stat Counter



Sunday, July 19, 2020

ಮುರಳೀಧರ ಉಪಾಧ್ಯ ಹಿರಿಯಡಕ -- - ಅಪರೂಪದ ಹಕ್ಕಿ { ಅಸ್ಸಾಮಿ ಕವಿತೆಗಳು 1998 }

’ ಕಾಮರೂಪವೆಂದು ಕರೆಯಲ್ಪಟ್ಟ ಇವಳು ಬೆಟ್ಟದ ಕುವರಿ’ ಪ್ರಾಚೀನ ದಾಖಲೆಗಳು ತೌಳವ ಅಸ್ಸಾಮನ್ನು ಹೀಗೆ ವರ್ಣೆಸಿವೆ. ಹದಿಮೂರನೆಯ ಶತಮಾನದ ವಲಸೆ ಬಂದ ಶಾನ್ ವಂಶದ ಅಹೋಮರಿಂದಾಗಿ (ಅಸಾಮಾನ್ಯರು) ಈ ನಾಡಿಗೆ ’ಅಸಾಮ’ ಎಂಬ ಹೆಸರು ರೂಡಿಯಾಯಿತು. ಬಂಗಾಲಿ, ಒರಿಯಾಗಳಂತೆ ಅಸಾಮಿ ಕೂಡ ಮಾಗಧಿ ಅಪಭ್ರಂಶದಿಂಸ ಮೈತಳೆದ ಭಾಷೆ. ವಾಲ್ಮೀಕಿ ರಾಮಾಯಣವನ್ನು ಭಾಷಾಂತರಿಸಿದ ಮಾಧವ ಕಂಡಲಿ (೧೪ನೆಯ ಶತಮಾನ), ಭಾಗವತವನ್ನು ಅನುವಾದಿಸಿದ ಶಂಕರದೇವ (೧೫ನೆಯ ಶತಮಾನ), ಮಹಾಭಾರತವನ್ನು ಭಾಷಾಂತರಿಸಿದ ರಾಮಸರಸ್ವತಿ ಪ್ರಾಚೀನ ಅಸಾಮೀ ಸಾಹಿತ್ಯದ ಪ್ರಮುಖ ಕವಿಗಳು. ’ಹೊಳೆಯುವುದೆಲ್ಲ   ಚಿನ್ನವಲ್ಲ’ ಎಂಬ ಕಾದಂಬರಿಯನ್ನು ಬರೆದ ಹೇಮಚಂದ್ರ ಬರುವಾ(೧೮೩೫-೯೬)’ಆಧುನಿಕ ಅಸ್ಸಾಮಿ ಸಾಹಿತ್ಯದ ಜನಕ’ ಎಂದು ಪ್ರಸಿದ್ಧರಾಗಿ ದ್ದಾರೆ. ಕಮಲಾಕಾಂತ ಭಟ್ಟಾಚಾರ್ಯ, ಲಕ್ಷ್ಮೀನಾಥ್ ಬೆಜಬರುವಾ ಮತ್ತಿತರ ಹಿರಿಯ ಕವಿಗಳು ಆಧಿನಿಕ ಅಸ್ಸಾಮಿ ಕಾವ್ಯವನ್ನು ಬೇಳೆಸಿದ್ದಾರೆ.
ಕೃಷ್ಣ ಪಾಟೀಲರ ’ಅಪರೂಪದ ಹಕ್ಕಿ’ ಸಂಕಲನದಲ್ಲಿ ಇಪ್ಪತ್ತೆಂಟು ಕವಿಗಳ ನಲುವತ್ತಮೂರು ಕವನಗಳಿವೆ. ಪ್ರದೀಪ ಆಚಾರ್ಯರು ಇಂಗ್ಲಿಷಿಗೆ ಅನುವಾದಿಸಿರುವ ಅಸ್ಸಾಮಿ ಕವನಗಳನ್ನು, ಪಾತೀಲರು ಇಂಗ್ಲಿಷಿನ ಮೂಲಕ ಕನ್ನಡಕ್ಕೆ ತಂದಿದ್ದಾರೆ. ೧೯೭೫-೯೫ರ ವರೆಗಿನ, ಅಸ್ಸಾಮಿ ಕಾವ್ಯದ ಎರಡು ದಶಕದ ಸಾಧನೆಯನ್ನು ಪ್ರತಿನಿಧಿಸುವ ಕವನಗಳು ಈ ಸಂಕಲದಲ್ಲಿವೆ. ಈ ಸಂಕಲದಲ್ಲಿರುವ ನವಕಾಂತ ಬರುವಾ, ಬಿರೇಶ್ವರ್ ಬರುವಾ,  ಹಿರೇನ್  ಭಟ್ಟಾಚಾರ್ಯ, ಕೇಶವ ಮಹಂತಾ, ನಿರ್ಮಲಪ್ರಭಾ ಬಾಡೋಲೊಯಿ, ನೀಲಮಣೆ ಫುಕಾನ್ ಅಸ್ಸಾಮಿ ಕಾವ್ಯದ ಹಿರಿಯ ತಲೆಮಾರಿನ ಕವಿಗಳು. ದಿನೇಶ್ ಗೋಸ್ವಾಮಿ, ಅನಿಸ್ ಉಜ್ ಝಮಾನ್, ಸೈಯದ್ ಅಬ್ಬುಲ್ ಹಾಲಿಂ, ಕಬಿನ್ ಫುಕಾನ್, ಹರೇಕೃಷ್ಣ ಡೇಕಾ, ಶಿಬಪ್ರಸಾದ ಬರುವಾ, ಸಮೀರ ತಂತಿ, ಅಬೋನಿ ಚಕ್ರವರ್ತಿ, ಸನಂತಾ ತಂತಿ, ಅನುಭವ ತುಲಸಿ, ಅರ್ಚನಾ ಪೂಜಾರಿ, ಚನ್ನಿರಾಮ್ ಗೋಗೋಯಿ,  ಪ್ರಯಾಣ್ ಸೈಕಿಯಾ ಇವರೆಲ್ಲ ವರ್ಧಮಾನದ ಹಾದಿಯಲ್ಲಿರುವ ಮುಖ್ಯ ಕವಿಗಳು.
ಎಂಬತ್ತರ ದಶಕದ ಅಸ್ಸಾಮಿನ ಉಗ್ರಗಾಮಿ ಚಳವಳಿ ಹಾಗೂ ಅದರ ಪರಿಣಾಮವಾದ ಹಿಂಸೆ ಈ ಸಂಕಲನದ ಹೆಚ್ಚಿನ ಕವನಗಳ ಹಿನ್ನೆಲೆಯಲ್ಲಿದೆ. ಹೊಂಚಿ ಕುಳಿತಿರುವ ಸೈನಿಕರು ತಮ್ಮನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ ಎಂಬುದನ್ನರಿಯದೆ   ಮೀಯಲೆಂದು  ಹೊಳೆಗಿಳಿದಿರುವ ಗಿರಿಬಾಲೆಯರ  ಚಿತ್ರಣ  ಹರೇ ಕೃಷ್ಣ ಡೇಕಾ ಅವರ  ’ಅರುಣೋದಯ’ ಕವನದಲ್ಲಿದೆ.

ಕಬಿನ್ ಫುಕಾನ್ ರ ’ಮೋಸ ಹೋದವರು’ ಕವನದ ಕೊನೆಯ ಸಾಲುಗಳು ಹೀಗಿವೆ; "ಗದಾ ಪ್ರಹಾರ ಭಲ್ಲೆಗಳಿರಿತದಿಂದಾಗಿ ನೆಲೆ ತಪ್ಪಿ ಕ್ಷೀಣಿಸಿದೆ ಯದುಕುಲ ವಾರಸುದಾರರಿಲ್ಲದೆ" "ಚೀರಾಟ ಮತ್ತು ರೋದನ ಜೀವಮಾನದುದ್ದಕ್ಕೂ ಕೇಳಿರುವೆ ನಾನು"
ಎನ್ನುತ್ತಾರೆ ’ದುರುಳ  ಕಣ್ಣೇರು’ ಕವನದ ಕವಿ ಆತನು ಭಟ್ಟಾಚಾರ್ಯ. ಅಜಿತ್ ಗೋಗೋಯಿ ಅವರ ’ ವ್ಯರ್ಥ ಕಾಲ’ ಕವನದ ಮೊದಲ ಸಾಲುಗಳಿವು’ "ಕಾಂಚನ ಪುಷ್ಪದ ಬಿಳಿಪಕಳೆಗಳ ಮೇಲೆ ಅತ್ಯಾಚಾರವೆಸಗಿದೆ ಹೆಜ್ಜೇನು ಹಾಡೇ ಹಗಲು."

’ಅಕ್ಷರ ಕವಿ ಸಂಧಾನ’ ಮಾಲೆಯಲ್ಲಿ ಪ್ರಕಟವಾಗಿರುವ ಈ ಸಂಕಲನದ ಹಿಂಸೆಯ ಅರ್ಥ-ಅನರ್ಥಗಳನ್ನು ಕುರಿತು ಧ್ಯಾನಿಸುತ್ತಿರುವ ಇತ್ತೀಚಿಗಿನ ಅಸ್ಸಾಮಿ ಕಾವ್ಯವನ್ನು ಚೆನ್ನಾಗಿ ಪರಿಚಯಿಸುತ್ತದೆ. ಕಾವ್ಯಾನು ಸಂಧಾನದ ಜತೆಯಲ್ಲಿ ಭಾರತದ ಭಾವೈಕ್ಯತೆಯನ್ನು ಬೆಸೆಯುವ ಸಾರ್ಥಕ ಪ್ರಯ ಇಲ್ಲಿದೆ. ಅಸ್ಸಾಮಿನ ’ಅಪರೂಪದ ಹಕ್ಕಿಯನ್ನು ಕರ್ನಾಟಕಕ್ಕೆ ಕರೆ ತಂದಿರುವ ಪಾಟೀಲರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ
ಅಪರೂಪದ ಹಕ್ಕಿ
(ಅಸ್ಸಾಮಿ ಕವಿತೆಗಳು)
ಕನ್ನಡಕ್ಕೆ:ಕೃಷ್ಣ ಪಾಟೀಲ
ಪ್ರ:ಅಕ್ಷರ   ಪ್ರಕಾಶನ,  ಹೆಗ್ಗೋಡು-೫೭೭೪೧೭,
ಸಾಗರ್ ತಾಲೂಕು
ಮೊದಲ ಮುದ್ರಣ:೧೯೯೮
ಬೆಲೆ ರೂ.೬೦/(ಪುಟಗಳು:೯೬)

No comments:

Post a Comment