stat CounterFriday, July 3, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ " ಹೊಳೆಸಾಲಿನ ಮರ"

ಕ್ರಿಯಾಶೀಲ ಪ್ರತಿಭೆ

’ಹೊಳೆಸಾಲಿನ ಮರ’ ನವ್ಯಕಾವ್ಯದ ಮುಖ್ಯ ಕವಿಗಳಲ್ಲೊಬ್ಬರಾದ ಡಾ.ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಾ ಅವರ ಹೊಸ ಕವನಸಂಕಲನ. ಇಪ್ಪತ್ತೊಂದು ಸ್ವತಂತ್ರ ಕವನಗಳು ಮತ್ತು ಐದು ಭಾಷಾಂತರಗಳು ಈ ಸಂಕಲನದಲ್ಲಿವೆ. ’ಶಿವಮೊಗ್ಗದಲ್ಲಿ ಮಳೆ ೧೯೪೬’ ಈ ಸಂಕಲನದ ಒಳ್ಳೆಯ ಕವನಗಳಲ್ಲೊಂದು .ಬಾಲ್ಯದಲ್ಲಿ ತಾನು ಕಂಡ ಮಳೆಯನ್ನು, ಅದು ತರುವ ದಿಗಿಲು, ಕಂಗಾಲು, ಹಬ್ಬ, ತುಂಗೆಯ ಆವೇಶ, ಖುಷಿಗಳನ್ನು ನೆನಪಿಸಿಕೊಳ್ಳುವ ಕವಿ’ಆಹಾ! ಎಲ್ಲಪ್ಪಾ ಸುರಿದೀತು ಇನ್ನೊಮ್ಮೆ ಅಂಥ ಮಳೆ’ ಎನ್ನುತ್ತಾರೆ. ’ರಥದ ಕಥೆ’, ಎನ್ನುವ ಕವನ ಅಡಿಗರ ’ನನ್ನ ಅವತಾರ’, ಪಾ.ವೆಂ. ಆಚಾರ್ಯರ ’ಅವನು ಬಂದ ಇವನು ಬಂದ’ ಕವಿತೆಗಳೊಡನೆ ಹೋಲಿಸಬಹುದಾದ ಚಿಂತನಪರ ಕವನ.

ಧರ್ಮದ ರಥ ಯಾವ ಮಹಾತ್ಮ ಎಳೆದರೂ ಜಗ್ಗದೆ ನಿಂತಲ್ಲೆ ನಿಂತಿದೆ ಎಂಬ ವ್ಯಂಗ್ಯ ಮಾರ್ಮಿಕವಾಗಿದೆ. ’ಉರುಳಿ ಅರಿವಿನ ಮೋರಿಯಲ್ಲಿ’ ಕವನದಲ್ಲಿ ಕವಿಯು ಚಿತ್ತ ಹೊತ್ತ ಮನುಷ್ಯ ಮನುಷ್ಯನನ್ನೇ ಶೋಷಿಸುವುದನ್ನು ಚಿಂಖ್ತಿಸುತ್ತ ’ಚಿತ್ತವೇ ಶತ್ರುವೇ ನಮಗೆ?" ಎಂದು ಪ್ರಶ್ನಿಸುತ್ತಾರೆ. ಈ ಸಂಕಲನದ ಕವನಗಳ ನಿರೂಪಕ ಮಧ್ಯ ವಯಸ್ಸಿನಲ್ಲಿದ್ದಾನೆ, ಬಾಳಿನ ಸಿಹಿ-ಕಹಿ ಅನುಭವಗಳಿಂದ ಪಕ್ವಗೊಂಡಿದ್ದಾನೆ. ’ಹಳಿಯಬೇಡ ಕಾಮವನ್ನು ಹಾಗೆ ಹೀಗೆಂದು’ ಎನ್ನುತ್ತ ಕಾಮಕ್ಕೆ ಕೃತಜ್ಞತೆ ಸಲ್ಲಿಸುತ್ತಾನೆ. ’ಯಾರು ಬಂದರೆ ತಾನೆ ಏನು?’ ಎಂದು ಮೃತ್ಯುವನ್ನು ಕುರಿತು ನಿರ್ಲಿಪ್ತನಾಗಿ ಚಿಂತಿಸುತ್ತಾನೆ. ಇಲ್ಲಿನ ನಿರೂಪಕನ ಅತೃಪ್ತಿಗೆ ಒಂದು ಕಾರಣ ಬದುಕಿನ ಯಾಂತ್ರಿಕತೆ- "ತುಂಬು ತಿಂಗಳ ಬದುಕು| ಈಗ ಬರಿ ತಂಗಳು ನಿನ್ನೆ ಮೊನ್ನೆಯ ಇವತ್ತು ನಿನ್ನೆಯ್ |ನಾಳೆ ಇಂದಿನ ಕಾರ್ಬನ್ ಕಾಪಿ", "ಸಾರ ತೀರಿದ ಬಾಳು ತುರಿದ ತಿರುಳಿನ ಕರಟ್" ಎನಿಸುತ್ತದೆ. ಬದುಕಿನ ಸಾಧನೆಗಳನ್ನು ಕುರಿತ ಅತೃಪ್ತಿ ’ಸಂಕ್ರಾಂತಿ’ ಕವನದಲ್ಲಿ ಕಾಣಿಸುತ್ತದೆ. ತನ್ನ ಸಾಧನೆಗಳಿಗೆ ತಕ್ಕ ಮನ್ನಣೆ ಸಿಗದಿದ್ದರೂ ತಾಳ್ಮೆಯಿಂದ ಕಾಯಲು ಇಲ್ಲಿನ ನಿರೂಪಕ ನಿರ್ಧರಿಸುತ್ತಾನೆ-

"ಮಗೂ
ಈ ಅಬ್ಬರದಲಿ ನಿನ್ನ ಹಂಸಧ್ವನಿ
ಕೇಳುತ್ತದೆ ಹೇಳು ಯಾರ ಕಿವಿಗೆ?
ಗಂಟೆ ಬಾರಿಸುತಿರಲು ತಂತಿ ಮಿಂಚಿದ ಗಾನ
ಕಂತಿ ಹೋಗದೆ ಹೇಳು ಮೊರೆತದೊಳಗೆ?
ಆದರೂ ಚಿಂತಿಲ್ಲ
ಸರದಿಗಳು ಉಂಟಲ್ಲ!
ನುಡಿತವನ್ನೇ ಬಿಟ್ಟುಕೊಡುವ ಗೋಜಿಲ್ಲ
ನಡೆದಿರಲಿ ಸಾಧನೆ ತನ್ನಷ್ಟಕ್ಕೆ ಒಳಗೊಳಗೆ
ತಿಳಿದಿರಲಿ ಜೊತೆಗೆ
ಮೆಚ್ಚಿಗೆ ನಿರೀಕ್ಷಿಸಲು ನಿನ್ನ ಕಲೆಗೆ
ಇದಲ್ಲ ತಕ್ಕ ಗಳಿಗೆ."

ಟಿ.ಎಸ್.ಎಲಿಯಟ್ ನ ’ವೇಸ್ತ್ ಲ್ಯಾಂಡ್’ ಕವನದ ಎರಡನೆಯ ಭಾಗ ’ಚದುರಂಗದಾಟ’, ಯೇಟ್ಸ್ ನ, ’ಹಂಸಗಳ ಹಿಂಡು’ ಮತ್ತು ’ಮಗಳಿಗಾಗಿ ಪಾರ್ಥನೆ’ ಪ್ರಾಚೀನ ಗ್ರೀಕ್ ಕವಯತ್ರಿ ಸ್ಯಾಫೊ ಬರೆದ ’ಆಫ್ರೋದಿತೆ’, ಮೋತಿಲಾಲ್ ಜೋಸ್ವಾನಿಯವರ ಸಿಂಧಿ ಕವನ ’ಪಕ್ಷಿ ತೀರ್ಥ’-ಇವುಗಳನ್ನು ಲಕ್ಷ್ಮೀನಾರಾಯಣ ಭಟ್ಟರು ಭಾಷಾಂತರಿಸಿದ್ದಾರೆ. ಇವುಗಳು ಸೃಜನಶೀಲ ಅನುವಾದಗಳಾಗಿವೆ.
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ನವ್ಯಕಾವ್ಯದ ಜೊತೆಗೆ ಭಾವಗೀತೆಗಳನ್ನೂ ಬರೆದ ಕವಿ. ಅವರು ಎರಡು ದೋಣೆಗಳಲ್ಲಿ ಕಾಲಿಟ್ಟು ಜಯಿಸಿದ್ದಾರೆ. ’ಹೊಳೆಸಾಲಿನ ಮರ’ ಕನ್ನಡದ ನವ್ಯಕಾವ್ಯ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಕಾವ್ಯಪ್ರತಿಭೆ ಎರಡೂ ಕ್ರಿಯಾಶೀಲವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಸಂಕಲನ.
ಮುರಳೀಧರ ಉಪಾಧ್ಯ ಹಿರಿಯಡಕ
(ತರಂಗ-ಅವಲೋಕನ ೧೯೮೮)

No comments:

Post a Comment