stat CounterMonday, July 13, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎ. ಕೆ. ರಾಮಾನುಜನ್ ಅವರ ’ ಕುಂಟೋ ಬಿಲ್ಲೆ "

 ಅಮೆರಿಕದಲ್ಲಿರುವ ದುಭಾಷಿ ಕವಿ. ಎ.ಕೆರಾಮಾನುಜನ್ (ಜ-೧೯೨೯) ಕನ್ನಡದ ಕಾವ್ಯ ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸಿದ ನವ್ಯ ಕಾವ್ಯದ ಮುಖ್ಯ ಕವಿಗಳಾಲ್ಲೊಬ್ಬರು. ಅಡಿಗರ ಕೊಡೆಯ ಕೆಳಗೆ ಒದ್ದಾಡದೆ ದೂರ ನಿಂತು ನಗುವ ವಾಮನ-ಈ ರಾಮಾನುಜನ್. ಸಂಕೀರ್ಣ, ಬೌದ್ಧಿಕ ತರ್ಕ, ಸೊಫಿಸ್ಟಿಕೇಶನ್ (ಅತಿಶಿಷ್ಟತೆ), ಭಾಷಾ ಸೂಕ್ಷ್ಮತೆ, ಪದಭಂಜಕ ಪ್ರವೃತ್ತಿ, ’ಕಲಾಸೌಷ್ಠವನಿಷ್ಠ ಕಾಳಜಿ’- ರಾಮಾನುಜನ್ನರ ಕಾವ್ಯದ ಇಂಥ ವೈಶಿಷ್ಟ್ಯಗಳನ್ನು ಕನ್ನಡ ವಿಮರ್ಶಕರು ಈಗಾಗಲೇ ಗುರುತಿಸಿದ್ದಾರೆ.

ಈ ಸಂಕಲನದ ’ನಿನ್ನೆ’, ’ಒಂದು ಕ್ಷಣ, ಆಶ್ಚರ್ಯವೇನಿಲ್ಲ’ ಕವನಗಳಲ್ಲಿ ’ ಕಾಲಪುರುಷನ ದವಡೆಯ ಒಳಗೆ’ ಅಸಹಾಯಕನಾಗಿರುವ ಮನುಷ್ಯನ ಪಾಡು-ಕವಿಯನ್ನು ಕಾಡುತ್ತದೆ. ರಾಮಾನುಜನ್ನರ ಪ್ರಸಿದ್ಧ ಪುಟ್ಟ ಕವನ ’ ಅಪ್ಪ-ಮಗ’ದಂತೆ’ಆಶ್ಚರ್ಯವೇನಿಲ್ಲ’ ಕೂಡಾ ಒಂದು ಕಿರು ಕವನ-
ಒಳಗಿನ ಎಲ್ಲುಬು
ಹೀಗೇ ಒಂದು ದಿನ
ಬಿಸಿಲಲ್ಲಿ ಬೆಳ್ಳಗೆ ಬಿಳಿಚಿಕೊಂಡು
ತುಟಿಯಿಲ್ಲದೆ ಹಲ್ಲು ಕಿರಿದು ನಾಯಿ ಬಾಯಿಗೆ ಸಿಕ್ಕಿದರೆ ಆಶ್ಚರ್ಯವೇನಿಲ್ಲ.
’ ಮೂರು (ನಾಲ್ಕು) ಜೀವನ ಚರಿತ್ರೆ’ಯಲ್ಲಿ ಕವಿ ಹೋರಾಟದ ಬದುಕನ್ನು ಮೆಚ್ಚುವ ಆಶಾವಾದಿಯಾಗಿ ದ್ದಾರೆ. ’ಒಡಿಸ್ಸಿ’ಯ ಮೆನೆಲೆಅಸ್ ಹೇಳಿದ ಕತೆ’ಯನ್ನು ಭಾಷಾಂತರಿಸುವ, ’ಸಂಶಯ ಭಕ್ತಿ’ ಎಂಬ ಕವನ ಬರೆದಿರುವ ರಾಮಾನುಜನ್ ಚಾರ್ವಾಕ ಕವಿ. ಇವರು ಪದಭಂಜಕ ಮಾತ್ರವಲ್ಲ, ಪುರಾಣ ಭಂಜಕರೂ ಹೌದು. ’ ಸಂಶಯದ ಭಕ್ಕ್ತಿ’ಯಲ್ಲಿ ದೇವರನ್ನು ಅರ್ಥೈಸುತ್ತ, "ಮನುಷ್ಯ ಮಾತ್ರನಾದ ನನಗೆ ಮಾತ್ರ ದಕ್ಕಿದ ಭ್ರಾಂತಿ. ಮದ್ದೇ ಇಲ್ಲದ ಭ್ರಮೆ. ದೇಹದೊಂದಿಗೇ ಒಕ್ಕರಿಸಿದ ಸಂದೇಹ" ಎನ್ನುತ್ತಾರೆ. ರಾಮಾನುಜನ್ನರ ಕಾವ್ಯದಲ್ಲಿ ಸಣ್ಣಪುಟ್ಟ ಸಂಗತಿಗಳ ಹಳೆಯ ನೆನಪುಗಳು ಮತ್ತೆ ಮತ್ತೆ ಮಿಂಚುತ್ತವೆ. (’ಪಕ್ಕದ ಮನೆಯಲ್ಲಿ ಉಪನಿಷತ್ತು’, ’ಕೊಲರಾಡೊಕೃಷ್ಣಾಜಿನ’, ’ಕುಂಟೋಬಿಲ್ಲೆ’) ಆದರೆ ಅನಿವಾಸಿ ಭಾರತೀಯರಾಗಿರುವ ಇವರಲ್ಲಿ ಬೇರು ಕಳಚಿಕೊಂಡ ಸಂಕಟವಾಗಲಿ, ಪರಕೀಯತೆಯಾಗಲಿ, ಭವಿಷ್ಯದ ಕನಸುಗಳಾಗಲೀ ಇಲ್ಲ. ಚಿಂತನಪರ ಕವಿತೆಗಳ ಈ ಕವೆ ಕಾವ್ಯಭಾಷೆಯನ್ನೂ, ಕಾವ್ಯಕುತೂಹಲಿಗಳ ಬುದ್ಧಿಯನ್ನೂ ಬೆಳೆಸುತ್ತಾರೆ.
’ಪದ್ಯದ ಮಾತು ಬೇರೆ’ ಕವನದಲ್ಲಿ ರಾಮಾನುಜನ್,
ಪದ್ಯದ ಮಾತು ಬೇರೆ
ಅದು ಕುದುರಿಬಿಟ್ಟರಂತೂ
ಅಪಾರ್ಥ ಮಾಡಿಕೊಂಡರೆ
ಅದೂ ಒಂದು ತರಹ ಅರ್ಥವೇ ಅಂತ ಅನಿಸಿಬಿಡುತ್ತೆ. ಎನ್ನುತ್ತಾರೆ. ರಾಮಾನುಜನ್ನರ ಕೆಲವು ಕವನಗಳಲ್ಲಿ ವ್ಯಂಗ್ಯಾರ್ಥ ಬೆಡಗಿನಲ್ಲಿ ಉಳಿದು, ವಾಚ್ಯಾರ್ಥ ವಿಮುಖರಾದ ಸಹೃದಯರಿಗೆ ಧ್ವನಿಯ ಎಳೆ ಥಟ್ಟನೆ ಹೊಳೆಯುವುದಿಲ್ಲ.ಅಂಗುಲ ಹುಳ ಕೋಗಿಲೆಯ ಹಾಡು ಅಳೆಯುವುದರಲ್ಲಿ ಸೋತಂತೆ ಓದುಗ ಪದ್ಯದ ಬೇರೆ ಮಾತು ಏನೆಂದು ತಿಳಿಯದೆ ಸುಸ್ತಾಗುತ್ತಾನೆ.
’ಕುಂಟೋಬೆಲ್ಲೆ’ ಸಂಕಲನದಲ್ಲಿ ಅನ್ನಾ ಅಖಮ ತೋವಾ, ಬೆಕೆಟ್, ರಿಲ್ಕ್, ಗ್ಯಾರಿ ಸ್ನೇಡರ್, ಚೆನಾರ್ ವಲೆಹೊ, ಯೆಹುದ್ ಅಮಿಖಾಯ್ ಮತು ಜೋಸೆಫಿನ್ ಜೇಕಬ್ ಸನ್ನರ ಕವನಗಳ, ಹನ್ನೆರಡು ಜಪಾನಿ ಹೈಕುಗಳ ಭಾಷಾಂತರ ರೂಪಾಂತರಗಳಿವೆ. ’ಇರಾನಿನಲ್ಲಿ ಬರೆದಿರಬಹುದಾದ ಪದ್ಯ ’ ಕಾಫಿ ಕುಡಿಯುತ್ತ ಪಾಪಪ್ರಜ್ಞೆ’ ಇಂಥ ಕವನಗಳಲ್ಲಿ ರಾಮಾನು ಜನ್ನರ ರಾಜಕೀಯ ನಿಲುವುಗಳ ಸುಳಿವು ಸಿಗುತ್ತದೆ.

’ವರ್ತಮಾನ’ ಕವನದ ಕೊನೆಯಲ್ಲಿ ಕವಿ ಪ್ರಶ್ನೆಸುತ್ತಾರೆ.-
ಅಮೆಜಾನ್ ದಾಟಬಶುದು
ಈ ಅನುದಿನದ ಅಂತರಗಂಗೆ ದಾಟುವುದು ಹೇಗೆ?
ಕಣ್ಣೊಳಗಿನ ಈ ಕ್ಷಿತಿಜ ಮುಟ್ಟುವುದು ಹೇಗೆ?
’ ನಲುವತ್ತರ ನೆರಳಿನಲ್ಲಿ ಖ್ಯಾತರಾದ ಎ.ಕೆ. ರಾಮಾನು ಜನ್ ರಿಗೆ ಈಗ ಅರುವತ್ತೊಂದು ವರ್ಷ. ಅವರ ಪ್ರತಿಭೆ ’ ಶಬುದಕ್ಕೆ ಹೇಸಿ ಮುಗುದನಾದ’ ಅಜಗಣ್ಣನಂಥದ್ದು.

ಅವರ ಕಾವ್ಯ ಕುಂಟೋಬಿಲ್ಲೆ ಆಟದ ಹದಿಹರೆಯದ ಬೆಚ್ಚನೆಯನ್ನು, ತುಂಟಾಟವನ್ನು ಇನ್ನೂ ಉಳಿಸಿಕೊಂಡಿದೆ. ಬಹಿರಂಗದಲ್ಲಿ ಭಾಷಾವಿಜ್ಞಾನಿಯ ಕಸರತ್ತು, ಅಂತರಂಗದಲ್ಲಿ ಲೋಕ ಪರಿವರ್ತನೆಯ  ಚಲವಿಲ್ಲದ ಲೋಕಾಯತ ಮನೋಧರ್ಮ, ಇವೆರಡರ ಸಂಧಿಯಲ್ಲಿ ಕಾವ್ಯದ ಅಂತರಗಂಗೆ-ಇದು ರಾಮಾನುಜನ್ ಕಾವ್ಯದ ನೆಯ್ಗೆ. "ಚಿಕ್ಕಂದು ಮುಕ್ಕಿದ ಬೀದಿ ಮಣ್ಣಲ್ಲಿ ವಿಶ್ವರೂಪ ಕಂಡ ಹಾಗಾಗಿ ಒಂದು ನಿಮಿಷ ತಬ್ಬಿಬ್ಬಾಯಿತು. : (ಕುಂಟೋ ಬಿಲ್ಲೆ)

ಕುಂಟೋಬಿಲ್ಲೆ
-ಎ.ಕೆ.ರಾಮಾನುಜನ್
ಮನೋಹರ ಗ್ರಂಥಮಾಲಾ,
ಲಕ್ಷ್ಮೀಭವನ, ಸುಭಾಸ ರಸ್ತೆ,
ಧಾರವಾಡ-೫೮೦೦೦೧.೧೯೯೦. ರೂ.೩೦/-
ಮುರಳೀಧರ ಉಪಾಧ್ಯ ಹಿರಿಯಡಕ


No comments:

Post a Comment