stat Counter



Showing posts with label ಕವಿತಾ ಅಡೂರು. Show all posts
Showing posts with label ಕವಿತಾ ಅಡೂರು. Show all posts

Wednesday, March 29, 2017

ಸಾಹಿತ್ಯ ಲಹರಿ ವಾಟ್ಸಪ್ ಬಳಗ { AUDIO } -ಕವಿ ಗೋಷ್ಠಿ ಭಾಗ -1

http://chirb.it/3IenF1 _pls clik here to listen Sahityalahari Kannada Whatsap  Memmbers reciting thier poems .Songs by Ramaprasad Kanchodu

Image may contain: 2 people, people sitting and eyeglasses




ಸಾಹಿತ್ಯ ಲಹರಿ ವಾಟ್ಸ್ಯಾಪ್ ಬಳಗದ ಉಡುಪಿ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮದ ಕವಿಗೋಷ್ಟಿಯಲ್ಲಿ (ಈ ಮೊದಲ ಭಾಗದಲ್ಲಿ) ಕವನ ಓದಿದವರ ಹೆಸರುಗಳು ಮತ್ತು ಅವರ ಕವನದ ಶೀರ್ಷಿಕೆ: 
೧- ವರದೇಶ ಹಿರೆಗಂಗೆ - ಈ ಕೃಷ್ಣ 
೨- ಮೋಹನಕುಮಾರ್ (ಅಮೋಘಂಚೈತ್ರಕಾರಂಜಿ) - ಪ್ರೀತಿ, ಪ್ರೀತಿ, ಪ್ರೀತಿ 
೩- ಅಶೋಕ್ ಎನ್. ಕಡೇಶಿವಾಲಯ (ಅನೇಕ) - ನೀನೊಬ್ಬನೇ 
೪- ಮಲ್ಲಿಕಾ ಜೆ. ರೈ - ಕನ್ನಡ 
೫- ರವಿಶಂಕರ ಎ.ಕೆ. (ಅಂಕುರ) - (ಕವಿತೆಗೆ ಹೆಸರಿಲ್ಲ) 
೬- ವಿಶ್ವನಾಥ ಕುಲಾಲ್ - ಭಗವಂತ 
೭- ಹರೀಶ ಸುಲಾಯ ಒಡ್ಡಂಬೆಟ್ಟು - ಕಾಸರಗೋಡಿನ ಕೂಗು 
೮- ಕಾತ್ಯಾಯಿನಿ ಕುಂಜಿಬೆಟ್ಟು - ಒಂದು ಬಿಂದು 

Friday, August 5, 2016

ಕವಿತಾ ಅಡೂರು - ಕಿರುನಗೆಯ ಚೆನ್ನಿಗನೆ

ಕಿರುನಗೆಯ ಅಧರದೊಳು
ಧರಿಸಿರುವ ಚೆನ್ನಿಗನೆ
ಕಣ್ಣ ಬೆಳಕಿನ ಹೊಳಪು
ಯಾರ ಕೊಡುಗೆ?

ಕನಸುಗಳ ಲೋಕದೊಳು
ಜಗವಳೆವ ಬಯಕೆಯೇ?
ನಿನ್ನ ಮೋಹಕ ನಿಲುವು
ದೇವತೆಗೂ ಮುಗಿಲು!

ನಲ್ನುಡಿಯನೊಂದು
ಉಸುರಲಿದೆ ಕಿವಿಯೊಳು
ಬಳಿಸಾರಿ ಬರಲು,
ಭಯ; ನಿನ್ನ ಕೈಗಳದು!!

ನಿನ್ನ ಮಾತಿನ ಸ್ವರಕೆ
ತಾಳ ತಪ್ಪಿದೆ ಹೃದಯ,
ಕಾಲಗೆಜ್ಜೆಗೂ ಪುಳಕ
ಬಳೆಗಳಿಗೂ ಲಜ್ಜೆ!!

ಮಲ್ಲಿಗೆಯ ಮುಗುಳಿಗೂ
ನಿನ್ನ ಉಸಿರಿನ ನೆನಪು;
ಮುಂಗುರುಳ ಮುಗಿಲೊಳಗೆ
ಹನಿಯಾದ ಒಲವು!!
 
ಒಂಟಿಯಾಗಿಹೆ ನಾನು
ಮನದ ಮಹಲಿನ ಒಳಗೆ;
ಮೌನ ಮಾತಿಗೆ ಕಾದು
ಬಿಸಿಯಾದ ಉಸಿರು!

ದೇವತೆಯು ನೀನಹುದು
ಆರಾಧಿಸುವೆನೆಂದೆಂದು.
ಬದುಕ ಪಥದೊಳಗೆ
ನೀನು ನೆರಳಾಗಿರು...
ನನ್ನ ಒಲವಾಗಿರು.
*ಕವಿತಾ ಅಡೂರು*

Sunday, July 31, 2016

ಡಿ. ವಿ. ಜಿ - ನರಜಾತಿಯೊಳಗೆಂತು ಬಂದುದೀ ವೈಷಮ್ಯ ?

ಒಂದೆ ಗಗನವ ಕಾಣುತೊಂದೆ
ನೆಲವನು ತುಳಿಯುತ
ಒಂದೆ ಧಾನ್ಯವನುಣ್ಣುತ
ಒಂದೆ ನೀರ್ಗುಡಿದು
ಒಂದೆ ಗಾಳಿಯನುಸಿರ್ವ
ನರಜಾತಿಯೊಳಗೆಂತು
ಬಂದುದೀ ವೈಷಮ್ಯ?
-ಮಂಕುತಿಮ್ಮ

(ಜಗದೊಳಗಿರುವ ಮನುಜರೆಲ್ಲರೂ ಕಾಣುವ ಆಗಸ ಒಂದೇ, ಇನ್ನೊಂದು ಆಗಸವಿಲ್ಲ.
ತುಳಿಯುವ ನೆಲವೂ ಒಂದೇ, ಇನ್ನೊಂದು ಭೂಮಿಯಿಲ್ಲ,
ತಿನ್ನುವ ಆಹಾರ ಧಾನ್ಯಗಳೂ ಒಂದೇ ರೀತಿಯದ್ದು, ಹಾಗೆಯೇ ಕುಡಿವ ನೀರು, ಉಸಿರಾಡುವ ಗಾಳಿಯೂ ಒಂದೇ.
ಹೀಗಿದ್ದೂ ಮನುಷ್ಯರೊಳಗೆ ದ್ವೇಷ,ಅಸೂಯೆ,ಸಿಟ್ಟು ಇಂತಹ ಭಿನ್ನತೆ ಬಂದುದಾದರು ಹೇಗೆ? ನಮ್ಮೆಲ್ಲರ ಜೀವನಕ್ರಮ, ದೃಷ್ಟಿಕೋನ, ಆಚಾರ-ವಿಚಾರಗಳಲ್ಲಿ ವಿಭಿನ್ನತೆ ಇದೆ. ಆದರೆ ಅದುವೇ ನಮ್ಮ ವೈಷಮ್ಯ ಕ್ಕೆ ಕಾರಣವಾಗ ಬಾರದು. ಪರಸ್ಪರ ಗೌರವಿಸುತ್ತಾ, ಇತರರ ಅಭಿಪ್ರಾಯಗಳನ್ನು ಆಲಿಸಿ; ಅದನ್ನು ಪುರಸ್ಕರಿಸುತ್ತಾ ಪ್ರಜ್ಞಾವಂತರಾಗಿ ಬದುಕಿದರೆ, ಸಹಬಾಳ್ವೆ ನಡೆಸಿದರೆ ನಾವೆಲ್ಲರೂ ಶಾಂತಿಯ ಹರಿಕಾರರಾಗುತ್ತೇವೆ. ಜೀವನ ಅರ್ಥಪೂರ್ಣವಾಗುತ್ತದೆ.
{  ಕವಿತಾ ಅಡೂರು ಅವರ  Facebook ನಿಂದ }

Sunday, July 17, 2016

ಡಿ. ವಿ. ಜಿ - ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ?


ತಂದೆ ಮಕ್ಕಳಿಗೆ
ಹದಗೆಟ್ಟುದನು ಕಾಣೆಯಾ?
ಹೊಂದಿರುವರವರ್
ಅಹಂತೆಯು ಮೊಳೆಯುವನಕ
ತಂದೆಯಾರ್ ಮಕ್ಕಳಾರ್
ನಾನೆಂಬುದೆದ್ದುನಿಲೆ?
ಬಂಧ ಮುರಿವುದು ಬಳಿಕ
-ಮಂಕುತಿಮ್ಮ
*ನಲ್ಬೆಳಗು*-ಕವಿತಾ ಅಡೂರು:
(ತಂದೆ ಮಕ್ಕಳ ನಡುವಿನ ಸಂಬಂಧ ಹಾಳಾಗಿರುವುದನ್ನು, ಅವರುಗಳು ಬದ್ಧ ದ್ವೇಷಿಗಳಾಗಿರುವುದನ್ನು ನಾವು ನಮ್ಮ ಪರಿಸರದಲ್ಲಿ ಕಾಣುತ್ತೇವೆ. ನಾನು ಯಾರಿಗಿಂತಲೂ ಕಡಿಮೆ ಇಲ್ಲ, ಎಲ್ಲವು ನಾನು ಹೇಳಿದ ಹಾಗೆ ನಡೆಯ ಬೇಕು, ನಾನೇ ಬುದ್ಧಿವಂತ, ಎಲ್ಲವೂ ನನ್ನಿಂದ, ನಾನು ಯಾರ ಮಾತಿಗೂ ತಲೆಬಾಗುವುದಿಲ್ಲ ಹೀಗೆ *ನಾನು-ನಾನು* ಎಂಬ ಅಹಂಕಾರದ ಭಾವ ; ಸಂಬಂಧಗಳ ನಡುವೆ ಮೊಳೆತಾಗ ಪ್ರೀತಿ-ಮಮತೆ ಸಾಯುತ್ತದೆ. ತಂದೆ ಯಾರೋ,ಮಗ ಯಾರೋ, ಎಂಬಂತೆ ವ್ಯವಹರಿಸುತ್ತಾರೆ. ಆಜನ್ಮ ಶತ್ರುಗಳಂತೆ ಕಾದಾಡುತ್ತಾರೆ. ಎಲ್ಲಾ ಸಂಬಂಧಗಳ ನಡುವಿನ ಬಿರುಕಿಗೆ ಇದೇ ಅಹಂಭಾವ ಕಾರಣವಾಗುತ್ತದೆ. ಹಾಗಾಗಿ ಬಿರುನುಡಿಗಳ ಆಡುವ ಮೊದಲು, ಕಾದಾಟಕ್ಕಿಳಿವ ಮೊದಲು ಒಂದು ಕ್ಷಣ ಯೋಚಿಸೋಣ. ನಮ್ಮ ಬದುಕಿಗೆ ಆ ವ್ಯಕ್ತಿ ಮುಖ್ಯವೋ ಅಥವಾ ನಮ್ಮ ತನದ ಸ್ಥಾಪನೆ ಮುಖ್ಯವೋ?

{ ಕವಿತಾ ಅಡೂರು ಅವರ Face Book  ನಿಂದ }

Thursday, June 30, 2016

ಡಿ. ವಿ. ಜಿ --" ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಿಲ್ಲ "

ಡಿ.ವಿ.ಜಿ ಬೆಳಗು:-
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ
ಬೆರಕೆಯೆಲ್ಲಮರ್ಧ ನಾರೀಶನಂತೆ
ನರತೆಯಣು ನಾರಿಯಲಿ
ನಾರೀತ್ವ ನರನೊಳಣು
ತಿರುಚಿತಿರುವುದು ಮನವ
ಮಂಕುತಿಮ್ಮ

(ಭೂಮಿಯೊಳಗೆ ಪರಿಪೂರ್ಣ ಗಂಡು ಮತ್ತು ಪರಿಪೂರ್ಣ ಹೆಣ್ಣು ಎಂಬವರಿಲ್ಲ. ಇಬ್ಬರೂ ಬೆರಕೆಯಾಗಿರುವ ಸ್ವಭಾವವನ್ನು ಹೊಂದಿರುವರು. ಎಲ್ಲರೂ ಅರ್ಧನಾರೀಶ್ವರರಂತೆ. ಪುರುಷ ಸ್ವಭಾವ ಸ್ತ್ರೀಯರಲ್ಲೂ, ಸ್ತ್ರೀ ಸ್ವಭಾವ ಪುರುಷನಲ್ಲೂ ಸಹಜವಾಗಿ ಇದ್ದೇ ಇರುತ್ತದೆ. ಹೀಗಿರುವುದರಿಂದಲೇ ಅದು ಮನಸ್ಸನ್ನು ಮಥಿಸುತ್ತಾ, ತಿರುಚುತ್ತಾ ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಅಪ್ಪನೊಳಗೊಬ್ಬಾಕೆ ಅಮ್ಮನಿರುವುದು. ತಾಯಿಯ ವಾತ್ಸಲ್ಯವನ್ನಾತ ಧಾರೆಯೆರೆಯುವುದು. ಅಮ್ಮನೊಳಗೊಬ್ಬ ಅಪ್ಪನಿರುವುದು. ಬದುಕನ್ನು ಧೈರ್ಯದಿಂದ ಆಕೆ ಎದುರಿಸಿ ಮಕ್ಕಳನ್ನು ಕಾಪಾಡುವುದು. ಪರಿಸ್ಥಿತಿ ಗೆ ಅನುಗುಣವಾಗಿ ನಮ್ಮೊಳಗಿರುವ ಈ ಗುಣ ಜಾಗೃತವಾಗುತ್ತದೆ. ಪ್ರಕಟಗೊಳ್ಳುತ್ತದೆ.


{ ಕವಿತಾ ಅಡೂರು ಅವರ Facebook ನಿಂದ }