stat Counter



Monday, July 6, 2020

ಮುರಳೀಧರ ಉಪಾಧ್ಯ ಹಿರಿಯಡಕ - ದೇವಾಂಗನ ಶಾಸ್ತ್ರಿ ಅವರ ’ವೇಣೀಸಂಹಾರ " { ಸಣ್ಣ ಕತೆ -2005 }

ದೇವಾಂಗನಾ ಶಾಸ್ತ್ರಿ (೧೯೨೫-೧೯೫೧) ಕೇವಲ ಇಪ್ಪತ್ತಾರು ವರ್ಷ ಬದುಕಿದ್ದ ಕನ್ನಡ  ಲೇಖಕಿ. ರಂ.ಶ್ರೀ. ಮುಗಳಿ ಅವರು ತನ್ನ ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈ ಕತೆಗಾರ್ತಿಯನ್ನು ಉಲ್ಲೇಖಿಸಿದ್ದಾರೆ. ಮೇವುಂಡಿ ಮಲ್ಲಾರಿ ಯವರು (೧೯೪೧) ಸಂಪಾದಿಸಿದ ಕನ್ನಡ ಲೇಖಕಿಯರ ಪ್ರಾತಿನಿಧಿಕ ಕಥಾಸಂಕಲನ ’ಆರತಿ’ ಯಲ್ಲಿ ದೇವಾಂಗನಾ ಶಾಸ್ತ್ರಿ ಅವರ ’ವೇಣೇ ಸಂಹಾರ’ ಕತೆ ಪ್ರಕಟ್ವಾಗಿದೆ. ಈ ಕತೆ ಧಾರವಾಡದ ’ ಜಯಂತಿ’ (೧೯೪೧) ಪತ್ರಿಕೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ದೆವಾಂಗನಾ ಶಾಸ್ತ್ರಿ ಅವರ ಕತೆಗಳು ಧಾರವಾಡದ ’ಜಯಂತಿ’ ಪತ್ರಿಕೆಯಲ್ಲಿ ಪ್ರಕಟವ್ಗಿದ್ದುವು. ಗೋಕರ್ಣದ ಗಣಪತ ರಾವ್ ಹೊಸಮನೆ ಶಾಸ್ತ್ರಿ-ಶಾರದಮ್ಮ  ದಂಪತಿಯ ಹತ್ತು ಮಕ್ಕಳಲ್ಲಿ   ದೇವಾಂಗನೆ ಕೊನೆಯವರು. ಕೇವಲ ಏಳನೆಯ ತರಗತಿವರೆಗೆ ಓದಿದ ದೇವಾಂಗನೆ ಕಾರಂತ, ಬೇಂದ್ರೆ, ಗೋಕಾಕ್, ಅ.ನ.ಕೃ., ಕಡೆಂಗೋಡ್ಲು ಇವರ ಕೃತಿಗಳನ್ನು ಓದುತ್ತ,  ವಿಮರ್ಶೆಸುತ್ತ ಬೆಳೆದಳು. ಗೋಕರ್ಣದ ಈ ಚೆಲುವೆ ದೇವಾಂಗನೆಯ ಮದುವೆ ಅವರ್ರ್ ಇಪ್ಪತ್ತೊಂದನೆಯ್ ವಯಸ್ಸಿನಲ್ಲಿ (೧೯೪೬) ಸರಕಾರಿ ನೌಕರ ವೆಂಕಟ ರಮಣ ಕೂರ್ಸೆ  ಅವರೊಂದಿಗೆ ನಡೆಯಿತು. ಮಗಳು ಉಷಾಗೆ ಮೂರು ವರ್ಷವಾಗಿದ್ದಾಗ ಗರ್ಭಿಣೆಯಾದ ದೇವಾಂಗನೆ ’ಈಗಾಗಲೇ ಇನ್ನೊಂದು  ಮಗು ಬೇಡ" ಎಂದು ನಿರ್ಧರಿಸಿ ನಾಟಿ  ಔಷಧ    ಸೇವಿಸಿ, ಅತಿರಕ್ತಸ್ರಾವದಿಂದ ತೀರಿಕೊಂಡರು. ಈ ಪುಸ್ತಕದಲ್ಲಿರುವ ’ಮೂರು ದಿನದ ಮಲ್ಲಿಗೆ’ ಎಂಬ ಲೇಖನದಲ್ಲಿ ಡಾ| ಶುಭಾದಾಸ್ ಮರವಂತೆ ಅವರು ದೇವಾಂಗನಾ ಶಾಸ್ತ್ರಿಯವರ ಜೀವನದ ಕುರಿತು ಹೃದಯಂಗಮವಾಗಿ ಬರೆದಿದ್ದಾರೆ. ಬ್ರಿಗೇಡಿಯರ್ ಎಸ್. ಜಿ. ಭಾಗವತ್ ಅವರು ಬರೆದಿರುವ ’ ನನ್ನ ಚಿಕ್ಕಿ ದೇವಾಂಗನಾ’ ಎಂಬ್ ಲೇಖನ್ ಈ ಗ್ರಂಥದಲ್ಲಿದೆ.ಡಾ| ಶಾಂತಾ ಇಮ್ರಾ ಪುರ ಅವರು ತನ್ನ್ ಪ್ರಸ್ತಾವನೆಯಲ್ಲಿ ದೇವಾಂಗನಾ ಶಾಸ್ತ್ರಿ ಅವರ ಕತೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿದ್ದಾರೆ.’ವೇಣೇ ಸಂಹಾರ’ ಕತೆಯಲ್ಲಿ ಏಳು ವರ್ಷದ ಬಾಲಕಿ ಶಾಂತೆಯ ವಿವಾಹ ನಲುವತ್ತೈದು ವರ್ಷದ ವಿಧುರ ಚಿದಾನಂದ ದೀಕ್ಷಿತನೊಂದಿಗೆ ನಡೆಯುತ್ತದೆ. ಮುಂದಿನ ವರ್ಷ ಅವಳು ವಿಧವೆಯಾಗಿ, ಕೇಶಮುಂಡನ ಮಾಡಿಸಿ ಕೊಂಡು ಮಡಿಯಾಗುತ್ತಾಳೆ. "ಅಂತೂ ಧರ್ಮ ಉಳಿದುಕೊಂಡಿತು. ಪರಲೋಕದ  ಗಂಡನಿಗೆ,  ಆಹಾರದ ಜೊತೆಯಲ್ಲಿ , ಭೂಲೋಕದಲ್ಲಿಯ ಹೆಂಡತಿಯ ತಲೆಗೂದಲಿನ ನೀರು ಬೆರೆದು ಕೊಳ್ಳುವುದು  ತಪ್ಪಿತು. ಹೆಣ್ಣು ಮಡಿಯಾದಳು.

ಸ್ವರ್ಗಕ್ಕೆ ಹಾದಿ ನಿರಂತರವಾಯ್ತು" ಎನ್ನುತ್ತಾರೆ ಲೇಖಕಿ. ಸಂಸ್ಕೃತದ ಭಟ್ಟ ನಾರಾಯಣನ ನಾಟಕದ ಹೆಸರು ’ವೇಣೇ ಸಂಹಾರ." ಕೇಶ  ಶೃಂಗಾರ ಎಂಬ ಅರ್ಥದ ಶಬ್ದಕ್ಕೆ ದೇವಾಂಗನಾ ಶಾಸ್ತ್ರಿಯವರ ಕತೆಯಲ್ಲಿ ಕೇಶಮುಂಡನ ಎಂಬ ವ್ಯಂಗ್ಯಾರ್ಥ ಪ್ರಾಪ್ತಿಯಾಗುತ್ತದೆ. ವಿಧವೆಯನ್ನು ಅವ್ಮಾನಿಸುವ ಅರ್ಥಹೀನ ಆಚರಣೆಯೊಂದರ ತೀಕ್ಷ್ಣ ವಿಡಂಬನೆ ಈ ಕತೆಯಲ್ಲಿದೆ. ’ಹಾರೆಗೋಲು’ ಕತೆಯ ಭುವನೇಶ್ವರಿ ಅರುವತ್ತು ದಾಟಿದ ರಾಮಾವಧಾನಿಗಳ ನಾಲ್ಕನೆಉಅ ಹೆಂಡತಿಯಾಗಿ, ಒಂದು ವರ್ಷದೊಳಗೆ ವಿಧವೆಯಾಗಿ ತೌರುಮನೆ ಸೇರುತ್ತಾಳೆ. ’ಹಾರೆಗೋಲು’ ಅವಳ್ ಹೊಟ್ಟೆಪಾಡಿಗೆ, ಶೀಲ ರಕ್ಷಣೆಗೆ ನೆರವು ನಿಡುತ್ತದೆ. "ಮದುವೆಯಂತಹ ಜೀವನ-ಮರಣಗಳ  ಸಮಸ್ಯೆಯಲ್ಲಿಯೂ ಹೆಣ್ಣಿನ ನಿಜವಾದ ಅಭಿಮತಕ್ಕೆ ಕಾಸಿನ್ ಬೆಲೆಯಿದ್ದರಷ್ಟೇ..." ಎನ್ನುತ್ತಾರೆ ದೇವಾಂಗನಾ ಶಾಸ್ತ್ರಿ. ’ನಾಲ್ಕುನೂರು’ ಕತೆಯಲ್ಲಿ ಶ್ರೋತ್ರಿ ಜಯರಾಮ ಜೋಯಿಸರು ೪೦೦ ರೂಪಾಯಿ ವರದಕ್ಷಿಣಿ ಬಾಕಿಯ ಕಾರಣಕ್ಕೆ ತನ್ನ ಸೊಸೆ ಇಂದಿರೆಯನ್ನು ತೌರುಮನೆಗೆ ವಾಪಾಸು ಕಳುಹಿಸುತ್ತಾರೆ. ವರದಕ್ಷಿಣಿಯೊಂದಿಗೆ ಇಂದಿರೆ ಗಂಡನ ಮನೆಗೆ ಬರುವಾಗ ಗಂಡನ ಎರಡನೇ ಮದುವೆಯ ದಿಬ್ಬಣ ಕಾಣಿಸುತ್ತದೆ.
’ಆಣೆಪಾವಲಿ’ ಕತೆಯ ಸುಮತಿ ಬಳಸಿ ಎಸೆಯುವ ವಸ್ತುವಾಗುತ್ತಾಳೆ. ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡ ಈಕೆ ದಾಯಾದಿಯೊಬ್ಬರ ಮನೆಯಲ್ಲಿ ಬೆಳೆಯುವಾಗ ಕಾಮುಕರಿಗೆ ಬಲಿಯಾಗಿ, ’ಮಾನಗೆಟ್ಟ ಹೆಣ್ಣಾ’ಗುತ್ತಾಳೆ. ಆರ್ಥಿಕ ಸಮಸ್ಯೆ ಹಾಗೂ ವ್ಯಭಿಚಾರದ ಸಂಬಂಧದ ಚಿಂತನೆ ಈ ಕತೆಯಲ್ಲಿದೆ. ’ಅಡಕತ್ತರಿ’ಯ ಗೌರಿ, ಲಂಪಟ ಗಂಡ  ತಿಮ್ಮಯ್ಯನ ಒಲ್ಲದ ಹೆಂಡತಿ, ಈಕೆ ಮಾವ ದತ್ತಂಭಟ್ಟರ ಕಾಮಪಿಪಾಸೆಗೆ ಬಲಿಯಾಗುತ್ತಾಳೆ. ’ಬಯಲಾಟ’ದ ನಾಯಕಿ ಗಂಗು ತುಂಟಾಟ, ಹಾಸ್ಯ ಪ್ರವೃತ್ತಿಗಳ ನವ ವಿವಾಹಿತೆ. ಗೆಳತಿಯೊಡನೆ ಬಯಲಾಟ  ನೋಡಲು ಹೋದದ್ದೇ ಅವಳ ತಪ್ಪಾಗುತ್ತದೆ. ಅವಳ ಗಂಡ ಅವಳನ್ನು ಮನೆಗೆ ಕರೆದೊಯ್ದು ಮುಖಕ್ಕೆ ಬರೆ ಹಾಕುತ್ತಾನೆ. ’ಪುಣ್ಯದ ಫಲ’ ಕತೆಯ ಸರೂನ ಗಂಡ ಗ್ರಹಣ ಸ್ನಾನಕ್ಕೆ ಸಮುದ್ರ ತೀರಕ್ಕೆ ಹೋದವನು ಅಕಾಲ ಮೃತ್ಯುವಿಗೆ ತುತ್ತಾಗುತ್ತಾನೆ. ’ವರದಕ್ಷಿಣಿ’ಕತೆಯಲ್ಲಿ ಪರಸ್ಪರ ಅನುರಕ್ತರಾದ ರಾಮು-ಲೀಲಾ ಪದವೀಧರರು ವರದಕ್ಷಿಣಿ ಸಮಸ್ಯೆ ಯಿಂದಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಎರಡು ಕತೆಗಳು ಸಾಮಾನ್ಯ ಕತೆಗಳು.
ದೇವಾಂಗನಾ ಶಾಸ್ತ್ರಿಯವರ ಕತೆಗಳ  ಔಚಿತ್ಯ ಪೂರ್ಣ ಶೀರ್ಷಿಕೆಗಳು, ಕಥನ ತಂತ್ರಗಳು ಗಮನ ಸೆಳೆಯುತ್ತವೆ. ಹೆಚ್ಚಿನ ಕತೆಗಳಲ್ಲಿ   ನಾಯಕಿಯ ಗೆಳತಿಯೊಬ್ಬಳು ನಿರೂಪಕಿಯಾಗಿದ್ದಾಳೆ. ’ ಪುಣ್ಯದ ಫಲ’ ಕತೆ ಒಂದು ಪತ್ರದಲ್ಲಿ ಬಿಚ್ಚಿ ಕೊಳ್ಳುತ್ತದೆ. ವಿಧವೆಯ ಅವಮಾನ, ಬಾಲ್ಯ ವಿವಾಹ, ವರದಕ್ಷಿಣಿ, ವ್ಯಭಿಚಾರ, ಲೈಂಗಿಕ ಶೋಷಣೆ, ಅನಧಿಕೃತ   ಗೃಹಬಂಧನದಲ್ಲಿರುವ ನವವಿವಾಹಿತೆ ಹೀಗೆ ಪುರುಷ ಪ್ರಧಾನ ಸಮಾಜದ, ತಥಾಕಥಿತ ಮೇಲು ಜಾತಿಯ ಹೆಣ್ಣಿನ ಸಮಸ್ಯೆಯ ವಿವಿಧ ಮುಖಗಳು ದೇವಾಂಗನಾ ಶಾಸ್ತ್ರಿಯವರ ಕತೆಗಳಿವೆ. ಇಪ್ಪತ್ತನೆಯ  ಶತಮಾನದ ಪೂರ್ವಾರ್ಧದ, ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮಾಜದ, ಹೆಣ್ಣಿನ ಅವಸ್ಥೆಯ ದಟ್ಟ ವಿವರಗಳನ್ನು ಕೊಡುವ ಈ ಕತೆಗಳು ಸಾಮಾಜಿಕ ದಾಖಲೆಗಳಾಗಿಯೂ ಮುಖ್ಯವಾಗುತ್ತವೆ. ದೇವಾಂಗನಾ  ಶಾಸ್ತ್ರಿ ಸಮಾಜ ಸುಧಾರಣೆಯಲ್ಲಿ ಶತಮಾನದ ಮುನ್ನೋಟವಿದ್ದ ಲೇಖಕಿ.

ಕೊಡಗಿನ ಗೌರಮ್ಮ, ತ್ರಿವೇಣೆ, ಪೇಜಾವರ ಸದಾಶಿವ ರಾವ್, ಯರ್ಮುಂಜ ರಾಮಚಂದ್ರ, ಎಂ.ಎನ್.ಜೈಪ್ರಕಾಶ್ ಅಕಾಲಿಕ ಮರಣ ಕಂಡ ಕನ್ನಡ ಸಾಹಿತಿಗಳು. ಈ  ಸಾಲಿಗೆ ಸೇರುವ ದೇವಾಂಗನಾ ಶಾಸ್ತ್ರಿ ದೇವಲೋಕದಿಂದ ಒಂದು ಕೆಲವೇ ದಿನಗಳಲ್ಲಿ ಅದೃಶ್ಯವಾದ ಮಂದಾರ ಹೂವಿನಂತೆ ಕಾಣೆಸುತ್ತಾರೆ.  ಉತ್ತರ ಕನ್ನಡದ ಕನಕಾಂಬರ ಮಾಲೆಯ ಚೆಲುವು, ಕೌಶಲ ಇವರ ಕತೆಗಳಲ್ಲಿದೆ.’ವೇಣೇ ಸಂಹಾರ’ದ ಪ್ರಕಟನೆಯಿಂದಾಗಿ ಹೊಸಗನ್ನಡ ಸಾಹಿತ್ಯ ಚರಿತ್ರೆಯ ಮಹಿಳಾ ವಿಭಾಗದಲ್ಲಿ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಅರ್ಧ ಶತಮಾನದ ಕಾಲ ಅಲಕ್ಷ್ಯ ಕ್ಕೀಡಾಗಿದ್ದ ದೇವಾಂಗನಾ ಶಾಸ್ತ್ರಿಯವರ ಕತೆಗಳನ್ನು ಪ್ರಕಟಿಸಿದ ಧಾರವಾಡದ ಅವನಿ ರಸಿಕರಂಗ ಪ್ರಕಾಶನ ’ಜಯಂತಿ’ಯ ಪರಂಪರೆಯಲ್ಲಿ ಮುಂದುವರಿದು ಅಭಿನಂದನಾರ್ಹವಾಗಿದೆ.
ಮುರಳೀಧರ ಉಪಾಧ್ಯ ಹಿರಿಯಡಕ.
ಪುಸ್ತಕ   ಸಮೀಕ್ಷೆ
ವೇಣೇ ಸಂಹಾರ
(ಸಣ್ಣಕತೆಗಳು ಹಾಗೂ ಇತರ ಬರಹಗಳು)
ಲೇ: ದೇವಾಂಗನಾ ಶಾಸ್ತ್ರಿ ಗೋಕರ್ಣ
ಪ್ರ:ಅವನಿ ರಸಿಕರಂಗ ಪ್ರಕಾಶನ,  
ನಾರಾಯಣಪುರ    ಧಾರವಾಡ-೫೮೦೦೦೮
ಮೊದಲ ಮುದ್ರಣ:೨೦೦೫ ಬೆಲೆ ರೂ.೮೦

No comments:

Post a Comment