stat CounterWednesday, July 15, 2020

ಮುರಳೀಧರ ಉಪಾಧ್ಯ ಹಿರಿಯಡಕ - ಕೆ. ಜಿ . ವಸಂತ ಮಾಧವರ " ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ "

ಡಾ|ಕೆ.ಜಿ. ವಸಂತ ಮಾಧವ ಅವರು ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸದ ಅಧ್ಯಯನಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ.’ಪೊಲಿಟಿಕಲ್ ಹಿಸ್ಟರಿ ಆಫ್ ಕೆನರಾ ೧೫೬೫-೧೭೬೩’ ಎಂಬ ಸಂಶೋಧನ ಗ್ರಂಥಕ್ಕಾಗಿ ಅವರು ಪಿ.ಎಚ್.ಡಿ. ಪದವಿ ಪಡೆದರು. ’ರಿಲಿಜನ್ ಇನ್ ಕೋಸ್ಟಲ್ ಕರ್ನಾಟಕ ೧೫೦೦-೧೭೬೩’(೧೯೮೫), ;ವೆಸ್ಟರ್ನ್ ಕರ್ನಾಟಕ-ಇಟ್ಸ್ ಎಗ್ರೇರಿಯನ್ ರಿಲೇಶ್ ನ್ಸ್ -ಎ ಹಿಸ್ಟರಿ’ (೧೯೯೧)- ಇವು ಅವರ ಇತರ ಪ್ರಮುಖ ಗ್ರಂಥಗಳು. ಲಂಡನ್ನಿನ ’ ರಾಯಲ್ ಏಷಿಯಾಟಿಕ್ ಸೊಸೈಟಿಯ ಸದಸ್ಯತ್ವದ ಗೌರವ ಪಡೆದಿರುವ ಇವರು ದಿಲ್ಲಿಯ ಭಾರತ ಇತಿಹಾಸ ಸಂಶೋಧನಾ ಸಂಸ್ಥೆಯ ಹಿರಿಯ ಇತಿಹಾಸ ಸಂಶೋಧಕರಲ್ಲಿ ಒಬ್ಬರಾಗಿದ್ದಾರೆ.’ಕರಾವಳಿ ಕರ್ನಾಟಕದ  ರಾಜಕೀಯ ಇತಿಹಾಸ ಮತ್ತು ಸಂಶೋಧನೆ’ ಗ್ರಂಥದಲ್ಲಿ ಡಾ| ಕೆ.ಜಿ. ವಸಂತ ಮಾಧವರ ಇಪ್ಪತ್ತಮೂರು ಸಂಶೋಧನ ಲೇಖನಗಳಿವೆ. "ರಾಜಕೀಯ ಇತಿಹಾಸ ಸಮೀಕ್ಷೆ’ ಎಂಬ ಮೊಸಲ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವ ತುಳುನಾಡಿನ ಇತಿಹಾಸ ಗ್ರಂಥಗಳ ವಿಮರ್ಶೆ, ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ  ಇತಿಹಾಸ ಸಮೀಕ್ಷೆ ಹಾಗೂ ಗೇರಸೊಪ್ಪೆಯ ಸಾಳ್ವರು, ಭಟ್ಕಳ ಗೇರಸೊಪ್ಪೆಯ ರಾಣೆಯರನ್ನು ಕುರಿತ ಲೇಖನಗಳಿವೆ. ’ಆಕರಗಳು’ ಎಂಬ ಎರಡನೆಯ ವಿಭಾಗದ ಲೇಖನಗಳು ಕರಾವಳಿ ಕರ್ನಾಟಕದ ದಾಖಲೆಗಳು, ಕೊಚ್ಚಿ ಪತ್ರಾಗಾರದಲ್ಲಿರುವ ಕನ್ನಡ ಇತಿಹಾಸ ದಾಖಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ  ದಕ್ಷಿಣ ಕನ್ನಡ ಜಿಲ್ಲೆಯ ವಿದೇಶಿ ಆಕರಗಳಿಗೆ ಸಂಬಂಧಿಸಿವೆ. ’ಕರ್ನಾಟಕ ಮತ್ತು ಕರಾವಳಿ ಅರಸು ಮನೆತನಗಳು’ ಎಂಬ ಮೂರನೆಯ ಭಾಗದಲ್ಲಿ ಕರ್ನಾಟಕದ ಅರಸುಗಳೊಂದಿಗಿನ ಕದಂಬರ ಹಾಗೂ ವಿಜಯನಗರ ಅರಸರ ಸಂಬಂಧ, ಕೆಳದಿಯ ನಾಯಕರು, ಕೆಳದಿ ಅರಸರ ತೆರಿಗೆ ಪದ್ಧತಿ, ಶಿವಾಝಿಯ ಬಸರೂರು ಧಾಳಿ ಹಾಗೂ ಹೈದರಾಲಿ ಟಿಪ್ಪು ಸುಲ್ತಾನರ ಕಾಲದ ಕರಾವಳಿ ಕರ್ನಾಟಕವನ್ನು ಕುರಿತ ಲೇಖನಗಳಿವೆ.
’ಕರಾವಳಿ ಕರ್ನಾಟಕದ ಅರಸು ಮನೆತನಗಳ ಸಂಶೋಧನಾತ್ಮಕ ಅಧ್ಯಯನ ಎಂಬ ನಾಲ್ಕನೆಯ ಭಾಗದಲ್ಲಿರುವ ಲೇಖನಗಳು ಭೂತಪಾಂಡ್ಯನ ಐತಿಹಾಸಿಕ ಹಿನ್ನಲೆ, ಕಳಸ-ಕಾರ್ಕಳ ಅರಸ್ರು ಮತ್ತು ಶೃಂಗೇರಿ ಮಠ, ಚೌಟ-ಭೈರವ ಒಡೆಯರ ರಾಜಕೀಯ ಸಂಬಂಧ, ಕಾರ್ನಾಡಿನ ರಾಣೆ, ಸ್ಯಾದಿ ಅರಸು ಮನೆತನ-ಈ ವಿಷಯಗಳಿಎ ಸಂಬಂಧಿಸಿವೆ.

ಸಾಳ್ವ ವಂಶದ ಚೆನ್ನಭೈರಾದೇವಿ ೧೫೫೨ರಿಂದ ೧೬೦೬ರ ವರೆಗೆ ಐವತ್ತಾರು ವರ್ಷಗಳ ಕಾಲ ಸಂಗೀತಪುರ-ಗೇರುಸೊಪ್ಪೆಗಳನ್ನು ಆಳುತ್ತಿದ್ದಳು.ಇವಳ ರಾಜ್ಯಕ್ಕೆ ಕರಿಮೆಣಸಿನ ವ್ಯಾಪಾರಕ್ಕಾಗಿ ಬರುತ್ತಿದ್ದ ಪೋರ್ಚ್ ಗೀಜರು ಇವಳನ್ನು
’ಕರಿಮೆಣಸಿನ ರಾಣೆ’ ಎಂದು ಕರೆಯುತ್ತಿದ್ದರು. ೧೫೬೯ರಲ್ಲಿ ಪೋರ್ತುಗೀಜರು ಆಕ್ರಮಣ ಮಾಡಿದಾಗ ಚೆನ್ನ ಭೈರಾದೇವಿ  ಧೈರ್ಯದಿಂದ ಎದುರಿಸಿದಳು. ಹೊನ್ನಾವರ ಕೋಟೆಗೆ ಬಂದು ಸ್ವತ:ಬಂದೂಕು ಹಿಡಿದು ಯುದ್ಧ ಮಾಡಿದಳು. ನಾಲ್ಕು ದಿನ ನಡೆದ ಯುದ್ಧದಲ್ಲಿ ಪೋರ್ಚುಗೀಜರು ಸೋತರು.
ಶೃಂಗೇರಿ ಮಠದ ಕಡತಗಳ ಪ್ರಕಾರ, ಉಡುಪಿಯ ಪೇಜಾವರ ಸ್ವಾಮಿಗಳ ಆಹ್ವಾನದ ಮೇರೆಗೆ ಕ್ರಿ.ಶ.೧೮೪೧ರಲ್ಲಿ ಉಡುಪಿಯ ಪರ್ಯಾಯ ಉತ್ಸವಕ್ಕೆ ಶೃಂಗೇರಿಯ ಜಗದ್ಗುರುಗಳು (ಶ್ರೀ ನರಸಿಂಹ ಭಾರತಿ VIII)ಆಗಮಿಸಿದ್ದರು. ೧೬೩೩ರಲ್ಲಿ ಕರಾವಳಿಯ ಕ್ಶತ್ರಿಯ ವರ್ಗದ ಒಂದು ಜಾತಿಯವರು ಜನಿವಾರ ತೊಡಲು ಅರ್ಹರೊ ಅಲ್ಲವೊ ಎಂಬ ವಿವಾದ ಉಂಟಾಯಿತು. ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೆಳದಿಯ ಅರಸ,ಶೃಂಗೇರಿಯ ಗುರುಗಳನ್ನು ಬೇಡಿಕೊಂಡನು. ಶೃಂಗೇರಿಯ ಪೀಠಾಧಿಪತಿಗಳು ಆ ಜಾತಿಯವರಿಗೆ ಜನಿವಾರ ತೊಡಲು ಅನುಮತಿ ನೀಡಿದರು ಕ್ರಿ.ಶ. ೧೪೪೦ರಲ್ಲಿ ತುಳುನಾಡಿಗೆ ಭೇಟಿ ನೀಡಿದ ಪರ್ಷಿಯಾದ ಪ್ರವಾಸಿ ಅಬ್ದುಲ್ ರಜಾಕ್, ಪೊಳಲಿ ದೇವಸ್ಥಾನವನ್ನು ನೋಡಿ ,    ಇದು ಪ್ರಪಂಚ ದಲ್ಲೆಲ್ಲ ಎಣ್ಣೆಯಿಲ್ಲದಂತಹ ವಿಗ್ರಹಗಳುಳ್ಳ ದೇವಸ್ಥಾನ’ ಎಂದು ಹೊಗಳಿದ್ದಾನೆ.

No comments:

Post a Comment