stat Counter



Tuesday, July 21, 2020

ಮುರಳೀಧರ ಉಪಾಧ್ಯ ಹಿರಿಯಡಕ - ’ ದೇವ ಸ್ಮರಣೆ’ { ಬಾಗಲೋದಿ ದೇವರಾಯರು " } " ಬಿದ್ದದ್ದು ಗರಿಯಲ್ಲ ಹಕ್ಕಿಯೇ " { ಕೆ. ರಾಮಚಂದ್ರ }

ಬಾಗಲೋಡಿ ದೇವರಾಯರು (೧೯೨೭-೧೯೮೫) ತನ್ನ ಯೌವನದಲ್ಲಿ ಬರೆದ ’ಹುಚ್ಚ ಮುನಸೀಫ ಮತ್ತು ಇತರ ಕತೆಗಳು’ (೧೯೪೯), ’ಆರಾಧನಾ (೧೯೫೬) ಎಂಬ ಕಥಾ ಸಂಕಲನಗಳಿಂದ ಕನ್ನಡ ಕಥಾಲೋಕದಲ್ಲಿ ಮಿಂಚಿ ಮರೆಯಾದ ಕತೆಗಾರ ಅವರ್ ಮೂರನೆಯ ಕಥಾ ಸಂಕಲನ ’ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು (೧೯೮೬) ಮರಣೋತ್ತರ ಕೃತಿಯಾಗಿ ೧೯೮೬ರಲ್ಲಿ ಪ್ರಕತವಾಯಿತು.೧೯೪೯ರಲ್ಲಿ ಐ.ಎಫ್. ಎಸ್. ಉತ್ತೀರ್ಣರಾಗಿ ವಿದೇಶಾಂಗ   ಸೇವೆ ಆರಂಭಿಸಿದ ಬಾಗಲೋಡಿಯವರು ಇತಾಲಿಯಾ, ನೈಜೀರಿಯಾ, ನೇಪಾಲಗಳಲ್ಲಿ ಅಧಿಕಾರಿಯಾಗಿದ್ದವರು. ಫಿಲಿ ಪ್ಪೀನ್ಸ್, ನ್ಯೂಝಿಲ್ಯಾಂಡ್, ಬಲ್ಗೇರಿಯಾಗಳಲ್ಲಿ ರಾಯಭಾರಿಯಾಗಿದ್ದರು.
ಬಾಗಲೋಡಿಯವರ ಸೋದರಳಿಯ ವಿ. ರಘುಚಂದ್ರ ಹೆಬ್ಬಾರ್, ಬಾಗಲಲೋಡಿಯವರ್ ಅಕ್ಕನ ಮಗ ಎಂ. ಅರವಿಂದ ಶರ್ಮ, ಸಹಪಾಠಿಗಳಾಗಿದ್ದ ಕು.ಶಿ. ಹರಿದಾಸ ಭಟ್, ಪಿ. ಸೇತುಮಾಧವ ರಾವ್, ಜಿ.ಟಿ ನಾರಾಯಣ ರಾವ್, ಕೆ. ರಾಘವೇಂದ್ರ ರಾವ್, ಎಂ. ಪಂಚಪ್ಪ, ವಿ. ಗುರುಮೂರ್ತಿ ಅವರ   ಲೇಖನಗಳು  ಬಾಗಲೋಡಿಯವರ ವ್ಯಕ್ತುತ್ವದ ಆತ್ಮೀಯ ಸಮೀಪಚಿತ್ರವನ್ನು ನೀಡುತ್ತವೆ.ಕು.ಶಿ., ಹಾ.ಮಾ.ನಾ., ಎಲ್.ಎಸ್. ಶೇಷಗಿರಿ ರಾವ್ ಮತ್ತು ಎಂ. ರಾಮ್ ಚಂದ್ರರು ಬಾಗಲೋಡಿಯವರ ಕುರಿತು ಬರೆದಿರುವ ನುಡಿನಮನಗಳು ಈ ಗ್ರಂಥದಲ್ಲಿವೆ. ಪ್ರೋ| ಶೇಷಗಿರಿರಾಯರು ಬರೆದಿರುವಂತೆ,’ ಅವರು ವಿಶಿಷ್ಟ ರೀತಿಯಲ್ಲಿ ವ್ಯಂಗ್ಯವನ್ನು ಬಳಸಿದ್ದನ್ನು ಕನ್ನಡ ಸಾಹಿತ್ಯದಲ್ಲಿ ಕಾಣಲಾರೆವು...ಬಾಗ ಲೋಡಿಯವರದು ಒಂದು ’ಪಾಸಿಟಿವ್’ ಕಲ್ಪನೆಯಿಂದ ಮೂಡಿಬಂದ ಐರನಿ. ಬಾಗಲೋಡಿಯವರ್ ವಾಜ಼್ಮಯ ಸಮೀಕ್ಷೆ ಎಂಬ ಭಾಗದಲ್ಲಿ ಕೆ. ಮಹಾಲಿಂಗ ಭಟ್, ಎಸ್. ದಿವಾಕರ್ ಹಾಗೂ ಎಂ. ರಾಮಚಂದ್ರರ ಲೇಖನಗಳಿವೆ. "ನಿಮ್ಮ ಕತೆಗಳು ಒಂದು ರೀತಿಯಲ್ಲಿ ಪ್ಯಾರಬಲ್ (ದೃಷ್ಟಾಂತ ಕತೆಗಳು) ಹಾಗಿವೆಯಲ್ಲ" ಎಂಬ ಎಸ್. ದಿವಾಕರ್ ಅವರು ಪ್ರಶ್ನೆಗೆ ಬಾಗಲೋಡಿಯವರ ಉತ್ತರ ಹೀಗಿತ್ತು-"ನನ್ನ ಎಲ್ಲ ಕತೆಗಳೂ ಒಂದೊಂದು ಉದ್ದೇಶಕ್ಕಾಗಿ ಬರೆಯಲ್ಲಟ್ಟಿವೆ. ವೈದ್ಯ, ವಿಜ್ಞಾನಿ, ಗುಮಾಸ್ತರಂತೆ ಸಾಹಿತಿಯೂ ಕೂಡ ಸಮಾಜಕ್ಕೆ ಪ್ರಯೋಜನ ಕಾರಿಯಾಗಬೇಕೆಂದು ನನ್ನ ನಂಬಿಕೆ..." ಫಿಲಿಪ್ಫೇನ್ಸ್ ಅಧ್ಯಕ್ಷರಾಗಿದ್ದ ಫರ್ಡಿನಾಂಡ್ ಮಾರ್ಕೋಸ್ ಅವರು ರಾಯಭಾರಿ  ಬಾಗಲೋಡಿಯವರಿಗೆ ಬರೆದ ಪ್ರಶಂಸಾಪತ್ರ ಈ ಭಾಗದಲ್ಲಿದೆ.’ ಬಾಗಲೋಡಿಯವರ ಚಿಂತನೆಗಳು ಎಂಬ ಈ ಗ್ರಂಥದ ಕೊನೆಯ ಭಾಗದಲ್ಲಿ ಎರಡು  ಲೇಖನಗಳಿವೆ. ’ಅಮೇರಿಕದಲ್ಲಿ ನೀಗ್ರೋ ಜನರ ದು:ಖ ಪರಂಪರೆ’ (ಪ್ರಬುದ್ಧ ಕರ್ನಾಟಕ-೧೯೪೮) ಜಾನ್ ಗುಂಥರ್ ನ ’ಇನ್ ಸೈಡ್ ಯು.ಎಸ್. ಎ’ ಗ್ರಂಥದ ಆಧಾರದಿಂದ ಬರೆದ ಲೇಖನ.’ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ’ (೧೯೮೫) ಎಂಬುದು ಮಂಗಳೂರು  ವಿಶ್ವ ವಿದ್ಯಾನಿಲಯದಲ್ಲಿ ’ಬಾಗಲೋಡಿ ಯವರು ನೀಡಿದ ಉಪನ್ಯಾಸದ ಪೂರ್ಣ ಪಾಠ. ’ದೇವಸ್ಮರಣೆ’ ಬಾಗಲೋಡಿಯವರನ್ನು ಕುರಿತ ನೆನಪುಗಳು ಚಿರಂಜೀವಿ ಯಾಗಿ ಉಳಿಯುವಂತೆ ಮಾಡುವ ಸಾರ್ಥಕ ಗ್ರಂಥ.
’ ಸಾವನಪ್ಪಿ ಚೆಲ್ಲಿ ಹೋದ ಎಲುಬು ಗೂಡ  ರಾಸಿಗೆ, ಮಲಯ ಗಿರಿಯ ಕಳಸ ದಿಂದ ಅಮೃತಧಾರೆ ಸುರಿವೆವು’-ಇವು ಇಪ್ಪತ್ತಾರರ ಎಳೆ ವಯಸ್ಸಿನಲ್ಲಿ ಅನಾರೋಗ್ಯದಿಂದ ತೀರಿಕೊಂದ ಕವಿ  ಕುಂಜ಼್ ಹಿತ್ಲು ರಾಮಚಂದ್ರರ (೧೯೨೯-೧೯೫೫) ’ಸುಪ್ತಶ್ಕ್ತಿ ಕವನದ ಸಾಲುಗಳು. ೧೯೫೩ರಲ್ಲಿ ಪ್ರಕಟವಾದ ರಾಮಚಂದ್ರರ ’ಬಿದ್ದಗರಿ’ ಸಂಕಲನಕ್ಕೆ ಹಿನ್ನುಡಿ ಬರೆದಿದ್ದ ಎಂ.ಗೋಪಾಲ ಕೃಷ್ಣ ಅಡಿಗರು ಈ ಕವಿ ; ನೂತನ ಜಗತ್ತಿನ ವಿದ್ಯಮಾನಗಳನ್ನು ಅರಗಿಸಿಕೊಂಡು ನವಕಾಲೀನ ವಕ್ತಾರನಾಗಬಲ್ಲ    ಶಕ್ತಿಯನ್ನು ಬೆಳೆಸಿಕೊಳ್ಳತಕ್ಕವನು ಎಂದು ತೋರುತ್ತದೆ." ಎಂದು ಬರೆದಿದ್ದರು.೧೯೫೩ರಲ್ಲಿ ’ಬಿದ್ದಗರಿ’ಯನ್ನು ಪ್ರಕಟಿಸಿದ್ದ ಎಚ್. ಎಂ. ಮರುಳಸಿದ್ಧಯ್ಯ ಮತ್ತು ಎಂ.ಬಿ. ಮರಕಿಣೆಯವರು, ಐವತ್ತು ವರ್ಷಗಳ ಬಳಿಕ, ರಾಮಚಂದ್ರರನ್ನು ಕುರಿತ ತಮ್ಮ ನೆನಪುಗಳೊಂದಿಗೆ ’ಬಿದ್ದಗರಿ’ ಯನ್ನು ಸಂಪಾದಿಸಿದ್ದಾರೆ. ಟಿ.ಜಿ. ಮುಡೂರು, ಡಾ\ಎಚ್.ಎಂ. ಮರುಳಾಸಿದ್ಧಯ್ಯ,ಡಾ| ಎಂ.ಬಿ. ಮರಕಿಣೆ ಮತ್ತು ಸೂ.ವೆಂ. ಆರಗ ಲೇಖನಗಳಲ್ಲಿ ರಾಮಚಂದ್ರರ ವ್ಯಕ್ತಿತ್ವವನ್ನು ಕುರಿತ ನೆನಪುಗಳು ಹಸಿರಾಗಿವೆ. ಡಾ| ರಾಮಚಂದ್ರ ದೇವ ಅವರು ’ಬಿದ್ದಗರಿ’ಯಲ್ಲಿರುವ ’ಸುಪ್ತಶಕ್ತಿ’ ಕವನವನ್ನು ವಿಮರ್ಶಿಸುತ್ತ, "ಜನರ ಮಾತನ್ನು ಎಚ್ಚರದಿಂದ ಕೇಳಿಸಿಕೊಂಡ, ಸುತ್ತಲಿನ ಜೀವನದ ವಿವರ ಗಮನಿಸಿದ, ಸ್ವವಿಮರ್ಶೆ ಸಾಧ್ಯ ಇದ್ದ ಕವಿ ಬರೆದ ಕವನ್ ಇದು. ಹಾಗೆಯೇ ಮನುಷ್ಯರ ಭವಿಷ್ಯದ ಬಗ್ಗೆ ಆಶಾ ಭಾವನೆ ಇರುವ ಕವನವೂ ಹೌದು" ಎಂದಿದ್ದಾರೆ.
’ಬಿದ್ದಗರಿ’ಯಲ್ಲಿ ಐವತ್ತು ವರ್ಷಗಳ ಹಿಂದಿನ ಹಕ್ಕಿಯ ಹಾಡು ಮಾಸದೆ ಉಳಿದಿದೆ.
ಮುರಳೀಧರ ಉಪಾಧ್ಯ, ಹಿರಿಯಡಕ
ದೇವಸ್ಮರಣೆ
(ಬಾಗಲೋಡಿ ದೇವರಾಯರ ಸ್ಮರಣಸಂಪುಟ)
ಸಂ:ಜಿ.ಟಿ ನಾರಾಯಣ ರಾವ್
ಪ್ರ: ಅತ್ರಿ ಬುಕ್ ಸೆಂಟರ್,
೪ ಶರಾವತಿ ಕಟ್ಟಾಡ, ಬಲ್ಮಠ,
ಮಂಗಳೂರು-೫೭೫೦೦೧.
ಮೊದಲ ಮುದ್ರಣ:೨೦೦೩
ಬೆಲೆ:ರೂ.೬೦.

ಬಿದ್ದದ್ದು ಗರಿಯಲ್ಲ ಹಕ್ಕಿಯೇ
(ಕುಂಜ಼್ ಹಿತ್ಲುರಾಮಚಂದ್ರರ ಬದುಕು-ಬರೆಹ)
ಸಂ:ಡಾ\ಎಚ್.ಎಂ. ಮರುಳಸಿದ್ಧಯ್ಯ,
ಡಾ|ಎಂ.ಬಿ. ಮರಕಿಣೆ
ಪ್ರ:ಕರ್ನಾಟಕ ಸಂಘ
ಪುತ್ತೂರು-೫೭೪೨೦೨(ದ.ಕ)
ಮೊದಲ ಮುದ್ರಣ:೨೦೦೩
ಬೆಲೆ:ರೂ.೪೮.

No comments:

Post a Comment