stat Counter



Friday, July 10, 2020

ಮುರಳೀಧರ ಉಪಾಧ್ಯ ಹಿರಿಯಡಕ - ಕೋಟ ಮಹಾ ಜಗತ್ತು {1985 - ಅನುವಾದ -ಶಿವರಾಮ ಕಾರಂತ }

ಡಾ| ಆರ್.ಎಲ್.ಕಪೂರ್ ಮತ್ತು ಡಾ| ಜಿ.ಎಂ. ಕಾಸ್ಟ್ರೆಯರ್ಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೋಟದ ಜನರ ಮಾನಸಿಕ ಆರೋಗ್ಯದ ಕುರಿತು ನ್ಮಡೆಸಿದ ಕ್ಷೇತ್ರ  ಕಾರ್ಯ ಸಂಶೋಧನೆಯ್ ಫಲ್ ಈ ಗ್ರಂಥ. ಈ ಸಂಶೋಧನೆ ೧೯೨೦-೭೩ರ ನಡುವೆ ಎಡಿನ್ ಬರೊಫೌಂಡೇಶನ್, ಬೆಂಗಳೂರಿನ ನಿಮ್ಹಾನ್ಸ್ ಮತ್ತಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹಾಯದಿಂದ ನಡೆಯಿತು. ಈ ಕ್ಷೇತ್ರಕಾರ್ಯ ಸಂಶೋಧನೆಯ ಅವಧಿಯಲ್ಲಿ ಕೋಟ ಗ್ರಾಮದ ಜನಸಂಖ್ಯೆ ೯೧೧೧ ಇತ್ತು; ಅವರಲ್ಲಿ ೩೭% ಓದುಬರಹ ಬಲ್ಲವರಾಗಿದ್ದರು. ಮೊಗೇರ, ಬಂಟ, ಬ್ರಾಹ್ಮಣ ಜಾತಿಗಳ ೧೨೯೯ ಜನರನ್ನು ಈ ಸಂಶೋಧನೆಗಾಗಿ ಸಂದರ್ಶಿಸಲಾಯಿತು. ನೂರತೊಂಬತ್ತು ಪುಟಗಳ ಪುಟ್ಟ ಗ್ರಂಥ  ದ ಹದಿಮೂರು ಅಧ್ಯಾಯಗಳಲ್ಲಿ ಸಂಶೋಧಕರು ತಮ್ಮ ಕ್ಷೇತ್ರ ಕಾರ್ಯ, ಯೋಜನೆ ಹಾಗೂ ಸಂಶೋಧನೆಯ ಫಲಿತಾಂಶಗಳನ್ನು ಸಂಖ್ಯಾ ಶಾಸ್ತ್ರೀಯ ವಿಶ್ಲೇಷಣೆಯೊಂದಿಗೆ ಮಂಡಿಸಿದ್ದಾರೆ.
ಈ ಸಂಶೋಧನೆಯಿಂದ ೩೭% ಗಂಡಸರಲ್ಲಿ ೪೦% ಹೆಂಗಸರಲ್ಲಿ ಒಂದೋ ಅದಕ್ಕಿಂತ ಹೆಚ್ಚಿಗೋ ಮನೋರೋಗದ ಚಿಹ್ನೆಗಳಿದ್ದುದು ಕಂಡು ಬಂತು. ಗಂಡಸರಲ್ಲಿ ಮಾನಸಿಕ ಶಾರೀರಕ ರೋಗ ಚಿಹ್ನೆ ಗಳನ್ನು ಹೆಚ್ಚಿಸಲು ಮೀರಿದ ವಯಸ್ಸು, ವಿದ್ಯೆ ಇಲ್ಲದ್ದರಿಂದ ದೊರೆತ ಕೀಳು ಸ್ಥಾನ, ಬಡತನ ದೆಸೆಯಿಂದ ಬಂದ ಕೀಳು  ಸ್ಥಾನ,   ಕಾರಣವಾಗಿದ್ದುವು. ಹೆಂಗಸರಲ್ಲಿ ವೈಧವ್ಯ ಮತ್ತು   ಪಿತೃಪ್ರಧಾನ ವಾಸ ಸ್ಥಾನದ ಬದಲಾವಣೆಗಳು ರೋಗ ಚಿಹ್ನೆಗಳನ್ನು ಹೆಚ್ಚಿಸಿದ್ದುವು. ಮೈ ಮೇಲೆ ಬರುವ ವಿದ್ಯಮಾನವನ್ನು ಕುರಿತು ಈ ಸ೦ಶೋಧಕರು, "ಹೀಗೆ ನಿರಿಚ್ಚೆ ಯಿ೦ದ ಬರುವ ಪರಾಧೀನತೆ ಎಂಬುದು ಒಂದು ಬಗೆಯ "ಹಿಸ್ಟೀರಿಯ"ದ ವಿದ್ಯಮಾನ. ಆದರೆ ಭೂತ, ಪ್ರೇತಗಳನ್ನು ನಂಬುವ ಸಂಸ್ಕೃತಿಯ ಜನರಲ್ಲಿ ಇಂಥ ಬೇನೆಯಿಂದ ಮನ್ನಣೆಗಳಿಸುವುದೂ ಅದರಿಂದಲೇ  ಜೀವನ ಸಾಗಿಸುವುದೂ ಸಾಧ್ಯವಾಗಿದೆ. ಇಂಥ ನಿರಿಚ್ಛಾ ಪರಾಧೀನತೆ ಯಾವುದೋ ಅಂತ:ಕಲಹದ ಫಲವಿರಬೇಕು" ಎನ್ನುತ್ತಾರೆ.

ಚಿಕಿತ್ಸಾ ವ್ಯವಸಾಯಿಗಳು ಎಂಬ ಅಧ್ಯಾಯದಲ್ಲಿ ಲೇಖಕರು ಮಂತ್ರವಾದಿಗಳನ್ನು ಕುರಿತು ಹೇಳುವ ಈ ಮಾತುಗಳು ಗಮನಾರ್ಹ " ವೈದ್ಯಕೀಯ ಚಿಕತ್ಸೆಯ ವಿಚಾರದಲ್ಲಿ ಈ ಮಂತ್ರವಾದಿಗಳೂ ಅವರ ಗಿರಾಕಿಗಳೂ ತಮ್ಮೆಲ್ಲ ಸಂಕಟಗಳಿಗೆ ಬಾಹ್ಯ  ಕಾರಣಗಳಿವೆ ಎಂದು ನಂಬುವಂತೆ, ದೈಹಿಕ ಬೇನೆಗಳೂ ಕಾರಣವಾಗಬಹುದು ಎಂಬುದನ್ನು ಒಪ್ಪುತ್ತಾರೆ. ಮ೦ತ್ರವಾದಿ ಸಹ ತನ್ನ ಗಿರಾಕಿಗಳು ಅಸ್ಪತ್ರೆಗೆ ಹೋಗುವುದರಿಂದ ತನ್ನ ವ್ಯವಸಾಯಕ್ಕೆ ಒಂದು ಸ್ಪರ್ಧೆ ಎಂದು ತಿಳಿಯುವುದಿಲ್ಲ. ಅದರಿಂದಾಗುವ ಪ್ರಯೋಜನ ಸಿಗಲಿ ಎಂದೇ  ಹೇಳುತ್ತಾನೆ." ಹೆಂಗಸರು ಮ೦ತ್ರವಾದಿಗಳ ಬದಲಿಗೆ ಆಧುನಿಕ ಡಾಕ್ಟರುಗಳ ಬಳ ಹೋಗುವುದನ್ನು ಸಂಶೋಧಕರು ಗಮನಿಸಿದ್ದಾರೆ.

ಮಾನಸಿಕ ಅಸ್ವಾಸ್ಥ್ಯಗಳ ವಿಷಯದಲ್ಲಿ ಜನರಿಗೆ ಪಾಶ್ಚಾತ್ಯ ವೈದ್ಯರು ಪ್ರಥಮ ಆಕರ್ಷಣೆಯಲ್ಲ. ಆದರೆ ಸಾಮಾನ್ಯ ಚಿಕಿತ್ಸೆಯ ಸಲಹೆ  ಕೇಳುವ ಮಟ್ಟಿಗೆ ಅವರೇ ಜನಪ್ರಿಯರು. ಕೇವಲ ಮಾನಸಿಕ ರೋಗಚಿಹ್ನೆ ಉಳ್ಳವರು ಸಲಹೆ ಕೇಳಲು ಬಯಸುವುದು ಕಡಿಮೆ. ಮೈಮೇಲೆ ಬರುವಂಥ ರೋಗಚಿಹ್ನೆ ಗೆ ಡಾಕ್ಟರು ಗಳ  ಸಲಹೆಯೇ ಬೇಡ ಎಮ್ದು ಅಲಕ್ಷಿಸುತ್ತಾರೆ-ಇವು ಸ೦ಶೋಧಕರು ಗಮನಿಸಿರುವ ಇತರಮುಖ್ಯ ವಿಚಾರಗಳು.
ಈ ಗ್ರ೦ಥದ ಅ೦ತ್ಯದಲ್ಲಿರುವ "ಅಭಿವೃದ್ಧಿ ಪರ  ರಾಷ್ಟ್ರಗಳಲ್ಲಿ ಚಿಕಿತ್ಸೆಯ ಆವಶ್ಯಕತೆಯನ್ನು ಇದಿರಿಸುವ ಸಮಸ್ಯೆ" ಎಂಬ ಅಧ್ಯಾಯ ಗ್ರಾಮೀಣ ಆರೋಗ್ಯ ಯೋಜನೆ ರೂಪಿಸುವವರು ಅಧ್ಯಯನ ಮಾಡಲೇಬೇಕಾದ ಮುಖ್ಯ ವಿಷಯಗಳನ್ನೊಳಗೊ೦ಡಿದೆ. ಡಾ| ಕಾರ್ಸ್ಟೆಯರ್ಸ್ ಮತ್ತು ಡಾ| ರವಿ ಎಲ್. ಕಪೂರ್ ಅವರು ಹೇಳುವಂತೆ "ನಮ್ಮ ಭಾರತ ದೇಶದಲ್ಲಿ ಸಹ ಮನೋರೋಗ ಚಿಕಿತ್ಸಕರು, ಅವರ ಸಹಾಯಕರು ಎಂದರೆ ಡಾಕ್ಟರರು, ದಾದಿಯರು, ಸಮಾಜಸೇವಕರು, ಮನ:ಶಾಸ್ತ್ರ ಜ್ಜರು, ಇವರ ಬೆಂಬಲಕ್ಕೆ ಸಿಗುವ ಸಮಾಜದ ಸ್ಥಳೀಕರು ಮಾಡಬಹುದಾದ ಕೆಲಸ ಅನಾದಿಕಾಲದಿಂದ ಹಳ್ಳಿಗಾಡಿನಲ್ಲಿ ಈ ತೆರನ ಚಿಕಿತ್ಸೆ ನೀಡುತ್ತ ಬಂದವರೊಡನೆ ಸ್ಪರ್ಧಿಸುವುದಲ್ಲ; ಅವರೆಲ್ಲರಿಗೂ ಬೆಂಬಲ ನೀಡಬೇಕಾದದ್ದು, ನಮ್ಮ  ಅಧ್ಯಯನದಲ್ಲಿ ತಿಳಿದುಬಂದ ವಿಷಯವೆಂದರೆ-ನಮ್ಮ ಹಳ್ಳಿಯವರು ಸಾಂಪ್ರದಾಯಿಕ ಚಿಕಿತ್ಸೆಕರನ್ನು ನಂಬುತ್ತಾರೆ. ಆಧುನಿಕ ಜ್ಜಾನದಿಂದ ತಮಗೆ ಹೆಚ್ಚಿನ ಪ್ರಯೋಜನ ಸಿಗುವುದಾದರೆ ಅದನ್ನೂ ಅವರು ಪಡೇಯಲು ಸಿದ್ಧರಿದ್ದಾರೆ."
ಆನ್ವಯಿಕ ಮನೋವಿಜ್ಜಾನಕ್ಕೆ ಒಂದು ಅಸಾಮಾನ್ಯ ಕೊಡುಗೆ. ವ್ಯಕ್ತಿಯನ್ನು ಒಂಟಿ ಎಂದು ಪರಿಗಣಿಸದೆ ಸಾಮಾಜಿಕ, ಆರ್ಥಿಕ ಒತ್ತಡಗಳಿಗೆ ಈಡಾಗುವ ಸಮಾಜಜೀವಿ ಎಂದು ನಡೆಸಿದ ಈ ಸಂಶೋಧನೆಯ ಮಹತ್ವವನ್ನು ವಿದೇಶಿ ವಿದ್ವಾಂಸರು ಈಗಾಗಲೇ ಮನಗಂಡಿದ್ದಾರೆ. "ಟೈಮ್ಸ್ ಆಫ್ ಇಂಡಿಯೋ" ಈ ಗ್ರಂಥದ ಮಹತ್ವವನ್ನು ಕುರಿತು ಒಂದು ಸಂಪಾದಕೀಯವನ್ನು ಬರೆದಿತ್ತು. ಈ ಸಂಪ್ರಬಂಧದ ವಿವರಗಳನ್ನು ಜನರು ತಿಳಿಯಬೇಕು ಎಂಬ ಉದ್ದೇಶದಿಂದ ಡಾ| ಶಿವರಾಮ ಕಾರಂತರು ಇದನ್ನು
 ಭಾಷಾಂತರ ಎಂದು  ಗೊತ್ತಾಗದಷ್ಟು ಚೆನ್ನಾಗಿ ಭಾಷಾಂತರಿಸಿದ್ದಾರೆ. ಕನ್ನಡ ಗೊತ್ತಿದ್ದರೂ ಕನ್ನಡದಲ್ಲಿ ಒಂದೇ ಒಂದು ವೈಜ್ಜಾನಿಕ ಲೇಖನ ಬರೆಯದ ವಿಜ್ಜಾನಿಗಳು,  ಡಾಕ್ಟರ್ ಗಳು ಕಾರಂತರ ಕಾಯಕ, ಉತ್ಸಾಹಗಳಿಂದ ಸ್ಪೂರ್ತಿ ಪಡೆಯಬೇಕು.
ಮುರಳೀಧರ ಉಪಾಧ್ಯಯ
ಕೋಟ ಮಹಾ ಜಗತ್ತು
ಗ್ರಾಮೀಣ ಮನಸ್ಸಿನ ಆಘಾತಗಳು
ಮೂಲ: ಡಾ| ಜಿ.ಎಂ.ಕಾರ್ಸ್ಟೆಯರ್ಸ್ ಮತ್ತು
ಡಾ|ಆರ್. ಎಲ್. ಕಪೂರ್.
ಅನು:ಶಿವರಾಮ ಕಾರಂತ.
ಪ್ರ: ಅಕ್ಷರ ಪ್ರಕಾಶನ, ಸಾಗರ-೫೭೭೪೦೧.
ಮೊದಲ ಮುದ್ರಣ:೧೯೮೫. ಬೆಲೆ:ರೂ.೨೫.೦೦

Kayyara Kinhanna Rai ---ಹಿರಿಯಡಕ ರಾಮರಾಯ ಮಲ್ಯರು

Thursday, July 9, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎಸ್. ವೆಂಕಟರಾಮ್ ಅವರ - " ದುಡಿಯುವವರ ದನಿ "{ 1983 }


ದಿ| ಎಸ್. ವೆಂಕಟರಾಮ್ ಕರ್ನಾಟಾಕದ ಸ್ವೋಪಜ್ಜ ಧೀಮಂತರಲ್ಲೊಬ್ಬರು; ಸಮಾಜವಾದಿ, ಕಾರ್ಮಿಕ ನಾಯಕ, ರಾಜಕಾರಣೆ, ಎಂ.ಎಲ್.ಸಿ. ಆಗಿದ್ದರು ಅವರು ತನ್ನ್ ಐವತ್ತಾರನೆಯ ವಯಸ್ಸಿನಲ್ಲಿ ೧೯೮೧ರ್ ಜನ ವರಿಯಲ್ಲಿ ನಿಧನರಾದಾಗ ಡಾ|ಯು. ಆರ್. ಅನಂತಮೂರ್ತಿ ಹೀಗೆಂದರು- "ಮಾರ್ಕ್ಸ್ ಮತ್ತು ಲೋಹಿಯಾ ಇಬ್ಬರಿಂದಲೂ ಇವನಷ್ಟು ಕಲಿತವರು ನಮ್ಮಲ್ಲಿ ವಿರಳವೇ ಎನ್ನಬೇಕು." ಈ ಗ್ರಂಥದಲ್ಲಿ ದಿ| ವೆಂಕಟರಾಮ್ ಅವರ ಹದಿನಾಲ್ಕು ರಾಜಕೀಯ,ಶೈಕ್ಷಣಿಕ, ಸಾಹಿತ್ಯಕ್ ಲೇಖನಗಳು ಮತ್ತು ಒಂದು ಪ್ರವಾಸ ಕಥನ ಇವೆ.
’ಭಗವದ್ಗೀತೆ ಹಾಗೂ ಅಪರಾಧ ಮತ್ತು ಶಿಕ್ಷೆ’-ಈ ಗ್ರಂಥದ ಉತ್ತಮ್ ಲೇಖನಗಳಲ್ಲೊಂದು .ಇದರಲ್ಲಿ ಕೃಷ್ಣನ  ಭಗವದ್ಗೀತೆ ಮತ್ತು ರಷ್ಯನ್ ಕಾದಂಬರಿಕಾರ ದಾಸ್ತೊವಸ್ಕಿಯ ’ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ’ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ತೌಲನಿಕ ವಿಮರ್ಶೆ  ಇದೆ. "ಭಗವದ್ಗೀತೆ   ಸದುದ್ದೇಶಕ್ಕಾಗಿ ಯುದ್ದದ-ಸಾಮೂಹಿಕ ಕೊಲೆಯ ನೈತಿಕತೆಯನ್ನು ಪ್ರಶ್ನಿಸುವ ಒಳಗುದಿಯಿಂದ ಆರಂಭವಾಗಿ ಅಂಥ ನೈತಿಕತೆಯನ್ನು ಒಪ್ಪತೊಡಗುವುದರಲ್ಲಿ ಪರ್ಯವಸಾನವಾಗಿದೆ. ’ಅಪರಾಧ ಮತ್ತು ಶಿಕ್ಷೆ’ ಸದುದ್ದೇಶಕ್ಕಾಗಿ ಕೊಲೆಯ ನೈತಿಕತೆಯನ್ನು ಒಪ್ಪತೊಡಗುವುದರಿಂದ ಆರಂಭವಾಘಿ ಅದನ್ನು ತಿರಸ್ಕರಿಸುವ ಧರ್ಮದಲ್ಲಿ  ಪರ್ಯವಸಾನವಾಗುತ್ತದೆ" ಎನ್ನುವುದು ವೆಂಕಟರಾಮ್ ರ ಅಭಿಮತ. ಪ್ರತಿಕ್ರಿಯೆಗಳನ್ನು ಆಹ್ವಾನಿಸುವ, ಚರ್ಚೆಗೆ ಯೋಗ್ಯವಾದ ಲೇಖನವಿದು.
ವೆಂಕಟರಾಮ್ ನಮ್ಮ ಶಿಕ್ಷಣ ಪದ್ಧತಿಯ ಅಸಂಗತತೆಯ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದರೆಂಬುದಕ್ಕೆ ’ಶಿಕ್ಷಣ ಪದ್ಧತಿ ಒಂದು ವಿವೇಚನೆ’, ’ನಮ್ಮ ಪಠ್ಯಪುಸ್ತಕಗಳು-ಈ ಲೇಖನಗಳು ಋಜುವಾತು ನೀಡುತ್ತವೆ. ’ನಮ್ಮ ಪಠ್ಯ  ಪುಸ್ತಕಗಳು’- ಅಧ್ಯಾಪಕರೆಲ್ಲ ಓದಬೇಕಾದ ಲೇಖನ. ಅರೆ ಇಂಗ್ಲೀಷ ಕಲಿತ ಶಿಕ್ಷಕರು, ಅಧಿಕಾರಿಗಳು, ರಾಜಕಾರಣೆಗಳನ್ನು        ವಿಡಂಬಿಸುವ  ಅವರ ಅಭಿಪ್ರಾಯದಲ್ಲಿ, "ಭಾರತೀಯ ಜನ   ಭಾಷೆಯಲ್ಲಿ ಶಿಕ್ಷಣ, ಭಾರತೀಯ ಜನ ತಂತ್ರದ ವಿಕಾಸದ ಪ್ರಥಮ ಷರತ್ತು"  ವೆಂಕಟರಾಮ್ , ಲ್ಯಾಟಿನ್ ಅಮೇರಿಕದ ಫಾಲೊ ಫ್ರೆಯರೆಯ ವಿಮೋಚನೆವಾದಿ ಶಿಕ್ಷಣ ಕಲ್ಪನೆಯಿಂದ ಪ್ರಭಾವಿತರಾಗಿದ್ದರು.
ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸುವ ವೆಂಕಟರಾಮ್ ರ ಅಭಿಪ್ರಾಯದಲ್ಲಿ ’ಸ್ವಾಯತ್ತತೆ’ ದೆಹಲಿ ಸಾರೋಟಿಗೆ ಎದುರಾಡುವ  ಸಿಂಹವಲ್ಲ, ಹೊಡಬಹುದಾದ ಕುದುರೆ." ’ಕರ್ನಾಟಕದ ರೈತ ಕಾರ್ಮಿಕರು’, ’ಭೂಮಿತಿ ಏಕೆ?’-ಈ ಲೇಖನಗಳಲ್ಲಿ ಅವರು ಕರ್ನಾಟಕದ ಕೃಷಿಕಾರ್ಮಿಕರ ಸಮಸ್ಯೆಯನ್ನು ಅಂಕೆ-ಸಂಖ್ಯೆಕೆಗಳ ಉದಾಹರಣೆ ನೀಡಿ,  ಚರ್ಚಿಸುತ್ತಾರೆ, ಸ್ಪಷ್ಟ ಕಾರ್ಯಕ್ರಮಗಳನ್ನು ಸೂಚಿಸುತ್ತಾರೆ. "ಸಂಘಟನೆಯನ್ನು  ಕುರಿತು ’ ಲೇಖನದಲ್ಲಿ ಸಮಾಜವಾದಿ ಕಾರ್ಯಕರ್ತರಿಗೆ ಮಾರ್ಗದರ್ಶಕ ಸಂಹಿತೆಯೊಂದನ್ನು ನೀಡುವ ವೆಂಕಟರಾಮ್, ಜನತಾಂತ್ರಿಕ ಚರ್ಚೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಪರಸ್ಪರ ಬೈದಾಡುವ ಸಮಾಜವಾದಿಗಳ    ವರ್ತನೆಯನ್ನು ಖಂಡಿಸುತ್ತಾರೆ.
ರಷ್ಯ ಅಮೇರಿಕ, ಸ್ವೈಟ್ಸರ್ಲೆಂಡ್ ಗಳಲ್ಲಿ ವೆಂಕಟರಾಮ್ ಮಾಡಿದ ಪ್ರವಾಸ ಕಥನ ’ಪ್ರದಕ್ಷಿಣೆ ಎಂಬ ಗ್ರಂಥದಲ್ಲಿ ಈ ಮೊದಲು ಪ್ರಕಟವಾಗಿದೆ. ಈ ಗ್ರಂಥದ ’ಯುಗೋಸ್ಲಾವಿಯಾ ಪ್ರವಾಸ’ ನಲುವತ್ತೆಂಟು ಪುಟಗಳ ದೀರ್ಘ ಲೇಖನ .ವೆಂಕಟರಾಂ ೧೯೮೦ರಲ್ಲಿ ಅಂತಾರಾಷ್ಟೀಯ ಕಾರ್ಮಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಯುಗೊಸ್ಮಾವಿಯಾಕ್ಕೆ ಹೋಗಿದ್ದರು ತೌಲನಿಕ ದೃಷ್ಟಿ, ತಿಳಿ ಹಾಸ್ಯ, ದಿನಚರಿಯ ತಂತ್ರದಲ್ಲಿರುವ ಈ ಪ್ರವಾಸ ಕಥನದ ವೈಶಿಷ್ಟ್ಯಗಳು. ಯುಗೊಸ್ಲಾವಿಯಾದ ಮುದ್ದಾದ ಮಕ್ಕಳನ್ನು ಕಾರ್ಮಿಕರ ಸುಸ್ಥಿತಿಯ  ನೋಡುವಾಗ, ವೆಂಕಟರಾಮ್ ಇಂಡಿಯಾದ ಮಕ್ಕಳ, ಕಾರ್ಮಿಕರ ದುಸ್ಥಿತಿಯನ್ನು ನೆನೆಪಿಸಿಕೊಳ್ಳುತ್ತಾರೆ. ವಿಯೆನ್ನಾದಲ್ಲಿ ವೆಂಕಟರಾಮ್ ಗೆಳೆಯ ಪೀಟರ್ ನೊಡನೆ ಕೇಳುವ  ಪ್ರಶ್ನೆಗಳು ಅವರ ಜಿಜ್ಜಾಸೆಗೆ ಉದಾಹರಣಿ -"ಯಾಕೆ  ಆಸ್ಟ್ರಿಯಾ ಮನೋ ವಿಜ್ಜಾನದ ತವರುಮನೆಯಾಯಿತು? ಯಾಕೆ  ಕಾಫ್ಕ  ಅಂತಹವನು  ಇಲ್ಲಿ ಆಗಿ ಹೋದ? ಯಾಕೆ ಫ್ರೈಡ್, ಆಡ್ಲ್ ರ್, ಯುಂಗ್ ನಿಮ್ಮವರು?" ರಾಮ ಕೃಷ್ಣ ಪರ ಮಹಂಸ, ಜೆ. ಕೃಷ್ಣ ಮೂರ್ತಿ, ಭಗವದ್ಗೀತೆ  ಓದಿಕೊಂಡಿರುವ ದುಭಾಷಿ  ರಂಕಾ ಮತ್ತು ಪೀಟರ್ ನ್ ದತ್ತು ಪುತ್ರಿ   ರೋಜಿ ನೆನಪಲ್ಲಿ ಉಳಿಯುತ್ತಾರೆ. ದಕ್ಷಿಣ ಕನ್ನಡದ ಬೈಂದೂರಿನ ಅನಾಥ ತರುಣಿ ರೋಜಿ, ವಿಯೆನ್ನಾದ ಪತ್ರಕರ್ತ ಪೀಟರನ ದತ್ತು ಮಗಳಾಗಿರುವುದನ್ನು ಕಂಡು ವೆಂಕಟರಾಂ, ಬದುಕಿನ ’ಅಚ್ಚರಿಯ   ಅಂಶ’ವನ್ನು ಕುರಿತು ಯೋಚಿಸುತ್ತಾರೆ. ’ಯುಗೊಸ್ಲಾವಿಯಾ ಪ್ರವಾಸ’ ಒಂದು ಯೋಗ್ಯ ಪ್ರವಾಸ ಕಥನ.
’ಸಾಹಿತ್ಯದಲ್ಲಿ ದುಡಿಯುವವರ ದನಿ’, ’ ಸಂಸ್ಕಾರ- ವಂಶ ವೃಕ್ಷ’ ’ಭಾರತೀಪುರ -ಒಂದು ಸಮೀಕ್ಷೆ’ ’ ಕಾಡು’-ಇವು ವೆಂಕಟರಾಮ್ ರ ವಿಮರ್ಶಾ  ಪ್ರಜ್ಜೆಯನ್ನು ದಾಖಲಿಸುತ್ತವೆ. ’ದುಡಿಯುವವರ ದನಿ’ಯಲ್ಲಿ ಅವರು ಕಾರಂತರ ’ಮೂಕಜ್ಜಿಯ ಕನಸುಗಳು’, ’ತ್ರಿವೇಣಿ’ ಯವರ ’ ಕಂಕಣ’,  ನಿರಂಜನರ ’ಚಿರಸ್ಮರಣೆ’ -ಈ ಕೃತಿಗಳ ಮುಖಾಂತರ ಸಾಹಿತ್ಯದಲ್ಲಿ ದುಡಿಯುವವರ  ದನಿ’ ಯಲ್ಲಿ   ಗುರುತಿಸುತ್ತಾರೆ. ’ನೀತಿಯ ಪಟ್ಟಾಂಗಗಳು, ಜಯಘೋಷ, ರಣಗರ್ಜನೆಗಳು  ಸಾಹಿತ್ಯವಾಗುವುದಿಲ್ಲ’ ಎಂಬ ಎಚ್ಚರ ಅವರಿಗಿದೆ. ವೆಂಕಟರಾಮ್ ಇತಿಹಾಸದ ಸೂಕ್ಷ್ಮ ಸತ್ಯಗಳನ್ನು ಅಧ್ಯಯನ ಮಾಡಿದ ಸಮಾಜವಾದಿ ಎಂಬುದನ್ನು ಈ ಲೇಖನ ಸಾಬೀತು ಪಡಿಸುತ್ತದೆ ಅವರೆನ್ನುತ್ತಾರೆ-" ವಿಜಯನಗರದ ವೈಭವಕ್ಕೆ ಅಗತ್ಯವಾದ ತೆರಿಗೆ ತೆರಲಾರದೆ ರೈತರು ದೇಶಾಂತರ ಹೋದರೆಂಬುದು ಆ ವೈಭವದಷ್ಟೇ ಮಹತ್ವವುಳ್ಳ ಕಥೆ. ಬ್ರಿಟಿಷರು ಜನ ತಂತ್ರಕ್ಕೆ ಜಗತ್ತಿನಲ್ಲೇ ಘೋರ ಗಂಡಾಂತರವೆನಿಸಿದ್ದ ನಾಜಿಸಮ್ ಅನ್ನು ಸದೆ ಬಡಿದು ಜನ ತಂತ್ರವನ್ನು ಉಳಿಸಿದರೆಂಬ ದಾವಾದಷ್ಟೆ ಅಥವಾ ಅದಕ್ಕಿಂತ ಹೆಚ್ಚು ಸತ್ವಶಾಲಿಯಾದದ್ದು ಬಂಗಾಳದ ಹತ್ತು ಲಕ್ಷ ಮಂದಿ ಬಡವರು ಜನ ತಂತ್ರದ ಉಳಿವಿನ ಈ ಹೋರಾಟಕ್ಕೆ ಬಲಿಪಶುಗಳಾದರೆಂಬ ದಾವ." ವೆಂಕಟರಾಂ ಅಭಿಪ್ರಾಯದಲ್ಲಿ "ಸಂಸ್ಕಾರ" ಸಂಪ್ರದಾಯವನ್ನು ತಿರಸ್ಕರಿಸಿ ಆಧುನಿಕತೆಗೆ ಮನಮೊಲಿಸಿದರೆ ’ವಂಶವೃಕ್ಷ’ ಆಧುನಿಕತೆಯನ್ನು ತಿರಸ್ಕರಿಸಿ  ಸಂಪ್ರದಾಯಕ್ಕೆ ಹಿಂತಿಗುತ್ತದೆ. "ಸಂಸ್ಕಾರದಲ್ಲಿ ಪ್ರಜ್ಜೆ ಕತ್ತಲಿನಿಂದ ಬೆಳಕಿಗೆ ಹೋಗುತ್ತದೆ; "ಭಾರತೀಪುರ’ದಲ್ಲಿ ಬೆಳಕಿನಿಂದ ಕ್ರಿಯೆಗೆ ಹೋಗುತ್ತದೆ." ಸಮಷ್ಟಿಯನ್ನು ಕುರಿತ ಸಮಾಜವಾದಿಯ ಎಚ್ಚರ, ಜಿಜ್ಜಾಸೆ, ಸ್ಪುಟವಾದ ಸರಳ ಶೈಲಿ-ವೆಂಕಟರಾಂ ಅವರ ಗದ್ಯದ ಮುಖ್ಯಾಂಶಗಳು. ವೆಂಕಟರಾಮ್
 ಅಳಿದ ಮೇಲೆ ಉಳಿದಿರುವುದು ನಾಡನ್ನು ಕುರಿತ ರಚನಾತ್ಮಕ ಧೋರಣೆಯ ’ದುಡಿಯುವವರ ದನಿ’ ’ವೆಂಕಟರಾಮ್ ಗತಿಸಿದರೂ ಅವರು ಅಮರವಾದವನ್ನು ಉಳಿಸಿ ಹೋಗಿದ್ದಾರೆ’ ಎಂಬ ಮಧುದಂಡವತೆಯವರ ಮಾತು ಉತ್ಪ್ರೀಕ್ಷೆಯಲ್ಲ.. ಕನ್ನಡ ಗ್ರಂಥ ಪ್ರಕಾಶನ ಲೋಕಕ್ಕೆ ಹೊಸದಾಗಿ ಪ್ರವೇಶಿಸಿರುವ ಪ್ರಿಂಟರ್ಸ್ ಪ್ರಕಾಶನದ ಪ್ರಶಂಸಾರ್ಹ ಕೊಡುಗೆ ಈ ಗ್ರಂಥ.
ದುಡಿಯುವವರ ದನಿ ಮತ್ತು ಇತರ ಲೇಖನಗಳು.
ಎಸ್. ವೆಂಕಟರಾಮ್ ಪ್ರಿಂಟರ್ಸ್ ಪ್ರಕಾಶನ ೭೫,
ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-೫೭೦೦೦೧.
೧೯೮೩ ಪುಟ್:೧೮೩.
ಬೆಲೆ:ಹದಿನಾರು ರೂಪಾಯಿ.





Tuesday, July 7, 2020

ಮುರಳೀಧರ ಉಪಾಧ್ಯ ಹಿರಿಯಡಕ - ಪ್ರಹ್ಲಾದ ಅಗಸನಕಟ್ಟೆ ಅವರ ಕಾದಂಬರಿ - " ಅವಾಂತರ "

 ಅವಾಂತರ’ ಪ್ರಹ್ಲಾದ ಅಗಸನ ಕಟ್ಟೆಯವರ ಎರಡನೆಯ ಕಾದಂಬರಿ. ಸರಕಾರಿ ನೌಕರಿಯಲ್ಲಿರುವ ದಂಪತಿಗಳ ವರ್ಗಾವಣೆಯ ಸಮಸ್ಯೆಯ ಸುತ್ತ ಬೆಳೆಯುವ ಈ ಕಾದಂಬರಿ ಅಧಿಕಾರಶಾಹಿಯ  ಅಮಾನವೀಯತೆಯನ್ನು ಚಿತ್ರಿಸುತ್ತದೆ. ಸೋಮಶೇಖರನ ಹೆಂಡತಿ ಕಮಲ ಗಂಡಾನಿರುವ ಊರಿಗಿಂತ ತುಂಬ ದೂರದಲ್ಲಿ, ನವಿಲುಗಿರಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಬಸುರಿಯಾಗಿರುವ ಅವಳ ವರ್ಗಾವಣೆಗೆ ಪ್ರಯತ್ನಿಸಲಿಕ್ಕಾಗಿ ಸೋಮಶೇಖರ  ಬೆಂಗಳೂರಿಗೆ ಹೋಗುತ್ತಾನೆ. ಯಾಂತ್ರಿಕ, ಭಷ್ಟ್ರ, ಸಹಾನುಭೂತಿ ಶೂನ್ಯ ಅಧಿಕಾರಶಾಹಿಯನ್ನು ಕಂಡು ಕಂಘಾಲಾಗುತ್ತಾನೆ. ಭ್ರಷ್ಟ, ಅವನತಮುಖಿ ವ್ಯವಸ್ಥೆಯಲ್ಲಿ ಪ್ರಕಾಶ ಕಟಕೇರಿ, ಸಹದೇವ ವಣಕಾರರಂಥ ಒಳ್ಳೆಯವರು ಅಪ್ರಸ್ತುತರಾಗಿದ್ದಾರೆ. ಸೋಮಶೇಖರ್ ದಂಪತಿಗಳಿಗೆ ನವಿಲು ಗಿರಿಯ ಪ್ರಾದೇಶಿಕ ವೈಶಿಷ್ಟ್ಯಗಳು ಅಸಹನೀ ಯವಾಗುತ್ತವೆ. ಆಧುನಿಕ ರೀತಿಯ ಶೌಚಾಲಯ ವ್ಯವಸ್ಥೆಯಿಲ್ಲದ ಆ ಊರು ಅವರ ಪಾಲಿಗೆ ನರ್ಅಕವಗುತ್ತದೆ. ಮಳೀಮಠ ದಂಪತಿಗಳು ಮರುಭೂಮಿಯ ಓಯಸಿಸ್ ನಂತೆ  ಕಾಣಿಸುತ್ತಾರೆ. ಹುಟ್ಟು ವಾಗಲೇ ಸತ್ತಿರುವ ಸೋಮಶೇಖರ ದಂಪತಿಗಳ್ ಅಮಗು ಅಧಿಕಾರಶಾಹಿಯ ಕ್ರೌರ್ಯದ ಸಂಕೇತವಾಗುತ್ತದೆ. 
’ಅವಾಂತರ’ ದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧಿಕಾರಶಾಹಿಯ ಚಿತ್ರಣ ’ತಬರನ ಕತೆ’ಯ ಮುಂದಿನ  ಅಧ್ಯಾಯದಂತಿದೆ. ಇದು ವಿಚಿತ್ರ ಕಲ್ಪನೆಯೋ ವಾಸ್ತವವೋ ಎಂದು ಭ್ರಮೆ ಹುಟ್ಟಿಸುವ ಭಯಾನಕ ಸಂಗತಿಗಳು ಈ ಕಾದಂಬರಿಯಲ್ಲಿವೆ.ವಾಸ್ತವ ಅನುಭವ ಗಳಿಗೆ ಕಲಾತ್ಮಕ ಅಭಿವ್ಯಕ್ತಿ ನೀಡುವುದರಲ್ಲಿ ಅಗಸನಕಟ್ಟೆಯವರು ಯಶಸ್ವಿಯಾಗಿದ್ದಾರೆ. 
ಮುರಳೀಧರ ಉಪಾಧ್ಯ ಹಿರಿಯಡಕ

ಎಚ್.ಎಸ್ . ರಾಘವೇಂದ್ರ ರಾವ್ - ಮಂಜಿನ ಶಿವಾಲಯಕ್ಕೆ {ರೈನೆರ್ ಮರಿಯಾ ರಿಲ್ಕ್ ನ ಕೆಲವು ಕವಿತೆಗಳು}

MANJINA   SHIVALAYAKKE
Selected Poems From Rainer Maria Rilke
Translated By

 H. S. RAGHAVENDRA RAO

Published By

PALLAVA PRAKASHANA

CHANNAPATTANA

Via-EMMIGANUR

BELLARY  583113

CELL 8880087235

pallavaprakashan@gmail.com

FIRST IMPRESSION 2020

PAGES 18+ 178

PRICE -rs220


 H. S. Raghavendra Rao -ಮಂಜಿನ ಶಿವಾಲಯಕ್ಕೆ

ಮಂಜಿನ   ಶಿವಾಲಯಕ್ಕೆ

ಈ ಜನ ಬಳಸುವ ಭಾಷೆಯ ಕಂಡರೆ ಭಯ ನನಗೆ

{ I AM SO AFRAID OF PEOPLE' S WORDS }


ನೀವು ಮನುಷ್ಯ್ಯರು ಪದಗಳನ್ನು ಮುಟ್ಟುವಿರಿ ಒಣಗತ್ತವೆ ಅವು ಸದ್ದಿರದೆ

ಎಲ್ಲ ವಸ್ತುಗಳನ್ನು ನೀವು ಕೊಲ್ಲುತ್ತೀರಿ , ಮಸಣವನು ನನಗೆ ಬಿಟ್ಟು -ರಿಲ್ಕ್

" ನನ್ನ ಒಳಗನ್ನು ಬೆಳೆಸಿರುವ  ರಿಲ್ಕ್ ಇಲ್ಲದಿದ್ದರೆ ಇದೆಲ್ಲ ಇರುತ್ತಿರಲಿಲ್ಲ. ಅವನ ಬೆಂಕಿ ಬೆಳಕುಗಳು ಓದುವ ನಿಮಗೂ ತಟ್ಟಲಿ . ಕನ್ನಡ ಈ ಕವಿಯನ್ನು ಓಳಗೊಳ್ಳಲಿ "

    ------------ಎಚ್.ಎಸ್. ರಾಘವೇಂದ್ರ ರಾವ್



Monday, July 6, 2020

ಮುರಳೀಧರ ಉಪಾಧ್ಯ ಹಿರಿಯಡಕ - ದೇವಾಂಗನ ಶಾಸ್ತ್ರಿ ಅವರ ’ವೇಣೀಸಂಹಾರ " { ಸಣ್ಣ ಕತೆ -2005 }

ದೇವಾಂಗನಾ ಶಾಸ್ತ್ರಿ (೧೯೨೫-೧೯೫೧) ಕೇವಲ ಇಪ್ಪತ್ತಾರು ವರ್ಷ ಬದುಕಿದ್ದ ಕನ್ನಡ  ಲೇಖಕಿ. ರಂ.ಶ್ರೀ. ಮುಗಳಿ ಅವರು ತನ್ನ ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈ ಕತೆಗಾರ್ತಿಯನ್ನು ಉಲ್ಲೇಖಿಸಿದ್ದಾರೆ. ಮೇವುಂಡಿ ಮಲ್ಲಾರಿ ಯವರು (೧೯೪೧) ಸಂಪಾದಿಸಿದ ಕನ್ನಡ ಲೇಖಕಿಯರ ಪ್ರಾತಿನಿಧಿಕ ಕಥಾಸಂಕಲನ ’ಆರತಿ’ ಯಲ್ಲಿ ದೇವಾಂಗನಾ ಶಾಸ್ತ್ರಿ ಅವರ ’ವೇಣೇ ಸಂಹಾರ’ ಕತೆ ಪ್ರಕಟ್ವಾಗಿದೆ. ಈ ಕತೆ ಧಾರವಾಡದ ’ ಜಯಂತಿ’ (೧೯೪೧) ಪತ್ರಿಕೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ದೆವಾಂಗನಾ ಶಾಸ್ತ್ರಿ ಅವರ ಕತೆಗಳು ಧಾರವಾಡದ ’ಜಯಂತಿ’ ಪತ್ರಿಕೆಯಲ್ಲಿ ಪ್ರಕಟವ್ಗಿದ್ದುವು. ಗೋಕರ್ಣದ ಗಣಪತ ರಾವ್ ಹೊಸಮನೆ ಶಾಸ್ತ್ರಿ-ಶಾರದಮ್ಮ  ದಂಪತಿಯ ಹತ್ತು ಮಕ್ಕಳಲ್ಲಿ   ದೇವಾಂಗನೆ ಕೊನೆಯವರು. ಕೇವಲ ಏಳನೆಯ ತರಗತಿವರೆಗೆ ಓದಿದ ದೇವಾಂಗನೆ ಕಾರಂತ, ಬೇಂದ್ರೆ, ಗೋಕಾಕ್, ಅ.ನ.ಕೃ., ಕಡೆಂಗೋಡ್ಲು ಇವರ ಕೃತಿಗಳನ್ನು ಓದುತ್ತ,  ವಿಮರ್ಶೆಸುತ್ತ ಬೆಳೆದಳು. ಗೋಕರ್ಣದ ಈ ಚೆಲುವೆ ದೇವಾಂಗನೆಯ ಮದುವೆ ಅವರ್ರ್ ಇಪ್ಪತ್ತೊಂದನೆಯ್ ವಯಸ್ಸಿನಲ್ಲಿ (೧೯೪೬) ಸರಕಾರಿ ನೌಕರ ವೆಂಕಟ ರಮಣ ಕೂರ್ಸೆ  ಅವರೊಂದಿಗೆ ನಡೆಯಿತು. ಮಗಳು ಉಷಾಗೆ ಮೂರು ವರ್ಷವಾಗಿದ್ದಾಗ ಗರ್ಭಿಣೆಯಾದ ದೇವಾಂಗನೆ ’ಈಗಾಗಲೇ ಇನ್ನೊಂದು  ಮಗು ಬೇಡ" ಎಂದು ನಿರ್ಧರಿಸಿ ನಾಟಿ  ಔಷಧ    ಸೇವಿಸಿ, ಅತಿರಕ್ತಸ್ರಾವದಿಂದ ತೀರಿಕೊಂಡರು. ಈ ಪುಸ್ತಕದಲ್ಲಿರುವ ’ಮೂರು ದಿನದ ಮಲ್ಲಿಗೆ’ ಎಂಬ ಲೇಖನದಲ್ಲಿ ಡಾ| ಶುಭಾದಾಸ್ ಮರವಂತೆ ಅವರು ದೇವಾಂಗನಾ ಶಾಸ್ತ್ರಿಯವರ ಜೀವನದ ಕುರಿತು ಹೃದಯಂಗಮವಾಗಿ ಬರೆದಿದ್ದಾರೆ. ಬ್ರಿಗೇಡಿಯರ್ ಎಸ್. ಜಿ. ಭಾಗವತ್ ಅವರು ಬರೆದಿರುವ ’ ನನ್ನ ಚಿಕ್ಕಿ ದೇವಾಂಗನಾ’ ಎಂಬ್ ಲೇಖನ್ ಈ ಗ್ರಂಥದಲ್ಲಿದೆ.ಡಾ| ಶಾಂತಾ ಇಮ್ರಾ ಪುರ ಅವರು ತನ್ನ್ ಪ್ರಸ್ತಾವನೆಯಲ್ಲಿ ದೇವಾಂಗನಾ ಶಾಸ್ತ್ರಿ ಅವರ ಕತೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿದ್ದಾರೆ.’ವೇಣೇ ಸಂಹಾರ’ ಕತೆಯಲ್ಲಿ ಏಳು ವರ್ಷದ ಬಾಲಕಿ ಶಾಂತೆಯ ವಿವಾಹ ನಲುವತ್ತೈದು ವರ್ಷದ ವಿಧುರ ಚಿದಾನಂದ ದೀಕ್ಷಿತನೊಂದಿಗೆ ನಡೆಯುತ್ತದೆ. ಮುಂದಿನ ವರ್ಷ ಅವಳು ವಿಧವೆಯಾಗಿ, ಕೇಶಮುಂಡನ ಮಾಡಿಸಿ ಕೊಂಡು ಮಡಿಯಾಗುತ್ತಾಳೆ. "ಅಂತೂ ಧರ್ಮ ಉಳಿದುಕೊಂಡಿತು. ಪರಲೋಕದ  ಗಂಡನಿಗೆ,  ಆಹಾರದ ಜೊತೆಯಲ್ಲಿ , ಭೂಲೋಕದಲ್ಲಿಯ ಹೆಂಡತಿಯ ತಲೆಗೂದಲಿನ ನೀರು ಬೆರೆದು ಕೊಳ್ಳುವುದು  ತಪ್ಪಿತು. ಹೆಣ್ಣು ಮಡಿಯಾದಳು.

ಸ್ವರ್ಗಕ್ಕೆ ಹಾದಿ ನಿರಂತರವಾಯ್ತು" ಎನ್ನುತ್ತಾರೆ ಲೇಖಕಿ. ಸಂಸ್ಕೃತದ ಭಟ್ಟ ನಾರಾಯಣನ ನಾಟಕದ ಹೆಸರು ’ವೇಣೇ ಸಂಹಾರ." ಕೇಶ  ಶೃಂಗಾರ ಎಂಬ ಅರ್ಥದ ಶಬ್ದಕ್ಕೆ ದೇವಾಂಗನಾ ಶಾಸ್ತ್ರಿಯವರ ಕತೆಯಲ್ಲಿ ಕೇಶಮುಂಡನ ಎಂಬ ವ್ಯಂಗ್ಯಾರ್ಥ ಪ್ರಾಪ್ತಿಯಾಗುತ್ತದೆ. ವಿಧವೆಯನ್ನು ಅವ್ಮಾನಿಸುವ ಅರ್ಥಹೀನ ಆಚರಣೆಯೊಂದರ ತೀಕ್ಷ್ಣ ವಿಡಂಬನೆ ಈ ಕತೆಯಲ್ಲಿದೆ. ’ಹಾರೆಗೋಲು’ ಕತೆಯ ಭುವನೇಶ್ವರಿ ಅರುವತ್ತು ದಾಟಿದ ರಾಮಾವಧಾನಿಗಳ ನಾಲ್ಕನೆಉಅ ಹೆಂಡತಿಯಾಗಿ, ಒಂದು ವರ್ಷದೊಳಗೆ ವಿಧವೆಯಾಗಿ ತೌರುಮನೆ ಸೇರುತ್ತಾಳೆ. ’ಹಾರೆಗೋಲು’ ಅವಳ್ ಹೊಟ್ಟೆಪಾಡಿಗೆ, ಶೀಲ ರಕ್ಷಣೆಗೆ ನೆರವು ನಿಡುತ್ತದೆ. "ಮದುವೆಯಂತಹ ಜೀವನ-ಮರಣಗಳ  ಸಮಸ್ಯೆಯಲ್ಲಿಯೂ ಹೆಣ್ಣಿನ ನಿಜವಾದ ಅಭಿಮತಕ್ಕೆ ಕಾಸಿನ್ ಬೆಲೆಯಿದ್ದರಷ್ಟೇ..." ಎನ್ನುತ್ತಾರೆ ದೇವಾಂಗನಾ ಶಾಸ್ತ್ರಿ. ’ನಾಲ್ಕುನೂರು’ ಕತೆಯಲ್ಲಿ ಶ್ರೋತ್ರಿ ಜಯರಾಮ ಜೋಯಿಸರು ೪೦೦ ರೂಪಾಯಿ ವರದಕ್ಷಿಣಿ ಬಾಕಿಯ ಕಾರಣಕ್ಕೆ ತನ್ನ ಸೊಸೆ ಇಂದಿರೆಯನ್ನು ತೌರುಮನೆಗೆ ವಾಪಾಸು ಕಳುಹಿಸುತ್ತಾರೆ. ವರದಕ್ಷಿಣಿಯೊಂದಿಗೆ ಇಂದಿರೆ ಗಂಡನ ಮನೆಗೆ ಬರುವಾಗ ಗಂಡನ ಎರಡನೇ ಮದುವೆಯ ದಿಬ್ಬಣ ಕಾಣಿಸುತ್ತದೆ.
’ಆಣೆಪಾವಲಿ’ ಕತೆಯ ಸುಮತಿ ಬಳಸಿ ಎಸೆಯುವ ವಸ್ತುವಾಗುತ್ತಾಳೆ. ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡ ಈಕೆ ದಾಯಾದಿಯೊಬ್ಬರ ಮನೆಯಲ್ಲಿ ಬೆಳೆಯುವಾಗ ಕಾಮುಕರಿಗೆ ಬಲಿಯಾಗಿ, ’ಮಾನಗೆಟ್ಟ ಹೆಣ್ಣಾ’ಗುತ್ತಾಳೆ. ಆರ್ಥಿಕ ಸಮಸ್ಯೆ ಹಾಗೂ ವ್ಯಭಿಚಾರದ ಸಂಬಂಧದ ಚಿಂತನೆ ಈ ಕತೆಯಲ್ಲಿದೆ. ’ಅಡಕತ್ತರಿ’ಯ ಗೌರಿ, ಲಂಪಟ ಗಂಡ  ತಿಮ್ಮಯ್ಯನ ಒಲ್ಲದ ಹೆಂಡತಿ, ಈಕೆ ಮಾವ ದತ್ತಂಭಟ್ಟರ ಕಾಮಪಿಪಾಸೆಗೆ ಬಲಿಯಾಗುತ್ತಾಳೆ. ’ಬಯಲಾಟ’ದ ನಾಯಕಿ ಗಂಗು ತುಂಟಾಟ, ಹಾಸ್ಯ ಪ್ರವೃತ್ತಿಗಳ ನವ ವಿವಾಹಿತೆ. ಗೆಳತಿಯೊಡನೆ ಬಯಲಾಟ  ನೋಡಲು ಹೋದದ್ದೇ ಅವಳ ತಪ್ಪಾಗುತ್ತದೆ. ಅವಳ ಗಂಡ ಅವಳನ್ನು ಮನೆಗೆ ಕರೆದೊಯ್ದು ಮುಖಕ್ಕೆ ಬರೆ ಹಾಕುತ್ತಾನೆ. ’ಪುಣ್ಯದ ಫಲ’ ಕತೆಯ ಸರೂನ ಗಂಡ ಗ್ರಹಣ ಸ್ನಾನಕ್ಕೆ ಸಮುದ್ರ ತೀರಕ್ಕೆ ಹೋದವನು ಅಕಾಲ ಮೃತ್ಯುವಿಗೆ ತುತ್ತಾಗುತ್ತಾನೆ. ’ವರದಕ್ಷಿಣಿ’ಕತೆಯಲ್ಲಿ ಪರಸ್ಪರ ಅನುರಕ್ತರಾದ ರಾಮು-ಲೀಲಾ ಪದವೀಧರರು ವರದಕ್ಷಿಣಿ ಸಮಸ್ಯೆ ಯಿಂದಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಎರಡು ಕತೆಗಳು ಸಾಮಾನ್ಯ ಕತೆಗಳು.
ದೇವಾಂಗನಾ ಶಾಸ್ತ್ರಿಯವರ ಕತೆಗಳ  ಔಚಿತ್ಯ ಪೂರ್ಣ ಶೀರ್ಷಿಕೆಗಳು, ಕಥನ ತಂತ್ರಗಳು ಗಮನ ಸೆಳೆಯುತ್ತವೆ. ಹೆಚ್ಚಿನ ಕತೆಗಳಲ್ಲಿ   ನಾಯಕಿಯ ಗೆಳತಿಯೊಬ್ಬಳು ನಿರೂಪಕಿಯಾಗಿದ್ದಾಳೆ. ’ ಪುಣ್ಯದ ಫಲ’ ಕತೆ ಒಂದು ಪತ್ರದಲ್ಲಿ ಬಿಚ್ಚಿ ಕೊಳ್ಳುತ್ತದೆ. ವಿಧವೆಯ ಅವಮಾನ, ಬಾಲ್ಯ ವಿವಾಹ, ವರದಕ್ಷಿಣಿ, ವ್ಯಭಿಚಾರ, ಲೈಂಗಿಕ ಶೋಷಣೆ, ಅನಧಿಕೃತ   ಗೃಹಬಂಧನದಲ್ಲಿರುವ ನವವಿವಾಹಿತೆ ಹೀಗೆ ಪುರುಷ ಪ್ರಧಾನ ಸಮಾಜದ, ತಥಾಕಥಿತ ಮೇಲು ಜಾತಿಯ ಹೆಣ್ಣಿನ ಸಮಸ್ಯೆಯ ವಿವಿಧ ಮುಖಗಳು ದೇವಾಂಗನಾ ಶಾಸ್ತ್ರಿಯವರ ಕತೆಗಳಿವೆ. ಇಪ್ಪತ್ತನೆಯ  ಶತಮಾನದ ಪೂರ್ವಾರ್ಧದ, ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮಾಜದ, ಹೆಣ್ಣಿನ ಅವಸ್ಥೆಯ ದಟ್ಟ ವಿವರಗಳನ್ನು ಕೊಡುವ ಈ ಕತೆಗಳು ಸಾಮಾಜಿಕ ದಾಖಲೆಗಳಾಗಿಯೂ ಮುಖ್ಯವಾಗುತ್ತವೆ. ದೇವಾಂಗನಾ  ಶಾಸ್ತ್ರಿ ಸಮಾಜ ಸುಧಾರಣೆಯಲ್ಲಿ ಶತಮಾನದ ಮುನ್ನೋಟವಿದ್ದ ಲೇಖಕಿ.

ಕೊಡಗಿನ ಗೌರಮ್ಮ, ತ್ರಿವೇಣೆ, ಪೇಜಾವರ ಸದಾಶಿವ ರಾವ್, ಯರ್ಮುಂಜ ರಾಮಚಂದ್ರ, ಎಂ.ಎನ್.ಜೈಪ್ರಕಾಶ್ ಅಕಾಲಿಕ ಮರಣ ಕಂಡ ಕನ್ನಡ ಸಾಹಿತಿಗಳು. ಈ  ಸಾಲಿಗೆ ಸೇರುವ ದೇವಾಂಗನಾ ಶಾಸ್ತ್ರಿ ದೇವಲೋಕದಿಂದ ಒಂದು ಕೆಲವೇ ದಿನಗಳಲ್ಲಿ ಅದೃಶ್ಯವಾದ ಮಂದಾರ ಹೂವಿನಂತೆ ಕಾಣೆಸುತ್ತಾರೆ.  ಉತ್ತರ ಕನ್ನಡದ ಕನಕಾಂಬರ ಮಾಲೆಯ ಚೆಲುವು, ಕೌಶಲ ಇವರ ಕತೆಗಳಲ್ಲಿದೆ.’ವೇಣೇ ಸಂಹಾರ’ದ ಪ್ರಕಟನೆಯಿಂದಾಗಿ ಹೊಸಗನ್ನಡ ಸಾಹಿತ್ಯ ಚರಿತ್ರೆಯ ಮಹಿಳಾ ವಿಭಾಗದಲ್ಲಿ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಅರ್ಧ ಶತಮಾನದ ಕಾಲ ಅಲಕ್ಷ್ಯ ಕ್ಕೀಡಾಗಿದ್ದ ದೇವಾಂಗನಾ ಶಾಸ್ತ್ರಿಯವರ ಕತೆಗಳನ್ನು ಪ್ರಕಟಿಸಿದ ಧಾರವಾಡದ ಅವನಿ ರಸಿಕರಂಗ ಪ್ರಕಾಶನ ’ಜಯಂತಿ’ಯ ಪರಂಪರೆಯಲ್ಲಿ ಮುಂದುವರಿದು ಅಭಿನಂದನಾರ್ಹವಾಗಿದೆ.
ಮುರಳೀಧರ ಉಪಾಧ್ಯ ಹಿರಿಯಡಕ.
ಪುಸ್ತಕ   ಸಮೀಕ್ಷೆ
ವೇಣೇ ಸಂಹಾರ
(ಸಣ್ಣಕತೆಗಳು ಹಾಗೂ ಇತರ ಬರಹಗಳು)
ಲೇ: ದೇವಾಂಗನಾ ಶಾಸ್ತ್ರಿ ಗೋಕರ್ಣ
ಪ್ರ:ಅವನಿ ರಸಿಕರಂಗ ಪ್ರಕಾಶನ,  
ನಾರಾಯಣಪುರ    ಧಾರವಾಡ-೫೮೦೦೦೮
ಮೊದಲ ಮುದ್ರಣ:೨೦೦೫ ಬೆಲೆ ರೂ.೮೦