ ನಂದನ್ ’ಜೇಡದಂತೆ’ ಕಾಣಿಸುತ್ತಾನೆ-"ಕಲ್ಲಿಂದ ಮಲ್ಲಿಗೆಯ್ ಬುಡಕ್ಕೆ, ಮನೆ ಹೊಸಲಿಗೆ ಕಾಣದ ನೂಲೊಂದನೇಯುವನು."(-ನಂದನ’) ’ಹುಲ್ಲೆಸಳು’ ಗಳು ತಂಗಾಳಿಗೆ ನಡಗುತ್ತ ’ಪುಟ್ಟವೃದ್ಧ  ಋಷಿಗಳ ಹಾಗೆ’ ಕಾಣೆಸುತ್ತವೆ. ’ರಂಗೋಲಿ’ಯಲ್ಲಿ ಕವೆ, "ಈಗ ತಾನೆ ರಂಗೋಲಿ ಬಿಟ್ಟಾರೆ ಬೆರಳುಗಳ ಕಂಪನ ನನ್ನೆಡೆಗೆ ಬರಲಿ’ ಎನ್ನುತ್ತಾರೆ. ಕವಿ  ಮಂಜುನಾಥ್ ಸಣ್ಣಾ ಸಂಗತಿಗಳ ಮೂಲಕ ದೊಡ್ಡ ಚಿಂತನೆಗಳತ್ತ್ ಹೊರಳುತ್ತಾರೆ. ಕೊಂಬೆ ಮೇಲೋಡಿ ಹಣ್ಣೆಲೆಗಳ ಉದುರಿಸಿದ’ ಅಳಿಲ’ನ್ನು ನೋಡಿ, "ತಾನೇ ಬರಲಾಗದೆ ಮಾಗಿ ಅಳಿಲನ್ನು ಕಳಿಸಿದೆ" ಎನ್ನುತ್ತಾರೆ. ’ಬಾಳಕ’ ಕವನದ ನಿರೂಪಕನಿಗೆ, ’ಹಸಿ ಮೆಣಸ ಸೀಳಿ ಉಪ್ಪು ಮೆಂತ್ಯವ ತುಂಬಿ ಒಣಗಿಸಿದ ಬಾಳಕ’ ಕರಿದ ’ಮಧ್ಯಾಹ್ನ      ತಂದೆಯ ನೆನಪಾಗುತ್ತದೆ.’ ವಕ್ಷಸ್ಥಲ ಲಹರಿ’ ಎಂಬ ಕವನ ಹೀಗೆ ಆರಂಭವಾಗುತ್ತದೆ-

" ಕಡೆಕಡೆದು ಕಡಗೋಲೆ
ಕಡೆಗೆ ಮಿದುಗೊಂಡಂತೆ
ತಿರುಗು ಬುಗುರಿಯ ನೆತ್ತಿಮೇಲೆ ಚಲನೆ ಕುಸುರೆದ್ದಂತೆ
ಇಲ್ಲ-ತನ್ನೊಳಗೆ ಧ್ಯಾನದಲ್ಲಿದ್ದ ಗಿಡ
ಹೂವಾಗಿ ಸ್ಫುರಿಸಿದಂತೆ".
 ’ತನ್ನೊಳಗೆ ಧ್ಯಾನದಲ್ಲಿದ್ದ ಗಿಡ ಹೂವಾಗಿ ಸ್ಫುರಿಸಿದಂತೆ’ ಎಂಬುದು ಈ ಕವಿಯ ಇಡೀ ಕವನ ಸಂಕಲನಕ್ಕೆ ಅನ್ವಯಿಸುವ ಮಾತು. ಪು.ತಿನ. ಅವರ ’ಯದುಗಿರಿಯ ಮೌನಿವಿಕಾಸ’ ದಂಥ ಸಾರ್ಥಕ ಕವನ ನೀಡುವ ರಸಾನುಭವವನ್ನು ’ಮೌನದ ಮಣಿ’ ನೀಡುತ್ತದೆ.
ಮಂಜುನಾಥ್ ಕಾವ್ಯ ಪ್ರಕಾರದ ಇತಿಮಿತಿಗಳ ಬಗ್ಗೆ ಎಚ್ಚರ ಇರುವ ಕವಿ. ಕಾವ್ಯದ ರೂಪಾಸಾಧ್ಯತೆಯನ್ನು ತನ್ನ ಅನನ್ಯ ತೆಯ ಮೂಲಕ ವಿಸ್ತರಿಸುವ ತಾಕತ್ತು ಈ ಕವಿಯಲ್ಲಿದೆ. ಪು.ತಿ.ನ ಅವರ ನಿಸರ್ಗ ಕವಿತೆಗಳು, ಚೀನೀ ತತ್ವಪದಗಳು, ಜಪಾನೀ ಹಾಯಕುಗಳಿಂದ ಪ್ರೇರಣಿ ಪಡೆದಿರುವ ಈ ಕವಿ ಎಲ್ಲ ಪ್ರಭಾವಗಳನ್ನು ಜೀರ್ಣಿಸಿ ಕೊಂಡು ಬೆಳೆಯಬಲ್ಲರು. ’ ಕವಿರಾಜ ಮಾರ್ಗ’ ದ ಶ್ರೀ ವಿಜಯ ’ ಕಲ್ಪನೋಕ್ತಿ ಕಷ್ಟ’ ಎಂಬ ಕಾವ್ಯದೋಷವನ್ನು ಹೆಸರಿಸುತ್ತಾನೆ. ಕವಿಯ ಆಶಯವೇನೆಂದು ಕಲ್ಪಿಸಿಕೊಳ್ಳಲು ಕಷ್ಟವಾಗುವುದು ’ ಕಲ್ಪನೋಕ್ತಿ ಕಷ್ಟ’. ಮಂಜುನಾಥ್ ರ ’ಮೌನದ ಮಣಿ’ ಕಲ್ಪನೋಕ್ತಿಯ ಸೊಗಸಿನಿಂದ ತುಂಬಿದೆ.

ಮೌನದ ಮಣಿ (ಕವಿತೆಗಳು)
ಲೇ: ಎಸ್. ಮಂಜುನಾಥ್
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು,
ಸಾಗರ
ಮೊದಲ ಮುದ್ರಣ :೧೯೯೯
ಬೆಲೆ ರೂ.೪೦ (ಪುಟಗಳು:೭೨)
ಮುರಳೀಧರ ಉಪಾಧ್ಯ ಹಿರಿಯಡಕ


No comments:

Post a Comment